ವೇದಗಳಲ್ಲಿರುವ ವೈಮಾನಿಕ ತಂತ್ರಜ್ಞಾನದ ಬಗ್ಗೆ ಸಂಶೋಧನೆ: ಸಾಬೀತಾದರೂ ಆಗದೇ ಇದ್ದರೂ ಹೆಮ್ಮೆ ಭಾರತಕ್ಕೇನೆ!

ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ನಡೆದ "ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಅಸೋಸಿಯೇಶನ್‌'ನ 102ನೆಯ ಅಧಿವೇಶನದಲ್ಲಿ ವೇದ ಕಾಲದಲ್ಲಿಯೂ ವಿಮಾನಗಳಿದ್ದವು ಎಂದು ವಿಜ್ಞಾನಿಯೊಬ್ಬರು ನೀಡಿದ್ದ ಹೇಳಿಕೆ ಚರ್ಚೆಗೆ ಗುರಿಯಾಗಿತ್ತು.
ವೇದಗಳಲ್ಲಿರುವ ವೈಮಾನಿಕ ತಂತ್ರಜ್ಞಾನದ ಬಗ್ಗೆ ಸಂಶೋಧನೆ: ಸಾಬೀತಾದರೂ ಆಗದೇ ಇದ್ದರೂ ಹೆಮ್ಮೆ ಭಾರತಕ್ಕೇನೆ!
ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ನಡೆದ "ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಅಸೋಸಿಯೇಶನ್‌'ನ 102ನೆಯ ಅಧಿವೇಶನದಲ್ಲಿ ವೇದ ಕಾಲದಲ್ಲಿಯೂ ವಿಮಾನಗಳಿದ್ದವು ಎಂದು ವಿಜ್ಞಾನಿಯೊಬ್ಬರು ನೀಡಿದ್ದ ಹೇಳಿಕೆ ಚರ್ಚೆಗೆ ಗುರಿಯಾಗಿತ್ತು. ಈಗ ಇದೇ ಅಂಶ ಮತ್ತೆ ಚರ್ಚೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಹಾಗೂ ಡಿಆರ್ ಡಿಒ ಸಂಸ್ಥೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ವೇದಗಳಲ್ಲಿ ಮಿಸೈಲ್ ತಂತ್ರಜ್ಞಾನದ ಬಗ್ಗೆ ಅಡಕವಾಗಿರುವ ಮಾಹಿತಿಯ ಕುರಿತು ಸಂಶೋಧನೆ ನಡೆಸಲಿದೆ.
ಪ್ರಾಚೀನಾ ಭಾರತೀಯರಿಗೆ ಖಗೋಳಶಾಸ್ತ್ರ, ಗಣಿತಶಾಸ್ತ್ರ, ತತ್ವಶಾಸ್ತ್ರದ ಹೆಚ್ಚಿನ ಗೀಳು ಇತ್ತೇ ಹೊರತು ಅಗತ್ಯಕ್ಕಿಂತ ಹೆಚ್ಚು ತಂತ್ರಜ್ಞಾನವನ್ನು ವಿಸ್ತರಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಂತೆ ತೋರುವುದಿಲ್ಲ. ಇರಲಿ. ಇದೇ ವೈಮಾನಿಕ ಶಾಸ್ತ್ರ ಹಾಗೂ ವೇದಗಳನ್ನಿಟ್ಟುಕೊಂಡು ನಡೆಯುತ್ತಿರುವ ಸಂಶೋಧನೆ ಇದೇ ಮೊದಲನೆಯದ್ದೇನು ಅಲ್ಲ. 1974 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧಕರು ಭಾರಧ್ವಾಜ ಋಷಿ ಸಂಗ್ರಹಿಸಿದ್ದಾರೆನ್ನಲಾದ ವೈಮಾನಿಕ ಶಾಸ್ತ್ರ  ಹಾಗೂ ವಿಮಾನಯಾನ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ನಡೆಸಿ “A critical study of the work Vymanika Shastra ಎಂಬ ತುಲನಾತ್ಮಕ ಸಂಶೋಧನಾ ವರದಿ ಮಂಡಿಸಿದ್ದರು. ಆದರೆ ಸಂಶೋಧನಾ ವರದಿಯ ಪ್ರಕಾರ ಭಾರತದ ವೈಮಾನಿಕ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಗಳು 1918 ರಿಂದ 1923 ರ ವರೆಗೆ ಅಭಿವೃದ್ಧಿಯಾದ ಅಂಶಗಳಾಗಿವೆ ಎಂಬ ನಿರ್ಧಾರಕ್ಕೆ ಬರಲಾಯಿತು.! 
ವೈಮಾನಿಕ ಶಾಸ್ತ್ರದ ಕಾಲ ಮತ್ತು ಹಿನ್ನೆಲೆ :  ಕ್ರಿ.ಶ 1959 ರಲ್ಲಿ ಶ್ರೀ ಬ್ರಹ್ಮಮುನಿ ಪರಿವ್ರಾಜಕ ‘ಬೃಹದ್ ವಿಮಾನ ಶಾಸ್ತ್ರ’ (ಬೃವಿಶಾ)ಎಂಬ ಗ್ರಂಥವನ್ನು ಪ್ರಕಟಿಸಿದರು. ಇದರ ಮೂಲ ಹಸ್ತಪ್ರತಿಯನ್ನು  ಕ್ರಿ.ಶ 1944 ರಲ್ಲಿ ಬರೋಡದ ರಾಜಕೀಯ ಸಂಸ್ಕೃತ ಗ್ರಂಥಾಲಯದಿಂದ ಪಡೆಯಲಾಯಿತು.  ಗೋ. ವೆಂಕಟಾಚಲ ಶರ್ಮ ದಿನಾಂಕ 9/8/1919 ಎನ್ನುವ ಸಹಿಯಿರುವ ಮತ್ತೊಂದು ಪ್ರತಿಯನ್ನೂ ಪುಣೆಯಲ್ಲಿ ಗುರುತಿಸಲಾಯಿತು. ಇವೆರಡು ಹಸ್ತಪ್ರತಿಗಳು ಒಂದೇ ವಿಷಯವನ್ನು ಹೊಂದಿರುವುದು ಖಚಿತವಾಯಿತು.  ಬೃವಿಶಾದಲ್ಲಿ  ವಿಮಾನವನ್ನು ವರ್ಣಿಸುವ ಸಂಸ್ಕೃತ ಶ್ಲೋಕಗಳು ಹಾಗು ಅವುಗಳಿಗೆ ಹಿಂದಿಯಲ್ಲಿ ವಿವರಣೆಗಳಿವೆ. ಕ್ರಿ..ಶ 1975 ರ ಅವಧಿಯಲ್ಲಿ  ಜಿ.ಆರ್ ಜೋಸಿಯರ್ ಇದೆ ಸಂಸ್ಕೃತ ಶ್ಲೋಕಗಳು , ಇಂಗ್ಲಿಷ್ ವಿವರಣೆ ಹಾಗು ಕೆಲ ವಿಮಾನಗಳ ಚಿತ್ರಗಳನ್ನು ಹೊಂದಿದ ‘ವೈಮಾನಿಕ ಶಾಸ್ತ್ರ’ ಪ್ರಕಟಿಸಿದರು. ಜಿ.ಆರ್ ಜೋಸಿಯರ್ ತಮ್ಮ ಕೃತಿಯ ಮುನ್ನುಡಿಯಲ್ಲಿ ಆನೆಕಲ್ಲಿನ ಸುಬ್ಬರಾಯಶಾಸ್ತ್ರಿಗಳು ಪಠಿಸಿದ ಶ್ಲೋಕಗಳನ್ನು ವೆಂಕಟಾಚಲ ಶರ್ಮ ಬರೆದುಕೊಂಡರೆಂದು ತಿಳಿಸಿದ್ದಾರೆ. ಇವರಿಬ್ಬರು ವೈಮಾನಿಕ ಶಾಸ್ತ್ರದ ಮೂಲ ಶ್ಲೋಕಗಳು ಭಾರಧ್ವಾಜ ಮುನಿ ರಚಿಸಿದ್ದ ‘ಯಂತ್ರ ಸರ್ವಸ್ವ’ದಲ್ಲಿ ಕಾಣಿಸಿಕೊಂಡಿವೆ , ಇವುಗಳು ಭಾರಧ್ವಾಜ ಮುನಿಗಿಂತಲೂ ಹಿಂದಿದ್ದ ಋಷಿಗಳ ಶಾಸ್ತ್ರಗಳಲ್ಲಿದ್ದ ವಿಮಾನ ನಿರ್ಮಾಣ ತಂತ್ರದ  ಸಂಗ್ರಹವೆಂದು ಸೂಚಿಸಿದ್ದಾರೆ ಇದರಲ್ಲಿ ವೈಮಾನಿಕಶಾಸ್ತ್ರವು ಒಂದು. ವೈಮಾನಿಕಶಾಸ್ತ್ರದಲ್ಲಿ 3000 ಶ್ಲೋಕಗಳು . 8 ಅಧ್ಯಾಯಗಳು , 100 ವಿಭಾಗಗಳಿವೆ . ಇದರಲ್ಲಿ  5೦೦ ತತ್ವಗಳಿದ್ದು , ವಿಮಾನ ಚಾಲನೆಗೆ  32 ತಂತ್ರಗಳನ್ನು ಹೇಳಲಾಗಿದೆ. ಇದರಲ್ಲಿ ಯುಗಗಳಿಗೆ ತಕ್ಕಂತಹ ವಿಮಾನಗಳನ್ನೂ ಹೆಸರಿಸಲಾಗಿದ್ದು, ಕೃತಯುಗದಲ್ಲಿ ಇಂಧನದಿಂದ ನಡೆಯುವ ವಿಮಾನಗಳಿರಬೇಕೆಂದು ಹೇಳಲಾಗಿದೆ ಎಂಬ ಪ್ರತಿಪಾದನೆಯೂ ಉಂಟು.  
ವೇದಗಳಿಗೆ ಸಂಸ್ಕೃತ ಭಾಷೆ ಆಧಾರ, ಸಂಸ್ಕೃತ ಭಾಷೆಯಲ್ಲಿ ಪ್ರತಿಯೊಂದು ಪದಕ್ಕೂ ಸಹ ಅನೇಕ ಅರ್ಥಗಳಿರುತ್ತವೆ, ಸಂದರ್ಭಾನುಸಾರ ಅವುಗಳ ಅರ್ಥ ಭಿನ್ನವಾಗುತ್ತದೆ. ಸೂತ್ರಗಳಲ್ಲಿ ಅಡಕವಾಗಿರುವಂತಹ ಒಂದೊಂದು ಶಬ್ದಗಳೂ ಒಂದೊಂದು ವಾಕ್ಯದಕ್ಕೆ ಸಮವಾದಂತಹ ಅರ್ಥ ಕೊಡುತ್ತವೆ. ಈ ನೆಲೆಗಟ್ಟಿನಲ್ಲಿ ವೈಮಾನಿಕ ಶಾಸ್ತ್ರಕ್ಕೂ ವೇದಗಳಿಗೂ ತಳುಕುಹಾಕುತ್ತಿರುವುದನ್ನು ನೋಡಿದರೆ ವೇದಗಳಲ್ಲಿ ಯಾವ ಸಂದರ್ಭದಲ್ಲಿ ’ವೈಮಾನಿಕ’ ಎಂಬ ಶಬ್ದ ಪ್ರಯೋಗವಾಗಿ ಅದು ಯಾವ ಅರ್ಥ ನೀಡುತ್ತದೆ ಎಂಬುದು ಪ್ರಮುಖ ವಿಷಯ ಹಾಗೂ ಪ್ರಸ್ತುತ ನಡೆಯುತ್ತಿರುವ ಚರ್ಚೆಗೆ ನಿರ್ಣಾಯಕವಾಗಬಹುದು. 
ವೇದಗಳನ್ನು ಆಧರಿಸಿಯೇ ವಿಮಾನಗಳ ಬಗ್ಗೆ ಸಂಶೋಧನೆ ನಡೆಸುವುದಾದರೆ ಇತ್ತೀಚಿಗೆ ಸಿಗುವ ಸ್ಪಷ್ಟ ಆಧಾರವೆಂದರೆ ಅದು ಆನೆಕಲ್ಲು ಸುಬ್ಬರಾಯ ಶಾಸ್ತ್ರಿಗಳು.  ವೈಮಾನಿಕ ಶಾಸ್ತ್ರದ ಎಲ್ಲ ಮೂಲಗಳು ಆನೆಕಲ್ಲು ಸುಬ್ಬರಾಯ ಶಾಸ್ತ್ರಿಗಳಲ್ಲಿ ಕೊನೆಗೊಳ್ಳುತ್ತವೆ.  ಮೂಲ ಗ್ರಂಥ ಸುಬ್ಬರಾಯ ಶಾಸ್ತ್ರಿಗಳಿಗೆ ಎಲ್ಲಿಂದ ದಕ್ಕಿತೆಂದು ತಿಳಿದಿಲ್ಲ. ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಸತತ ಪ್ರಯತ್ನದ ನಂತರ ಗೋ. ವೆಂಕಟಾಚಲಶರ್ಮ ಹಾಗು ಸುಬ್ಬರಾಯಶಾಸ್ತ್ರಿಗಳ ದತ್ತುಪುತ್ರ ವೆಂಕಟರಾಮಶಾಸ್ತ್ರಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಇದರಿಂದ ವೈಮಾನಿಕಶಾಸ್ತ್ರದ ಮೂಲ ಕುರಿತಾದ ಅನೇಕ ಸಂಗತಿಗಳು ಬೆಳಕಿಗೆ ಬಂದವು.  ಸುಬ್ಬರಾಯ ಶಾಸ್ತ್ರಿಗಳು ಕೋಲಾರ ಜಿಲ್ಲೆಯ ಅವನಿ ಕಾಡನ್ನು ತಲುಪಿ ಹಲವು ವರ್ಷಗಳ ಕಾಲ ಅಲ್ಲಿ ಕಾಡಿನ ಜೀವನ ಸಾಗಿಸಿದರು. ಇಲ್ಲಿನ ಗುಹೆಯೊಂದರಲ್ಲಿದ್ದ  ಋಷಿಯ ಕಣ್ಣಿಗೆ ಬಿದ್ದು ಅವರಿಂದ ಶಾಸ್ತ್ರಿಗಳಿಗೆ ದಿವ್ಯಜ್ಞಾನ ಮತ್ತು ಸಂಸ್ಕೃತ ಭಾಷೆಯಲ್ಲಿ ಹಿಡಿತ ದಕ್ಕಿತು. ‘ವಿಮಾನ ಶಾಸ್ತ್ರ’ ‘ಭೌತಿಕ ಕಲಾನಿಧಿ’ ‘ಜಲತಂತ್ರ’ ಇತ್ಯಾದಿ ವಿದ್ಯೆಗಳನ್ನು ಗವಿಯೊಂದರಲ್ಲಿ ಗುರುಮುಖೇನ ಕಲಿತರು. ಇಲ್ಲಿಯೇ ಕನ್ನಡ . ತೆಲುಗು ಬರವಣಿಗೆ ಕಲಿತರು. ನಂತರ ಪತ್ನಿಯೊಂದಿಗೆ ಬಂದು ಮುಂದಿನ 25 ವರ್ಷಗಳ ಕಾಲ ಆನೇಕಲ್ಲಿನಲ್ಲಿ ನೆಲೆಸಿದರು. ಆನೆಕಲ್ಲಿನಲ್ಲಿರುವಾಗ ಆಗ್ಗಾಗ್ಗೆ  ಅನುಭಾವಕ್ಕೆ ಒಳಗಾಗುತ್ತಿರುವಂತೆ ವರ್ತಿಸುತ್ತಿದ್ದ ಶಾಸ್ತ್ರಿಗಳು ವೈಮಾನಿಕಶಾಸ್ತ್ರಕ್ಕೆ ಸಂಬಂಧಿಸಿದ ಶ್ಲೋಕಗಳನ್ನು ಹೇಳುತ್ತಿದ್ದರು. ಅದನ್ನು ಅವರ ಆಪ್ತರಾದ  ವೆಂಕಟಾಚಲಶರ್ಮ ಬರೆದುಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಮುಂಬಯಿಯ ಉದ್ಯಮಿ ಪುಂಜಿಲಾಲ ಗಿರಿಧರ್ ಪರಿಚಯವಾಗಿ ಮುಂಬಯಿಗೆ ಹಲವಾರು ಬಾರಿ ಹೋದರು. ಅಲ್ಲಿ ವಿಮಾನ ನಿರ್ಮಾಣ ಕುರಿತಾಗಿ ಹಲವಾರು ಪ್ರಯೋಗಗಳನ್ನು ನಡೆಸುತ್ತಿದ್ದ  ಡಾ. ಶಿವಕರ ಬಾಪೂಜಿ ತಲ್ಪಡೆ ಸ್ನೇಹ ದಕ್ಕಿತು. ಮೊದಲ ಬಾರಿಗೆ ಶಾಸ್ತ್ರಿಗಳು ವೈಮಾನಿಕ ಶಾಸ್ತ್ರದ ಬಗ್ಗೆ  ಡಾ. ತಲ್ಪಡೆಗೆ ತಿಳಿಸಿದರು. 
ಸುಬ್ಬರಾಯ ಶಾಸ್ತ್ರಿಗಳ ಶ್ಲೋಕಗಳನ್ನು ಆಧರಿಸಿ ಡಾ. ತಲ್ಪಡೆ ಮಾಡಿದ ಯಾವ ಮಾದರಿ ವಿಮಾನಗಳು ಸಹ ಹಾರಲಿಲ್ಲ. ಆದರೆ ೧೮೯೫ ರಲ್ಲಿ ಮಹಾದೇವ ಗೋವಿಂದ ರಾನಡೆ . ರಾಜ ಸಯ್ಯಾಜಿ ರಾವ್ ಗಾಯಕವಾಡ ಎದುರಿಗೆ ತಲ್ಪಡೆ ಮರುತ್ ಶಕ್ತಿ ಹೆಸರಿನ ಪಾದರಸದಿಂದ ನಡೆಯುವ ವಿಮಾನವನ್ನು ಹಾರಿಸಿದರೆಂದು ಅದು 1500 ಅಡಿ ಮೇಲಕ್ಕೇರಿ  ಸಮುದ್ರದ ಪಾಲಾಯಿತೆಂದು ಕೇಸರಿ ಪತ್ರಿಕೆ ವರದಿ ಮಾಡಿದೆ.  ಈ ವಿಮಾನ ಗಾಳಿಗಿಂತ ಹಗುರವಾದುದೋ ಅಥವಾ ಭಾರವಾದುದೋ ತಿಳಿದಿಲ್ಲ. ಕ್ರಿ.ಶ 1916 ರಲ್ಲಿ ಡಾ. ತಲ್ಪಡೆ ಕೊನೆಯುಸಿರೆಳೆದರು. ಈ ಸಮಯದಲ್ಲೇ ಸುಬ್ಬರಾಯ ಶಾಸ್ತ್ರಿಗಳ ವೈಮಾನಿಕಶಾಸ್ತ್ರ ಪುಸ್ತಕ ರೂಪ ತಳೆಯತೊಡಗಿತು.  ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದ ಡ್ರಾಫಟ್ಸಮನ್ ಟಿ.ಕೆ ಎಲ್ಲಪ್ಪನ ಮೂಲಕ ಸುಬ್ಬರಾಯ ಶಾಸ್ತ್ರಿಗಳು ಹಲವಾರು ವಿಮಾನಗಳ ಚಿತ್ರಗಳನ್ನೂ ಸಹ ಈ ಪುಸ್ತಕಕ್ಕಾಗಿ ಪಡೆದರು. ಇವುಗಳ ಮೇಲೆ ಎಲ್ಲಪ್ಪನವರ ಸಹಿ ಮತ್ತು 2/12/1923  ದಿನಾಂಕ ಸ್ಪಷ್ಟವಾಗಿ ದಾಖಲಾಗಿವೆ. ಇದರಿಂದ ವೈಮಾನಿಕಶಾಸ್ತ್ರ 1910-1923 ರ ಅವಧಿಯಲ್ಲಿ ಸೃಜಿತವಾದ ಕೃತಿಯೆಂದೂ ಹೇಳಲಾಗುತ್ತದೆ.
ಡಾ. ತಲ್ಪಡೆಯವರು ರೈಟ್ ಸೋದರಿಗಿಂತ 7 ವರ್ಷ ಮೊದಲೇ ವೈಮಾನಿಕಶಾಸ್ತ್ರದ ತತ್ವಗಳಿಗೆ ಅನುಗುಣವಾಗಿ ಪಾದರಸ ಇಂಧನ ಚಾಲಿತ  ಗಾಳಿಗಿಂತ ಭಾರವಾದ ವಿಮಾನದ ಹಾರಾಟವನ್ನು ಸಾಧಿಸಿದರೆಂದು , ಬ್ರಿಟಿಷರ  ಕುಯುಕ್ತಿಯಿಂದ ಅದನ್ನು ಅದುಮಿ ಹಿಡಿಯಲಾಯಿತೆಂದು ವಾದಿಸಲಾಗುತ್ತಿದೆ. ಇದನ್ನು ಕುರಿತಾಗಿ ಕೆಲ ತಿಂಗಳುಗಳ  ಹಿಂದೆ ಕನ್ನಡದ ವಾರ ಪತ್ರಿಕೆಯೊಂದು ಸುದೀರ್ಘ ಲೇಖನವನ್ನೂ ಸಹ ಪ್ರಕಟಿಸಿದೆ. ಗಾಳಿಗಿಂತ ಭಾರವಾದ ವಿಮಾನವನ್ನು ಹಾರಿಸಿದವರಲ್ಲಿ ಮೊದಲಿಗರು ಯಾರು ಎನ್ನುವ ಬಗ್ಗೆ ಈಗಲೂ ಕೆಲ ವಿವಾದಗಳು ಉಳಿದಿವೆ.  ಕ್ರಿ.ಶ 1848 ರಲ್ಲಿ ಲಂಡನ್ನಿನ  ಜಾನ್ ಸ್ಪ್ರಿಂಗ್ ಫೆಲ್ಲೋ ಮತ್ತು ಜಾನ್  ಹೆನ್ಸನ್ ಉಗಿ ಇಂಜಿನ್ ಬಳಸಿ, 1870 ರಲ್ಲಿ ದಕ್ಷಿಣ ಆಫ್ರಿಕಾದ ಜಾನ್ ಗುಡ್ಮನ್ ಹೌಸ್ ಹೋಲ್ಡ್ , 1898 ರಲ್ಲಿ ಬ್ರೆಜಿಲ್ ದೇಶದ ಆಲ್ಬರ್ಟೋ ಸಾಂಟಾಸ್ ಡು ಮಾಂತ್ , ಆಗಸ್ಟ್ 14 , 1901 ರಂದು ಗುಸ್ತವೆ ವೈಟ್ ಹೆಡ್ ಸಹ ಗಾಳಿಗಿಂತ ಭಾರವಾದ ವಿಮಾನಗಳನ್ನು ಹಾರಿಸಿದ್ದರೆಂದು ಹೇಳಲಾಗುತ್ತಿದೆ.  ಆದರೆ ಇವರಾರಿಗೂ ಪ್ರಾಚಿನ ಋಷಿ ಮುನಿಗಳ , ಸಂಸ್ಕೃತದ  ಹಂಗಿಲ್ಲ. ಇವರೆಲ್ಲರೂ ಸ್ವಪ್ರಯತ್ನದಿಂದ , ತಮಗೆ ಆ ಕಾಲದಲ್ಲಿ ಲಭ್ಯವಿದ್ದ ತಂತ್ರಜ್ಞಾನ , ಡಿಸೇಲ್ , ಉಗಿ ಇಂಜಿನ್ , ಗೇರ್ ವ್ಯವಸ್ಥೆ , ಉಕ್ಕು /ಮರದ   ಚೌಕಟ್ಟಿನ ಕಾಯ  ಬಳಸಿ  ನಾನಾ ಬಗೆಯಲ್ಲಿ ವಿಮಾನ ನಿರ್ಮಿಸಿ ಹಾರಾಡಲು ಯತ್ನಿಸಿದವರು.  ಅತ್ಯಂತ ಕುತೂಹಲಕರವಾದ ವಿಚಾರವೆಂದರೆ 1923 ರಲ್ಲಿ ಬಿಡಿಸಲಾದ ಶಕುನ ವಿಮಾನದ ಯೋಜನಾ ನೋಟ (Plan View)  ಬಹುತೇಕ ಗುಸ್ತವೆ ವೈಟ್ ಹೆಡ್ ವಿಮಾನವನ್ನು ಹೋಲುತ್ತದೆ. ಮಿಸೈಲ್, ವಿಮಾನಗಳಂತಹ ಹಾರುವ ಯಂತ್ರಗಳ ಬಗ್ಗೆ ಅಡಕವಾಗಿರುವ ಮಾಹಿತಿಯ ಕುರಿತು ಮತ್ತೊಮ್ಮೆ ಸಂಶೋಧನೆ ನಡೆಯುತ್ತಿರುವುದು ಕುತೂಹಲದ ಸಂಗತಿಯೇ, ತಂತ್ರಜ್ನಾನ ಬೆಳೆದಂತೆಲ್ಲಾ ಈ ದೃಷ್ಟಿಕೋನದ ಸಂಶೋಧನೆಗೂ ಹೊಸ ಆಯಾಮ ದೊರೆಯುವ ಸಾಧ್ಯತೆ ಇದೆ. ವೇದಗಳಲ್ಲಿ ವೈಮಾನಿಕ ತಂತ್ರಜ್ಞಾನ ಅಡಕವಾಗಿರುವುದನ್ನು ಶೋಧಿಸಿ ಬಹಿರಂಗಗೊಳಿಸಿದರೆ ಭಾರತಕ್ಕೆ ಅದೊಂದು ಹೆಮ್ಮೆಯ ಸಂಗತಿಯೇ ಹೌದು, ಒಂದು ವೇಳೆ ನಿಖರವಾಗಿ ಹೇಳಲು ಸಾಧ್ಯವಾಗದೇ ಇದ್ದರೂ   ಪಾಶ್ಚಿಮಾತ್ಯರು ಮೊದಲು ವಿಮಾನ ಕಂಡುಹಿಡಿದರು ಎನ್ನಲಾದ ಸಮಾನಾಂತರ ಕಾಲಮಾನದಲ್ಲೇ ವೇದಗಳ ಸಹಾಯ ಇದ್ದೋ ಇಲ್ಲದೆಯೋ ಡಾ. ತಲ್ಪಡೆ ಅಂಥವರಿಂದ ಭಾರತದಲ್ಲಿಯೂ ಅಂಥಹದ್ದೊಂದು ಪ್ರಯೋಗ ನಡೆದಿತ್ತು ಎಂಬುದೇ ಭಾರತಕ್ಕೆ ಹೆಮ್ಮೆಯ ವಿಷಯ ಅಲ್ಲವೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com