ಮಾಘಸ್ನಾನ: ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಇರುವ ಅತ್ಯಂತ ಸುಲಭ ವಿಧಾನ

ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಯಜ್ಞಗಳಿಂದ ಮೊದಲುಗೊಂಡು, ನಮ್ಮನ್ನು ದೈಹಿಕವಾಗಿ ಶುಚಿಗೊಳಿಸುವ ನಿತ್ಯ ಕರ್ಮವಾದ ಸ್ನಾನದವರೆಗೂ ಕುತೂಹಲಭರಿತ ಸಂಗತಿಗಳು ವ್ಯಾಪಿಸಿರುತ್ತವೆ.
ಮಾಘಸ್ನಾನ (ಸಾಂಕೇತಿಕ ಚಿತ್ರ)
ಮಾಘಸ್ನಾನ (ಸಾಂಕೇತಿಕ ಚಿತ್ರ)
ಭಾರತೀಯ ಸಂಸ್ಕೃತಿಯ ಆಚರಣೆಗಳೇ ಹಾಗೆ, ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಕುತೂಹಲಭರಿತವಾದ ಹಿನ್ನೆಲೆ ಇರುತ್ತದೆ. ದೊಡ್ಡ ಯಜ್ಞಗಳಿಂದ ಮೊದಲುಗೊಂಡು, ನಮ್ಮನ್ನು ದೈಹಿಕವಾಗಿ ಶುಚಿಗೊಳಿಸುವ ನಿತ್ಯ ಕರ್ಮ ಸ್ನಾನದವರೆಗೂ ಇಂತಹ ಕುತೂಹಲಭರಿತ ಸಂಗತಿಗಳು ವ್ಯಾಪಿಸಿರುತ್ತವೆ. ಅಂತಹ ಕುತೂಹಲ ಸಂಗತಿಗಳಲ್ಲಿ ಮಾಘ ಸ್ನಾನವೂ ಒಂದು. 
ಮಾಘ ಮಾಸ(ತಿಂಗಳು) ಎಂದೊಡನೆ ತಕ್ಷಣ ನೆನಪಿಗೆ ಬರುವುದು ಮಾಘಸ್ನಾನ, ಹಬ್ಬಗಳ ಸಾಲು. ಸೂರ್ಯ ಮಕರರಾಶಿಯಲ್ಲಿರುವಾಗ ಮಾಘಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನ ಮಾಡುವವರು ಸಮಸ್ತ ಪಾಪಗಳಿಂದ ಮುಕ್ತರಾಗಿ ಅಂತ್ಯದಲ್ಲಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೇ ಈ ಮಾಸದಲ್ಲಿ ತೀರ್ಥಗಳ ರಾಜ ಎಂದೇ ಕರೆಯಲಾಗುವ ಪ್ರಯಾಗ ಮಹಾಕ್ಷೇತ್ರದಲ್ಲಿ ಸ್ನಾನ ಮಾಡಿದವರು ವೈಕುಂಠ ಸೇರುತ್ತಾರೆ. ಮಾಘ ಪುರಾಣದ ಪ್ರಕಾರ ಮೊದಲನೇ ದಿನ ಮಾಘ ಸ್ನಾನ ಮಾಡಿದವರಿಗೆ  ಪಾಪಗಳಿಂದ ಬಿಡುಗಡೆ, ಎರಡನೇ ದಿನವೂ ಮಾಘಸ್ನಾನ ಆಚರಣೆ ಮುಂದುವರೆಸುವವರು ವಿಷ್ಣು ಲೋಕಸೇರುತ್ತಾರೆ ಹಾಗೂ ಮೂರನೇ ದಿನವೂ ಇದನ್ನು ಮುಂದುವವರಿಗೆ ಯಾವ ಫಲವನ್ನು ಕೊಡಬೇಕೆಂದು ವಿಷ್ಣುವೇ ಯೋಚಿಸುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಎಷ್ಟು ಜಪ, ಹಾಗೂ ದಾನದಿಂದ ವಿಷ್ಣು ಪ್ರಸನ್ನನಾಗುತ್ತಾನೋ, ಮಾಘಮಾಸದಲ್ಲಿ ಮಾಘ ಸ್ನಾನ ಮಾಡಿದರೆ ಅದಕ್ಕಿಂತ ಹೆಚ್ಚು ಪ್ರಸನ್ನನಾಗುತ್ತಾನೆ. ಹಾಗಾಗಿ, ಮಾಘಮಾಸದ ಸ್ನಾನ, ದಾನ, ಪೂಜಾಕೈಂಕರ್ಯಗಳಿಗೆ ವಿಶೇಷ ಮಹತ್ವ.
ಸಾಧು ಸಂತರಿಗೆ ಪ್ರತಿದಿನವೂ ಸಹ ನದಿ, ಪವಿತ್ರ ತೀರ್ಥಕ್ಷೇತ್ರಗಳಲ್ಲೇ ಮಾಘಸ್ನಾನ ಮಾಡಲು ಅವಕಾಶ ಇರುತ್ತದೆ. ಆದರೆ ಸಂಸಾರದ ಜಂಜಾಟದಲ್ಲಿ ಸಿಲುಕಿರುವವರಿಗೆ ಪ್ರತಿನಿತ್ಯವೂ ನದಿಗಳನ್ನು ಹುಡುಕಿಕೊಂಡು ಹೋಗಿ ಮಾಘಸ್ನಾನ ಮಾಡುವುದು ಸಾಧ್ಯವಾಗುವುದಿಲ್ಲ, ಅಂತಹ ಸ್ಥಿತಿ ಎದುರಾದರೆ ಅಥವಾ ಮಾಘಸ್ನಾನ ಮಾಡಲು ಅಶಕ್ತರಾದವರು ಪಾದಪ್ರಕ್ಷಾಳನ ಮಾಡಿ ಮಾಘಸ್ನಾನ ಮಾಡಿದ ವ್ಯಕ್ತಿಗೆ ದಾನ ನೀಡುವುದರಿಂದಲೂ ಸಹ ಮಾಘಮಾಸದಲ್ಲಿ ಮಾಘಸ್ನಾನ ಮಾಡಿದ ಫಲಕ್ಕೆ ಭಾಜನರಾಗುತ್ತಾರೆ ಎನ್ನುತ್ತವೆ ಪುರಾಣಗಳು. ಚಳಿಯ ನಡುವೆಯೂ ಮಾಘಮಾಸದಲ್ಲಿ ಇಂತಹ ಪವಿತ್ರ ಸ್ನಾನ ಮಾಡಿದವರಿಗೆ ನೂರು ಅಶ್ವಮೇಧ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಮಾಘಸ್ನಾನ ಮಾಡಿದ ಪುಣ್ಯ ಸಮಾನವಾಗಿರುತ್ತದೆ, ಮಾಘಸ್ನಾನದ ನಂತರ ಶ್ರದ್ಧಾಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣುಲೋಕವನ್ನು ಸೇರಿ ವೈಕುಂಠಾಧಿಪತಿಯೇ ಆಗುತ್ತಾನೆ ಈ ಮೂಲಕ ಜೀವನ್ಮುಕ್ತನಾಗುತ್ತಾನೆ ಎಂದೂ ಹೇಳಲಾಗುತ್ತದೆ.  
ಪುಷ್ಯ ಮಾಸದ ಶುಕ್ಲ ಏಕಾದಶಿ, ದ್ವಾದಶಿ ಅಥವಾ ಹುಣ್ಣಿಮೆಯಂದು ಪ್ರಾರಂಭಿಸಲಾದ ಮಾಘಸ್ನಾನವನ್ನು ಮಾಘ ಮಾಸದ ದ್ವಾದಶಿ ಅಥವಾ ಹುಣ್ಣಿಮೆಯಂದು ಸಮಾಪ್ತಿಗೊಳಿಸಲಾಗುತ್ತದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾಗಿರುವ ಪ್ರಯಾಗದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿಕಾರ್ಯದ ಬಳಿಕ ಮೊದಲ ಯಜ್ಞ ನೇರವೇರಿಸಿದ್ದನಂತೆ. ಆದ್ದರಿಂದ ಪ್ರಯಾಗ, ಹರಿದ್ವಾರ, ಉತ್ತರಕಾಶಿ, ನಾಸಿಕ್, ಉಜ್ಜೈನ್‌ನ ಗಂಗಾ, ಯಮುನಾ ನದಿತೀರಗಳಲ್ಲಿ ಮಾಘಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ಬಾರಿಯ ಮಾಘಸ್ನಾನ ಜ.24 ರಿಂದ ಪ್ರಾರಂಭವಾಗಿದ್ದು 30 ದಿನಗಳು ನಡೆಯಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com