ಅನಂತನ ಸ್ಮರಣೆಯಲ್ಲಿ...

ಸೆಪ್ಟೆಂಬರ್ 27 ಅನಂತ ಚತುರ್ದಶಿ. ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದಾದ ಅನಂತನ ಚತುರ್ದಶಿ ಆಚರಣೆ ರೀತಿ ವಿಶಿಷ್ಟ. ಅದರ ಹಿನ್ನೆಲೆ, ಆಚರಣೆ ಬಗ್ಗೆ ಕಿರು ಮಾಹಿತಿ...
ಅನಂತ ಪದ್ಮನಾಭ ಪೂಜೆಯಲ್ಲಿ ನಿರತರಾಗಿರುವ ಉಬರಡ್ಕ ಅನಂತೇಶ್ವರ ಭಟ್ ದಂಪತಿ
ಅನಂತ ಪದ್ಮನಾಭ ಪೂಜೆಯಲ್ಲಿ ನಿರತರಾಗಿರುವ ಉಬರಡ್ಕ ಅನಂತೇಶ್ವರ ಭಟ್ ದಂಪತಿ

ಸೆಪ್ಟೆಂಬರ್ 27 ಅನಂತ ಚತುರ್ದಶಿ. ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದಾದ ಅನಂತನ ಚತುರ್ದಶಿ ಆಚರಣೆ ರೀತಿ ವಿಶಿಷ್ಟ. ಅದರ ಹಿನ್ನೆಲೆ, ಆಚರಣೆ ಬಗ್ಗೆ ಕಿರು ಮಾಹಿತಿ.

ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಬರುವ ಹಬ್ಬವೇ ಅನಂತ ಚತುರ್ದಶಿ. ವಿಷ್ಣು ದೇವರು ಸಾವಿರ ಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಗೆ ಕೈಗೊಳ್ಳುವ ವ್ರತ ಅನಂತನ ವ್ರತವಾಗಿದೆ. ಹಾಗಾಗಿ ಇದನ್ನು ಅನಂತ ಪದ್ಮನಾಭ ವ್ರತವೆಂದೂ ಕರೆಯುತ್ತಾರೆ. ಈ ವ್ರತ ಮಾಡಲು ಆರಂಭಿಸಿದವರು 14 ವರ್ಷಗಳವರೆಗೆ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಅನುಕೂಲವಾದರೆ ಆಚರಣೆಯನ್ನು ಮುಂದುವರಿಸಲೂಬಹುದು.

ಹಿನ್ನೆಲೆ: ಅನಂತ ಚತುರ್ದಶಿ ವ್ರತದ ಹಿಂದೆ ಕಥೆಯಿದೆ. ಹಿಂದೆ ಕೃತಾಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿದ್ದನಂತೆ. ಆತನ ಹೆಂಡತಿಯ ಹೆಸರು ದೀಕ್ಷಾ ಹಾಗೂ ಮಗಳು ಸುಶೀಲಾ. ಕೆಲ ವರ್ಷಗಳಲ್ಲಿ ದೀಕ್ಷ ತೀರಿಹೋಗುತ್ತಾಳೆ. ಆಗ ಸುಮಂತ ಕರ್ಕಶ ಎಂಬುವಳನ್ನು ಮದುವೆಯಾಗುತ್ತಾನೆ. ಆಕೆ ಸುಶೀಲೆಯನ್ನು ಮಗಳಂತೆ ಪ್ರೀತಿಯಿಂದ ಕಾಣದೆ ಸಾಕಷ್ಟು ಹಿಂಸೆ ಕೊಡುತ್ತಾಳೆ. ಅಷ್ಟು ಹೊತ್ತಿಗೆ ಸುಶೀಲೆ ಕೌಂಡಿನ್ಯ ಎಂಬುವವನನ್ನು ಮದುವೆಯಾಗುತ್ತಾಳೆ. ಚಿಕ್ಕಮ್ಮ ಕೊಡುವ ಕಷ್ಟವನ್ನು ಸಹಿಸಲಾರದೆ ಗಂಡನೊಂದಿಗೆ ಮನೆಯಿಂದ ಹೊರಬರುತ್ತಾಳೆ.

ಸತಿ-ಪತಿಯರು ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುಮನೆ ನದಿ ತಟದಲ್ಲಿ ಮಹಿಳೆಯರ ಗುಂಪೊಂದು ಪೂಜೆ ಮಾಡುತ್ತಿರುತ್ತದೆ. ಸುಶೀಲೆ ಅವರಲ್ಲಿ ಅದೇನು ಎಂದು ಕೇಳಿದಾಗ ಪೂಜೆಯ ಬಗ್ಗೆ ವಿವರಿಸುತ್ತಾರೆ. ಆಗ ಸುಶೀಲೆ ತನಗೆ ಮಕ್ಕಳಾಗಲು ಮತ್ತು ತನ್ನ ಗಂಡ ಮಾಡುತ್ತಿರುವ ವೃತ್ತಿಯಲ್ಲಿ ಯಶಸ್ಸು ಸಿಗಲು ಅನಂತ ವ್ರತವನ್ನು ಮಾಡಬೇಕೆಂಬ ಆಸೆಯಾಗಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ.ಅವರ ಸಂಪತ್ತು ವೃದ್ಧಿಸಿ ಇಷ್ಟಾರ್ಥ ನೆರವೇರುತ್ತದೆ. ಆದರೆ ಸುಶೀಲೆಯ ಗಂಡ ಕೌಂಡಿನ್ಯನಿಗೆ ವ್ರತದ ಮೇಲೆ ನಂಬಿಕೆ ಬರುವುದಿಲ್ಲ. ಸುಶೀಲೆ ವ್ರತದ ಅಂಗವಾಗಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆ ಎಸೆಯುತ್ತಾನೆ. ಈ ಘಟನೆಯ ನಂತರ ಅವರ ಸಂಪತ್ತು ನಿಧಾನವಾಗಿ ನಶಿಸುತ್ತಾ ಹೋಗುತ್ತದೆ. ಬಡತನ ಆ ದಂಪತಿಯನ್ನು ಆವರಿಸುತ್ತದೆ.

ಹಲವು ಕಷ್ಟ-ತೊಂದರೆಗಳನ್ನು ಅನುಭವಿಸಿದ ನಂತರ ಕೌಂಡಿನ್ಯನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅನಂತ ಪದ್ಮನಾಭ ದೇವರ ಶಾಪವೆಂದು ತಿಳಿಯುತ್ತದೆ. ದೇವರ ದರ್ಶನಕ್ಕೆಂದು ಕಾಡಿಗೆ ಹೋಗುತ್ತಾನೆ. ಅಲ್ಲಿ ಮಾವಿನಮರದಲ್ಲಿ ಹಣ್ಣು ಬಿಟ್ಟಿರುತ್ತದೆ. ಆದರೆ ಹಣ್ಣನ್ನು ತಿನ್ನಲು ಸಾಧ್ಯವಾಗುವುದಿಲ್ಲ. ದಟ್ಟ ಹುಲ್ಲುಗಾವಲಿನಲ್ಲಿ  ಹಸು,ಕರು, ಎಮ್ಮೆ, ಕತ್ತೆ ಇವೆಲ್ಲಾ ಸಿಗುತ್ತವೆ. ಎಲ್ಲದರ ಬಳಿಯೂ ಅನಂತ ಪದ್ಮನಾಭನ ಬಗ್ಗೆ ತಿಳಿದಿದೆಯೇ ಎಂದು ಕೇಳುತ್ತಾನೆ. ಇಲ್ಲ ಎಂಬ ಉತ್ತರ ಬರುತ್ತದೆ. ಕೌಂಡಿನ್ಯನಿಗೆ ಜೀವನದಲ್ಲಿ ಹತಾಶೆ, ನಿರಾಶೆ ಉಂಟಾಗಿ ಸಾಯಲು ಹೊರಡುತ್ತಾನೆ. ಆಗ ಅನಂತ ಪದ್ಮನಾಭ ದೇವರು ಬ್ರಾಹ್ಮಣನ ರೂಪದಲ್ಲಿ ಪ್ರತ್ಯಕ್ಷರಾಗಿ ಈ ಹಿಂದೆ ಸಿಕ್ಕಿದ ಎಲ್ಲಾ ಗಿಡ, ಮರ, ಪ್ರಾಣಿಗಳು ತಾನೇ ಆಗಿದ್ದೆ ಎಂದು ವಿವರಿಸಿ ವರವನ್ನು ಕೊಡುತ್ತಾರೆ. ಕೌಂಡಿನ್ಯನಿಗೆ ಮತ್ತೆ ಸಂಪತ್ತು ಒಲಿದು ಬರುತ್ತದೆ. ಗಂಡ-ಹೆಂಡಿರು ಮುಂದೆ 14 ವರ್ಷಗಳ ಕಾಲ ಪ್ರತಿವರ್ಷ ಅನಂತ ಪದ್ಮನಾಭ ವ್ರತ ಮಾಡುತ್ತಾರೆ. ಹೀಗೆ ಅನಂತ ಪದ್ಮನಾಭ ವ್ರತ ಆಚರಣೆಗೆ ಬಂದಿತು ಎಂಬ ಕಥೆ. ಅನಂತ ಚತುರ್ದಶಿಯನ್ನು ನಮ್ಮ ರಾಜ್ಯವೂ ಒಳಗೊಂಡಂತೆ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಈ ವ್ರತದ ಆಚರಣೆ ಎಲ್ಲ ಕಡೆಯಲ್ಲಿಯೂ ಕಾಣಿಸುವುದಿಲ್ಲ. ಅಲ್ಲಲ್ಲಿ ವ್ರತವನ್ನು ಮಾಡುವವರು ಇರುತ್ತಾರಷ್ಟೆ.

ವ್ರತಾಚರಣೆ ವಿಧಾನ: ಮನೆಯ ಯಜಮಾನ ಮತ್ತು ಅವನ ಪತ್ನಿ ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ ಮನೆಯ ಪಕ್ಕದಲ್ಲಿರುವ ಬಾವಿ ಅಥವಾ ಕೆರೆಯಿಂದ ನೀರನ್ನು ತರುತ್ತಾರೆ. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಕಲಶದಲ್ಲಿ ನೀರನ್ನು ಹಾಕಿ ಅದರ ಮೇಲೆ ದರ್ಬೆ ಹುಲ್ಲಿನಿಂದ ರಚಿಸಿದ ಹಾವಿನ ಹೆಡೆಯನ್ನಿಡುತ್ತಾರೆ. ಮುಂದೆ ಸಾಲಿಗ್ರಾಮವನ್ನಿಟ್ಟು ಪೂಜಿಸುತ್ತಾರೆ.ವ್ರತ ಕೈಗೊಳ್ಳುವ ಯಜಮಾನನ ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಹಳದಿ ಬಣ್ಣದ ದಾರ ಹಾಗೂ ಆತನ ಪತ್ನಿ ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದಕ್ಕೆ ಅನಂತನ ದಾರ ಎನ್ನುತ್ತಾರೆ. ವ್ರತ ಕೈಗೊಂಡವರು ಬೆಳಗ್ಗೆ ಹಾಗೂ ಮಧ್ಯಾಹ್ನ ಉಪವಾಸವಿದ್ದು, ರಾತ್ರಿ ದೇವರ ಪ್ರಸಾದವೆಂದು ಭೋಜನ ಸೇವಿಸುತ್ತಾರೆ.

ಅನಂತ ಪದ್ಮನಾಭ ವ್ರತಕ್ಕೆ 14 ಬಗೆಯ ಭಕ್ಷ್ಯಗಳನ್ನು ತಯಾರಿಸುವ ಪದ್ಧತಿಯಿದೆ. ಅನ್ನ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಪೂಜೆ, ಅನಂತ ಪದ್ಮನಾಭನ ಕಥೆ ಮುಗಿದು ಮಂಗಳಾರತಿ ನಡೆಯುತ್ತದೆ. ಆಗ ಮನೆಯವರು, ಬಂಧುಗಳೆಲ್ಲ ಒಟ್ಟು ಸೇರಿ ಪ್ರಾರ್ಥನೆ ಮಾಡುತ್ತಾರೆ, ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಕೆಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ. ಮನೆಯವರು ಆ ದಿನ ರಾತ್ರಿಯಿಡೀ ಜಾಗರಣೆ ಕುಳಿತು ದೇವರ ಸ್ಮರಣೆ, ಸ್ತುತಿಯಲ್ಲಿ ನಿರತರಾಗಿರಬೇಕೆಂಬ ನಿಯಮವಿದೆ. ಮಾರನೇ ದಿನ ಪೂಜೆಯ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಉಬರಡ್ಕ ಅನಂತೇಶ್ವರ ಭಟ್ಟರ ಮನೆಯಲ್ಲಿ ನಾಲ್ಕು ತಲೆಮಾರುಗಳಿಂದ ಅನಂತ ಪದ್ಮನಾಭ ವ್ರತದ ಆಚರಣೆ ನಡೆಯುತ್ತಾ ಬಂದಿದೆ. ನಮ್ಮ ಪೂರ್ವಜರು ಸಂತಾನಪ್ರಾಪ್ತಿಗಾಗಿ ಕೈಗೊಂಡ ವ್ರತ ಇಂದಿನವರೆಗೆ ಮುಂದುವರಿದುಕೊಂಡು ಬಂದಿದೆ. ನಮ್ಮ ಮನೆಯವರು ಮಾತ್ರವಲ್ಲದೆ ಬಂಧುಗಳು, ಊರವರು ಈ ದಿನ ನಮ್ಮ ಮನೆಗೆ ಬಂದು ಪೂಜೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಿ ಹೋಗುತ್ತಾರೆ. ಅವರಲ್ಲಿ ಹಲವರಿಗೆ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಹಾಗಾಗಿ ಈ ವ್ರತವನ್ನು ಪ್ರತಿವರ್ಷ ಆಚರಿಸುವುದು ನಮ್ಮ ಮನಸ್ಸಿಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ಅನಂತೇಶ್ವರ ಭಟ್ಟರು.

-ಸುಮನಾ ಉಪಾಧ್ಯಾಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com