ಅಗ್ನಿದೇವ ಖಾಂಡವ ದಹನಕ್ಕಾಗಿ ಅರ್ಜುನನ ಮೊರೆ ಹೋಗುತ್ತಾನೆ. ಖಾಂಡವ ದಹನಕ್ಕೆ ಅಡ್ಡಿ ಆಗದಂತೆ ಆರ್ಜುನ ಹಾಗೂ ಶ್ರೀಕೃಷ್ಣ ಪರಮಾತ್ಮ ಬೆಂಗಾವಲಿಗೆ ನಿಲ್ಲುತ್ತಾರೆ. ಈ ದಹನ ಕಾಲದಲ್ಲಿ ತಕ್ಷಕನೆಂಬ ನಾಗ ಸುಟ್ಟಗಾಯಕ್ಕೆ ತುತ್ತಾಗಿ, ತೇಜೋಹೀನನಾಗುವಂತೆ ಅಗ್ನಿಗೆ ಶಪಿಸುತ್ತಾನೆ. ಆಗ ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಮೊರೆ ಹೋದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ವರದ ನಾರಾಯಣಸ್ವಾಮಿ ಪ್ರತಿಮೆ ಸ್ಥಾಪಿಸಿ ಪೂಜಿಸಿ, ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀದೇವಿ, ಭೂದೇವಿ ಸಹಿತನಾಗಿರುವ ಶ್ರೀನಿವಾಸ ಇಲ್ಲಿ ಅಭಯಮುದ್ರೆಯಲ್ಲಿರುವುದು ವಿಶೇಷ. ದಕ್ಷಿಣ ಭಾರತದಲ್ಲಿರುವ ಏಳು ತಿರುಪತಿಗಳ ಪೈಕಿ ಇದೂ ಒಂದೆಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಯೂ ಸಹ ತಿರುಪತಿ ತಿಮ್ಮಪ್ಪನಿಗೆ ನಡೆಯುವಂತೆಯೇ ರಥೋತ್ಸವ, ಬ್ರಹ್ಮೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಎಲ್ಲ ಸೇವೆಗಳೂ ನಡೆಯುತ್ತವೆ.