ಬ್ರಿಟನ್ ಮೂಲದ ಥಿಯೋಸಫಿಸ್ಟ್ ಪಾಲ್ ಬ್ರಂಟನ್ ಗೆ ಭಾರತವೆಂದರೆ ಬಾಲ್ಯದಿಂದಲೂ ಕುತೂಹಲ, ಆಕರ್ಷಣೆ. ಶಾಲೆಗೆ ಹೋಗುತ್ತಿರುವಾಗಲೇ ಆತನಿಗೆ ಜೀವನದಲ್ಲಿ ಒಮ್ಮೆಯಾದರೂ ಭಾರತವನ್ನು ನೋಡಬೇಕು ಎಂಬ ಅದಮ್ಯ ಇಚ್ಛೆ ಉಂಟಾಗಿತ್ತು. ಅಂತೆಯೇ ಶಾಲಾ ಕಾಲೇಜು ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಪತ್ರಕರ್ತನಾಗಿ ಕಾರ್ಯನಿವಹಿಸುತ್ತಿದ್ದ ಪಾಲ್ ಬ್ರಂಟನ್ ಗೆ ಭಾರತಕ್ಕೆ ಭೇಟಿ ನೀಡುವ ಬಯಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಪತ್ರಕರ್ತನಾಗಿ ದುಡಿದಿದ್ದು ಸಾಕು ಎಂದುಕೊಂಡ ಪಾಲ್ ಬ್ರಂಟನ್ ಒಂದು ದಿನ ಭಾರತಕ್ಕೆ ಹೊರಟು ನಿಂತ, ಆತನಿಗೆ ಭಾರತದ ವಿಪರೀತವಾದ ಸೆಳೆತವಿತ್ತು. ಅದು ಆಧ್ಯಾತ್ಮಿಕ ಸೆಳೆತ ಎನ್ನಿ, ಸಿದ್ಧಪುರುಷರನ್ನು ತಿಳಿಯುವ ಸೆಳೆತ. ವಾರಾಣಸಿಯ ಮಂದಿರ, ಸರಯೂ ತೀರದಲ್ಲಿ ಹೋದಲ್ಲೆಲ್ಲಾ ಆ ಆಧ್ಯಾತ್ಮವನ್ನು ತಿಳಿಯಲು ಬ್ರಂಟನ್ ಗೆ ಎಲ್ಲಿ ಹೋದರೂ, ಯಾವುದೇ ಸಿದ್ಧ ಪುರುಷರನ್ನು ಕಂಡರೂ ಸಹ ತನ್ನ ಆಧ್ಯಾತ್ಮದ ಹಸಿವು ಹೋಗಲಿಲ್ಲ. ಜಿಜ್ಞಾಸೆಗೆ ಉತ್ತರ ಸಿಗಲಿಲ್ಲ, ಹಾಗಾಗಿಯೇ ಆತ ತಾನು ಭೇಟಿ ಮಾಡಿದ ಪವಾಡ ಪುರುಷರನ್ನು ವಿಮರ್ಶಿಸಲು ಪ್ರಾರಂಭಿಸುತ್ತಾನೆ.