ಬ್ರಹ್ಮನ ಬಗ್ಗೆ ತಿಳಿದುಕೊಳ್ಳಲು ಉತ್ತರ ನೀಡುವ ತೈತ್ತರೀಯ ಉಪನಿಷತ್

ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದ್ದು ಶಿಕ್ಷಾ ವಲ್ಲಿ, ಬ್ರಹ್ಮಾನಂದ ವಲ್ಲಿ, ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ.
ಬ್ರಹ್ಮನ ಬಗ್ಗೆ ತಿಳಿದುಕೊಳ್ಳಲು ಉತ್ತರ ನೀಡುವ ತೈತ್ತರೀಯ ಉಪನಿಷತ್
Updated on
ಉಪನಿಷತ್ ಗಳು ವಿಶ್ವಕ್ಕೆ ಭಾರತ ನೀಡಿರುವ ಅನನ್ಯ ಕೊಡುಗೆಯಾಗಿದ್ದು, ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ ಸೇರಿದಂತೆ 11 ಉಪನಿಷತ್ ಗಳ ಪೈಕಿ ತೈತ್ತಿರೀಯೋಪನಿಷತ್ ಸಹ ಒಂದು.  ಇದು ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದ್ದು ಶಿಕ್ಷಾ ವಲ್ಲಿ, ಬ್ರಹ್ಮಾನಂದ ವಲ್ಲಿ, ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ. 
ಪರತತ್ವ ಎಂದು ಹೇಳಲಾಗುವ ಬ್ರಹ್ಮ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ಕಂಡುಕೊಳ್ಳುವುದು ಈ ಉಪನಿಷತ್ತಿನ ಹಿರಿಮೆ. ತೈತ್ತರೀಯ ಉಪನಿಷತ್ ನಲ್ಲಿ ಅದ್ವೈತದ ತತ್ವವೇ ಇದ್ದು ಮಾನವ ತನ್ನ ಸ್ವರೂಪದ ನಿಷ್ಕರ್ಷೆಗೆ ತೈತ್ತರೀಯ ಉಪನಿಷತ್ ಸಹಕಾರಿಯಾಗಿದೆ. ಬ್ರಹ್ಮವೇ ಆನಂದ,ಆನಂದವೇ ಬ್ರಹ್ಮ ಎಂಬ ಸಿದ್ಧಾಂತವನ್ನು ಸ್ಪಷ್ಟೀಕರಿಸಿದ ವಿವರಣೆಗಳನ್ನು ಕೂಡಾ ಇದರಲ್ಲಿ ಕಾಣ ಬಹುದಾಗಿದೆ.
ತೈತ್ತರೀಯ ಉಪನಿಷತ್ ಗೂ ಶಿಕ್ಷಣಕ್ಕೂ ನಿಕಟ ಸಂಬಂಧವಿದ್ದು, ಶಿಕ್ಷಣ ಮುಕ್ತಾಯಗೊಳಿಸಿದ ವಿದ್ಯಾರ್ಥಿಗೆ ನೀಡಲಾಗುವ ಜೀವನೋಪದೇಶ ತೈತ್ತರೀಯ ಉಪನಿಷತ್ ಆಗಿರುವುದು, ಇದರ ಮತ್ತೊಂದು ವಿಶೇಷತೆಯಾಗಿದೆ.   
ಶಿಕ್ಷಣ ಮುಕ್ತಾಯಗೊಳಿಸಿದ ವಿದ್ಯಾರ್ಥಿಗೆ ನೀಡಲಾಗುತ್ತಿದ್ದ ಉಪದೇಶ ಶ್ಲೋಕದ ಮೊದಲ ಅನುವಾಕದ ಅರ್ಥ ಹೀಗಿದೆ. 
ಹರಿ ಓಮ್|| ಶಂ ನೋ ಮಿತ್ರಃ ಶಂ ವರುಣಃ|ಶಂ ನೋ ಭವತ್ವರ್ಯಮಾ|ಶಂ ನ ಇಂದ್ರೋ ಬೃಹಸ್ಪತಿಃ|ಶಂ ನೋ ವಿಷ್ಣುರುರುಕ್ರಮಃ|ನಮೋ ಬ್ರಹ್ಮಣೇ|ನಮಸ್ತೇ ವಾಯೋ|ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ|ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ|ಋತಂ ವದಿಷ್ಯಾಮಿ|ಸತ್ಯಂ ವದಿಷ್ಯಾಮಿ|ತನ್ಮಾಮವತು|ತದ್ವಕ್ತಾರಮವತು|ಅವತು ಮಾಮ್| ಅವತು ವಕ್ತಾರಮ್||ಓಂ ಶಾಂತಿಃ ಶಾಂತಿಃ ಶಾಂತಿಃ||
ಮಿತ್ರನು ನಮಗೆ ಸುಖವನ್ನುಂಟುಮಾಡಲಿ. ವರುಣನು ನಮಗೆ ಸುಖವನ್ನುಂಟುಮಾಡಲಿ.ಆರ್ಯಮನು ನಮಗೆ ಸುಖವನ್ನುಂಟುಮಾಡಲಿ.ಉರುಕ್ರಮನಾದ ವಿಷ್ಣುವು ನಮಗೆ ಸುಖವನ್ನುಂಟುಮಾಡಲಿ. ಪ್ರತ್ಯಕ್ಷ, ಪರೋಕ್ಷವಾದ ವಾಯು ವಾಯುವೇ ನಿನಗೆ ನಮಸ್ಕಾರ! ನೀನೆ ಪ್ರತ್ಯಕ್ಷ ಬ್ರಹ್ಮವಾಗಿದ್ದೀಯ. ನಿನ್ನನ್ನೇ ಪ್ರತ್ಯಕ್ಷ ಬ್ರಹ್ಮವೆಂದು ಹೇಳುತ್ತೇವೆ.(ನಿನ್ನನ್ನೇ)ಋತವೆಂದು ಹೇಳುತ್ತೇವೆ. ನಿನ್ನನ್ನೇ ಸತ್ಯವೆಂದು ಹೇಳುತ್ತೇನೆ. ಅದು ನನ್ನನ್ನು ಕಾಪಾಡಲಿ, ವಿದ್ಯೆ ಕಲಿಸಿದ ಆಚಾರ್ಯನನ್ನು ಕಾಪಾಡಲಿ ಎಂದಿದೆ. ಇದರೊಂದಿಗೆ  ಮಾತೃ ದೇವೋ ಭವ , ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎಂಬ ಅತ್ಯಂತ ಜನಜನಿತವಾದ ಮಹಾವಾಕ್ಯಗಳು ಇರುವುದು ಇದೇ  ಉಪನಿಷತ್ತಿನಲ್ಲಿ. ಇನ್ನು ವಿದ್ಯೆಗೆ ಪೂರಕವಾದ ಮಾನವೀಯ ಮೌಲ್ಯಗಳನ್ನು ತಿಳಿಸುವ ತೈತ್ತರೀಯ ಉಪನಿಷತ್, ಕೊಡುವುದನ್ನು ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಎಂದೂ ಕೊಡಬೇಡ ಎಂಬ ಉಪದೇಶವನ್ನೂ ನೀಡಿ, ಶಿಕ್ಷಣ ಪಡೆದವನ ವ್ಯಕ್ತಿತ್ವವನ್ನು ಮತ್ತಷ್ಟು ವಿವೇಕಯುಕ್ತವನ್ನಾಗಿ ಮಾಡಲು ಸಹಕಾರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com