ಹಿಮಾಲಯದಲ್ಲಿರುವ ಸಿದ್ಧಾಶ್ರಮ, ಇದು ಸಿದ್ಧಿಪಡೆದವರಿಗೆ ಮಾತ್ರ ಗೋಚರಿಸುವ ಆಧ್ಯಾತ್ಮಿಕ ಧಾಮ!

ಭಾರತದ ಯೋಗಿಗಳ ಅತಿ ಪುರಾತನವಾದ ಮತ್ತು ಸಮೃದ್ಧ ಸಂಪ್ರದಾಯವು ಇವತ್ತಿಗೂ ಅಲ್ಲಿ ಅಸ್ತಿತ್ವದಲ್ಲಿದೆ.
ಸಿದ್ಧಾಶ್ರಮ (ಸಾಂಕೇತಿಕ ಚಿತ್ರ)
ಸಿದ್ಧಾಶ್ರಮ (ಸಾಂಕೇತಿಕ ಚಿತ್ರ)
ಹಿಮಾಲಯ, ಅಸಂಖ್ಯಾತ ಆಧ್ಯಾತ್ಮಿಕ ರಹಸ್ಯಗಳನ್ನು ಒಡಲಲ್ಲಿಟ್ಟುಕೊಂಡ ನಿಗೂಢ ಪ್ರದೇಶ. ಹಿಮಗಿರಿಗಳು ಧರ್ಮ-ನಂಬಿಕೆಗಳ ಪರಿಗಣನೆಯನ್ನು ಮೀರಿ ಸಹಸ್ರಾರು ಜನರ ಯೋಗಜ್ಞಾನ ಮತ್ತು ಆಧ್ಯಾತ್ಮಿಕತೆಗಳ ಭದ್ರನೆಲೆಗಳು.
ಈ ಅದ್ವಿತೀಯವಾದ ಗಿರಿಶಿಖರಗಳು ಆಧ್ಯಾತ್ಮಿಕ ವೈಭವವನ್ನು ಕೇಳುವ ಕಿವಿಯುಳ್ಳ ಎಲ್ಲರಿಗೂ ಪಿಸುಮಾತಿನಲ್ಲಿ ಉಸುರುತ್ತಿವೆ. ಭಾರತದ ಯೋಗಿಗಳ ಅತಿ ಪುರಾತನವಾದ ಮತ್ತು ಸಮೃದ್ಧ ಸಂಪ್ರದಾಯವು ಇವತ್ತಿಗೂ ಅಲ್ಲಿ ಅಸ್ತಿತ್ವದಲ್ಲಿದೆ. ಹಿಮಾಲಯದಲ್ಲಿ ಇಂತಹ ಸಂಪ್ರದಾಯ ಅಸ್ಥಿತ್ವದಲ್ಲಿರುವ ಹಲವು ಗೌಪ್ಯ ಸ್ಥಳಗಳಲ್ಲಿ ಸಿದ್ಧಾಶ್ರಮವೂ ಒಂದು.
ಸಿದ್ಧಾಶ್ರಮದ ಹಲವು ರಹಸ್ಯ ಹಾಗೂ ಊಹೆಗೂ ಮೀರಿದ ಸಂಗತಿಗಳನ್ನು ಹೊಂದಿರುವ ಅಧ್ಯಾತ್ಮಿಕ ಕ್ಷೇತ್ರ. ಮೊತ್ತ ಮೊದಲನೆಯದ್ದಾಗಿ ಎಲ್ಲಾ ಆಧ್ಯಾತ್ಮಿಕ ಕ್ಷೇತ್ರಗಳು ಸಿದ್ಧಿಪಡೆಯುವುದಕ್ಕೆ ಇದ್ದರೆ ಈ ಸಿದ್ಧಾಶ್ರಮ ಅಥವಾ ಗ್ಯಾನ್ ಗಂಜ್ ಇರುವಿಕೆ ಗೋಚರವಾಗುವುದು ಸಿದ್ಧಿಪಡೆದವರಿಗಷ್ಟೇ. ಪರಿಪೂರ್ಣ ಜ್ನಾನಿಗಳನ್ನು ಹೊರತುಪಡಿಸಿ ಹಿಮಾಲಯದ ಮಾನಸಸರೋವರದ ಆಸುಪಾಸಿನಲ್ಲಿರುವ ಈ ಸಿದ್ಧಾಶ್ರಮಯ ಮತ್ತೆ ಯಾರಿಗೂ ಗೋಚರವಾಗುವುದಿಲ್ಲವಂತೆ. 
ಅನನ್ಯ ಆಧ್ಯಾತ್ಮಿಕ ಸಾಧನೆ ಮಾಡಿದ ಸಾಧುಗಳಿಗೆ ಹಾಗೂ ಜ್ಞಾನ ಪಡೆದ ಮುಮುಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ ಈ ಸಿದ್ಧಾಶ್ರಮ. ಇದರ ಜೊತೆಗೆ ಮತ್ತೊಂದು ವಿಶೇಷವಾದ ಸಂಗತಿಯೆಂದರೆ ಇದು ಬೌದ್ಧರಿಗೂ ಪವಿತ್ರವಾದ ಕ್ಷೇತ್ರ ಬೌದ್ಧರು ಸಿದ್ಧಾಶ್ರಮವನ್ನು ಶಂಭಾಲ ಅಥವಾ ಶಂಗ್ರಿ-ಲಾ ಎಂದು ಕರೆಯುತ್ತಾರೆ. ಇದು ಬೌದ್ಧ ಧರ್ಮದಲ್ಲಿ ಉಲ್ಲೇಖಗೊಂಡಿರುವ ಒಂದು ದೈವಿಕ ನಗರಿ. ಅಷ್ಟೇ ಅಲ್ಲ ರಾಮಾಯಣ-ಮಹಾಭಾರತದಲ್ಲೂ ಸಿದ್ಧಾಶ್ರಮದ ಉಲ್ಲೇಖವಿದೆ, ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರೂ ಸಹ ಸಿದ್ಧಾಶ್ರಮವನ್ನು ಸಂದರ್ಶಿಸಿದ್ದರು ಎನ್ನುವುದಕ್ಕೆ ಉಲ್ಲೇಖವಿದೆ.  ಟಿಬೇಟ್ ನ ಬೌದ್ಧ ಸನ್ಯಾಸಿಗಳೂ ಸೇರಿದಂತೆ ಭಾರತದ ಹಲವು ಯೋಗಿಗಳು ಈ ಸಿದ್ಧಾಶ್ರಮವನ್ನು ಸಂದರ್ಶಿಸಿದ್ದಾರೆ. ಸಿದ್ಧಾಶ್ರಮದಲ್ಲಿರುವ ಯೋಗಿಗಳು ಅಮರ ಜೀವಿಗಳೆಂದೂ ಇಲ್ಲಿಗೆ ಭೇಟಿ ನೀಡಿದವರಿಗೆ ಮೃತ್ಯುವನ್ನು ಜಯಿಸುವ ಶಕ್ತಿ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಅಪಾರವಾದ ಆಧ್ಯಾತ್ಮಿಕ ಶಕ್ತಿ ಸಿದ್ಧಿಸಿಕೊಳ್ಳುವುದರ ಮೂಲಕ ಮಾತ್ರ ಸಿದ್ಧಾಶ್ರಮವನ್ನು ಸಂದರ್ಶಿಸುವುದಕ್ಕೆ ಸಾಧ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com