ಬ್ರಹ್ಮನ ತಪಸ್ಸನ್ನು ಮೆಚ್ಚಿದ ಶಿವ ಇಷ್ಟಾರ್ಥಗಳನ್ನು ಈಡೇರಿಸಿದ ಕ್ಷೇತ್ರ ಕೂಡಲಿ

ಶಿವನ ಅನುಗ್ರಹ ಪಡೆಯಲು ಸೃಷ್ಟಿಕರ್ತನಾದ ಬ್ರಹ್ಮ ಸೂಕ್ತವಾದ ಸ್ಥಳಕ್ಕಾಗಿ ಹುಡುಕಿದಾಗ ತುಂಗಾ ಮತ್ತು ಭದ್ರಾನದಿಗಳು ಸಂಗಮವಾಗುವ ಈ ಕ್ಷೇತ್ರವೇ ಸರಿಯಾದ ಪ್ರದೇಶವೆಂಬ ತೀರ್ಮಾನಕ್ಕೆ ಬರುತ್ತಾನೆ.
ಬ್ರಹ್ಮೇಶ್ವರ ದೇವಾಲಯ
ಬ್ರಹ್ಮೇಶ್ವರ ದೇವಾಲಯ

ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿರುವ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಕೂಡಲಿ ಕ್ಷೇತ್ರವು ಒಂದು. ಕೂಡಲಿ ತುಂಗಾ ಮತ್ತು ಭದ್ರಾ ನದಿಗಳು ಕೂಡುವ ಈ ಸ್ಥಳವಾಗಿದ್ದು, ದ್ವೈತ- ಅದ್ವೈತ ಪೀಠಗಳಿರುವ ಕ್ಷೇತ್ರವಾಗಿದೆ.

ಶಂಕರಾಚಾರ್ಯರು ಪ್ರತಿಷ್ಠಾಪಿಸಿರುವ ಶಾರಾಂಬೆಯ ವಿಗ್ರಹ ಹಾಗೂ ಅದ್ವೈತ ಮಠ ಇಲ್ಲಿನ ಪ್ರಸಿದ್ಧ ಸ್ಥಳವಾಗಿದ್ದು ಕೊಡಲಿ ಶೃಂಗೇರಿ ಮಠವೆಂದೇ ಖ್ಯಾತಿ ಪಡೆದಿದೆ.  ಇಲ್ಲಿ ಮಾಧ್ವಮಠವೂ ಇದ್ದು ಒಂದೇ ಕ್ಷೇತ್ರದಲ್ಲಿ ದ್ವೈತ-ಅದ್ವೈತ ಸಿದ್ಧಾಂತಗಳ ಸಂಗಮವಾಗಿರುವುದು ವಿಶೇಷವಾಗಿದೆ.

ಬ್ರಹ್ಮೇಶ್ವರ, ರಾಮೇಶ್ವರ ಮತ್ತು ನರಸಿಂಹ ದೇವಾಲಯಗಳು ಇಲ್ಲಿನ ಅತ್ಯಂತ ಪುರಾತನ ದೇವಾಲಯಗಳು. ಪುರಾಣಗಳ ಪ್ರಕಾರ, ಶಿವನ ಅನುಗ್ರಹ ಪಡೆಯಲು ಸೃಷ್ಟಿಕರ್ತನಾದ ಬ್ರಹ್ಮ ಸೂಕ್ತವಾದ ಸ್ಥಳಕ್ಕಾಗಿ ಹುಡುಕಿದಾಗ ತುಂಗಾ ಮತ್ತು ಭದ್ರಾನದಿಗಳು ಸಂಗಮವಾಗುವ ಈ ಕ್ಷೇತ್ರವೇ ಸರಿಯಾದ ಪ್ರದೇಶವೆಂಬ ತೀರ್ಮಾನಕ್ಕೆ ಬರುತ್ತಾನೆ. ಅಂತೆಯೇ ಇಂದಿನ ಕೂಡಲಿ ಕ್ಷೇತ್ರದಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಿ ತುಂಗ ಭದ್ರಾ ನದಿಯಲ್ಲಿ ಮಿಂದು ಶಿವನನ್ನು  ಪೂಜಿಸುತ್ತಾನೆ, ಇದರಿಂದ ಸಂತುಷ್ಟನಾದ ಶಿವ ಆಶ್ವಯುಜ ಮಾಸದ ಶುಕ್ಲ ಪೌರ್ಣಿಮೆಯ ದಿನ ಶಿವ ಬ್ರಹ್ಮನಿಗೆ ದರ್ಶನ ನೀಡಿ ಬ್ರಹ್ಮನ ಇಷ್ಟಾರ್ಥಗಳನ್ನು ಈಡೇರಿಸಿದನಂತೆ ಆದ್ದರಿಂದಲೇ ಬ್ರಹ್ಮೇಶ್ವರ ದೇವಾಲಯ ನಿರ್ಮಾಣವಾದದ್ದು ಎಂಬ ಪ್ರತೀತಿ ಇದೆ.
      
ಶಿವ ಬ್ರಹ್ಮನಿಗೆ ದರ್ಶನ ನೀಡಿದ ದಿನ ಅಂದರೆ ಆಶ್ವಯುಜ ಮಾಸದ ಶುಕ್ಲ ಪೌರ್ಣಿಮೆಯ ದಿನದಂದು ಕೂಡಲಿ ಕ್ಷೇತ್ರದ ಬ್ರಹ್ಮಶ್ವರ ದೇವಾಲಯದಲ್ಲಿ ಈಶ್ವರನ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಬ್ರಹ್ಮಶ್ವರ ದೇವಾಲಯದಲ್ಲಿ ಮಾಸ ಶಿವರಾತ್ರಿ ಹಾಗೂ ಮಹಾ ಶಿವರಾತ್ರಿಯಂದು ವಿಶೇಷ ಪೂಜಾ ವಿಧಿಗಳು ನಡೆಯುತ್ತವೆ. ಶಿವನು ಬ್ರಹ್ಮನಿಗೆ ದರ್ಶನವಿತ್ತ ಪ್ರತಿ ಆಶ್ವಯುಜ ಶುಕ್ಲ ಪೌರ್ಣಿಮೆಯಂದು ಉತ್ಸವ ನಡೆಯುವುದು ಈ ದೇವಾಲಯದ ಮತ್ತೊಂದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com