
ಕೃಷ್ಣಾ ಜನ್ಮಾಷ್ಟಮಿ. ಹೌದು, ಗೋಪಿ ಲೋಲಾ. ನಂದ ಕಿಶೋರ, ಶ್ರೀಕೃಷ್ಣ ಹುಟ್ಟಿದ ದಿನ. ಪುಟಾಣಿಗಳಿಂದ ಹಿಡಿದು ಮನೆಯ ಹಿರಿಯರವರೆಗೂ ಬಾಲ ಗೋಪಾಲನ ಜನ್ಮ ದಿನವನ್ನು ಆಚರಿಸುವ ಸಂಭ್ರಮ, ಪುಟಾಣಿ ಮಕ್ಕಳು ಗೋಪಾಲನ ಉಡುಗೆ ಹಾಕಿ ಬೆಣ್ಣೆ ಕೃಷ್ಣನ ರೂಪದಲ್ಲಿ ಕುಣಿಯುವ ದಿನ.
ವೃಷಭ ಲಗ್ನದಲ್ಲಿ ಅಷ್ಠಮಿಯ ದಿನ ಕೃಷ್ಣನ ಜನನವಾಗುತ್ತೆ. ಈ ದಿನದಂದು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕೃಷ್ಣನಿಗೆ ಪೂಜೆ ಸಲ್ಲಿಸುವ ಮುನ್ನ ಮೊದಲಿಗೆ ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.
ಕೃಷ್ಣನನ್ನು ಪ್ರತಿಷ್ಠಾಪನೆ ಮಾಡುವ ಮಂಟಪವನ್ನು ಸಿಂಗಾರ ಮಾಡಿರಬೇಕು. ಏಕೆಂದರೆ, ಕೃಷ್ಣನು ಅಲಂಕಾರ ಪ್ರಿಯನು. ಹೂವುಗಳಿಂದ ಅಲಂಕಾರ ಮಾಡಿದ ಮಂಟಪದಲ್ಲಿ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು. ಕೆಲವೊಬ್ಬರು ಜಾಗರಣೆ ಮಾಡಿ ಕೃಷ್ಣನಿಗೆ ಪೂಜೆ ಸಲ್ಲಿಸುವ ಪ್ರತೀತಿ ಇದೆ. ತುಳಸಿ ಕಟ್ಟೆಯಿಂದ ಹಿಡಿದು ಮನೆಯೊಳಗೆ ಕೃಷ್ಣನ ಹೆಜ್ಜೆಗಳನ್ನು ಬಿಡಿಸಬೇಕು.ತುಳಸಿಯ ಒಂದು ದಳವನ್ನು ಕೃಷ್ಣನಿಗೆ ಅರ್ಪಿಸಿದರೆ, ಕೃಷ್ಣನು ಒಲಿಯುತ್ತಾನೆ ಎಂದು ಪೂರಾಣಗಳು ಹೇಳುತ್ತವೆ.ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು.
ಹಲವಾರು ರೀತಿಯ ತಿಂಡಿಗಳನ್ನು ಮಾಡಬೇಕು. 108 ಬಗೆಯ ತಿಂಡಿಗಳನ್ನು ಮಾಡಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ, ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ ಮಾಡಬೇಕು. ಕೃಷ್ಣನಿಗೆ ಹಾಲಿನಿಂದಲೇ ಮಾಡಿದ ತಿಂಡಿಗಳು ಇಷ್ಟವಾಗುತ್ತದೆ. ಹಾಲಿನಿಂದ ಮಾಡಿದ ಪಾಯಸ, ಹಾಲಿನ ಪೇಡ ಮುಂತಾದ ಸಿಹಿತಿಂಡಿಗಳನ್ನು ಮಾಡಬಹುದು. ಕೆಲವು ಕಡೆ ಶ್ರೀಖಂಡ್ ಪೂರಿ ತಯಾರಿಸಿ ಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ, ಚಕ್ಕುಲಿ,ಅವಲಕ್ಕಿ,ಮತ್ತು ಬೆಲ್ಲದ ಪಾನಕ ಮಾಡುತ್ತಾರೆ. ಕೃಷ್ಣನ ಭಕ್ತ ಕುಚೇಲನ ನೆನಪಿಗಾಗಿ ಮನೆಯಲ್ಲಿ ತಯಾರಿಸಿದ ಅವಲಕ್ಕಿಯನ್ನೆ ಬಳಸುತ್ತಾರೆ.
ಕೃಷ್ಣಾಷ್ಟಮಿಯನ್ನು 2 ದಿನಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆ ದಿನ ಹುಟ್ಟಿದ ಸಂಭ್ರಮವಾದರೆ ಮಾರನೆಯ ದಿನ ಕಾರ್ಯಕ್ರಮಗಳು ವಿಜೃಂಭಿಸುತ್ತವೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ ಕೃಷ್ಣಾಷ್ಟಮಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. ಮೊಸರು ಕುಡಿಕೆ ಒಡೆಯುವುದು ಬಹಳ ಜನಪ್ರಿಯ. ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಥುರಾದಲ್ಲಿ ಜುಲನೋತ್ಸವ ಪ್ರಸಿದ್ಧಿ. ದೇವಾಲಯಗಳಲ್ಲಿ, ಮನೆಮನೆಗಳಲ್ಲಿ ಉಯ್ಯಾಲೆ ತೊಟ್ಟಿಲು ಕಟ್ಟುತ್ತಾರೆ. ಅಷ್ಟಮಿಗೆ ತಿಂಗಳ ಮುಂಚೆಯೇ ಈ ತಯಾರಿ ನಡೆಯುತ್ತದೆ.
ಇನ್ನು ಜನ್ಮಾಷ್ಟಮಿಯಂದು ಮುಖ್ಯವಾಗಿ ಈ ಶ್ಲೋಕವನ್ನು ಹೇಳಬೇಕು...
'ಅಜನ್ಮಮರಣಂ ಯಾವತ್ ಯನ್ಮಯಾ ದುಷ್ಕ್ರತಂ ಕೃತಮ್ ತತ್ಪ್ರಣಾಶಾಯ ಗೋವಿಂದ ಪ್ರಸೀದ ಪುರುಷೋತ್ತಮ'
ಇದರ ಅರ್ಥ: ನಾನು ಮಾಡಿರುವಂತಹ ಪಾಪಗಳನ್ನೆಲ್ಲಾ ಕ್ಷಮಿಸು ಎಂದು ಭಗವಂತನಲ್ಲಿ ಪ್ರಾರ್ಥಿಸೋದು.
-ಮೈನಾಶ್ರೀ.ಸಿ
Advertisement