ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ವಿದ್ಯಾರಣ್ಯರ ದೇವಾಲಯ ಪುನರ್ನಿರ್ಮಾಣ; ಫೆ.07 ರಂದು ಪ್ರತಿಷ್ಠಾಪನೆ, ಕುಂಭಾಭಿಷೇಕ

ಫೆ.07 ರಂದು ವಿದ್ಯಾರಣ್ಯಪುರದಲ್ಲಿ ವಿದ್ಯಾರಣ್ಯರ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕವನ್ನು ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ಹಾಗೂ ವಿಧುಶೇಖರ ಭಾರತೀ ಸ್ವಾಮಿಗಳು ನೆರವೇರಿಸಲಿದ್ದಾರೆ.
ಪುನರ್ನಿರ್ಮಾಣಗೊಂಡಿರುವ ದೇವಾಲಯ
ಪುನರ್ನಿರ್ಮಾಣಗೊಂಡಿರುವ ದೇವಾಲಯ
ಜಗದ್ಗುರು ಶಂಕರಭಗವತ್ಪಾದಾಚಾರ್ಯರು ಸನಾತನಧರ್ಮದ ಸಂರಕ್ಷಣೆಗಾಗಿ ಸ್ಥಾಪಿಸಿದ ಚತುರಾಮ್ನಾಯ ಪೀಠಗಳಲ್ಲಿ ಪ್ರಥಮವೂ, ಪ್ರಧಾನವೂ ಆದದ್ದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠ. ಅವಿಚ್ಛಿನ್ನವಾದ ಗುರುಪರಂಪರೆಯಿಂದ ರಾರಾಜಿಸುತ್ತಿರುವ ಈ ಶಾರದಾಪೀಠದ ಭವ್ಯಪರಂಪರೆಯಲ್ಲಿ ಹನ್ನೆರಡನೆಯ ಅಧಿಪತಿಗಳಾಗಿ ಮಕುಟಪ್ರಾಯರಾಗಿ ಶೋಭಿಸಿದ ಯತಿವರೇಣ್ಯರು ಪರಮಪೂಜ್ಯ ಜಗದ್ಗುರು ಶ್ರೀವಿದ್ಯಾರಣ್ಯ ಮಹಾಸ್ವಾಮಿಗಳವರು. ಮಹಾಮಹಿಮಸಂಪನ್ನರಾದ ಆ ಮಹನೀಯರು ತಮ್ಮ ತಪಶ್ಶಕ್ತಿ, ಸರ್ವತೋಮುಖ ಪ್ರತಿಭೆ, ಅದ್ವಿತೀಯವಾದ ಪಾಂಡಿತ್ಯ, ಅಸಾಧಾರಣವಾದ ಪ್ರಜ್ಞೆಗಳ ಮೂಲಕ ಸನಾತನ ಧರ್ಮವನ್ನು ಪುನರುದ್ಧರಿಸಿ ಸರ್ವಜನವಂದ್ಯರಾಗಿ ಪ್ರಾತಃಸ್ಮರಣೀಯರಾಗಿದ್ದಾರೆ. 
ಪೂರ್ವಾಶ್ರಮದಲ್ಲಿ ಮಾಧವ ಎಂದು ಪ್ರಸಿದ್ಧರಾಗಿದ್ದ ಶ್ರೀವಿದ್ಯಾರಣ್ಯರು ಆಂಧ್ರಪ್ರಾಂತ್ಯದ ಏಕಶಿಲಾನಗರ(ಇಂದಿನ ವರಂಗಲ್)ದವರು. ಬಾಲ್ಯದಿಂದಲೇ ಅತ್ಯಂತ ವಿರಕ್ತರಾಗಿದ್ದ ಇವರು ಸಂಸಾರದಿಂದ ವಿಮುಕ್ತಿಯನ್ನು ಹೊಂದಬೇಕೆಂಬ ಅಪೇಕ್ಷೆಯಿಂದ ಸದ್ಗುರುಗಳನ್ನು ಅರಸುತ್ತಾ ಶೃಂಗೇರಿಗೆ ಬಂದರು. ಆಗ ಶೃಂಗೇರಿ ಶಾರದಾ ಪಿಠವನ್ನು ಅಲಂಕರಿಸಿದ್ದ ಮಹಾಯೋಗಿಗಳಾದ ಜಗದ್ಗುರು ಶ್ರೀವಿದ್ಯಾತೀರ್ಥ ಮಹಾಸ್ವಾಮಿಗಳನ್ನು ದರ್ಶಿಸಿದರು. ಗುರುಗಳು ಇವರ ತೀವ್ರವಾದ ವೈರಾಗ್ಯವನ್ನು ಕಂಡು 1331 ರಲ್ಲಿ ಇವರಿಗೆ ಸಂನ್ಯಾಸಾಶ್ರಮವನ್ನು ನೀಡಿ ‘ವಿದ್ಯಾರಣ್ಯ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು. ಇವರ ಪೂರ್ವಾಶ್ರಮದ ಅನುಜರು ಕೆಲ ವರ್ಷಗಳ ಮೊದಲೇ ಶೃಂಗೇರಿಗೆ ಆಗಮಿಸಿ ಶ್ರೀಗುರುಗಳ ಸನ್ನಿಧಿಯಲ್ಲಿದ್ದು 1328ರಲ್ಲಿ ಸಂನ್ಯಾಸವನ್ನು ಸ್ವೀಕರಿಸಿದ್ದರು. ಗುರುಗಳು ಅವರಿಗೆ ‘ಭಾರತೀತೀರ್ಥ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು. ಶ್ರೀಭಾರತೀತೀರ್ಥರು ವಯಸ್ಸಿನಲ್ಲಿ ಕಿರಿಯರಾದರೂ ಸಂನ್ಯಾಸದೀಕ್ಷೆಯಲ್ಲಿ ಶ್ರೀವಿದ್ಯಾರಣ್ಯರಿಗಿಂತ ಹಿರಿಯರಾಗಿದ್ದರು. 
ವಿದ್ಯಾರಣ್ಯರು ವೇದಶಾಸ್ತ್ರಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದರು. ಅವರ ಹೆಸರೇ ಸೂಚಿಸುವಂತೆ ವಿದ್ಯೆಯ ಅರಣ್ಯವೇ ಆಗಿದ್ದ ಆ ಮಹನೀಯರು ಅನೇಕ ಗ್ರಂಥಗಳನ್ನು ರಚಿಸಿದ್ದರು. ಸಂನ್ಯಾಸಸ್ವೀಕರಿಸುವುದಕ್ಕಿಂತ ಮೊದಲು ಶಂಕರದಿಗ್ವಿಜಯ, ಜೈಮಿನೀಯ ನ್ಯಾಯಮಾಲಾ, ಪರಾಶರ ಮಾಧವೀಯ ಮೊದಲಾದ ಗ್ರಂಥಗಳನ್ನೂ, ಸಂನ್ಯಾಸಸ್ವೀಕಾರದ ನಂತರ ಜೀವನ್ಮುಕ್ತಿವಿವೇಕ, ಪಂಚದಶೀ, ವಿವರಣ ಪ್ರಮೇಯಸಂಗ್ರಹ, ದೃಗ್‌ದೃಶ್ಯವಿವೇಕ, ಬೃಹದಾರಣ್ಯಕ ವಾರ್ತಿಕಸಾರ, ಅನುಭೂತಿ ಪ್ರಕಾಶ ಇತ್ಯಾದಿ ಅನೇಕ ಗ್ರಂಥಗಳನ್ನೂ ರಚಿಸಿದರು. ಈ ಗ್ರಂಥಗಳ ರಚನೆಯಲ್ಲಿ ಅವರು ತೋರ್ಪಡಿಸಿದ ವೈದುಷ್ಯವನ್ನು ಕಂಡ ಪ್ರತಿಯೊಬ್ಬರೂ ಅವರಿಗೆ ತಲೆಬಾಗಲೇಬೇಕು. ಎಂತಹ ಗಹನವಾದ ವಿಷಯವನ್ನಾದರೂ ಸರಳವಾಗಿ ಪ್ರತಿಪಾದಿಸುವ ಅವರ ಸಾಮರ್ಥ್ಯ ಅನಿತರ ಸಾಧಾರಣವಾದದ್ದು. 
ವಿದ್ಯಾರಣ್ಯರು ತಮ್ಮ ಗುರುಗಳ ಅನುಜ್ಞೆಯನ್ನು ಪಡೆದು ತೀರ್ಥಯಾತ್ರೆಗೆ ತೆರಳಿ, ಕಾಶೀ ಕ್ಷೇತ್ರದಲ್ಲಿ ಸ್ವಲ್ಪಕಾಲವಿದ್ದರು. ಅಲ್ಲಿ ಶ್ರೀವೇದವ್ಯಾಸರ ದರ್ಶನವನ್ನು ಪಡೆದಿದ್ದರು. ಕಾಶಿಯಲ್ಲಿ ಶ್ರೀವಿದ್ಯಾರಣ್ಯರು ಶಿವಲಿಂಗವನ್ನು ಪ್ರತಿಷ್ಠಿಸಿದರು. ಕಾಶಿಯ ಕೇದಾರಘಾಟಿನಲ್ಲಿರುವ ಶೃಂಗೇರಿ ಮಠದಲ್ಲಿ ಆ ಶಿವಲಿಂಗವನ್ನು ಇಂದಿಗೂ ಕಾಣಬಹುದು. ನಂತರ ದಕ್ಷಿಣಕ್ಕೆ ಹಿಂತಿರುಗಿ ಬಂದು ಪಂಪಾಸರೋವರತೀರದಲ್ಲಿರುವ ಶ್ರೀವಿರೂಪಾಕ್ಷಸ್ವಾಮಿಯ ದಿವ್ಯಸಾನ್ನಿಧ್ಯದಿಂದ ಕೂಡಿದ ಮತಂಗ ಪರ್ವತದಲ್ಲಿ ತಪೋನಿರತರಾಗಿದ್ದರು. 
ವಿಜಯ ನಗರ ಸಾಮ್ರಾಜ್ಯ ಸ್ಥಾಪನೆ - ಕ್ರಿ.ಶ. 13 ನೇ ಶತಮಾನದಲ್ಲಿ ಸನಾತನ ಧರ್ಮಕ್ಕೆ ಬಹಳ ವಿಷಮವಾದ ಪರಿಸ್ಥಿತಿಯು ಒದಗಿತ್ತು. ವಿಧರ್ಮೀಯರು ಉತ್ತರ ಭಾರತವನ್ನು ಆಕ್ರಮಿಸಿ, ದೇವಾಲಯಗಳನ್ನು ಧ್ವಂಸಮಾಡಿ, ಅಪಾರ ಸಂಪತ್ತನ್ನು ಕೊಳ್ಳೆಹೊಡೆದು, ಸನಾತನ ಧರ್ಮಾವಲಂಬಿಗಳನ್ನು ತಮ್ಮ ಮತಕ್ಕೆ ಮತಾಂತರಗೊಳಿಸುತ್ತಿದ್ದರು. ಈ ದಂಗೆಯು ದಕ್ಷಿಣಭಾರತದ ಕಡೆಗೂ ಹೊರಟಿತು. ದೇಶದೆಲ್ಲೆಡೆ ಅರಾಜಕತೆಯಿಂದ ಹಿಂಸೆ-ಕ್ರೌರ್ಯಗಳು ತಾಂಡವವಾಡುತ್ತಿದ್ದವು. ಹಿಂದೂರಾಜರು ಸಹ ತಮ್ಮ ತಮ್ಮಲ್ಲಿಯೇ ಯುದ್ಧವನ್ನು ಮಾಡುತ್ತಿದ್ದರು. ಇಂತಹ ಒಂದು ಯುದ್ಧದಲ್ಲಿ ಸಂಗಮವಂಶದ ಹರಿಹರ ಮತ್ತು ಬುಕ್ಕ ಎಂಬ ಸಹೋದರರು ಸೋಲಿಸಲ್ಪಟ್ಟರು. ಆಗ ಇಡೀ ದಕ್ಷಿಣಭಾರತದಲ್ಲಿ ಬೇರೆ ಯಾವ ಬಲಿಷ್ಠರಾಜನೂ ಇರಲಿಲ್ಲ. ಈ ದಂಗೆಗಳಲ್ಲಿ ಪರಾಭವಗೊಂಡಿದ್ದ ಹರಿಹರ ಬುಕ್ಕ ಸಹೋದರರು ಕನಸೊಂದರಿಂದ ಪ್ರೇರಿತರಾಗಿ ವಿರೂಪಾಕ್ಷ ದೇವಸ್ಥಾನದ ಸಮೀಪದಲ್ಲಿ ತಪೋನಿರತರಾಗಿದ್ದ ಶ್ರೀವಿದ್ಯಾರಣ್ಯರ ಸನ್ನಿಧಿಗೆ ಬಂದು ಅವರ ಅನುಗ್ರಹವನ್ನು ಪ್ರಾರ್ಥಿಸಿದರು. 
ವಿದ್ಯಾರಣ್ಯರು ಅವರನ್ನು ಆಶೀರ್ವದಿಸಿ ವಿಜಯಪ್ರಾಪ್ತಿಯಾಗುವಂತೆ ಅನುಗ್ರಹಿಸಿದರು. ಅನಂತರ ನಡೆದ ಯುದ್ಧದಲ್ಲಿ ಹರಿಹರ-ಬುಕ್ಕರು ಜಯಶಾಲಿಗಳಾದರು. ಶ್ರೀವಿದ್ಯಾರಣ್ಯರು ಶ್ರೀಭುವನೇಶ್ವರೀ ಅಮ್ಮನವರನ್ನು ಕುರಿತು ತೀವ್ರವಾದ ತಪಸ್ಸನ್ನು ಮಾಡಿದಾಗ ದೇವಿಯು ಪ್ರಸನ್ನಳಾಗಿ ಸುವರ್ಣವೃಷ್ಟಿಯನ್ನು ಸುರಿಸಿದಳು. ಶ್ರೀವಿದ್ಯಾರಣ್ಯರು ಹರಿಹರ-ಬುಕ್ಕ ಸಹೋದರರಿಗೆ ಆ ಸಂಪತ್ತನ್ನು ಅನುಗ್ರಹಿಸಿ, ಸನಾತನ ಧರ್ಮಸಂರಕ್ಷಣೆಗಾಗಿ ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವಂತೆ ಆಜ್ಞಾಪಿಸಿ, ನೂತನ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದರು. ಹರಿಹರ-ಬುಕ್ಕರು ಗುರುಗಳ ಅನುಜ್ಞೆಯಂತೆ ತುಂಗಭದ್ರಾತೀರದ ಹಂಪೆ ಶ್ರೀವಿರೂಪಾಕ್ಷ ಸ್ವಾಮಿಯ ಸನ್ನಿಧಿಯಲ್ಲಿ ಒಂದು ನಗರವನ್ನು ನಿರ್ಮಿಸಿ ಅದಕ್ಕೆ ವಿದ್ಯಾನಗರವೆಂದು ತಮ್ಮ ಗುರುಗಳ ಹೆಸರನ್ನಿಟ್ಟರು. ಈ ನಗರವು 1336ರಲ್ಲಿ ಸ್ಥಾಪಿಸಲ್ಪಟ್ಟಿತು. ಶ್ರೀವಿದ್ಯಾರಣ್ಯರು ಈ ನೂತನ ಸಾಮ್ರಾಜ್ಯದ ಸಿಂಹಾಸನದಲ್ಲಿ ಹರಿಹರನ ಪಟ್ಟಾಭಿಷೇಕವನ್ನು ನೆರವೇರಿಸಿದರು. ನಂತರ ಆ ಸಹೋದರರು ದಕ್ಷಿಣಭಾಗದ ಎಲ್ಲಾ ಪ್ರಾಂತ್ಯಗಳನ್ನು ಜಯಿಸಿದರು. ಎಲ್ಲೆಡೆ ಅವರ ಜಯಭೇರಿಯು ಮೊಳಗಿತು. ಶ್ರೀವಿರೂಪಾಕ್ಷನ ನೆಲೆಯಾದ ಹಂಪೆಯು ಕೆಲವೇ ವರ್ಷಗಳಲ್ಲಿ ಮಹತ್ತರವಾದ ನಗರವಾಗಿ ಬೆಳೆದು ವಿಜಯನಗರವೆಂದು ಪ್ರಖ್ಯಾತವಾಯಿತು. ಶ್ರೀವಿದ್ಯಾರಣ್ಯರ ಆದೇಶದಂತೆ ವೇದ, ಶಾಸ್ತ್ರವಿದ್ವಾಂಸರು ವಿಶೇಷವಾಗಿ ಪೋಷಿಸಲ್ಪಟ್ಟರು. ಅನೇಕ ದೇವಾಲಯಗಳು ಪುನರ್ನಿರ್ಮಾಣಗೊಂಡವು. ಆ ಕಾಲವು ಸಾರಸ್ವತ ಪ್ರಪಂಚದಲ್ಲಿ ಹೊಸಯುಗವಾಗಿ ಪರಿಣಮಿಸಿತು. ಅನೇಕ ಕಾವ್ಯಗಳೂ, ನಾಟಕಗಳೂ, ಶಾಸ್ತ್ರ ಗ್ರಂಥಗಳೂ ರಚಿತವಾದವು. ಕ್ಷೀಣದಶೆಯಲ್ಲಿದ್ದ ಸನಾತನ ಧರ್ಮವು ಪುನಃ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು. ಭಾರತೀಯರ ಪಾರಂಪರಿಕವಾದ ಸಂಗೀತ, ನಾಟ್ಯ, ಶಿಲ್ಪಕಲೆಗಳೂ ಸಹ ವಿಶೇಷವಾಗಿ ಪೋಷಿತವಾದವು. ವಿಜಯನಗರ ಸಾಮ್ರಾಜ್ಯದ ಕಾಲವು ಸುವರ್ಣಯುಗವೆಂದು ಕರೆಯಲ್ಪಡುತ್ತಾ ಎಲ್ಲರ ಮನ್ನಣೆಯನ್ನು ಗಳಿಸಿತು. 
ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾದ ಹರಿಹರರಾಯನು ತನ್ನ ಈ ಉಚ್ಛ್ರಾಯಕ್ಕೆ ಗುರುಗಳ ಅನುಗ್ರಹವೇ ಕಾರಣವೆಂಬುದನ್ನು ಮನಗಂಡು ಶ್ರೀವಿದ್ಯಾರಣ್ಯ ಮಹಾಸ್ವಾಮಿಗಳನ್ನು ಬಹಳ ಶ್ರದ್ಧಾಭಕ್ತಿಗಳೊಂದಿಗೆ ಅರ್ಚಿಸಿ ಸುವರ್ಣ ಸಿಂಹಾಸನ, ಕಿರೀಟ, ರತ್ನಖಚಿತ ಪಾದುಕೆ, ಪಲ್ಲಕ್ಕಿ, ಛತ್ರ, ಚಾಮರ, ನಗಾರಿ, ದೀವಟಿಗೆ, ಮಕರ ತೋರಣ ಮೊದಲಾದ ರಾಜಲಾಂಛನಗಳನ್ನು ಬಿರುದಾವಳಿಗಳೊಡನೆ ಗುರುಗಳ ಚರಣಗಳಿಗೆ ಅರ್ಪಿಸಿದನು. ತಾವು ಸರ್ವಸಂಗಪರಿತ್ಯಾಗಿಗಳಾಗಿದ್ದರೂ ತಮ್ಮ ಪ್ರಿಯಶಿಷ್ಯರ ಭಕ್ತಿಪೂರ್ವಕವಾದ ಒತ್ತಾಯದಂತೆ ಶ್ರೀವಿದ್ಯಾರಣ್ಯರು ಆ ರಾಜಲಾಂಛನಗಳನ್ನು ಸ್ವೀಕರಿಸಿ ಆ ಚಕ್ರವರ್ತಿಯನ್ನು ಅನುಗ್ರಹಿಸಿದರು. ಅಂದಿನಿಂದ ಶೃಂಗೇರಿಯ ಜಗದ್ಗುರುಗಳು ವಿದ್ಯಾನಗರ ಮಹಾರಾಜಧಾನೀ ಕರ್ಣಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀಮದ್ರಾಜಾಧಿರಾಜಗುರು ಭೂಮಂಡಲಾಚಾರ್ಯ ಮೊದಲಾದ ಬಿರುದುಗಳಿಂದ ಶೋಭಿಸುತ್ತಿದ್ದಾರೆ.
ತಮ್ಮ ಗುರುಗಳಾದ ಶ್ರೀವಿದ್ಯಾತೀರ್ಥರ ಆಜ್ಞೆಯಂತೆ ಶ್ರೀಭಾರತೀತೀರ್ಥರು ಪೀಠಾಧಿಪತ್ಯವನ್ನು ಸ್ವೀಕರಿಸಿ 1333ರಿಂದ 1380 ರ ವರೆಗೆ ಅಧಿಪತಿಗಳಾಗಿದ್ದರು. ತಮ್ಮ ಗುರುಗಳ ಸಮಾಧಿಯ ಮೇಲೆ ಶಿಲ್ಪಕಲಾ ಚಾತುರ್ಯದಿಂದ ಕೂಡಿದ ಭವ್ಯವಾದ ಶಿಲಾಮಯವಾದ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವೇ ಶೃಂಗೇರಿಗೆ ಮಕುಟಪ್ರಾಯವಾದ ಶ್ರೀವಿದ್ಯಾಶಂಕರ ದೇವಾಲಯ. ಶ್ರೀಭಾರತೀತೀರ್ಥರ ಕಾಲದಲ್ಲಿ ಹರಿಹರ ಮತ್ತು ಬುಕ್ಕರಾಯರು ಶೃಂಗೇರಿಗೆ ಬಂದು ಶ್ರೀಶಾರದಾ ಚಂದ್ರಮೌಳೀಶ್ವರರ ಹಾಗೂ ಶ್ರೀವಿದ್ಯಾಶಂಕರರ ಸನ್ನಿಧಿಯಲ್ಲಿ ನಿತ್ಯಪೂಜೆಗಳಿಗಾಗಿ ಅನೇಕ ಎಕರೆ ಭೂಮಿಯನ್ನು ದಾನವಾಗಿ ಸಮರ್ಪಿಸಿದರು. ಶ್ರೀಭಾರತೀತೀರ್ಥರು ಮುಕ್ತರಾದ ನಂತರ ಶ್ರೀವಿದ್ಯಾರಣ್ಯರು 1380 ರಿಂದ 1386 ರ ವರೆಗೆ ಶೃಂಗೇರಿ ಶಾರದಾಪೀಠವನ್ನಲಂಕರಿಸಿದರು.  ಶೃಂಗೇರಿಯಲ್ಲಿ ಜಗದ್ಗುರು ಶ್ರೀಶಂಕರಾಚಾರ್ಯರಿಂದ ಶ್ರೀಚಕ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀಶಾರದಾಮ್ಮನವರ ಶ್ರೀಗಂಧದಮೂರ್ತಿಯ ಸ್ಥಾನದಲ್ಲಿ ಶ್ರೀವಿದ್ಯಾರಣ್ಯರು ಸುವರ್ಣಾಂಶವು ಅಧಿಕವಾಗಿರುವ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು. 
ಶ್ರೀವಿದ್ಯಾರಣ್ಯರು ತಮ್ಮ ಗುರುಗಳಾದ ಶ್ರೀವಿದ್ಯಾತೀರ್ಥರ ಬಗ್ಗೆ ಅಪಾರವಾದ ಭಕ್ತಿ-ಶ್ರದ್ಧೆಗಳನ್ನು ಹೊಂದಿದ್ದರು. ತಮ್ಮ ಗುರುಗಳನ್ನು ಪರಮೇಶ್ವರನ ಸ್ವರೂಪರೆಂದು ದೃಢವಾಗಿ ಭಾವಿಸಿದ್ದ ಅವರು ತಮ್ಮ ಎಲ್ಲಾ ಗ್ರಂಥಗಳಲ್ಲೂ ಅವರನ್ನು ಸ್ಮರಿಸಿ ನಮಿಸಿದ್ದರು.ಶ್ರೀವಿದ್ಯಾರಣ್ಯರು ಶ್ರೀಶಾರದಾಪೀಠದ ವ್ಯವಹಾರಗಳು ತಮ್ಮ ಗುರುಗಳ ಹೆಸರಿನಲ್ಲಿಯೇ ನಡೆಯತಕ್ಕದ್ದೆಂದು ನಿರ್ಧರಿಸಿ ಅದರಂತೆ ವ್ಯವಸ್ಥೆ ಮಾಡಿದರು. ಇಂದಿಗೂ ಶೃಂಗೇರಿ ಪೀಠದಿಂದ ನೀಡುವ ಶ್ರೀಮುಖಗಳೆಲ್ಲ ಶ್ರೀವಿದ್ಯಾತೀರ್ಥರನ್ನು ನೆನಪಿಸುವ ‘ಶ್ರೀವಿದ್ಯಾಶಂಕರ ಎಂಬ ಮುದ್ರೆಯನ್ನೇ ಒಳಗೊಂಡಿರುತ್ತವೆ. ಸ್ವಲ್ಪ ಕಾಲದ ನಂತರ ಶ್ರೀವಿದ್ಯಾರಣ್ಯರು ತಮ್ಮ ಶಿಷ್ಯರಾದ ಚಂದ್ರಶೇಖರ ಭಾರತೀಸ್ವಾಮಿಗಳವರಿಗೆ ಪೀಠಾಧಿಪತ್ಯವನ್ನು ವಹಿಸಿ ಚಕ್ರವರ್ತಿಯ ಪ್ರಾರ್ಥನೆಯ ಮೇರೆಗೆ ಮತ್ತೆ ಹಂಪೆಗೆ ಚಿತ್ತೈಸಿದರು. 1386ರಲ್ಲಿ ಅಲ್ಲೇ ವಿದೇಹಕೈವಲ್ಯವನ್ನು ಹೊಂದಿದರು. ಶ್ರೀವಿದ್ಯಾರಣ್ಯರ ಸಮಾಧಿಯು ಶ್ರೀವಿರೂಪಾಕ್ಷದೇವಾಲಯದ ಹಿಂಭಾಗದಲ್ಲಿದೆ. ಇಂದಿಗೂ ನಾವು ಈ ಪವಿತ್ರಸ್ಥಾನವನ್ನು ದರ್ಶಿಸಬಹುದಾಗಿದೆ. 
ಶೃಂಗೇರಿಯಲ್ಲಿ ಐತಿಹಾಸಿಕ ವಿದ್ಯಾರಣ್ಯರ ದೇಗುಲ, ಪುನರ್ನಿರ್ಮಾಣ
ಶ್ರೀವಿದ್ಯಾರಣ್ಯರು ಮುಕ್ತರಾದ ನಂತರ ಇಮ್ಮಡಿ ಹರಿಹರನು(1377-1404) ಶೃಂಗೇರಿಗೆ ಬಂದು ಗುರುಗಳ ಸ್ಮಾರಕವಾಗಿ ವಿದ್ಯಾರಣ್ಯಪುರವೆಂಬ ಒಂದು ಅಗ್ರಹಾರವನ್ನು ಸ್ಥಾಪಿಸಿದನು. ಶ್ರೀವಿದ್ಯಾರಣ್ಯರ ಸ್ಮರಣಾರ್ಥವಾಗಿ ಒಂದು ದೇವಾಲಯವನ್ನು ಕಟ್ಟಿಸಿದನು. ಭಾರತೀಯ ಚರಿತ್ರೆಯಲ್ಲಿ ಬೃಹತ್ಸಾಮ್ರಾಜ್ಯಗಳಲ್ಲೊಂದಾದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಮತ್ತು ಬಲಪಡಿಸಲು ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನಗಳೇ ಸಹಾಯವಾಗಿದ್ದವಷ್ಟೆ. ಹಾಗಾಗಿ ಗುರು ಋಣದ ಬಾಧ್ಯತೆಯನ್ನು ತಿಳಿದಿದ್ದ ವಿಜಯನಗರದ ಆದ್ಯ ಚಕ್ರವರ್ತಿಗಳು ತಮ್ಮ ಪೂಜ್ಯಭಾವನೆ ಮತ್ತು ಕೃತಜ್ಞತೆಗಳನ್ನು ಈ ಸಂಸ್ಥಾನಕ್ಕೆ ಅನೇಕ ದಾನಗಳನ್ನು ನೀಡುವುದರ ಮೂಲಕ ವ್ಯಕ್ತಪಡಿಸಿದ್ದರು. ಶ್ರೀವಿದ್ಯಾರಣ್ಯರ ಸಂನ್ಯಾಸ ದೀಕ್ಷೆಯ ಕಾಲದಲ್ಲಿ ದೇವಾಲಯ ಹಾಗೂ ಛಾತ್ರಾದಿನಿಲಯವಾಗಿದ್ದ ಶ್ರೀಮಠವು ಈ ದತ್ತಿಗಳಿಂದ ಸಂಪೂರ್ಣಾಧಿಕಾರಯುಕ್ತವಾದ ಜಗದ್ಗುರು ಮಹಾಸಂಸ್ಥಾನವಾಗಿ ಮಾರ್ಪಟ್ಟಿತು.

ವಿದ್ಯಾರಣ್ಯರ ಸ್ಮರಣಾರ್ಥವಾಗಿ ಕಟ್ಟಿಸಿದ್ದ ಐತಿಹಾಸಿಕ ದೇವಾಲಯವನ್ನು ಶ್ರೀಮಠದಿಂದ ಈಗ ಪುನರ್ನಿಮಾಣ ಮಾಡಲಾಗಿದ್ದು, ಫೆ.07 ರಂದು ವಿದ್ಯಾರಣ್ಯಪುರದಲ್ಲಿ ಪುನರ್ನಿರ್ಮಾಣಗೊಂಡಿರುವ ಆದಿಶಂಕರಾಚಾರ್ಯ ಹಾಗೂ ವಿದ್ಯಾರಣ್ಯರ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕವನ್ನು ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ಹಾಗೂ ವಿಧುಶೇಖರ ಭಾರತೀ ಸ್ವಾಮಿಗಳು ನೆರವೇರಿಸಲಿದ್ದಾರೆ.  ಶ್ರೀಶಂಕರಾಚಾರ್ಯರ ನಂತರ ಅಷ್ಟೇ ಮಹಾಮಹಿಮರಾಗಿ ಸನಾತನಧರ್ಮವನ್ನು ಸಂರಕ್ಷಿಸಿದ ಮಹಾಪುರುಷರು ಶ್ರೀವಿದ್ಯಾರಣ್ಯರು. ಅವರು ಅವತರಿಸಿ ಆರು ಶತಮಾನಗಳೇ ಕಳೆದರೂ ಇಂದಿಗೂ ಅವರ ಪ್ರಭಾವವು ಅಚ್ಚಳಿಯದೇ ಇದೆ. ಸನಾತನಧರ್ಮದ ಪುನರುತ್ಥಾನಕ್ಕೆ ಅವರು ನೀಡಿದ ಕೊಡುಗೆ ಅಪಾರ. 
-ತಂಗಿರಾಲ ಶಿವಕುಮಾರ ಶರ್ಮ
ಶೃಂಗೇರಿ ಶಾರದಾಪೀಠದ ವಿದ್ವಾಂಸರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com