ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಕವಿವಾಣಿಯಂತೆ ಶ್ರೀ ಕೃಷ್ಣ ಬೇರೆ ಯಾವುದೇ ಯೋಚನೆ ಮಾಡದೆ ನನಗೆ ಶರಣಾಗು, ನಿನ್ನ ಯೋಗಕ್ಷೇಮದ ಜವಾಬ್ದಾರಿ ನನ್ನದು ಎಂದಿದ್ದಾನೆ.
ಮೂರು ಸಾವಿರ ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿದ ಶ್ರೀ ಕೃಷ್ಣನು ಇಡೀ ಜಗತ್ತಿಗೇ ಗುರು ಎಂದು ಗುರುತಿಸಿಕೊಂಡವನು. ಮನುಷ್ಯ ತನ್ನ ಜೀವನದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಭಗವಂತ ಮಹಾಭಾರತದ ರಣರಂಗದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಭಗವದ್ಗೀತೆಯ 18 ಅಧ್ಯಾಯಗಳ ಮೂಲಕ ಉಪದೇಶಿಸಿ ಸರ್ವರಿಗೂ ಮಾರ್ಗದರ್ಶನ ಮಾಡಿದ್ದಾನೆ. ಗುರುಗಳಿಗೆ ಗುರು, ಹಾಗಾಗಿ ಅವನನ್ನು ಕೃಷ್ಣ ವಂದೇ ಜಗದ್ಗುರು ಎಂದು ಕರೆಯುತ್ತಾರೆ. ಅವನಿಗೆ ಸಮರಾದ ಗುರು ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಅರ್ಜುನನ ಮೂಲಕ ಇಡೀ ಜಗತ್ತಿಗೆ ನೀಡಿರುವ ಸಂದೇಶವೇ ಭಗವದ್ಗೀತೆ. ಭಗವದ್ಗೀತೆ ಸರ್ವ ಕಾಲಕ್ಕೂ ಪ್ರಸ್ತುತ.
ಇಂದು ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆಯಂದೇ ಶ್ರೀ ಕೃಷ್ಣನ ಜನ್ಮ ದಿನಾಚರಣೆ ಕೂಡ ಬಂದದ್ದು ಕಾಕತಾಳೀಯ. ನಾವು ವಿಷ್ಣುವಿನ ಅನೇಕ ಅವತಾರಗಳನ್ನು ಪುರಾಣದಲ್ಲಿ ಕೇಳಿದ್ದೇವೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮಚಂದ್ರ ಮತ್ತು ಭಗವಾನ್ ಶ್ರೀ ಕೃಷ್ಣರೇ ವಿಷ್ಣುವಿನ ಅವತಾರಗಳು. ಕೃಷ್ಣ ಕೇವಲ ದೇವರು ಮಾತ್ರವಲ್ಲ, ಒಬ್ಬ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ, ವಿಜ್ಞಾನಿ ಮತ್ತು ಎಂಜಿನಿಯರ್. ಅವನ ಜನ್ಮದಿನವನ್ನು ಶ್ರದ್ಧಾ ಭಕ್ತಿಗಳಿಂದ ಎಲ್ಲೆಡೆ ಆಚರಿಸುವುದು ಸರ್ವಮಾನ್ಯ.
ಸುಮನಾ ಉಪಾಧ್ಯಾಯ
ಬೆಂಗಳೂರು