ಬ್ರಹ್ಮಚರ್ಯ ಪಾಲನೆ ಬಗ್ಗೆ ಸ್ವಾಮಿ ಶಿವಾನಂದರ ಪ್ರಾಕ್ಟೀಸ್ ಆಫ್ ಬ್ರಹ್ಮಚರ್ಯ ಕೃತಿ ಏನು ಹೇಳುತ್ತದೆ?

ಬ್ರಹ್ಮಚರ್ಯ ಪಾಲನೆ ಬಗ್ಗೆ ಸ್ವಾಮಿ ಶಿವಾನಂದರ ಪ್ರಾಕ್ಟೀಸ್ ಆಫ್ ಬ್ರಹ್ಮಚರ್ಯ ಕೃತಿ ಏನು ಹೇಳುತ್ತದೆ?

ಬ್ರಹ್ಮಚರ್ಯ, ಭಾರತದಲ್ಲಿ ಆಚರಣೆಯಲ್ಲಿರುವ ನಾಲ್ಕು ಆಶ್ರಮಗಳಲ್ಲಿ ಪ್ರಥಮವಾದ ಆಶ್ರಮ ಹಾಗೂ ಸಾಧನಾ ಮಾರ್ಗಕ್ಕೆ ಇರುವ ಅತ್ಯಂತ ಉತ್ತಮ ಹಾದಿ.
Published on

ಬ್ರಹ್ಮಚರ್ಯ, ಭಾರತದಲ್ಲಿ ಆಚರಣೆಯಲ್ಲಿರುವ ನಾಲ್ಕು ಆಶ್ರಮಗಳಲ್ಲಿ ಪ್ರಥಮವಾದ ಆಶ್ರಮ ಹಾಗೂ ಸಾಧನಾ ಮಾರ್ಗಕ್ಕೆ ಇರುವ ಅತ್ಯಂತ ಉತ್ತಮ ಹಾದಿ. ಬ್ರಹ್ಮಚರ್ಯ ಎಂದರೆ ತೀರಾ ಮಡಿವಂತಿಕೆ ಹಾಗೂ ಬಾಹ್ಯ ಪ್ರಪಂಚಕ್ಕೆ ತೆರೆದುಕೊಳ್ಳದೇ ಕೇವಲ ಆಧ್ಯಾತ್ಮಿಕ ಆಚರಣೆಗೆ ಇರುವ ಮಾರ್ಗ ಎಂಬ ಕಲ್ಪನೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಆದರೆ ಬ್ರಹ್ಮಚರ್ಯ ಎಂದರೇನು, ಬ್ರಹ್ಮಚರ್ಯದ ಪಾಲನೆ ಹೇಗೆ ಮಾಡಬೇಕು, ಪ್ರಾಂಪಚಿಕ ವಿಷಯಗಳ ಮಧ್ಯೆ ಒಡನಾಟ ಇಟ್ಟುಕೊಂಡಿದ್ದರೂ ಬ್ರಹ್ಮಚರ್ಯ ಅಥವಾ ಸಾಧನಾ ಮಾರ್ಗದಿಂದ ನಿವೃತ್ತಿಯಾಗದೇ ಇರುವುದು ಹೇಗೆ ಎಂಬ ಬಗ್ಗೆ ಸ್ವಾಮಿ ಶಿವಾನಂದರ ಪ್ರಾಕ್ಟೀಸ್ ಆಫ್ ಬ್ರಹ್ಮಚರ್ಯ ಪುಸ್ತಕ ವಿಸ್ತೃತ ಮಾಹಿತಿ ನೀಡುತ್ತದೆ. ಪ್ರಾಚೀನ ಭಾರತೀಯರು ಮನಸ್ಸಿನ ಮೂಲಕ ಏನನ್ನೂ ಸಾಧಿಸಬಹುದೆಂಬ ತತ್ವವನ್ನು ಸ್ಪಷ್ಟವಾಗಿ ಅರಿತಿದ್ದರು ಹಾಗೂ ಅದನ್ನು ಅಷ್ಟೇ
ಪರಿಣಾಮಕಾರಿಯಾಗಿ ಆಚರಣೆಗೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಚರ್ಯ ದೈಹಿಕಕ್ಕಿಂತ ಹೆಚ್ಚು ಮನಸ್ಸಿಗೆ ಸಂಬಂಧಿಸಿರುವ ವಿಷಯವಾಗಿದ್ದು ಮನಸ್ಸಿನ ಮೂಲಕ ದೇಹ( ಇಂದ್ರಿಯಗಳನ್ನು) ಹತೋಟಿಯಲ್ಲಿಟ್ಟುಕೊಳ್ಳುವ ಪ್ರಕ್ರಿಯೆಗೆ ಪೂರಕವಾದ ಆಶ್ರಮ ಎನ್ನಬಹುದು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ಎಂಬ ಸಂಸ್ಕೃತದ ಉಕ್ತಿ, ಪ್ರಾಂಪಚಿಕ ವಿಷಯಗಳ ಮಧ್ಯೆ ಒಡನಾಟ ಇಟ್ಟುಕೊಂಡಿದ್ದರೂ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡರೆ ಬ್ರಹ್ಮಚರ್ಯಕ್ಕೆ ಚ್ಯುತಿ ಬರವುದಿಲ್ಲ ಎಂಬುದಕ್ಕೆ ಪೂರಕವಾಗಿದೆ. ‘ಬ್ರಹ್ಮಚರ್ಯ’ ಎಂದರೆ ನಿಘಂಟಿನಲ್ಲಿ ಹೇಳುವ ದೈಹಿಕ ಬ್ರಹ್ಮಚರ್ಯವಲ್ಲ, ಬದಲಿಗೆ ‘ಬ್ರಹ್ಮಣಿ ಚರಣಂ’-ಭಗವಂತನಲ್ಲಿ ಮನಸ್ಸು ನೆಲೆಗೊಳ್ಳುವಿಕೆಯೇ ಬ್ರಹ್ಮಚರ್ಯ ಎಂಬುದನ್ನು ಭಗವದ್ಗೀತೆಯಲ್ಲಿಯೂ ಹೇಳಲಾಗಿದೆ.

ಋಷಿ ಮುನಿಗಳು ವಿವಾಹವಾದ ನಂತರವೂ ಅಂದರೆ ಬ್ರಹ್ಮಚರ್ಯದ ಆಶ್ರಮದ ನಂತರದ ಅಶ್ರಮವಾಗಿರುವ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನಂತರವೂ ತಪಸ್ಸು ಕೈಗೊಳ್ಳುತ್ತಿದ್ದರು.ಮದುವೆಯಾದ ನಂತರವೂ ನಮ್ಮ ಅನೇಕ ಋಷಿ ಮುನಿಗಳು  ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು ಈ ಮೂಲಕ ತಿಳಿಯುತ್ತದೆ. ಮಹರ್ಷಿ ಯಾಜ್ಞ್ಯವಲ್ಕ್ಯರಂತೂ ಎರಡೆರಡು ಮದುವೆಯಾಗಿದ್ದರು.

ಕಠಿಣ ಬ್ರಹ್ಮಚರ್ಯ ಪಾಲಿಸಿದ ವ್ಯಕ್ತಿಗೆ ಪಂಚಭೂತಗಳನ್ನೂ ನಿಯಂತ್ರಿಸುವ ಶಕ್ತಿ ವಶವಾಗುತ್ತದೆ, ಅಂತಿಮವಾಗಿ ಅದ್ವೈತದ ಸಾಕ್ಷಾತ್ಕಾರವಾಗುತ್ತದೆ. ಅದ್ವೈತ ಸ್ಥಿತಿಗೆ ತಲುಪಿದರೆ ಗಂಡು- ಹೆಣ್ಣುಗಳ ಭೇಧವೇ ಇರುವುದಿಲ್ಲ ಎನ್ನುತ್ತದೆ ಪ್ರಾಚೀನ ಭಾರತದ ಪರಂಪರೆ.  ಪುರಾಣಗಳ ಪ್ರಕಾರ ‘ಬ್ರಹ್ಮಚರ್ಯವೆಂಬುದು ಮನಸ್ಸು, ಮಾತು, ಕರ್ಮಗಳಿಂದ ಮೈಥುನವನ್ನು ತ್ಯಾಗಮಾಡುವುದೆಂದಾಗುತ್ತದೆ. ಮನಸ್ಸಿನಲ್ಲಿ “ಕಾಮನೆಗಳು ಉಂಟಾದರೂ ಬ್ರಹ್ಮಚರ್ಯದಿಂದ ಪತನವೇ ಆಗುತ್ತದೆ. ಅಷ್ಟೇ ಅಲ್ಲದೇ ಯಾವುದೇ ಗುರಿ ಇಟ್ಟುಕೊಂಡು ಸಾಧನೆ ಮಾಡುವವರಿಗೆ ಅಡ್ಡಿಯಾಗುತ್ತದೆ. ಸ್ವಾಮಿ ಶಿವಾನಂದರು ಬ್ರಹ್ಮಚರ್ಯ ಎಂಬುದು ಯುವಕರಿಗೆ ಅದರಲ್ಲೂ ಆಧುನಿಕ ಜಗತ್ತಿನಲ್ಲಿರುವ ಯುವ ಪೀಳಿಗೆಗೆ ಅತ್ಯಗತ್ಯ ಎನ್ನುತ್ತಾರೆ. ಇಷ್ಟಕ್ಕೂ ಇಂದು ಯುವಕರಿಗೆ ಸ್ವಯಂ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಅಗತ್ಯವೆಂಬ ಚರ್ಚೆ ಎದುರಾದಾಗ ಸ್ವಾಮಿ ಶಿವಾನಂದರ ಪ್ರಾಕ್ಟೀಸ್ ಆಫ್ ಬ್ರಹ್ಮಚರ್ಯ ಕೃತಿ ಹೆಚ್ಚು ಪ್ರಸ್ತುತವೆನಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com