ನ್ಯೂಮರಾಲಜಿ ನಂಬಿಕೆ; ಅಂಕಿ ಸಂಖ್ಯೆ ಹೇಳುವ ಭವಿಷ್ಯ

ಇಂದು ವಿಶ್ವದಾದ್ಯಂತ ಹೆಚ್ಚು ಪ್ರಚಾರದಲ್ಲಿರುವುದು ಜ್ಯೋತಿಷ್ಯ ಶಾಸ್ತ್ರ. ಇದರಲ್ಲಿ ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ, ವಾಸ್ತು, ಗಿಣಿ ಶಾಸ್ತ್ರ, ಇಲಿಶಾಸ್ತ್ರ, ಶಕುನಶಾಸ್ತ್ರ, ಪಂಚಾಂಗ ಶಾಸ್ತ್ರ ಸೇರಿದಂತೆ ಹತ್ತು ಹಲವು ಶಾಸ್ತ್ರಗಳಿವೆ...
ಸಂಖ್ಯಾಶಾಸ್ತ್ರ
ಸಂಖ್ಯಾಶಾಸ್ತ್ರ

ಇಂದು ವಿಶ್ವದಾದ್ಯಂತ ಹೆಚ್ಚು ಪ್ರಚಾರದಲ್ಲಿರುವುದು ಜ್ಯೋತಿಷ್ಯ ಶಾಸ್ತ್ರ. ಇದರಲ್ಲಿ ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ, ವಾಸ್ತು, ಗಿಣಿ ಶಾಸ್ತ್ರ, ಇಲಿಶಾಸ್ತ್ರ, ಶಕುನಶಾಸ್ತ್ರ, ಪಂಚಾಂಗ ಶಾಸ್ತ್ರ ಸೇರಿದಂತೆ ಹತ್ತು ಹಲವು ಶಾಸ್ತ್ರಗಳಿವೆ.

ಇವುಗಳೆಲ್ಲವೂ ನಮ್ಮ ದೇಶದ ಶಾಸ್ತ್ರಗಳೇ ಎಂದು ಹೇಳಲಾಗದು. ಹಸ್ತ ಸಾಮುದ್ರಿಕ ಜಪಾನಿನಲ್ಲಿ, ವಾಸ್ತುಶಾಸ್ತ್ರ ಚೀನಾದಲ್ಲಿ, ಗಿಣಿಶಾಸ್ತ್ರ ಅಮೆರಿಕದಲ್ಲಿ, ಇಲಿಶಾಸ್ತ್ರ ಆಫ್ರಿಕಾದಲ್ಲಿ, ಸಂಖ್ಯಾಶಾಸ್ತ್ರ ಗ್ರೀಕ್ ಮತ್ತು ಈಜಿಪ್ಟ್‌ಗಳಲ್ಲಿ ಹಾಗೂ ಪಂಚಾಂಗಶಾಸ್ತ್ರ ನಮ್ಮ ದೇಶದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಇಂದು ಎಲ್ಲೆಡೆ ಸಂಖ್ಯಾಶಾಸ್ತ್ರ ತನ್ನ ಸ್ಥಾನಮಾನ ಭದ್ರಪಡಿಸಿಕೊಂಡಿದೆ. ಇದನ್ನು 'ನ್ಯೂಮರಾಲಜಿ' ಎಂದೂ ಕರೆಯುತ್ತಾರೆ.

ಇದನ್ನು ಮೊದಲು ಬಳಕೆಗೆ ತಂದವರು ಗ್ರೀಕ್‌ನವರು. ಖ್ಯಾತ ಗಣಿತಜ್ಞ ಪೈಥಾಗೊರಸ್ ಸಂಖ್ಯಾಶಾಸ್ತ್ರವನ್ನು ನಿಯಮಬದ್ಧವಾಗಿ ಅಭಿವೃದ್ಧಿಪಡಿಸಿದ. ನಂತರ ಇದು ಜಗತ್ತಿನ ಎಲ್ಲಾ ದೇಶಗಳಲ್ಲೂ ಬಳಕೆಗೆ ಬಂತು.

ಸಂಖ್ಯೆಗಳೇ ಆಧಾರ

ಇಂದು ಸಂಖ್ಯೆಗಳಿಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯದು. ಅಂದರೆ ಲೋಕದ ಎಲ್ಲಾ ನಡವಳಿಕೆಗೂ ಸಂಖ್ಯೆಗಳೇ ಆಧಾರ. ಎಲ್ಲಾ ಕಾಲದಲ್ಲೂ ಲೋಕದ ಸೃಷ್ಟಿ, ಸ್ಥಿತಿ, ಲಯಗಳನ್ನು ತಿಳಿಸುವುದು ಸಂಖ್ಯೆಗಳೇ. ಮನುಷ್ಯನ ಇಂದಿನ ಜೀವನದ ಸಕಲ ಆಗುಹೋಗುಗಳಿಗೂ ಸಂಖ್ಯೆಗಳೇ ಕಾರಣ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅವನನ್ನು ಸಂಖ್ಯೆಗಳೇ ನಿಯಂತ್ರಿಸುತ್ತವೆ. ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರಕ್ಕೆ ಮಹತ್ತರ ಸ್ಥಾನವಿದೆ. ಸಂಖ್ಯಾಶಾಸ್ತ್ರದಲ್ಲಿ 1- 9ರ ವರೆಗೆ ಸಂಖ್ಯೆಗಳಿದ್ದು ಸೊನ್ನೆಗೆ ಇಲ್ಲಿ ಬೆಲೆಯಿಲ್ಲ.

ಇಲ್ಲಿ 12 ರಾಶಿಗಳಲ್ಲಿ 27 ನಕ್ಷತ್ರಗಳಿವೆ ಎಂದರೆ ಒಂದೊಂದು ರಾಶಿಗೂ ಸರಾಸರಿ ಎರಡೂಕಾಲು ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ 4 ಪಾದಗಳು. ಎರಡೂಕಾಲು ನಕ್ಷತ್ರಗಳು 9 ಪಾದಗಳು ಅಂದರೆ ಒಂದೊಂದು ರಾಶಿಯಲ್ಲಿಯೂ 9 ಪಾದಗಳಿವೆ.

12 ರಾಶಿಗಳಿಗೆ 108 ಪಾದಗಳಿವೆ ಎಂದು ಎಂದು ತಿಳಿದಾಗ 27 ನಕ್ಷತ್ರಗಳು ಎಂದರೆ 2 ಮತ್ತು 7- 9. 108 ಪಾದಗಳೆಂದರೆ 1-10-8- 9 ಸಂಖ್ಯೆ ಬರುತ್ತದೆ. ಒಂದು ರಾಶಿಗೆ 30 ಡಿಗ್ರಿಗಳಂತೆ 12 ರಾಶಿಗಳಿಗೆ 30x12- 360 ಡಿಗ್ರಿಗಳು. ಇವುಗಳನ್ನು ಲೆಕ್ಕ ಹಾಕಿದಾಗ 3-6-0-9. ಈ ಡಿಗ್ರಿಗಳನ್ನು ನಿಮಿಷಗಳಾಗಿ ಪರಿವರ್ತಿಸಿದರೆ 360x60 = 21600 ಅಂದರೆ 2 + 1 + 6 +0 + 0  = 9 ಸಂಖ್ಯೆಯೇ ಬರುತ್ತದೆ.

ಆದುದರಿಂದ ಸಂಖ್ಯಾಶಾಸ್ತ್ರದಲ್ಲಿ 9 ಗ್ರಹಗಳು. 12 ರಾಶಿಗಳು, 27 ನಕ್ಷತ್ರಗಳೇ ಪ್ರಮುಖ ಪಾತ್ರ ವಹಿಸುತ್ತವೆ.

ಈ ಆಧುನಿಕ ಜೀವನದಲ್ಲಿ ಪ್ರತಿಯೊಬ್ಬನಿಗೂ ಗ್ರಹ, ನಕ್ಷತ್ರ, ರಾಶಿಗಳು ಹಾಸುಹೊಕ್ಕಾಗಿವೆ. ಸಂಖ್ಯಾಶಾಸ್ತ್ರದಲ್ಲಿ ಆಧಾರ ಸಂಖ್ಯೆ ಮತ್ತು ವಿಸ್ತಾರ ಸಂಖ್ಯೆ ಎಂಬ ಎರಡು ಸಂಖ್ಯೆಗಳನ್ನು ಕಾಣಬಹುದು. ಅದರಲ್ಲಿ 123456789 ಇವು ಆಧಾರ ಸಂಖ್ಯೆಗಳು. 10ರ ನಂತರದ ಎಲ್ಲ ಸಂಖ್ಯೆಗಳನ್ನು ವಿಸ್ತಾರ ಸಂಖ್ಯೆಗಳೆಂದು ಕರೆಯಲಾಗುತ್ತದೆ. 291 ಇದು ವಿಸ್ತಾರ ಸಂಖ್ಯೆ. ಇದರ ಆಧಾರ ಸಂಖ್ಯೆ 2 + 9 + 1 = 12.

1 +  2 = 3 ಈ ಮೂರು ಆಧಾರ ಸಂಖ್ಯೆ ಎಂದು ಗುರುತಿಸಬಹುದು. ಹಿಂದಿನ ಶತಮಾನದಲ್ಲಿ ಒಬ್ಬ ವ್ಯಕ್ತಿಯ ಜನ್ಮದಿನ, ತಿಂಗಳು, ವರ್ಷ ಈ ಮೂರನ್ನೂ ಸೇರಿಸಿ ಆಧಾರ ಸಂಖ್ಯೆಯನ್ನಾಗಿ ಪರಿವರ್ತಿಸಿ ನಂತರ ಆ ಸಂಖ್ಯೆಯನ್ನು ಆಧರಿಸಿ ಭವಿಷ್ಯ ಫಲವನ್ನು ಹೇಳಲಾಗುತ್ತಿತ್ತು.

ಈಗ ವ್ಯಕ್ತಿಯ ಹೆಸರಿನ ಇಂಗ್ಲಿಷ್ ಅಕ್ಷರಗಳನ್ನು ಬಳಸಿಕೊಂಡು, ಒಂದೊಂದು ಅಕ್ಷರಕ್ಕೆ ಬರುವ ಸಂಖ್ಯೆಯನ್ನು ಸೇರಿಸಿ ಕೂಡಿಸಿ. ಬಂದ ಆಧಾರ ಸಂಖ್ಯೆಯನ್ನು ಇಟ್ಟುಕೊಂಡು ಭವಿಷ್ಯ ಹೇಳಲಾಗುತ್ತದೆ. (ಇಂಗ್ಲಿಷಿನ 'ಎ'ಯಿಂದ 'ಝಡ್‌' ಅಕ್ಷರಗಳಿಗೆ 1 ರಿಂದ 26 ಸಂಖ್ಯೆ ನೀಡಲಾಗುತ್ತದೆ. ಎ-1 ಬಿ-2 ಸಿ-3 ಡಿ-4 ಇತ್ಯಾದಿಯಾಗಿ ಗುರುತಿಸಬೇಕು).

ಹೀಗೆ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಸಂಖ್ಯೆ ಇರುತ್ತದೆ. ಹಾಗೂ ಒಂದೊಂದು ಸಂಖ್ಯೆಗೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಒಂದಕ್ಕೆ ಸೂರ್ಯ, ಎರಡಕ್ಕೆ ಚಂದ್ರ, ಮೂರಕ್ಕೆ- ಕುಜ, ನಾಲ್ಕಕ್ಕೆ ಬುಧ, 5ಕ್ಕೆ - ಗುರು, 6ಕ್ಕೆ - ಶುಕ್ರ, 7ಕ್ಕೆ - ಶನಿ, 8ಕ್ಕೆ ರಾಹು, 9ಕ್ಕೆ ಕೇತು ಅಧಿಪತಿಯಾಗಿರುತ್ತಾನೆ. ಈ ಗ್ರಹಗಳು ನೀಡುವ ಫಲಗಳ ಆಧಾರದ ಮೇಲೆ ವ್ಯಕ್ತಿಯ ಜೀವನ ಕ್ರಮ ನಡೆಯುತ್ತದೆ.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನ ಪ್ರಾರಂಭವಾಗುವುದು 18ನೇ ವರ್ಷದಿಂದ. 18ನೇ ವರ್ಷದೊಳಗಿನವರಿಗೆ, ಅವರು ಹುಟ್ಟಿದ ದಿನ ತಿಂಗಳು, ವರ್ಷ ಇವುಗಳನ್ನು ಆಧಾರವಾಗಿಟ್ಟುಕೊಂಡು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟು ವ್ಯಕ್ತಿಯ ಜೀವಪರ್ಯಂತ ಅವನ ನಾಮ ಅಂದರೆ ಹೆಸರಿನಲ್ಲಿ ಬರುವ ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯ ಹೇಳಲಾಗುತ್ತದೆ.


- ವಿಶ್ವನಾಥ್. ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com