ದತ್ತಜಯಂತಿ: ಗುರು ದತ್ತಾತ್ರೇಯರು, ದತ್ತ ತತ್ವದ ಮಹತ್ವ

"ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ! ಎಂಬ ಶ್ಲೋಕ ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಿದೆ. ಗುರುವನ್ನು ದೇವರನ್ನಾಗಿ ಸ್ಮರಿಸಿದೆ.
ದತ್ತಾತ್ರೇಯ
ದತ್ತಾತ್ರೇಯ
"ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ! ಎಂಬ ಶ್ಲೋಕ ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಿದೆ. ಗುರುವನ್ನು ದೇವರನ್ನಾಗಿ ಸ್ಮರಿಸಿದೆ. 
ಯಾವುದೇ ತತ್ವವನ್ನು ಸ್ಪಷ್ಟವಾಗಿ ಅರಿಯಬೇಕಾದರೆ, ಅಥವಾ ಆ ತತ್ವದ ಮೇಲೆ ಹಿಡಿತ ಸಾಧಿಸಬೇಕಾದರೆ ಗುರುವಿನ ಪಾತ್ರ ಅತ್ಯಂತ ಮುಖ್ಯವಾದದ್ದು. ಆದ್ದರಿಂದಲೇ ಪ್ರತ್ಯಕ್ಷ ದೈವ ಹಾಗೂ ಎಲ್ಲಕ್ಕೂ ಮಿಗಿಲಾದ ತತ್ವರೂಪನಾದ ಗುರುವನ್ನು ಆಶ್ರಯಿಸಬೇಕು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಅಂತಹ ಶ್ರೇಷ್ಠ ಗುರುಗಳು ತ್ರಿಮೂರ್ತಿಗಳ ಸ್ವರೂಪರಾದ ದತ್ತಾತ್ರೇಯರು. 
ತ್ರಿಮೂರ್ತಿಗಳ ದಿವ್ಯ ತೇಜಸ್ಸುಗಳು, ಋಷಿ ಆಶ್ರಮದ ತೇಜಸ್ಸು ಸೇರಿ ಒಂದಾಗಿ ಮೂರು ಮುಖಗಳ, ಆರು ಕೈಗಳನ್ನು ಹೊಂದಿದ ರೂಪದಲ್ಲಿ ದತ್ತಾತ್ರೇಯರು ಜನ್ಮಿಸುತ್ತಾರೆ. ತ್ರಿಮೂರ್ತಿಗಳ ಸ್ವರೂಪರಾಗಿರುವ ದತ್ತಾತ್ರೇಯರ ತತ್ವ ದತ್ತಾದ್ವೈತ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಬೇಧ ಬುದ್ಧಿಯನ್ನು ತೋರದ ತತ್ವವೇ ದತ್ತಾತ್ರೇಯರ ಹಾಗೂ ದತ್ತಾದ್ವೈತ ತತ್ವದ ವಿಶೇಷವಾಗಿದೆ. ಉಪನಿಷತ್ ಗಳಲ್ಲಿರುವ ಇದೇ ತತ್ವ ಮುಂದಿನ ದಿನಗಳಲ್ಲಿ ಸಮಾಜ ಸುಧಾರಣೆಗಾಗಿ ಆವಿರ್ಭವಿಸಿದ ಶಂಕರರ ಅದ್ವೈತ ತತ್ವದ ಪ್ರತಿಪಾದನೆಗೂ ಆಧಾರವಾಗುತ್ತದೆ. 
ದತ್ತಾತ್ರೇಯರನ್ನು ದಿಗಂಬರ ಎಂದೂ ಆರಾಧಿಸಲಾಗುತ್ತದೆ: ದಿಗಂಬರ ಎಂದರೆ ದಿಕ್ಕುಗಳನ್ನೇ ಬಟ್ಟೆಯನ್ನಾಗಿ ಧರಿಸಿದವರು ಎಂಬ ಅರ್ಥವಿದೆ. ದಿಕ್ಕು ಅಂದರೆ ಅನಂತ ಎಂಬ ಅರ್ಥವೂ ಇದ್ದು ಅಂತ್ಯವೇ ಇಲ್ಲದ ದಿಕ್ಕುಗಳನ್ನು ಧರಿಸಿದವನು ಅಂದರೆ ಎಲ್ಲೆಲ್ಲಿಯೂ ವ್ಯಾಪಿಸಿರುವ ಚೈತನ್ಯ ಎಂಬ ಅರ್ಥ ಇದೆ. ದತ್ತಾತ್ರೆಯರು ಆದ್ಯಂತ ರಹಿತರಾಗಿರುವುದಕ್ಕೆ ಅವರನ್ನು ದಿಗಂಬರ ಸ್ವರೂಪವಾಗಿಯೂ ಆರಾಧಿಸಲಾಗುತ್ತದೆ. 
ದತ್ತಾತ್ರೆಯ ಹಾಗೂ ಶ್ರೀಧರ ಸ್ವಾಮಿಗಳು:  ದತ್ತಾತ್ರೆಯರದ್ದು 20-30 ಅವತಾರಗಳಿವೆ ಎಂಬ ನಂಬಿಕೆ ಇದೆ. ಅದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೀವಿಸಿದ್ದ ಶ್ರೀಧರ ಸ್ವಾಮಿಗಳೂ ಸಹ ದತ್ತಾತ್ರೆಯರ ಅವತಾರವೆಂಬ ನಂಬಿಕೆ ಇದೆ. ಶಿವಮೊಗ್ಗ ಜಿಲ್ಲೆಯ ವರದಹಳ್ಳಿಯ ಶ್ರೀಧರ ಸ್ವಾಮಿಗಳು ಹಲವು ದತ್ತ ಸ್ತೋತ್ರಗಳನ್ನು ರಚಿಸಿದ್ದು, ದತ್ತಾತ್ರೆಯರ ಕುರಿತು ಅಂದಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಬರೆದಿರುವ ಪುಸ್ತಕದ ಮುನ್ನುಡಿಯಲ್ಲಿ  ನನ್ನ ಕಾಲದಲ್ಲಿ ಶ್ರೀಧರ ಸ್ವಾಮಿಗಳನ್ನು ದತ್ತಾತ್ರೆಯರ ಅವತಾರವೆಂಬ ನಂಬಿಕೆ ಇತ್ತು ಎಂದು ಹೇಳಿರುವುದು ಗಮನಾರ್ಹವಾಗಿದೆ. 
ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ ಈ ವರ್ಷ (ಡಿ.13 ರಂದು) ದತ್ತಾತ್ರೆಯ ಜಯಂತಿಯ ದಿನವಾಗಿದ್ದು ತ್ರಿಮೂರ್ತಿಗಳ ತೇಜಸ್ಸಿನಿಂದ ಜನ್ಮಿಸಿದ ದತ್ತಾತ್ರೇಯರ ಕ್ಷೇತ್ರ ಗಾಣಗಾಪುರ ಸೇರಿದಂತೆ ಹಲವೆಡೆ ದತ್ತಾತ್ರೇಯರನ್ನು ಆರಾಧಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com