ಹೀಗಾಗಿ ಇದು ಶಿವಸಾಲಿಗ್ರಾಮವಾಗಿದ್ದು, ಪೀಠದಲ್ಲಿ ಮೃತೃಂಜಯ ಚಕ್ರವಿದೆ, ಇಲ್ಲಿ ದೇವರಿಗೆ ಮಾಡಿದ ಅಭಿಷೇಕದ ತೀರ್ಥ ಹಾಗೂ ಪ್ರಸಾದವನ್ನು ಸ್ವೀಕರಿಸಿದಲ್ಲಿ ಅಕಾಲಮೃತ್ಯು, ಅಪಮೃತ್ಯು ತಪ್ಪುವುದಲ್ಲದೆ, ವಾಣಿಜ್ಯ, ವ್ಯಾಪಾರ, ಕಾರ್ಯ ಸ್ಥಳದಲ್ಲಿ ಉತ್ತರೋತ್ತರ ಅಭಿವೃದ್ಧಿ ಆಗುತ್ತದೆ ಮಿಗಿಲಾಗಿ ಕಾಲಸರ್ಪದೋಷ, ಜಲಕಂಟಕ, ಮಾಟ ಮಂತ್ರದ ದುಷ್ಟ ಪ್ರಭಾವ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಅಭಿಷೇಕದ ನಂತರ ಅಲಂಕಾರದಲ್ಲಿ ಶಿವಲಿಂಗದ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಇನ್ನು ದೇವಾಲಯದ ಒಳ ಆವರಣದಲ್ಲಿ ಗಣೇಶನ ವಿಗ್ರಹವಿದೆ. ಕಲ್ಲಿನ ಕಂಬಗಳಲ್ಲಿ ಗಣೇಶನ ಶಿಲ್ಪಗಳಿವೆ. ಗರ್ಭಗೃಹದಲ್ಲಿರುವ ದೇವರ ಹಿಂದೆ ಹಾಕಲಾಗಿರುವ ಕನ್ನಡಿಯ ಹಿಂದಿರುವ ಬಿತ್ತಿಯಲ್ಲಿ ಈ ದೇವಾಲಯದ ಇತಿಹಾಸವನ್ನು ಕೆತ್ತಲಾಗಿದೆ 500 ವರ್ಷಗಳ ಹಿಂದೆ ನಿರ್ಮಿಸಿದ ಈ ದೇವಾಲಯದಲ್ಲಿ ಅದ್ಭುತವಾದ ಶಕ್ತಿ ಇದೆ.