ಬೇಡಿದ ವರಗಳ ನೀಡುವ ಆನೆಗುಡ್ಡೆ ಶ್ರೀ ವಿನಾಯಕ

ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನವು ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು...
ಶ್ರೀ ವಿನಾಯಕ ದೇವಸ್ಥಾನ
ಶ್ರೀ ವಿನಾಯಕ ದೇವಸ್ಥಾನ
Updated on

ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ಕುಂದಾಪುರದಿಂದ ದಕ್ಷಿಣಕ್ಕೆ ರಾ.ಹೆ. 66ರಲ್ಲಿ ಸುಮಾರು 9 ಕಿ.ಮೀ. ದೂರದಲ್ಲಿ ಆನೆಗುಡ್ಡೆ (ಕುಂಭಾಸಿ) ಶ್ರೀ ವಿನಾಯಕ ದೇವರ ದರ್ಶನ ಪಡೆಬಹುದಾಗಿದೆ. ಇದು ಪುರಾತನವಾದ ಮತ್ತು ನಾಡಿನಾದ್ಯಂತ ಭಕ್ರಸಾಗರವನ್ನು ಹೊಂದಿರುವ ದೇವಾಲಯವಾಗಿದೆ.

ಆನೆಗುಡ್ಡೆ ದೇವಸ್ಥಾನದಲ್ಲಿ ವಿನಾಯಕ ರ್ಮೂತಿಯು ನಿಂತಿರುವ ಭಂಗಿಯಲ್ಲಿ ಭಕ್ತಾದಿಗಳಿಗೆ ದರ್ಶನವನ್ನು ಕೊಟ್ಟಿರುತ್ತಾನೆ. ರ್ಮೂತಿಯ ನಾಲ್ಕು ಹಸ್ತದಲ್ಲಿ ಎರಡು "ವರದ ಹಸ್ತ"ವು ಭಕ್ತರು ಬೇಡಿದ ವರಗಳನ್ನು ಕೊಡಲೂ, ಇನ್ನೆರೆಡು ಹಸ್ತವು ಶರಣಾಗತಿಯಾಗಿರ ಬೇಕೆಂಬುದನ್ನು ತೋರಿಸುತ್ತದೆ. ಈ ದೇವಾಲಯವು ಅತೀ ಪುರಾತನವಾಗಿದ್ದು, ಅಲ್ಲಿಯೇ ಹತ್ತಿರದಲ್ಲಿ ನಾಗಾಚಲ ಅಯ್ಯಪ್ಪ ಸ್ವಾಮಿ ದೇವಾಲಯ ಹಾಗೂ ಇತರ ದೇವಾಲಯಗಳಿವೆ. ವಿನಾಯಕನ ಸನ್ನಿದಾನದಲ್ಲಿ ಪ್ರತಿನಿತ್ಯ ಅನ್ನದಾನ ಸೇವೆ ನಡೆಯುತ್ತದೆ.

ಪೌರಾಣಿಕ ಹಿನ್ನಲೆ
ಕುಂಭಾಸಿಗೆ ಹರಿಹರಕ್ಷೇತ್ರ, ಮಧುಕಾನನ, ಗೌತಮಕ್ಷೇತ್ರ, ನಾಗಾಚಲ, ಆನೆಗುಡ್ಡೆ, ಕುಂಭಕಾಶಿ ಮುಂತಾದ ಹೆಸರುಗಳಿವೆ. ಪ್ರತಿ ಹೆಸರಿನ ಹಿಂದೆಯೂ ಪೌರಾಣಿಕ ಕಥೆಗಳಿವೆ. ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ರಾಕ್ಷಸನು ರಾಮಚಂದ್ರನಿಗೆ ಭಯಪಟ್ಟು ಮಹೇಂದ್ರಗಿರಿಯಲ್ಲಿ ಅವಿತುಕೊಂಡಿದ್ದನು. ಕಾಲಾಂತರದಲ್ಲಿ ಅಲ್ಲಿಂದ ಹೊರಟು ನಾರದನ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರಪಡೆದು ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು.

ಈತನಿಗೆ ಭಯಪಟ್ಟು ಅಲ್ಲಿನ ಜನರು ಓಡಿಗೋಗಬೇಕಾಗಿ ಬಂತು.. ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನು ತಿಳಿದ ಗೌತಮಾದಿ ಮುನಿಗಳು ಅಲ್ಲಿಗೆ ಹೋಗಿ ತಮ್ಮ ಸಂಕಷ್ಟವನ್ನು ಪಾಂಡವರಲ್ಲಿ ತೊಡಿಕೊಂದರು. ಪರಿಸ್ಥಿತಿಯನ್ನರಿತ ಧರ್ಮರಾಯನು ಸೋದರರೊಡನೆ ಕೂಡಿಕೊಂಡು ಭಾರ್ಗವ ಕ್ಷೇತ್ರವನ್ನು ಸೇರಿ ಮಧುವನಕ್ಕೆ ಬಂದು ಕ್ಷೇತ್ರದ ದರ್ಶನ ಮಾಡಿದನು. ಸ್ವಲ್ಪ ದಿನಗಳಲ್ಲಿ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿ ಭೀಮಾದಿಗಳನ್ನು ರಾಕ್ಷಸರ ಸಂಹಾರಕ್ಕೆ ಕಳುಹಿಸಿಕೊಟ್ಟನು.

ಭೀಮಾದಿಗಳು ಶಂಖನಾದ ಮಾಡುತ್ತಾ ಮುಂದುವರೆಯಲು ಕುಂಭಾಸುರನು ಯುದ್ಧಕ್ಕೆ ಬಂದನು. ಭೀಮನಿಗೂ ಕುಂಭಾಸುರನಿಗೂ ಭಯಂಕರ ಗದಾಯುದ್ಧ ನಡೆಯಿತು. ಅದರಲ್ಲಿ ರಾಕ್ಷಸನೇ ಜಯಶಾಲಿಯಾಗುವಂತಿದ್ದಾಗ ಅಶರೀರವಾಣಿಯೊಂದುಂಟಾಯಿತು. ಕೂಡಲೇ ಭೀಮನು ಗಣೇಶನನ್ನು ಮನದಲ್ಲೇ ಸ್ಮರಿಸಿ, ಪ್ರಸಾದ ರೂಪವಾದ ಖಡ್ಗವನ್ನು ಧರಿಸಿ ಕುಂಭಾಸುರನನ್ನು ಸಂಹಾರ ಮಾಡಿ ಮತ್ತುಳಿದ ರಾಕ್ಷಸರನ್ನು ನಿರ್ನಾಮಗೊಳಿಸಿದನು. ಶರೀರವಾಣಿಯಂತೆ ಖಡ್ಗದ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಈ ಕ್ಷೇತ್ರ ಕುಂಭ+ಅಸಿ(ಖಡ್ಗ)= ಕುಂಭಾಸಿ ಎಂದು ಸುಪ್ರಸಿದ್ಧವಾಯಿತು.

ವಿಶೇಷ ಪೂಜೆ
ಪ್ರತಿ ದಿನ ಗಣೇಶನಿಗೆ ವಿಶೇಷ ಪೂಜೆಗಳು ನಡೆಯುತ್ತಿರುತ್ತವೆ. ಬೆಳಿಗ್ಗೆ 5 ಘಂಟೆಗೆ, ಮಧ್ಯಾಹ್ನ 1.00 ಘಂಟೆಗೆ, ರಾತ್ರಿ 8.30 ಕ್ಕೆ ತ್ರಿಕಾಲದಲ್ಲಿ ಪೂಜೆ ನಡೆಯುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 9 ರ ತನಕ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ದೇವಾಲಯ ಮುಕ್ತವಾಗಿರಯತ್ತದೆ. ವಾರದಲ್ಲಿ ಭಾನುವಾರ, ಮಂಗಳವಾರ, ಶುಕ್ರವಾರ ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ ಹಾಗೂ ಗಣೇಶ ಚೌತಿ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಪ್ರತಿ ಹುಣ್ಣಿಮೆಯ ನಂತರದ ಚೌತಿಯಂದು ವಿಶೇಷ ಪೂಜೆಯೂ ದೇವಸ್ಥಾನದಲ್ಲಿರುತ್ತದೆ.

ಮಾರ್ಗಶಿರ ಶುದ್ದ ಚತುರ್ಥಿ ವಾರ್ಷಿಕ ರಥೋತ್ಸವ ನಡೆಯುತ್ತದೆ. ವರ್ಷದಲ್ಲಿ 8-10 ಸಹಸ್ರ ನಾಳಿಕೇರ ಗಣಯಾಗ ನಡೆಯುತ್ತದೆ. ಇಲ್ಲಿಯ ಸೇವೆಗಳಲ್ಲಿ ಸತ್ಯಗಣಪತಿ ವೃತ, ಗಣಹೋಮ, ರಂಗಪೂಜೆ ವಿಶೇಷವಾಗಿ ನಡೆಯುತ್ತದೆ. ಸತ್ಯಗಣಪತಿ ವೃತವನ್ನು ಇಷ್ಟಾರ್ಥ ಸಿದ್ದಿಗಾಗಿ ಈ ಪೂಜೆಯನ್ನು ಮಾಡಿಸುತ್ತಾರೆ.

ಇಲ್ಲಿಗೆ ತಲುಪುವುದು ಹೇಗೆ?
ರಸ್ತೆ ಮಾರ್ಗ: ಬೆಂಗಳೂರಿನಿಂದ ಉಡುಪಿಗೆ ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆಗಳಿವೆ. ಉಡುಪಿ ಮತ್ತು ಕುಂದಾಪುರದಿಂದ ರಾ.ಹೆ. 66 (ರಾ.ಹೆ. 17)ರಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಇದೆ. ಉಡುಪಿಯಿಂದ 39 ಕಿ.ಮೀ ಹಾಗೂ ಕುಂದಾಪುರದಿಂದ 9 ಕಿ.ಮೀ ದೂರ. ಹತ್ತಿರದ ರೈಲ್ವೆ ನಿಲ್ದಾಣ: ಬಾರಕೂರು (ಕೊಂಕಣ ರೈಲ್ವೆ ) ಅಥವಾ ಕುಂದಾಪುರ (ಕೊಂಕಣ ರೈಲ್ವೆ ). ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ಆಹಾರ ಮತ್ತು ವಸತಿ ಸೌಕರ್ಯಗಳು

ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ "ಆಮೋದ" ಮತ್ತು "ಪ್ರಮೋದ" ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com