ತುಳಸಿ ವಿವಾಹ, ಪೂಜೆ; ಪೌರಾಣಿಕ ಹಿನ್ನೆಲೆ, ಆಚರಣೆ ವಿಧಾನ

ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ...
ತುಳಸಿ ಕಟ್ಟೆ
ತುಳಸಿ ಕಟ್ಟೆ
Updated on
ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದೆ. ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ. 
ದೀಪಾವಳಿ ಹಬ್ಬ ಮುಗಿದು ಹಿಂದೂಗಳು ಆಚರಿಸುವ ಹಬ್ಬವೇ ತುಳಸೀಪೂಜೆ ಅಥವಾ ಕಿರು ದೀಪಾವಳಿ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. 
ಪೌರಾಣಿಕ ಕಥೆ: ತುಳಸಿ ವಿವಾಹದ ಹಿಂದೆ ದೀರ್ಘವಾದ ಪುರಾಣ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಯಾಗಿ ಗಿಡದ ರೂಪ ಪಡೆದಿರುವುದು. ಈಕೆ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ. ಅವಳಿಗೆ ಮಹಾವಿಷ್ಣುವಿನ ಮೇಲೆ ವಿಶೇಷ ಭಕ್ತಿ. ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಆತ ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ. ಶಿವನು ಏನು ಮಾಡುವುದೆಂದು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುವಳಲ್ಲದೆ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಆಶಿಸುತ್ತಾಳೆ. 
ಇದರಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರ ರಾಮನಿಗೆ ಸೀತೆಯು ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಾಗುತ್ತಾಳೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆಯುಂಟಾದುದರಿಂದ ವೃಂದಾ ಪತಿಯ ಚಿತೆಗೆ ಹಾರಿ ಸಾವಿಗೀಡಾಗುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. 
ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು. ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿನ ಮಡದಿಯೆಂದೂ ಅವರಿಬ್ಬರಿಗೆ ನಡೆಯುವ ವಿವಾಹವನ್ನು ತುಳಸಿ ವಿವಾಹ ಎಂದು ಕರೆಯುತ್ತಾರೆ. ತುಳಸಿ ಗಿಡಕ್ಕೆ ವಿವಾಹವೆಂದರೆ ಮಳೆಗಾಲ ಮುಗಿದು ಚಳಿಗಾಲದಲ್ಲಿ ಹಿಂದೂ ಮದುವೆಗಳು ಆರಂಭವಾಗುವ ಸಮಯವೆಂದರ್ಥ.
ಆಚರಣೆ ವಿಧಾನ: ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದ ಸಂಭ್ರಮವೇ ಈ ತುಳಸಿ ವಿವಾಹ ಸಮಯದಲ್ಲಿಯೂ ಇರುತ್ತದೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುವ ರೂಢಿ ಇದೆ. ದೀಪದಿಂದ ಗಿಡದ ಸುತ್ತ ಅಲಂಕರಿಸಲಾಗುತ್ತದೆ.
ತುಳಸಿ ಗಿಡದ ವಿವಾಹವು ಹಿಂದೂ ಪದ್ದತಿಯ ಮದುವೆಯ ಸಂಕೇತವಾಗಿರುವುದರಿಂದ ಹಿಂದೂಗಳ ಮನೆಗಳಲ್ಲಿ, ದೇವಾಲಯಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಆ ದಿನ ಪೂಜೆಯಲ್ಲಿ ಪಾಲ್ಗೊಳ್ಳುವವರು ಉಪವಾಸ ಕೈಗೊಳ್ಳುತ್ತಾರೆ. ತುಳಸಿ ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬಂದಾವನವೆಂದು ಹೆಸರು. ವೃಂದಾಳ ಆತ್ಮವು ರಾತ್ರಿಯಿಡೀ ಇದ್ದು ಮರುದಿನ ಬೆಳಿಗ್ಗೆ ಹೊರಟುಹೋಗುತ್ತದೆ ಎಂಬ ನಂಬಿಕೆಯಿದೆ.
ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ. ಆಚರಣೆ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ಮದುವೆ ನಡೆಸುವವರು, ಕಾರ್ಯಕ್ರಮಕ್ಕೆ ಬಂದವರು ಅಲ್ಲಿ ಸೇರಿರುತ್ತಾರೆ. ಮದುವೆಯನ್ನು ನೋಡಿ ಬಾಯ್ತುಂಬ ಹರಸುತ್ತಾರೆ. ವಧೂ-ವರರಿಗೆ ಉಡುಗೊರೆ ನೀಡುವ ಸಂಕೇತವಾಗಿ ಪೂಜೆ ಏರ್ಪಡಿಸಿದ ಮನೆಯ ಹುಡುಗಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ಅತಿಥಿಗಳು ಉಡುಗೊರೆ ಕೊಡುತ್ತಾರೆ. ನಂತರ ಭೋಜನ ಮುಗಿಸಿ ಮನೆಗೆ ತೆರಳುತ್ತಾರೆ.  ಅನೇಕ ಸಂಪ್ರದಾಯ, ಆಚರಣೆಗಳನ್ನು ಹೊಂದಿರುತ್ತದೆ. 
ತುಳಸಿ ಗಿಡ ಉತ್ತಮ ಔಷಧೀಯ ಗುಣವುಳ್ಳದ್ದು. ಮನೆಯ ಸುತ್ತಮುತ್ತ ತುಳಸಿ ಗಿಡ ಬೆಳೆಸಿದರೆ ಸೋಂಕು, ಕ್ರಿಮಿ ಕೀಟಗಳು, ರೋಗ-ರುಜಿನಗಳು ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಮಳೆಗಾಲ, ಚಳಿಗಾಲದಲ್ಲಿ ತುಳಸಿ ಎಲೆಯನ್ನು ಕಾಳುಮೆಣಸು ಜೊತೆ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ ತಲೆನೋವು, ಜ್ವರ, ಕಫ ಒಂದೆರಡು ದಿನಗಳಲ್ಲಿ ಮಾಯವಾಗಿಬಿಡುತ್ತದೆ. ಚಿಕ್ಕ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿದ್ದರೆ ತುಳಸಿ ಎಲೆಯನ್ನು ಚೆನ್ನಾಗಿ ಅರೆದು ರಸ ಹಿಂಡಿ ಒಂದು ಕಲ್ಲು ಉಪ್ಪು ಬೆರೆಸಿ ಒಂದೆರಡು ಚಮಚ ಕುಡಿಸಿ ನೋಡಿ; ಕೆಲವೇ ಹೊತ್ತಿನಲ್ಲಿ ನೋವು ಉಪಶಮನವಾಗುತ್ತದೆ. ತುಳಸಿ ಎಲೆ ಅಲರ್ಜಿ ಶಮನಕಾರಿಯೂ ಹೌದು. 
- ಸುಮನಾ ಉಪಾಧ್ಯಾಯ   
(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ) 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com