ಶಂಕರ ಜಯಂತಿಯನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಣೆ; ಆದೇಶ ಹೊರಡಿಸಲು ಕೇಂದ್ರದ ಸಿದ್ಧತೆ

ಶಂಕರಾಚಾರ್ಯರ ಜನ್ಮದಿನವನ್ನು ಮುಂದಿನ ವರ್ಷದಿಂದ ರಾಷ್ಟ್ರಾದ್ಯಂತ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲು ಆದೇಶ ಹೊರಡಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ
ಶಂಕರಾಚಾರ್ಯ
ಶಂಕರಾಚಾರ್ಯ

ನವದೆಹಲಿ: ಶಂಕರಾಚಾರ್ಯರ ಜನ್ಮದಿನವನ್ನು ಮುಂದಿನ ವರ್ಷದಿಂದ ರಾಷ್ಟ್ರಾದ್ಯಂತ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲು ಆದೇಶ ಹೊರಡಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಆಂಗ್ಲ ದೈನಿಕವೊಂದು ವರದಿ ಪ್ರಕಟಿಸಿದೆ. 
ವರದಿಯ ಪ್ರಕಾರ ಶಂಕರ ಜಯಂತಿ ಬಗ್ಗೆ ಮಾಹಿತಿ ನೀಡಿರುವ ಸಂಸ್ಕೃತಿ ಸಚಿವಾಲಯ, ಶಂಕರ ಜಯಂತಿಯನ್ನು ರಾಷ್ಟ್ರಾದ್ಯಂತ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶೃಂಗೇರಿ ಶಾರದಾಪೀಠ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಅಲ್ಲದೇ ಶಂಕರಾಚಾರ್ಯರು ಉಪನಿಷತ್ ಗಳಿಗೆ ಬರೆದ ಭಾಷ್ಯಗಳನ್ನು ಉತ್ತೇಜಿಸಿ ಭಾರತೀಯ ತತ್ವಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿದೆ ಎಂದು ಹೇಳಿದೆ.  
ಶಂಕರ ಜಯಂತಿಯನ್ನು ದೇಶಾದ್ಯಂತ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸುವ ವ್ಯವಸ್ಥೆ- ವಿಧಾನವನ್ನು ನಿರ್ಧರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಪ್ರಕಟಿಸಲಾಗಿದೆ. "ಶಂಕರ ಜಯಂತಿಯನ್ನು ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸುವ ವಿಷಯವಾಗಿ ಶೃಂಗೇರಿ ಶಾರದಾಪೀಠ 1996 ರಿಂದ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಈಗ ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸಂಸ್ಕೃತಿ ಸಚಿವಾಲಯವನ್ನು ಕೇಳಿದೆ. 
ವರದಿ ಬಗ್ಗೆ ಕನ್ನಡ ಪ್ರಭ.ಕಾಂ ನೊಂದಿಗೆ ಮಾತನಾಡಿರುವ ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್,  ಪ್ರಸ್ತುತ ಕರ್ನಾಟಕ, ಕೇರಳದಲ್ಲಿ ಶಂಕರ ಜಯಂತಿಯನ್ನು ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವಂತೆ ಕಳೆದ ಹತ್ತು ವರ್ಷದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುತ್ತಿದ್ದೇವೆ. ಈಗ ಪ್ರಧಾನಿ ಕಾರ್ಯಾಲಯ ತತ್ವಜ್ಞಾನಿಗಳ ದಿನಾಚರಣೆ ಪ್ರಸ್ತಾವನೆಯ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸಂಸ್ಕೃತಿ ಸಚಿವಾಲಯವನ್ನು ಕೇಳಿದೆ ಎಂಬುದು ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ. ಆದರೆ ಸಂಸ್ಕೃತಿ ಸಚಿವಾಲಯ ಪ್ರಸ್ತಾವನೆ ಅಂಗೀಕರಿಸಿರುವ ಬಗ್ಗೆ ಈ ವರೆಗೂ ಮಠಕ್ಕೆ ಅಧಿಕೃತ ಪತ್ರ ಬಂದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com