ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿ ಆಚರಣೆ

ಚೈತ್ರ ಶುದ್ಧ ನವಮಿಯಂದು ಶ್ರೀಮನ್ನಾರಾಯಣನು ತ್ರೇತಾಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಾಗಿ ಜನಿಸಿದ ದಿನ. ಹೀಗಾಗಿ ಶ್ರೀರಾಮ ನವಮಿ...
ಶ್ರೀರಾಮ
ಶ್ರೀರಾಮ
Updated on

ಚೈತ್ರ ಶುದ್ಧ ನವಮಿಯಂದು ಶ್ರೀಮನ್ನಾರಾಯಣನು ತ್ರೇತಾಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಾಗಿ ಜನಿಸಿದ ದಿನ. ಹೀಗಾಗಿ ಶ್ರೀರಾಮ ನವಮಿ ಹಿಂದೂಗಳಿಗೆ ಪವಿತ್ರ ಹಬ್ಬ.

ನವರಾತ್ರಿಯಂತೆ ಶ್ರೀರಾಮ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ವಸಂತ ನವರಾತ್ರಿ ಎಂದು ಆಚರಿಸಲಾಗುತ್ತದೆ. ವಸಂತ ನವರಾತ್ರಿ ಹೊಸ ಸಂವತ್ಸರದ ಆದಿಯಿಂದಲೇ 9 ದಿನ ಆಂಜನೇಯನ ಗುಡಿಯಲ್ಲಿ, ಶ್ರೀರಾಮನ ದೇವಾಲಯಗಳಲ್ಲಿ ಹಾಗೂ ಶ್ರೀರಾಮ ಸೇವಾ ಸಮಿತಿಗಳು ವಸಂತ ನವರಾತ್ರಿ ಆಚರಿಸುತ್ತಾರೆ.

ಚಾಂದ್ರಮಾನ ಯುಗಾದಿಯ ದಿನದಿಂದಲೇ ಆರಂಭವಾಗುವ ವಸಂತ ನವರಾತ್ರಿಗೆ ಗರ್ಭ ನವರಾತ್ರಿ ಎಂಬ ಹೆಸರೂ ಇದೆ. 9ನೇ ದಿನ ಅಂದರೆ ಶ್ರೀರಾಮ ನವಮಿಯಂದು ಈ ನವರಾತ್ರಿ ಉತ್ಸವ ಅಂತ್ಯಗೊಳ್ಳುತ್ತದೆ. ಪಾನಕ, ಮಜ್ಜಿಗೆ, ಕೋಸಂಬರಿಯ ವಿತರಣೆ ನಡೆಯುತ್ತದೆ. ರಾಮ ಭಜನೆ, ರಾಮಕಥೆಯ ಪಾರಾಯಣ ನಡೆಯುತ್ತದೆ.

ಇನ್ನು ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿರುವ ಗರಡಿಯ ಮನೆಗಳಲ್ಲಿ ಹಾಗೂ ಉತ್ತರ ಭಾರತದಲ್ಲಿ ರಾಮ ರಸವನ್ನು ಕುಡಿಯುವ ಸಂಪ್ರದಾಯವೂ ಇದೆ. ಬ್ರಹ್ಮಚಾರಿಗಳು ಹಾಗೂ ಆಂಜನೇಯನ ಭಕ್ತರು ಬೀದಿ ಬೀದಿಗಳಲ್ಲಿ ಪೆಂಡಾಲ್‌ ಹಾಕಿ, ಶ್ರೀರಾಮನ ಪ್ರತಿಷ್ಠಾಪಿಸಿ, ಪೂಜಿಸಿ, ಬಿಸಿಲಲ್ಲಿ ಬಸವಳಿದವರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆ ಹಂಚುತ್ತಾರೆ.

ರಾಮೋತ್ಸವ ಅಥವಾ ವಸಂತ ನವರಾತ್ರಿ ಆರಂಭದ ಮೊದಲ ದಿನ ವಾಲ್ಮೀಕಿ ವಿರಚಿತ ರಾಮಾಯಣ ಪಾರಾಯಣ ಆರಂಭಿಸಿ 9ನೇ ದಿನ ಪೂರ್ಣಗೊಳಿಸುತ್ತಾರೆ. ಕೊನೆಯ ದಿನ ಅಂದರೆ ನವಮಿಯಂದು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವನ್ನೂ ಆಚರಿಸುತ್ತಾರೆ. ಕಾಲ ದೇಶ ಸಂಪ್ರದಾಯಕ್ಕನುಗುಣವಾಗಿ ಶ್ರೀರಾಮ ನವಮಿಯ ಆಚರಣೆ ಬದಲಾಗುತ್ತದೆ.

ಅಯೋಧ್ಯೆ ಶ್ರೀರಾಮ ಜನ್ಮ ಕ್ಷೇತ್ರ ಹೀಗಾಗಿ ಉತ್ತರ ಪ್ರದೇಶದ ಹಾಗೂ ಉಜ್ಜಯಿನಿಯಲ್ಲಿ ಸಂಭ್ರಮ ತುಸು ಹೆಚ್ಚು. ಸರಯೂ ನದಿ ಇಂದು ಭಕ್ತರ ಪಾಪಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಿದ್ದಾಳೆ.

ಇನ್ನು ದಕ್ಷಿಣ ಭಾರತದಲ್ಲಿ ರಾಮನ ಬಗ್ಗೆ ಹೆಚ್ಚು ಪ್ರಚಾರ ಕೊಟ್ಟವನು ನಮ್ಮೂರಿನ ಹನುಮ ದೇವರು. ದಕ್ಷಿಣದಲ್ಲಿ ತಮಿಳುನಾಡು ಕೇರಳ ಬಿಟ್ಟರೆ ಎಲ್ಲಾ ಸಣ್ಣ ಪುಟ್ಟ ಊರು ಕೇರಿಗಳಲಲ್ಲಿ ರಾಮನಾಮ ಗುನುಗುವಂತೆ ಮಾಡಿದ ಕೀರ್ತಿ ವಾನರ ಶ್ರೇಷ್ಠ ಹಂಪೆಯ ಹನುಮನಿಗೆ ಸಲ್ಲುತ್ತದೆ.

ಭಾರತವಲ್ಲದೆ ವಿದೇಶಗಳಲ್ಲೂ ರಾಮ ನವಮಿಯನ್ನು ಆಚರಿಸಲಾಗುತ್ತದೆ. ಥಾಯ್ಲೆಂಡ್, ಟಿಬೆಟ್, ಬರ್ಮಾ, ಶ್ರೀಲಂಕಾ, ಕಾಂಬೋಡಿಯಾ, ಫಿಲಿಪ್ಪೀನ್ಸ್, ಜಪಾನ್, ಚೀನಾ, ಮಂಗೋಲಿಯಾ ಸೇರಿದಂತೆ ಇನ್ನು ಹಲವು ರಾಷ್ಟ್ರಗಳಲ್ಲಿ ರಾಮ ಕತೆಗಳು ಬೇರೆ ಬೇರೆ ರೂಪಗಳಲ್ಲಿ ಹಬ್ಬಿದೆ.

- ವಿಶ್ವನಾಥ್.ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com