ಆದಿ ಶಂಕರಾಚಾರ್ಯ
ಆದಿ ಶಂಕರಾಚಾರ್ಯ

ಭರತ ವರ್ಷದ ಜೀವಂತಿಕೆಯ ಹಿಂದಿರುವ ಮರ್ಮ, ಶಂಕರರಿಲ್ಲದಿದ್ದಿದ್ದರೆ ಛಿದ್ರವಾಗುತ್ತಿತ್ತು ಸನಾತನ ಧರ್ಮ!

ಇಲ್ಲಿ ಅನೇಕ ಮಹಾತ್ಮರು, ದಾರ್ಶನಿಕರು, ಸಂತರು ಆಗಿಹೋಗಿದ್ದಾರೆ. ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶಂಕರಾರ್ಚಾರ್ಯರು.
ಭಾರತ ಆದ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ದೇಶ. ದೇವತೆಗಳು ಅವತರಿಸಲು ಆಯ್ದುಕೊಳ್ಳುವುದೂ ಪುಣ್ಯ ಭೂಮಿ ಭರತ ವರ್ಷವನ್ನೇ. ಇಲ್ಲಿ ಅನೇಕ ಮಹಾತ್ಮರು, ದಾರ್ಶನಿಕರು, ಸಂತರು ಆಗಿಹೋಗಿದ್ದಾರೆ. ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶಂಕರಾರ್ಚಾರ್ಯರು. ಶಂಕರ ಭಗವತ್ಪಾದರು ಅವತರಿಸಿ ಸಾವಿರಾರು ವರ್ಷಗಳು ಕಳೆದರೂ ಅವರ ಹೆಸರು ಇಂದಿಗೂ ಭಾರತದಾದ್ಯಂತ ಪ್ರೇರಕ ಶಕ್ತಿಯಾಗಿ, ಚೈತನ್ಯವಾಗಿ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವಂತೆ ಮಾಡಿದೆ. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,ಎಂಟನೇ ವಯಸ್ಸಿನಲ್ಲಿ ವೇದ,ಮೀಮಾಂಸ,ಶಾಸ್ತ್ರಗಳಲ್ಲಿ ಪಾಂಡಿತ್ಯ, ಹನ್ನೆರಡನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದ ಶಂಕರ ಭಗವತ್ಪಾದರು ಇಂದಿನ ಯುವಕರೂ ತಲೆ ಕೆಳಗೆ ಹಾಕುವಂತೆ ಪ್ರಯಾಣದ ಸಾಧನಗಳೇ ಇಲ್ಲದಿದ್ದ ಅಂದಿನ ದಿನಗಳಲ್ಲಿ ದಕ್ಷಿಣದಿಂದ ಹಿಮಾಲಯದ ತುದಿಗಳನ್ನು ಕಾಲ್ನಡಿಗೆಯಲ್ಲಿಯೇ ನೋಡಿದ್ದರು. ಕಾಳಿದಾಸನೂ ನಾಚುವಂತೆ ಕಾವ್ಯಗಳನ್ನು ರಚಿಸಿದ್ದರು.    
ವೇದಗಳನ್ನು ಸಂಕ್ಷಿಪ್ತ ಸೂತ್ರಗಳಾಗಿ ಮಾಡಿದ್ದ ಬಾದರಾಯಣರ ಸೂತ್ರಗಳಿಗೆ ಶಂಕರರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ (16 ನೇ ವಯಸ್ಸಿನಲ್ಲೇ) ಭಾಷ್ಯಗಳನ್ನು ಬರೆದು ಮುಂದಿನ ಪರಂಪರೆಗೆ ತಿಳಿಸಿದ್ದಾರೆ. ಇಂಥಹ ಒಬ್ಬರು ದಾರ್ಶನಿಕರು ಕಾಲ, ದೇಶ, ಧರ್ಮಗಳನ್ನು ಮೀರಿದ ಸಕಾಲ ಪ್ರಸ್ತುತ. ಅವರು ಬರೆದ ಸ್ತೋತ್ರಗಳು,  ಶಾರದೆಯ ವರ್ಣನೆಯಂತೂ ಅಕ್ಷರ ದೇವಿಯೇ ಎಂಬ ಭಕ್ತಿ ಮೂಡಿಸುತ್ತದೆ. ಇಂತಹ ಶಂಕರ ಭಗವತ್ಪಾದರ ಹೆಸರೇ ಸಮ್ಮೋಹಕ. ನಾತನ ಧರ್ಮದ ರಕ್ಷಣೆ ಮಾಡಿ ದೇಶದ ಕಲ್ಪನೆ ನೀಡಿದ ಶಂಕರ ಭಗವತ್ಪಾದರು ಸರ್ವರಿಗೂ ಪೂಜನೀಯರು. ಇಷ್ಟಕ್ಕೂ ನಾವೇಕೆ ಶಂಕರರನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಬೇಕು ಗೊತ್ತಾ? ಕೇವಲ ಅವರೊಬ್ಬ ವಿದ್ವಾಂಸರಾಗಿದ್ದಿದ್ದರೆ ಅಥವಾ ಅತಿ ಸಣ್ಣ ವಯಸ್ಸಿನಲ್ಲೆ ವೇದ- ವೇದಾಂಗ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದರೆ ಕೇವಲ ಅದ್ಭುತ ಶಾಸ್ತ್ರಜ್ನರೋ ಪಂಡಿತರೋ ಆಗಿದ್ದಿದ್ದರೆ ಗೌರವಾದರಗಳನ್ನು ಪಡೆಯಲು ಮಂಡನಮಿಶ್ರ, ಕುಮಾರಿಲಭಟ್ಟರಂತಹ ಪಂಡಿತರು ಅಂದಿಗೂ ಇದ್ದರು, ಅಪರೂಪಕ್ಕೆ ಇಂದಿಗೂ ಒಂದಿಬ್ಬರು ಸಿಗುತ್ತಾರೆ. ನಾವೇಕೆ ಶಂಕರರಿಗೆ ಕೃತಜ್ನರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋದರಲ್ಲಾ, ಅಂತಹ ದೂರದೃಷ್ಟಿ, ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು. ಅಸ್ಮಿತೆ ವಿಷಯದಲ್ಲಿ ಉಳಿದವರಿಗಿಂತ ತುಸು ಹೆಚ್ಚೇ ಕಾಳಜಿಯುಳ್ಳವರು, ಅಸ್ಮಿತೆಗೆ ಪೆಟ್ಟು ಬಿದ್ದು ಧರ್ಮಕ್ಕೇ ಕಂಟಕ ಎದುರಾದಾಗ ಸಣ್ಣ ಸಹಾಯ ಮಾಡಿದವರನ್ನು ನಾವೆಂದೂ ಮರೆಯುವುದಿಲ್ಲ ಅಂಥದ್ದರಲ್ಲಿ, ವೇದಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಮಾರ್ಗದ ಮೂಲಕ ಉಸಿರುಕಟ್ಟಿಸುವಂತಹ ಕಟ್ಟುಪಾಡುಗಳನ್ನು ವಿಧಿಸಿ ಸನಾತನ ಧರ್ಮಕ್ಕೆ ವಿನಾಶದ ಪರಿಸ್ಥಿತಿ ಎದುರಾಗಿದ್ದಾಗ ಅದನ್ನು ಸುಧಾರಿಸಿದವರು ಶಂಕರರು. ಈ ಕಾರಣಕ್ಕಾಗಿಯೇ ನಾವು ಶಂಕರರಿಗೆ ಕೃತಜ್ನರಾಗಿರಬೇಕು. ಸನ್ಯಾಸದ ನಂತರವೂ ತಾಯಿಗೆ ಅಂತ್ಯಕ್ರಿಯೆ ಮಾಡಿದ್ದ ಶಂಕರರು ಕರ್ಮ ಸಿದ್ಧಾಂತವೇ ಅಂತಿಮವಲ್ಲ ಜ್ಞಾನಿಗೇ ಪೂಜ್ಯತೆ ಎಂಬುದನ್ನು ತೋರಿಸಲು ಕಾಶಿಯಲ್ಲಿ ಎದುರಾದ ಅಸ್ಪೃಶ್ಯ ಚಾಂಡಾಲ ವ್ಯಕ್ತಿಯನ್ನು ಪಕ್ಕಕ್ಕೆ ಸರಿಯಲು ಹೇಳುತ್ತಾರೆ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು ಅವನೇ ತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈ ಮುಗಿದು ಐದು ಶ್ಲೋಕಗಳಿಂದ ಸ್ತುತಿಸುತ್ತಾರೆ, ಈ ಮೂಲಕ ಅಂದಿನ ಕಾಲಕ್ಕೆ ಸ್ಥಾಪಿತವಾಗಿದ್ದ ಕಟ್ಟುಪಾಡುಗಳಿಗೆ ತಿಲಾಂಜಲಿ ಇತ್ತಿದ್ದರು. 
ಈ ಹಿಂದೆಯೇ ಹೇಳಿದಂತೆ  ವೇದಗಳ ಪ್ರಮಾಣವನ್ನು, ಸಿದ್ಧಾಂತಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದನ್ನೇ ಪ್ರಚಾರ ಮಾಡುತ್ತಾ, ಉಸಿರುಕಟ್ಟುವಂತಹ ಕಟ್ಟುಪಾಡುಗಳನ್ನು ವಿಧಿಸಿ ಸನಾತನ ಧರ್ಮದ ಆಶಯಕ್ಕೇ ಕೊಡಲಿ ಪೆಟ್ಟು ಕೊಟ್ಟಿದ್ದಾಗಿತ್ತು. ಇತ್ತೀಚಿನ ದಿನಗಳನ್ನು ಯಾಗ- ಯಜ್ನಗಳಿಗೆ ಬಲಿ ಕೊಡುವುದು, ಯಾವುದಾದರೊಂದು ಇಚ್ಛೆ ಈಡೇರಿಸಿಕೊಳ್ಳಬೇಕೆಂದರೆ ಯಾಗಗಳನ್ನು ಮಾಡಿಯೇ ತೀರಬೇಕೆಂಬ ಅಪಪ್ರಚಾರ ವಗೈರೆ ವಗೈರೆ. ಇಂತಹ ಕಟ್ಟುಪಾಡುಗಳು ಇಡಿ ಭಾರತದಾದ್ಯಂತ ಪ್ರಚಾರವಾಗಿತ್ತು. ಇಂತಹ ಪರಿಸ್ಥಿತಿಯನ್ನು ಸುಧಾರಿಸಿ, ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ಎಂದು ಭಗವದ್ಗೀತೆಯಲ್ಲಿ ಹೇಳಿರುವಂತೆ ವೇದಗಳು ಕರ್ಮಮಾರ್ಗಕ್ಕಿಂತ ಉನ್ನತವಾದ ಜ್ಞಾನಮಾರ್ಗವನ್ನು ಒಪ್ಪಿರುವುದನ್ನು ತಿಳಿಸಲು ಶಂಕರರು ಭಾರತದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿ ಜನರಿಗೆ ಧರ್ಮ ತತ್ವವನ್ನು ತಿಳಿಸಿ, ಅಲ್ಲಿನ ಪ್ರತಿಪಕ್ಷಿಗಳಾದ ವಿದ್ವಾಂಸನ್ನು ಪಂಡಿತರ ತಪ್ಪುಗಳನ್ನು ತೋರಿಸಿ ತಮ್ಮ ತಪ್ಪನ್ನು ತಾವೇ ತಿದ್ದಿಕೊಳ್ಳುವಂತೆ ಮಾಡಿದ್ದರು. ಹಾಗೆಂದ ಮಾತ್ರಕ್ಕೆ ಶಂಕರರು ಭೇಟಿ ಮಾಡಿದ ಎಲ್ಲಾ ಪಂಡಿತರು, ವಿದ್ವಾಂಸರೆಲ್ಲಾ ಶಂಕರರ ತತ್ವ-ಸಿದ್ಧಾಂತಗಳನ್ನು ಒಂದೇ ಏಟಿಕೆ ಒಪ್ಪುತ್ತಿರಲಿಲ್ಲ. ಮಾಧವೀಯ ಶಂಕರ ವಿಜಯದಲ್ಲಿ  ಇದಕ್ಕೆ ಸಂಬಂಧಿಸಿದ ಸ್ವಾರಸ್ಯಕರವಾದ ಸಂಗತಿಗಳು, ಸಂದರ್ಭಗಳನ್ನು ವಿವರಿಸಿದ್ದಾರೆ. ಬ್ರಹ್ಮನೇ ಎದುರಾದರೂ ವಾದದಲ್ಲಿ ಜಯಿಸುತ್ತೇವೆ ಎಂಬ ಅಹಂಕಾರದ ಸ್ಥಿತಿಯಲ್ಲಿದ್ದ ಪಂಡಿತರನ್ನೂ ಸಹ ಶಂಕರರು ವಾದದಲ್ಲಿ ಗೆದ್ದು ಜಿತೋಸ್ಮಿ ಎನಿಸಿದ್ದರು. ಶಂಕರರೊಂದಿಗೆ ವಾದದಲ್ಲಿ ಪರಾಜಯಗೊಂಡ ನಂತರ ತಮ್ಮ ಗುರುಗಳಾದ ಜೈಮಿನಿ ಮಹರ್ಷಿಗಳು ಹೇಳಿದ್ದ ಕರ್ಮ ಸಿದ್ಧಾಂತ ತಪ್ಪು ಎಂದು ಸಾಬೀತಾಗಿದ್ದ ವ್ಯಥೆಯಲ್ಲಿದ್ದ ಮಾಂಸಕ, ಯಜ್ಞ ಕರ್ಮವೇ ಮೋಕ್ಷ ಸಾಧನ ಎಂದು ನಂಬಿದ್ದ ಮಂಡನಮಿಶ್ರರಿಗೆ ಸ್ವತಃ ಜೈಮಿನಿ ಮಹರ್ಷಿಗಳೇ ಬಂದು " ನಾನು ಹೇಳಿದ್ದ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂದೂ ಶಂಕರರು ಹೇಳಿರುವ ತತ್ವ ನಮ್ಮ ಗುರುಗಳಾದ ವ್ಯಾಸರು ಹೇಳಿರುವ ತತ್ವವೇ ಎಂದು ಹೇಳಬೇಕಾಗಿ ಬಂತು, ಶಂಕರರಿಗೆ ಅದ್ವೈತ ಸಿದ್ಧಾಂತದ ಬಗ್ಗೆ ಅಂತಹ ತಿಳುವಳಿಕೆ, ಅಪ್ರಕಂಪ್ಯವಾದ ನಂಬಿಕೆ ಇತ್ತು, ಆದ್ದರಿಂದಲೇ ಶಂಕರರನ್ನು ಯಾರೂ ಸಹ ವಾದದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗೆಯೇ ಇನ್ನು ಮುಂದೆ ಧರ್ಮಕ್ಕೆ ಚ್ಯುತಿ ಬರದೇ ಇರುವಂತೆ ಎಚ್ಚರ ವಹಿಸಲು ಶಂಕರರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ದಕ್ಷಿಣದಲ್ಲಿ: ಶೃಂಗೇರಿ ಪೀಠ - ದಕ್ಷಿಣ ಶಾರದಾ ಮಠ ಪೂರ್ವದಲ್ಲಿ: ಪುರಿ ಪೀಠ - ಪೂರ್ವಾ ಗೋವರ್ಧನ ಮಠ ಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮ ಮಠ) ಸ್ಥಾಪನೆ ಮಾಡಿದರು.
ಇನ್ನು ಶಂಕರರು ನಾಲ್ಕು ಆಮ್ನಾಯ ಮಠಗಳ ಜೊತೆಗೆ ಆರಾಧಕರಲ್ಲಿ ಪರಸ್ಪರ ಕಾದಾಟ ಹೋಗಲಾಡಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸ್ಮಾರ್ತ ಸಂಪ್ರದಾಯವನ್ನು ಹುಟ್ಟುಹಾಕಿದರು, ಇದೇ ಮುಂದೆ ಸಾಮರಸ್ಯ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಮತ್ತು ಸ್ಕಂದ ಇವರ ಆರಾಧಕರ ನಡುವಿನ ಸಾಮರಸ್ಯಕ್ಕೆ ಕಾರಣವಾಯಿತು. ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಗುವ ಸಂಪ್ರದಾಯವನ್ನು ಹುಟ್ಟು ಹಾಕಿ ಜನರು ಅದನ್ನು ಅನುಸರಿಸುವಂತೆ ಪ್ರಭಾವ ಮಾಡಿದ್ದು, ಅವರ ಅತಿದೊಡ್ಡ ಸಾಧನೆ. ಅಲ್ಲದೆ, ಅವರ ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ. ಅವರಿರದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು ಹಿಂದೂ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ ಇನ್ನು ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ.

- ಶ್ರೀನಿವಾಸ್

Related Stories

No stories found.

Advertisement

X
Kannada Prabha
www.kannadaprabha.com