ಆಶ್ಲೇಷ ಬಲಿ, ಸರ್ಪದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಡಿ

ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ...
ಕುಕ್ಕೇ ಸುಬ್ರಹ್ಮಣ್ಯ
ಕುಕ್ಕೇ ಸುಬ್ರಹ್ಮಣ್ಯ
Updated on

ಕಷ್ಟಗಳು ಎದುರಾದಾಗ ಜನರು ಭಗವಂತನ ಮೊರೆ ಹೋಗುವುದು ಸಾಮಾನ್ಯ. ಹೀಗೆ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಕೊಡುವ ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಕೊರತೆ ಇಲ್ಲ. ಇವು ಜನರ ಕಷ್ಟ ಪರಿಹರಿಸುವ ಶಕ್ತಿ ಕೇಂದ್ರಗಳಾಗಿವೆ. ಇಂತಹ ಪವಿತ್ರ ಕ್ಷೇತ್ರಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಮಣ್ಯ ಸಹ ಒಂದು. ಪುಟ್ಟ ಊರು ಸುಬ್ರಹ್ಮಣ್ಯ. ಸುತ್ತ ದರ್ಪಣ ತೀರ್ಥ ನದಿ. ನಂಬಿ ಬಂದ ಭಕ್ತರಿಗೆ ಇಂಬು ನೀಡುವ ಕಾರಣಿಕದ ಸನ್ನಿಧಿ ಈ ಕ್ಷೇತ್ರ.

ಸುಬ್ರಹ್ಮಣ್ಯ ಹಿಂದೆ ದಟ್ಟಾರಣ್ಯವಾಗಿತ್ತು. ಇಲ್ಲಿನ ಮೂಲ ನಿವಾಸಿಗಳು ಮಲೆಕುಡಿಯರು. ಒಮ್ಮೆ ಅರಣ್ಯದಲ್ಲಿ ತಿರುಗಾಡುತ್ತಿದ್ದ ಮಲೆಕುಡಿಯರಿಗೆ ಕುಕ್ಕೆ (ಬುಟ್ಟಿ)ಯಲ್ಲಿ ಲಿಂಗವೊಂದು ಸಿಕ್ಕಿತು. ಅದನ್ನು ತಂದು ಸುಬ್ರಹ್ಮಣ್ಯದಲ್ಲಿ ಪೂಜಿಸತೊಡಗಿದರು. ಕುಕ್ಕೆಯಲ್ಲಿ ಲಿಂಗವನ್ನು ತಂದ ಕಾರಣ ಸುಬ್ರಹ್ಮಣ್ಯದ ಜತೆ ಕುಕ್ಕೆಯೂ ಸೇರಿಕೊಂಡಿತು ಎಂಬ ಐತಿಹ್ಯವಿದೆ. ಮುಖ್ಯ ಗುಡಿಯ ಜತೆಗೆ ದೇವಳದ ಒಳಾಂಗಣದಲ್ಲಿ ಸೂರ್ಯ, ವಿಷ್ಣು, ಗಣಪತಿ ದೇವರನ್ನೊಳಗೊಂಡ ಉಮಾ ಮಹೇಶ್ವರ ಗುಡಿಯಿದೆ. ಕುಕ್ಕೆಲಿಂಗ ದೇವರು, ಬಲ್ಲಾಳರಾಯನ ವಿಗ್ರಹಗಳ ದರ್ಶನವನ್ನೂ ಪಡೆಯಬಹುದು. ಹೊರಾಂಗಣದಲ್ಲಿ ಹೊಸಳಿಗಮ್ಮನ ಗುಡಿ, ಶೃಂಗೇರಿ ಮಠ, ಸಂಪುಟ ನರಸಿಂಹ ಸ್ವಾಮಿ ಮಠ ಇದೆ.

ಕಾಶಿಕಟ್ಟೆ ಮಹಾಗಣಪತಿ, ಬಿಲದ್ವಾರ, ವನದುರ್ಗಾದೇವಿ ದೇವಸ್ಥಾನ, ಇಪ್ಪತ್ತೊಂದು ಅಡಿಯ ಎತ್ತರದ ಅಭಯ ಮಹಾ ಗಣಪತಿ, ಅಗ್ರಹಾರ ಸೋಮನಾಥ ದೇವಾಲಯವಿದೆ. ಸುಬ್ರಹ್ಮಣ್ಯ- ಧರ್ಮಸ್ಥಳ ರಸ್ತೆಯಲ್ಲಿ ಮೂರು ಕಿ.ಮಿ. ದೂರದಲ್ಲಿರುವ ಕುಲ್ಕುಂದ ಬಸವೇಶ್ವರ ದೇವಾಲಯದ ಕಲ್ಲಿನ ಬಸವನ ವಿಗ್ರಹ ಪ್ರಮುಖ ಆಕರ್ಷಣೆ. ಮಾರ್ಗಶಿರ ಶುದ್ಧ ಷಷ್ಠಿಯಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.

ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸೇವೆಗಳು. ಸರ್ಪ ಹತ್ಯೆ, ನಾಗದೋಷ ಪರಿಹಾರಕ್ಕಾಗಿ ಈ ಸೇವೆಗಳನ್ನು ಜನರು ಸಲ್ಲಿಸುತ್ತಾರೆ. ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳೂ ಸಮರ್ಪಣೆಯಾಗುತ್ತವೆ. ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ. ಮತ್ತೊಂದು ವಿಷಯವೆಂದರೆ ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ.

ಅಶ್ಲೇಷ ಬಲಿ ಸರ್ಪ ಸಂಸ್ಕಾರ/ಸರ್ಪದೋಷ

ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಒಂದೇ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೇ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ನೆನಪಿರಲಿ ಈ ಪೂಜೆಯು ಬೆಳಿಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸಗಳು ಈ ಪೂಜೆ ನೆರವೇರಿಸಲು ಉತ್ತಮ ಸಮಯ ಎನ್ನಲಾಗುತ್ತದೆ.

ಆದರೆ ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ಎರಡು ದಿನಗಳನ್ನು ಮೀಸಲಿಡಬೇಕಾಗುತ್ತದೆ. ಈ ಒಂದು ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ. ಈ ಪೂಜೆಯಲ್ಲಿ ಯಾರೆ ಆಗಲಿ ಯಾವುದೇ ಭೇದ ಭಾವಗಳಿಲ್ಲದೆ ಪಾಲ್ಗೊಳ್ಳಬಹುದು. ಪೂಜೆ ಮಾಡಿಸುವವರಿಗೆ ದೇವಸ್ಥಾನದ ವತಿಯಿಂದಲೆ ಉಪಹಾರ, ಭೋಜನದ ವ್ಯವಸ್ಥೆಯಿರುತ್ತದೆ. ಪ್ರತಿ ಕುಟುಂಬದಿಂದ ಗರಿಷ್ಠ ನಾಲ್ಕು ಜನರು ಮಾತ್ರ ಪಾಲ್ಗೊಳ್ಳಬಹುದು.

ವಸತಿ ವ್ಯವಸ್ಥೆ
ದೇವಳದ ವತಿಯಿಂದ ಆಶ್ಲೇಷ, ಅಕ್ಷರ, ಕಾರ್ತಿಕೇಯ, ಸ್ಕಂದ ಕೃಪಾ, ಕುಮಾರಕೃಪಾ ಮೊದಲಾದ ವಸತಿ ಗೃಹಗಳು, ಛತ್ರ ಮತ್ತು ಕಾಟೇಜ್‌ಗಳಿವೆ. ಜತೆಗೆ ಖಾಸಗಿ ವಸತಿ ಗೃಹಗಳೂ ಇವೆ. ವಿಶೇಷ ದಿನ, ವಾರದ ಅಂತ್ಯದಲ್ಲಿ ಕ್ಷೇತ್ರಕ್ಕೆ ಬರುವವರು ಮುಂಚಿತವಾಗಿ ವಸತಿ ಕಾಯ್ದಿರಿಸಿಕೊಳ್ಳಬೇಕು.ದೇವಳ ವತಿಯಿಂದ ಉಚಿತ ಲಗೇಜು ಕೊಠಡಿ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಉಚಿತ ಊಟದ ವ್ಯವಸ್ಥೆಯಿದೆ.

ಸೇವಾ ಶುಲ್ಕ

ಸರ್ಪಸಂಸ್ಕಾರ ಸೇವೆಗೆ ಮೊದಲೇ ದಿನ ನಿಗದಿ ಮಾಡಿಕೊಳ್ಳಬೇಕು. ಅದು ಎರಡು ದಿನ ನಡೆಯುವ ವಿಶೇಷ ಸೇವೆ. ಆಶ್ಲೇಷ ಬಲಿ. ನಾಗಪ್ರತಿಷ್ಠೆಗೆ ಮುಂಚಿತವಾಗಿ ಹಣ ಪಾವತಿಸಿ ರಶೀದಿ ಪಡೆಯಬೇಕು. ಸರ್ಪ ಸಂಸ್ಕಾರಕ್ಕೆ 2500 ರೂ, ನಾಗಪ್ರತಿಷ್ಠೆಗೆ 400ರೂ, ಆಶ್ಲೇಷ ಬಲಿ ಪೂಜೆಗೆ 400ರೂ ಮತ್ತು ಇಡೀ ದಿನದ ಮಹಾಪೂಜೆಗೆ 400 ರೂ ಶುಲ್ಕವನ್ನು ದೇವಳದ ಆಡಳಿತ ಮಂಡಳಿ ನಿಗದಿ ಮಾಡಿದೆ. ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 3.30ರಿಂದ ರಾತ್ರಿ 8ರವರೆಗೆ ದೇವರ ದರ್ಶನಕ್ಕೆ ಅವಕಾಶ. ಮಧ್ಯಾಹ್ನ 12 ಮತ್ತು ರಾತ್ರಿ 7.30ಕ್ಕೆ ಮಹಾಪೂಜೆ.

ಸುಬ್ರಹ್ಮಣ್ಯ ತಲುಪುವ ಹಾದಿ
ಸುಬ್ರಹ್ಮಣ್ಯಕ್ಕೆ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಧರ್ಮಸ್ಥಳದಿಂದ ನೇರ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಬೆಂಗಳೂರು ಮತ್ತು ಮಂಗಳೂರಿನಿಂದ ರೈಲು ಮೂಲಕವೂ ಬರಬಹುದು.  ಸುಬ್ರಹ್ಮಣ್ಯಕ್ಕೆ 15 ಕೀ.ಮೀ ದೂರದಲ್ಲಿ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣವಿದೆ. ಹತ್ತಿರದ ವಿಮಾನ ನಿಲ್ದಾಣ ಮಂಗಳೂರು. ಮಂಗಳೂರು, ಧರ್ಮಸ್ಥಳಗಳಿಂದ ಖಾಸಗಿ ಬಸ್‌ಗಳಿವೆ.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com