ಶ್ರೀ ನಿಮಿಷಾಂಬಾ ದೇವಿ ಮಹಾತ್ಮೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಪ್ರಸಿದ್ಧಿಯಾಗಿದ್ದು, ಶ್ರಿರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿ...
ಶ್ರೀ ನಿಮಿಷಾಂಬಾ ದೇವಿ
ಶ್ರೀ ನಿಮಿಷಾಂಬಾ ದೇವಿ
Updated on
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಪ್ರಸಿದ್ಧಿಯಾಗಿದ್ದು, ಶ್ರಿರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿ ಗಂಜಾಂ ಗ್ರಾಮದ ಕಾವೇರಿ ನದಿ ತೀರದಲ್ಲಿ ಶ್ರೀ ನಿಮಿಷಾಂಬಾ ದೇವಸ್ಥಾನವಿದೆ. 
ಈ ದೇವಸ್ಥಾನ ಆಗಮೋಕ್ತ ರೀತ್ಯಾ ನಿರ್ಮಾಣವಾಗಿದ್ದು ಶಿವಪಂಚಾಯತನ ಕ್ರಮದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಸೂರ್ಯದೇವ, ಗಣಪತಿ, ಶ್ರೀಚಕ್ರಸಹಿತ ಶ್ರೀ ನಿಮಿಷಾಂಬಾ ದೇವಿ, ಶ್ರೀ ಮೌಕ್ತಿಕೇಶ್ವರಸ್ವಾಮಿ ಮತ್ತು ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವರುಗಳ ಸನ್ನಿಧಿಗಳಿವೆ.
ಶ್ರೀರಂಗಪಟ್ಟಣ ಕ್ರಿ.ಶ.1578 ರಿಂದ 1617 ರವರೆಗೆ ಮೈಸೂರಿನ ರಾಜಧಾನಿ ಆಗಿತ್ತು. ಆ ಸಮಯದಲ್ಲಿ ಮೈಸೂರಿನ ರಾಜಒಡೆಯರ್ ರವರು ಶ್ರೀ ನಿಮಿಷಾಂಬಾ ದೇವಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನವನ್ನು ಕಟ್ಟಿಸಿದರೆಂಬ ಉಲ್ಲೇಖವಿದೆ.
ಶ್ರೀ ಶ್ರೀ ಪರಮೇಶ್ವರನ ಆಜ್ಞೆಯಂತೆ ಸುಮನಸ್ಕನು ಪೌಂಡರೀಕ ಯಾಗವನ್ನು ಲೋಕ ಕಲ್ಯಾಣಾರ್ಥವಾಗಿ ಮಾಡಲು ನಿಶ್ಚಯಿಸಿದನು. ಅದರಂತೆ ಯಾಗದ ರಕ್ಷಣೆಯ ಹೊಣೆಯನ್ನು ಸಾಕ್ಷಾತ್ ರುದ್ರರೂಪಿಯಾದ ಮುಕ್ತಕಋಷಿಗೆ ವಹಿಸಿದರು. ಈ ವಿಚಾರವನ್ನು ಜಾನು ಮತ್ತು ಸುಮಂಡಲರು ಶ್ರೀಮಾನ್‌ನಾರದರಿಂದ ತಿಳಿದುಕೊಂಡರು. ಹೇಗಾದರೂ ಮಾಡಿ ಈ ಯಾಗವನ್ನು ಕೆಡಿಸಲೇಬೇಕೆಂದು ತಮ್ಮ ಗುರುಗಳಾದ ಶುಕ್ರಾಚಾರ್ಯರಲ್ಲಿ ಮಂತ್ರಾಲೋಚನೆ ನಡೆಸಿದರು. 
ಜಾನು ಮತ್ತು ಸುಮಂಡಲರು ತಮ್ಮ ಮಂತ್ರಿಗಳಾದ ಶೂರಬಾಹು ಮತ್ತು ಘಟೋದರರಿಂದೊಡಗೂಡಿದ ಸೈನ್ಯವನ್ನು ಕಳುಹಿಸಿದರು. ಇವರ ಸೈನ್ಯವನ್ನು ಕ್ಷಣಾರ್ಧದಲ್ಲಿ ಮುಕ್ತಕನು ಸಂಹರಿಸಿದನು. ಈ ಸುದ್ದಿಯನ್ನು ತಿಳಿದ ಜಾನು ಮತ್ತು ಸುಮಂಡಲರು ಕೋಪಗೊಂಡು ಸ್ವತಃ ತಾವೇ ಮುಕ್ತಕ ಋಷಿಯೊಡನೆ ಯುದ್ಧಕ್ಕೆ ಸನ್ನದ್ಧರಾದರು. ವೀರಾವೇಶದಿಂದ ಯುದ್ಧವನ್ನು ಮಾಡಿದರು. ಈ ಯುದ್ಧದಲ್ಲಿ ಮುಕ್ತಕನು ಸೋಲನ್ನನುಭವಿಸಬೇಕಾಯಿತು. ಮುಕ್ತಕನಲ್ಲಿರುವ ಎಲ್ಲಾ ಅಸ್ತ್ರಗಳು ನಿಷ್ಪ್ರಯೋಜಕವಾದವು. ಯುದ್ಧದಲ್ಲಿ ಸೋತ ಮುಕ್ತಕನು ಪಾರ್ವತಿಯನ್ನು ಕುರಿತು ಪ್ರಾರ್ಥಿಸಿದನು. ಕ್ಷಣ ಮಾತ್ರದಲ್ಲಿ ಪಾರ್ವತಿದೇವಿಯು ಯಜ್ಞಕುಂಡದಿಂದ ಉದ್ಭವಿಸಿದಳು. 
ಜಾನು ಮತ್ತು ಸುಮಂಡಲರು ಯಾವುದೇ ಆಯುಧದಿಂದ ತಮ್ಮ ಸಂಹಾರ ಆಗಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದನ್ನು ತಿಳಿದ ಪಾರ್ವತಿದೇವಿಯು ತನ್ನ ದಿವ್ಯದೃಷ್ಟಿಯಿಂದ ನಿಮಿಷ ಮಾತ್ರದಲ್ಲಿ ಅವರನ್ನು ಸಂಹರಿಸಿದಳು. ಯಜ್ಞಪೂರ್ಣಗೊಳ್ಳುವಂತೆ ನೋಡಿಕೊಂಡಳು. ಇದರಿಂದ ಸಂತುಷ್ಟನಾದ ಮುಕ್ತಕ ಋಷಿಯು ಓ ಜಗನ್ಮಾತೆ ನಿಮಿಷಾಂಬಾ ಎಂಬ ಹರ್ಷೋದ್ಗಾರ ಮಾಡಿದನು. ಅಂದಿನಿಂದ ಪಾರ್ವತಿದೇವಿಗೆ ನಿಮಿಷಾಂಬಾ ಎಂಬ ಹೆಸರು ಬಂದಿತು.
ತ್ರಿಶೂಲ, ಡಮರು, ಅಭಯ ವರದಗಳಿಂದ ಶೋಭಿಸುವ ಶ್ರೀ ನಿಮಿಂಷಾಭಾ ದೇವಿಯು ಭಕ್ತಜನರ ಕಲ್ಪತರು. ಮುಗುಳುನಗೆ ಸೂಸುವ ಮುಖಮುದ್ರ ಏಕಾಸನದಲ್ಲಿ ಕುಳಿತಿರುವ ನಿಮಿಷಾಂಬಾ ಶ್ರೀಚಕ್ರಾಂಕಿತೆ ಎದುರಿನಲ್ಲಿರುವ ಶ್ರೀ ಚಕ್ರವು ಅಷ್ಟೇ ಪುರಾತನವಾಗಿರುವುದು ಶ್ರೀಕ್ಷೇತ್ರದ ವಿಶೇಷವು ಆಗಿದೆ. ಭೂ ಪ್ರಸ್ತಾರ, ಕೃಷ್ಣಶಿಲೆಯಲ್ಲಿ ಕೆತ್ತಲ್ಪಟ್ಟ ಶ್ರೀಚಕ್ರವು ಏಕಮೇವ ಅದ್ವಿತೀಯ ಎನಿಸಿಕೊಂಡಿದೆ. 
ಶ್ರೀಚಕ್ರದ ಎಲ್ಲೆಡೆ ದಳಗಳಲ್ಲಿ ತ್ರಿಕೋಣಗಳಲ್ಲಿ, ಭವನಗಳಲ್ಲಿ ಇರುವ ಬೀಜಾಕ್ಷರಗಳು ಜಗದಾಂಬೆ ಶ್ರೀನಿಮಿಷಾಂಬಾ ದೇವಿಯ ಪ್ರಸನ್ನತೆಗೆ ಕಾರಣ ಇದಾಗಿದೆ. ಇಲ್ಲಿನ ಶ್ರೀದೇವಿಯ ಮೂಲ ಮಂತ್ರಗಳನ್ನು ಹೊಂದಿರುವ ಶ್ರೀಚಕ್ರ ಅತೀವಿರಳ ಎನ್ನಲಾಗಿದೆ. ಕೇವಲ ದರ್ಶನ ಮಾತ್ರದಿಂದಲೇ ಭಕ್ತರ ಇಷ್ಟಾರ್ಥ ಈಡೇರುವುದಲ್ಲದೆ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ. ಶ್ರೀನಿಮಿಷಾಂಬಾ ದೇವಿಯಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಳ್ಳವುದರಿಂದ ಮದುವೆಯಾಗದವರಿಗೆ ಕಲ್ಯಾಣಭಾಗ್ಯವು, ಮಕ್ಕಳಾಗದವರಿಗೆ ಸಂತಾನ ಭಾಗ್ಯವೂ, ಆರ್ಥಿಕ ತೊಂದರೆಯಲ್ಲಿರುವವರಿಗೆ ಧನಧಾನ್ಯ, ಅನಾರೋಗ್ಯದಿಂದ ಕೂಡಿರುವವರಿಗೆ ಆರೋಗ್ಯ ಭಾಗ್ಯ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭಾಗ್ಯವೂ ಪ್ರಾಪ್ತಿಯಾಗುತ್ತದೆ. ಎಂಬುದಾಗಿ ಭಕ್ತಾದಿಗಳ ಇಷ್ಟಾಭಿಲಾಷೆಯನ್ನು ಪೂರೈಸುವ ಆರಾಧ್ಯ ದೈವ ಸ್ವರೂಪಿಣಿ ಶ್ರೀ ನಿಮಿಷಾಂಬಾ ದೇವಿ ಎಂಬುದಾಗಿ ಪ್ರಸಿದ್ದಿಯಾಗಿರುತ್ತದೆ.
ತೆರಳುವ ಮಾರ್ಗ 
ಬೆಂಗಳೂರಿನಿಂದ ಶ್ರೀರಂಗಪಟ್ಟಣವು 127 ಕಿ.ಮೀ ಮತ್ತು ಮೈಸೂರಿನಿಂದ 13 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆಗಳಿವೆ. ಅಲ್ಲದೆ ಬೆಂಗಳೂರು ಹಾಗೂ ಮೈಸೂರು ಮಾರ್ಗವಾಗಿ ಸಂಚರಿಸುವ ರೈಲುಗಳಿಗೆ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ನಿಲ್ದಾಣವಿದೆ. ಹೀಗಾಗಿ ಶ್ರೀರಂಗಪಟ್ಟಣಕ್ಕೆ ತೆರಳಲು ಯಾವುದೇ ತೊಂದರೆ ಇಲ್ಲ. 
- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com