ರಥಸಪ್ತಮಿ
ರಥಸಪ್ತಮಿ

ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?

ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ
Published on
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ  ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. 
ರಥಸಪ್ತಮಿ ಎಂದರೆ ತಕ್ಷಣ ನೆನಪಾಗುವುದು ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು. ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರಥ ಸಪ್ತಮಿಯ ದಿನದಂದು ನಡೆದುಕೊಂಡು ಬಂದಿರುವ ರೂಢಿ. ಎಕ್ಕದ ಎಲೆಗಳನ್ನು ಮೇಲೆ ಹೇಳಿರುವ ದೇಹದ ಭಾಗಗಳಿಗೆ ಇಟ್ಟುಕೊಂಡು ಸ್ನಾನ ಮಾಡಿದ ನಂತರ,  ಸೂರ್ಯನ 108 ಹೆಸರುಗಳನ್ನು ಉಚ್ಛರಿಸಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿಯೂ ಇದೆ. ಒಂದು ವೇಳೆ 108 ನಾಮಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ಎಂಬ ಸೂರ್ಯನ 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡಬಹುದಾಗಿದೆ. 
ಸೂರ್ಯನ ಪಥ ಬದಲಾವಣೆಯಾಗುವುದರಿಂದ ಮಾಘಮಾಸದಿಂದ ಮುಂದಕ್ಕೆ ಚಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ರಥಸಪ್ತಮಿಯ ಆಚರಣೆಯನ್ನು ನೋಡಬಹುದಾಗಿದ್ದು, ರಥಸಪ್ತಮಿ ಎಂಬ ಹೆಸರು ಸೂರ್ಯನ ರಥಕ್ಕೂ ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಗೂ ಸಂಬಂಧಿಸಿದ್ದನ್ನು ಸೂಚಿಸುತ್ತದೆ. ಸೂರ್ಯನ ಸಾರಥಿಯಾದ ಅರುಣ (ಅನೂರು) ರಥವನ್ನು ಉತ್ತರದತ್ತ ಮುನ್ನಡೆಸೆ, ಈಶಾನ್ಯ ದಿಕ್ಕಿಗೆ ಚಲಿಸುತ್ತಾನೆ. ಸೂರ್ಯನ ರಥದ ಚಕ್ರಗಳು ಕಾಲವನ್ನು, ಏಳು ಕುದುರೆಗಳು ಏಳು ಬಣ್ಣಗಳ ಹಾಗೂ ಏಳು ವಾರಗಳ ಪ್ರತಿನಿಧಿಗಳಾಗಿವೆ. 
ಇನ್ನು ರಥಸಪ್ತಮಿಯ ದಿನದಂದು ಬಳಸುವ ಎಕ್ಕದ ಎಲೆಗಳ ಬಗ್ಗೆ ಹೇಳುವುದಾದರೆ ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ರಥ ಸಪ್ತಮಿಯಂದು ಮುಂಜಾನೆಯೇ ಎದ್ದು ಎಕ್ಕದ ಎಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ರಥಸಪ್ತಮಿಯ ದಿನದಂದು ಎಕ್ಕದ ಎಲೆಗಳನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com