ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನದಾರಿ. ಬಸವನದಾರಿ ಎಂಬ ಎರಡು ಮಾರ್ಗಗಳಿವೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿಮಲೆ , ಕೊಂಗುಮಲೆ ಮೊದಲಾಗಿ 77 ಮಲೆಗಳಿವೆ. ಕೊಳ್ಳೇಗಾಲದಿಂದ ಮಧುವನಹಳ್ಳಿ, ಸಿಂಗಾನಲ್ಲೂರು, ಹನೂರು ಮಾರ್ಗವಾಗಿ ಕೌದಳ್ಳಿ ತಲುಪಿದರೆ, ಅಲ್ಲಿಂದ ಬೆಟ್ಟಕ್ಕೆ 16ಕಿ.ಮೀ ಕಾಡುದಾರಿ. ಮುಂದೆ ತಾಳಬೆಟ್ಟ ಎಂಬ ಬೆಟ್ಟದ ತಪ್ಪಲು ಸಿಗುತ್ತದೆ. ಮಹದೇಶ್ವರನ ಭಕ್ತರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಮತ್ತು ಶ್ರೀಕೃಷ್ಣರಾಜ ಒಡೆಯರು ತಾಳಬೆಟ್ಟದಿಂದ ಕಾಲ್ನಡಿಗೆಯಲ್ಲೇ ಬೆಟ್ಟವೇರಿ ಮಾದಯ್ಯನ ದರ್ಶನ ಮಾಡುತ್ತಿದ್ದರಂತೆ.