ರಾಜಸ್ಥಾನದಲ್ಲಿರುವ ತನೋಟ್ ಮಾತಾ ದೇವಾಲಯ: ಇಲ್ಲಿ ಪಾಕಿಸ್ಥಾನ 3 ಸಾವಿರ ಬಾಂಬ್ ಹಾಕಿದ್ದರೂ ಒಂದೂ ಸಿಡಿದಿರಲಿಲ್ಲ!

1965 ರಲ್ಲಿ ಭಾರತದ ಮೇಲೆ ಯುದ್ಧ ನಡೆಸಿದ್ದ ಪಾಕಿಸ್ಥಾನ, ಈ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ 3000 ಬಾಂಬ್ ಗಳನ್ನು ಸಿಡಿಸಿತ್ತು. ಆದರೆ ಒಂದೇ ಒಂದೂ ಸಿಡಿದಿರಲಿಲ್ಲ!
ಮಾತಾ ತನೋಟ್ ದೇವಾಲಯ
ಮಾತಾ ತನೋಟ್ ದೇವಾಲಯ
ಆಧ್ಯಾತ್ಮ, ಧರ್ಮಗಳ ಬಗ್ಗೆ ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಭಾರತ. ಭರತ ವರ್ಷದ ಅಸ್ಥಿತ್ವವೂ ಸಹ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಉತೃಷ್ಟ ಸಂಸ್ಕಾರ, ಪರಂಪರೆಯಿಂದಲೇ ಸಾಧ್ಯವಾಗಿದೆ. ಪರಕೀಯರ ದಾಳಿ, ಅವರ ಆಡಳಿತದ ಅವಧಿಯಲ್ಲಿ ಇಲ್ಲಿನ ಆಚರಣೆ, ಸಂಸ್ಕೃತಿಗಳಿಗೆ ಉಂಟಾದ ಗದಾಪ್ರಹಾರದ ಹೊರತಾಗಿಯೂ ಇಂದಿಗೂ ಭಾರತ ತನ್ನ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ. ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ. 
ರಾಜಸ್ಥಾನ ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ. ರಾಜಸ್ಥಾನದ ಜೈಸಲ್ಮೇರ್ ನಿಂದ  120 ಕಿಮೀ ದೂರದಲ್ಲಿರುವ ಮರಳುಗಾಡು ಪ್ರದೇಶದಲ್ಲಿರುವ ತನೋಟ್ ಮಾತಾ ದೇವಾಲಯ ಭಾರತವನ್ನು ರಕ್ಷಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.  ಏಕೆಂದರೆ ಪಾಕಿಸ್ತಾನದ ಸೇನೆಗೆ ಈ ದೇವಾಲಯದ ಹೆಸರನ್ನು ಕೇಳಿದರೆ ಭಯ ಆವರಿಸುತ್ತದೆ. ಇದರ ಹಿಂದಿರುವ ಕಾರಣವೆಂದರೆ 1965 ರ ಯುದ್ಧ, ಪಾಕಿಸ್ತಾನಕ್ಕೆ ಆ ಯುದ್ಧದಲ್ಲಿ ಮುಖಭಂಗವಾಗಿದ್ದರ ಜೊತೆಗೆ ಮತ್ತೊಂದು ಕರಾಳ ಅನುಭವವಾಗಿತ್ತು. ಅದೇನೆಂದರೆ ಪಾಕಿಸ್ತಾನ ಯುದ್ಧದ ಭಾಗವಾಗಿ ರಾಜಸ್ಥಾನದ ತನೋಟ್ ಮಾತಾ ದೇವಾಲಯದ ಮೇಲೆ ಸಿಡಿಸಿದ್ದ 3000 ಸಾವಿರ ಬಾಂಬ್ ಗಳೂ ಸಿಡಿಯದೇ ನಿಷ್ಕ್ರಿಯವಾಗಿತ್ತು!.      
ಭಗವತಿ ಶ್ರೀ ದೇವಿಯೆಂದೂ ಕರೆಯಲಾಗುವ ತನೋಟ್ ಮಾತಾ ಮತ್ತೊಂದು ಅಚ್ಚರಿಯ ವಿಷಯವೆಂದರೆ, ಪಾಕಿಸ್ಥಾನದ ಭಾಗವಾಗಿದ್ದರೂ ಈಗ ಸ್ವಾತಂತ್ರ್ಯದ ಕೂಗು ಮೊಳಗುತ್ತಿರುವ ಬಲೂಚಿಸ್ಥಾನದ ಪ್ರದೇಶದಲ್ಲಿರುವ ಹಿಂಗುಳಾಂಬೆ(ಹಿಂಗ್ಲಾಜ್ ಮಾತಾ)ಯ ಅವತಾರವೇ ಈ ತನೋಟ್ ಮಾತಾ ಎಂದು ಹೇಳಲಾಗುತ್ತದೆ.  ತನೋಟ್ ಮಾತಾ ದೇವಾಲಯ ರಾಜಸ್ಥಾನದ ಭಾತಿ ರಜಪೂತ ಪರಂಪರೆಗೆ ಪೂಜನೀಯವಾಗಿದೆ.  ಕಾಲಕ್ರಮೇಣ ರಜಪೂತರು ತನೋಟ್ ನಿಂದ ಜೈಸಲ್ಮೇರ್ ಗೆ ತಮ್ಮ ರಾಜಧಾನಿಯನ್ನು ವರ್ಗಾಯಿಸಿದರಾದರೂ ಭಗವತಿ ಶ್ರೀ ದೇವಿಯ ದೇವಾಲಯ ಮಾತ್ರ ತನೋಟ್ ನಲ್ಲಿಯೇ ಉಳಿಯಿತು.


ತನೋಟ್ ದೇವಿಯೆಂದೇ ಕರೆಯಲಾಗುವ ಭಗವತಿ ಶ್ರೀ ದೇವಿ ಹುಟ್ಟಿದ್ದು ಕ್ರಿ.ಶ. 752 ರ ವಿಕ್ರಮ ಸಂವತ್ಸರದಲ್ಲಿ. ಮಾಂಡಿಯಾ ಜಿ ದಂಪತಿಯ ಜ್ಯೇಷ್ಠ ಪುತ್ರಿಯಾಗಿ ಜನಿಸಿದ ಭಗವತಿ ಶ್ರೀ ದೇವಿ ಬಾಲ್ಯದಲ್ಲೇ ತನ್ನ ಆಧ್ಯಾತ್ಮಿಕ ಗುಣಗಳಿಂದ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿದ್ದಳು. ಆಕೆ ಇಹ ಲೋಕ ತ್ಯಜಿಸಿದ ನಂತರ ಆಕೆಯನ್ನು ಸ್ಥಳೀಯರು ದೇವಿಯ ಅವತಾರವೆಂದೇ ಭಾವಿಸಿ ಪೂಜಿಸತೊಡಗಿದರು. 888 ವಿಕ್ರಮ ಸಂವತ್ಸರದಲ್ಲಿ ತನೋಟ್ ಕೋಟೆ ಹಾಗೂ ಭಗವತಿ ಶ್ರೀ ದೇವಿಯ ದೇವಾಲಯಕ್ಕೆ ಶಂಕುಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ತನೋಟ್ ದೇವಿಯನ್ನು ಅಲ್ಲಿನ ಸ್ಥಳೀಯರು ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ದೇವಾಲಯ ಸೈನಿಕರಿಗೂ ಸಹ ಪೂಜನೀಯವಾಗಿದೆ. ಪ್ರೇರಕ ಶಕ್ತಿಯಾಗಿದೆ. ಇದಕ್ಕೆ ನಿದರ್ಶನವೆಂಬಂತೆ 1965 ರಲ್ಲಿ ಭಾರತದ ಮೇಲೆ ಯುದ್ಧ ನಡೆಸಿದ್ದ ಪಾಕಿಸ್ಥಾನ, ಈ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ 3000 ಬಾಂಬ್ ಗಳನ್ನು ಸಿಡಿಸಿತ್ತು. ಈ ಪೈಕಿ ದೇವಾಲಯದ ಆವರಣವನ್ನು ಗುರಿಯಾಗಿರಿಸಿಕೊಂಡು 450 ಶೆಲ್ ಗಳಿಂದ ದಾಳಿ ಮಾಡಲಾಯಿತು. ಆದರೆ ಪಾಕಿಸ್ಥಾನ ಹಾಕಿದ್ದ 3 ಸಾವಿರ ಬಾಂಬ್ ಗಳು, ಶೆಲ್ ಗಳಲ್ಲಿ ಒಂದೇ ಒಂದೂ ಸಹ ಸಿಡಿಯಲಿಲ್ಲ. 
ಇದಾದ ಬಳಿಕ 1971 ರಲ್ಲಿ ಮತ್ತೆ ಇಂಥದ್ದೇ ಚಕಿತ ನಡೆದಿದೆ. ಅದೇನೆಂದರೆ ಆ ವರ್ಶದ ಡಿಸೆಂಬರ್ 4 ರಂದು ಪಾಕಿಸ್ಥಾನ ಲಾಂಗೆವಾಲಾದ ಮೇಲೆ ಏಕಾಏಕಿ ದಾಳಿ ಮಾಡಿದಾಗ, ತನೋಟ್ ದೇವಿಯಿಂದ ಪ್ರೇರಣೆ ಪಡೆದ ಪಂಜಾಬ್ ರೆಜಿಮೆಂಟಿನ ಒಂದೇ ಒಂದು ತಂಡ ಬಿಎಸ್ ಎಎಫ್ ನ ಸಹಾಯದಿಂದ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸುತ್ತದೆ. ಆ ದಿನ ಪಾಕಿಸ್ಥಾನದ 2 ಸಾವಿರ ಸೈನಿಕರ ದಾಳಿಯನ್ನು ಕೇವಲ ನೂರಿಪ್ಪತ್ತು ಭಾರತೀಯ ಸೈನಿಕರು ಛಿದ್ರಗೊಳಿಸಿದ್ದರು. ಇದಕ್ಕೆ ಪ್ರೇರಕ ಶಕ್ತಿಯಾಗಿದ್ದದ್ದು ತನೋಟ್ ದೇವಿ. ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ನೂರಿಪ್ಪತ್ತು ಜನ ಯೋಧರು 2 ಸಾವಿರ ಶತೃಗಳನ್ನು ಹಿಮ್ಮೆಟ್ಟಿಸಿದ್ದ ವಿರೋಚಿತ ಕದನದ ಕಥನ ಇಂದಿಗೂ ಮೈನವಿರೇಳಿಸುತ್ತದೆ. ಪ್ರತಿ ವರ್ಷ ಇಲ್ಲಿ ಎರಡು ನವರಾತ್ರಿಗಳು ನಡೆಯುತ್ತವೆ.  ಸೈನಿಕರಿಗೆ ಪ್ರೇರಕ ಶಕ್ತಿಯಾಗಿ ದೇಶವನ್ನು ಕಾಪಾಡುತ್ತಿರುವ ದೇವಿಯೆಂದೇ ತನೋಟ್ ದೇವಿ ಪ್ರಸಿದ್ಧಿ ಪಡೆದಿರುವ ದೇವಿಯ ದರ್ಶನಕ್ಕೆ ಇಂದಿಗೂ ದೇಶದ ವಿವಿಧ ಭಾಗಗಳಿಂದ ನೂರಾರು ಯಾತ್ರಿಕರು ಆಗಮಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com