ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವ ಹೆಬ್ಬೂರಿನ ಕಾಮಾಕ್ಷಿ ದೇವಾಲಯ

ಕುಣಿಗಲ್ ತಾಲೂಕಿನಲ್ಲಿರುವ ಪವಿತ್ರ ಕ್ಷೇತ್ರ ಹೆಬ್ಬೂರಿನ ಕಾಮಾಕ್ಷಿ ದೇವಾಲಯ ಕೂರ್ಮಪೀಠ ಸಹಿತ ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವುದು ವಿಶೇಷ.
ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವ ಹೆಬ್ಬೂರಿನ ಕಾಮಾಕ್ಷಿ ದೇವಾಲಯ
ತುಮಕೂರು ಜಿಲ್ಲೆಯಲ್ಲಿರುವ ದೇವಾಲಯಗಳಲ್ಲಿ ಹೆಬ್ಬೂರಿನ ಕಾಮಾಕ್ಷಿ ದೇವಾಲಯವೂ ಒಂದು. ಕುಣಿಗಲ್ ತಾಲೂಕಿನಲ್ಲಿರುವ ಪವಿತ್ರ ಕ್ಷೇತ್ರ ಹೆಬ್ಬೂರಿನ ಕಾಮಾಕ್ಷಿ ದೇವಾಲಯ ಕೂರ್ಮಪೀಠ ಸಹಿತ ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವುದು ವಿಶೇಷ. ಈ ಊರಿನಲ್ಲಿ 16 -17ನೇ ಶತಮಾನದಲ್ಲಿ ನಿರ್ಮಿಸಲಾದ ಹಲವು ಪುರಾತನ ದೇವಾಲಯವಿದೆ. ಗಂಗರಸರ ಕಾಲದಲ್ಲಿ 108 ದೇವಾಲಯಗಳಿದ್ದವು ಆದರೆ ಕಾಲಕ್ರಮೇಣ ಅನೇಕ ದೇವಾಲಯಗಳು ನಶಿಸಿದ್ದು 25-30 ದೇವಾಲಯಗಳು ಮಾತ್ರ ಉಳಿದುಕೊಂಡಿದೆ. ಈ ಪೈಕಿ ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವ ಕಾಮಾಕ್ಷಿ ದೇವಾಲಯ ಪ್ರಮುಖವಾದದ್ದು, ಶೃಂಗೇರಿ ದಕ್ಷಿಣಾಮ್ನೇಯ ಶಂಕರ ಮಠದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.
ಅದ್ವೈತ ತತ್ವದ ಅನುಯಾಯಿಯಾಗಿದ್ದ ಕೋದಂಡಾಶ್ರಮ ಸ್ವಾಮಿಗಳು ಹೆಬ್ಬೂರು ಮಠದ ಕಾಮಾಕ್ಷಿ ಶಾರದಾಂಬ ಸನ್ನಿಧಿಯಲ್ಲಿ ಶ್ರೀಚಕ್ರ ಸ್ಥಾಪನೆ ಮಾಡಿದ್ದಾರೆ. ಶ್ರೀರಂಗಪಟ್ಟಣದ ಭಕ್ತರೊಬ್ಬರ ಪ್ರಾರ್ಥನೆಯಂತೆ ಹೆಬ್ಬೂರು ಮಠದ ಶ್ರೀ ಕೋದಂಡಾಶ್ರಮ ಸ್ವಾಮಿಗಳು ಅವರ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿದ್ದ ಅಪೂರ್ವವಾದ ಶ್ರೀಚಕ್ರವನ್ನು ವೀಕ್ಷಿಸಿದರು. ಆದರೆ ಅಲ್ಲಿ ಶಾಸ್ತ್ರೋಕ್ತವಾಗಿ ಅನುಷ್ಠಾನ ನಡೆಯದ ಕಾರಣ ಆ ಗೃಹಸ್ಥರು ತಮ್ಮಲ್ಲಿದ್ದ ಶ್ರೀಚಕ್ರವನ್ನು ಸ್ವಾಮಿಗಳಿಗೆ ಒಪ್ಪಿಸಿದರು. ಸ್ವಾಮೀಜಿಯವರು ಹೆಬ್ಬೂರಿನ ಶ್ರೀ ಮಠಕ್ಕೆ ತಂದು ಪೂಜೆ ನಡೆಸುತ್ತಿದ್ದರು. ನಂತರ ಹೆಬ್ಬೂರು ಮಠಕ್ಕೆ ಪೀಠಾಧಿಪತಿಗಳಾಗಿದ್ದ  ನಾರಾಯಣಾಶ್ರಮ ಸ್ವಾಮಿಗಳು ಮಠದಲ್ಲಿ  ಚಂಡಿ ಹೋಮ ನಡೆಸುತ್ತಿದ್ದ ಸಂದರ್ಭದಲ್ಲಿ ದೇವಿಯು ಅವರಿಗೆ ಈ ಶ್ರೀಚಕ್ರಾಕಾರದಲ್ಲಿಯೇ ದೇವಾಲಯ ಆಗಬೇಕು ಎಂದು ಆಜ್ಞೆ ನೀಡಿದಳು. ಆ ಪ್ರಕಾರವೇ 1994ರಲ್ಲಿ ದೇವಾಲಯವನ್ನು ನಿರ್ಮಿಸಲಾಗಿದ್ದು, ಶೃಂಗೇರಿಯ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮಿಗಳು ದೇವಾಲಯದಲ್ಲಿರುವ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. 
ಶ್ರೀ ಚಕ್ರ ದೇವಾಲಯದ ಅಡಿಯಲ್ಲಿ ಕೂರ್ಮ ಪೀಠ, ಅದರ ಮೇಲೆ ಅಷ್ಟದಿಗ್ಗಜಗಳು, ದಿಗ್‌ನಾಗಗಳು, ಅಷ್ಟ ಶಕ್ತಿಗಳು; ಗರ್ಭಗುಡಿಯ ಎಡಗಡೆ ಕುಮಾರಸ್ವಾಮಿ, ಬಲಗಡೆ ಮಹಾಗಣಪತಿ ಮತ್ತು 3 ದಿಕ್ಕುಗಳಲ್ಲಿ ದಕ್ಷಿಣಾ ಮೂರ್ತಿ, ದತ್ತಾತ್ರೇಯ, ಕಾಲ ಭೈರವ, ವಿದ್ಯೆಗೆ ಸಂಬಂಧಿಸಿದ ವಿದ್ಯಾ ದೇವತೆಗಳ ಮೂರ್ತಿಗಳಿವೆ. ಪೂಣಿಗೆಯ ಮೇಲೆ ಪಂಚ ಶಕ್ತಿ ದೇವತೆಗಳು, ಅದಾದ ಮೇಲೆ ಭೂಪುರಗಳನ್ನು ಕೆತ್ತಲಾಗಿದೆ. ಶ್ರೀಚಕ್ರದ ಬಿಂದುವೇ ಶಿವ ಶಕ್ತ್ತೈಕ್ಯರೂಪವಾದ ಕಲಶವಾಗಿದೆ. ಇದೇ ದೇವಾಲಯ ವೈಶಿಷ್ಟ್ಯ.
ಆಮೆಯಾಕಾರದ ಅಂದರೆ ಕೂರ್ಮಪೀಠದ ಮೇಲೆ ಶ್ರೀಚಕ್ರದ ಆಕಾರದಲ್ಲೇ ದೇವಾಲಯ ನಿರ್ಮಿಸಲಾಗಿದೆ. ಪ್ರವೇಶದ್ವಾರದ ಬಳಿ ಇರುವ ಮೆಟ್ಟಿಲುಗಳ ಮೇಲೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂದು ಬರೆಯಲಾಗಿದ್ದು, ದೇವಾಲಯಕ್ಕೆ ಬರುವ ಭಕ್ತರು ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಬೇಕು ಎಂಬ ಸಂದೇಶವನ್ನು ಸಾರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com