ಸದಾಶಿವ ಬ್ರಹ್ಮೇಂದ್ರ: ಅಪರೂಪದ ವಾಗ್ಗೇಯಕಾರ ಸಂತನ ಬಗ್ಗೆ ಇಲ್ಲಿದೆ ಮಾಹಿತಿ

ಸದಾಶಿವ ಶಿವ ಬ್ರಹ್ಮೇಂದ್ರರ ವ್ಯಕ್ತಿತ್ವ ಹುಟ್ಟಿನಿಂದಲೇ ಸಾತ್ವಿಕವಾದ ವ್ಯಕ್ತಿತ್ವವಾದರೂ, ಜೀವನ್ಮುಕ್ತರಂತೇನೂ ಇರಲಿಲ್ಲ. ಅಥವಾ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಕೀರ್ತನೆಗಳನ್ನು ರಚಿಸುವ ವಾಗ್ಗೇಯಕಾರನ...
ಶೃಂಗೇರಿ ಗುರುಗಳು ಸದಾಶಿವ ಬ್ರಹ್ಮೇಂದ್ರರ ಅಧಿಷ್ಠಾನಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರ
ಶೃಂಗೇರಿ ಗುರುಗಳು ಸದಾಶಿವ ಬ್ರಹ್ಮೇಂದ್ರರ ಅಧಿಷ್ಠಾನಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರ
Updated on

17-18 ನೇ ಶತಮಾನ. ಆಂಧ್ರದಿಂದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳು ಮಧುರೈ ಪ್ರಾಂತ್ಯಕ್ಕೆ ಬಂದು ನೆಲೆಸಿದ್ದರು. "ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾsಸಃ" ಎಂಬ ಪಾಣಿಗ್ರಹಣದ ಮಂತ್ರವನ್ನು ಜೀವಿಸಿದ್ದ ದಂಪತಿಗಳು. ಸೋಮಸುಂದರ ಅವಧಾನಿಗಳಂತೂ ಸದಾ ಯೋಗ ಸಾಧನೆಯಲ್ಲೇ ನಿರತರಾಗಿದ್ದ ಋಷಿತುಲ್ಯ ಗೃಹಸ್ಥರು. ಪುತ್ರ ಸಂತಾನಕ್ಕಾಗಿ ರಾಮನಾಥೇಶ್ವರನಲ್ಲಿ ಪ್ರಾರ್ಥಿಸಿದ್ದ ಆ ಋಷಿತುಲ್ಯ ಗೃಹಸ್ಥರಲ್ಲಿ ಶಿವರಾಮಕೃಷ್ಣನೆಂಬ ಹೆಸರಿನಲ್ಲಿ ಮಹಾನ್ ಬ್ರಹ್ಮಜ್ಞಾನಿಯೇ ಅವತರಿಸಿದ್ದ. ತರ್ಕಶಾಸ್ತ್ರ ನಿಷ್ಣಾತನಾಗಿ, ವಾಗ್ಗೇಯಕಾರನಾಗಿ ವಿಜೃಂಭಿಸಿದ ಅವರು ಕೊನೆಗೆ ಸಕಲವನ್ನೂ ತೊರೆದು "ಪಿಬರೇ ರಾಮ ರಸಂ... ನಂತಹ ಶುದ್ಧ ಆಧ್ಯಾತ್ಮ ಕೀರ್ತನೆಗಳನ್ನು ರಚಿಸಿ, ಸಂತನಾಗಿ, ದೇವತೆಗಳಿಗೆ ದೇವರಾಜ ಇಂದ್ರನಿದ್ದಂತೆ, ಬ್ರಹ್ಮಜ್ಞಾನಿಗಳಿಗೆ ಯತಿರಾಜ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರು.

ಸದಾಶಿವ ಶಿವ ಬ್ರಹ್ಮೇಂದ್ರರ ವ್ಯಕ್ತಿತ್ವ ಹುಟ್ಟಿನಿಂದಲೇ ಸಾತ್ವಿಕವಾದ ವ್ಯಕ್ತಿತ್ವವಾದರೂ, ಜೀವನ್ಮುಕ್ತರಂತೇನೂ ಇರಲಿಲ್ಲ. ಅಥವಾ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಕೀರ್ತನೆಗಳನ್ನು ರಚಿಸುವ ವಾಗ್ಗೇಯಕಾರನ ಚರ್ಯೆಯೂ ತೀವ್ರವಾದದ್ದೇನು ಆಗಿರಲಿಲ್ಲ. ವೇದಗಳನ್ನು ಅಭ್ಯಾಸ ಮಾಡಿದ್ದ ವಿದ್ವಾಂಸರಾದ ತಂದೆಯೇ ಶಿವರಾಮಕೃಷ್ಣನ ಮೊದಲ ಗುರುಗಳು. ತಿರುವಿಶೈನಲ್ಲೂರಿನ ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರಾಧ್ಯಯನ. ಜೊತೆ ಜೊತೆಗೇ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕವೂ ಬೆಳೆಯಿತು. 17 ವರ್ಷದವನಾಗಿದ್ದಾಗ ವಿವಾಹವೂ ಆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಶಿವರಾಮಕೃಷ್ಣರಲ್ಲಿದ್ದ ಶಾಸ್ತ್ರಗಳ ಮೇಲಿನ ಅದ್ಭುತ ಪಾಂಡಿತ್ಯ, ಆಧ್ಯಾತ್ಮ ಜ್ಞಾನವನ್ನು ಕಂಡು ಆತನ ಗುರುಗಳೂ ಅಚ್ಚರಿಗೊಂಡಿದ್ದರು. ಪರಮ ಶಿವೇಂದ್ರರೆಂಬ ಪಂಡಿತರೂ, ಯತಿಗಳಿಂದ ಶಿಷ್ಯತ್ವ ಪಡೆದ ನಂತರದ ದಿನಗಳಲ್ಲಿ ಶಿವರಾಮಕೃಷ್ಣರ ಪಾಂಡಿತ್ಯ ಶಕ್ತಿ, ತರ್ಕ ಶಕ್ತಿ ಮತ್ತಷ್ಟು ತೀಕ್ಷ್ಣವಾಯಿತು. ವಾದಗಳಿಗೆ ಪ್ರತಿವಾದ ಹೂಡಿ ಎದುರಾಳಿ ವಿದ್ವಾಂಸರನ್ನು, ಪಂಡಿತರನ್ನು ಮಣಿಸುತ್ತಿದ್ದ ಶಿವರಾಮಕೃಷ್ಣರ ತರ್ಕ ಸಾಮರ್ಥ್ಯಕ್ಕೆ ಬೆರಗಾಗಿದ್ದ ಮೈಸೂರು ಮಹಾರಾಜರು ಅವರನ್ನು ತಮ್ಮ ಆಸ್ಥಾನ ವಿದ್ವಾಂಸರಾಗಲು ಆಹ್ವಾನವಿತ್ತರು. ಅಲ್ಲಿಯೂ ತಮ್ಮೊಂದಿಗೆ ವಾದ ಮಾಡಲು ಬರುತ್ತಿದ್ದ ಪಂಡಿತರು, ವಿದ್ವಾಂಸರುಗಳ ವಾದವನ್ನು ಆಪೋಷನ ತೆಗೆದುಕೊಳ್ಳುವ ಕಾರ್ಯ ಮುಂದುವರೆಯಿತು.

ಅಷ್ಟೇ ಅಲ್ಲ. ಬರುಬರುತ್ತಾ ಶಿವರಾಮಕೃಷ್ಣರೆದುರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದೇ ಪ್ರತಿಷ್ಠೆಯ ವಿಷಯವಾಯಿತು. ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ ಪ್ರಶಸ್ತಿಗಳನ್ನು ಪಡೆಯಲು ಪಂಡಿತರು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಆದರೇನಂತೆ ಶಿವರಾಮಕೃಷ್ಣರ ಪಾಂಡಿತ್ಯದೆದುರು ಯಾರೂ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಸೋತವರಿಗೆಲ್ಲಾ ಶಿವರಾಮಕೃಷ್ಣರು ನಿಗದಿಪಡಿಸುತ್ತಿದ್ದ ವೇತನ (ಅಥವಾ ನಗದು)ವಷ್ಟೇ ಗಟ್ಟಿ. ಸಾಮಾನ್ಯವಾಗಿ ಅತಿ ಬುದ್ಧಿವಂತನ ವಿರುದ್ಧ ಉಳಿದವರು ತಿರುಗಿಬೀಳುವಂತೆ ಶಿವರಾಮಕೃಷ್ಣರ ಪ್ರಕರಣದಲ್ಲಿಯೂ ಆಯಿತು. " ಶಿವರಾಮಕೃಷ್ಣರಿಗೆ ಅವರ ಪಾಂಡಿತ್ಯದ ಬಗ್ಗೆ ಅಹಂಕಾರವಿದೆ, ಅವರ ಸಾಧನೆ ಮುಂದಿನ ಹಂತಕ್ಕೆ ಹೋಗಬೇಕೆಂದರೆ ಇದರಿಂದ ಹೊರತರಬೇಕು ಎಂದು ಪಾಂಡಿತ್ಯದ ಬಿಸಿಯನ್ನು ತಡೆಯಲಾಗದವರು ಪರಮ ಶಿವೇಂದ್ರರ ಬಳಿ ಉಸುರಿದರು. ಶಿವರಾಮಕೃಷ್ಣರನ್ನುದ್ದೇಶಿಸಿ "ವಾದದಲ್ಲಿ ಬೇರೆಯವರನ್ನು ಮೌನಿಯಾಗಿಸುವುದು ಹೇಗೆ ಎಂಬುದು ನಿನಗೆ ಚೆನ್ನಾಗಿಯೇ ತಿಳಿದಿದೆ, ಆದರೆ ನೀನು ಮೌನಿಯಾಗಿ ಜ್ಞಾನಕ್ಕೆ ಪ್ರಯತ್ನಿಸುವುದು, ಸಾಕ್ಷಾತ್ಕಾರ ಪಡೆಯುವುದು ಯಾವಾಗ? ಇನ್ನೂ ಎಷ್ಟು ಅಂತ ವಾದ ಮಾಡುತ್ತೀಯ"? ಎಂದಿದ್ದರಂತೆ ಪರಮಶಿವೇಂದ್ರರರು. ಆ ಘಟನೆಯೇ ವಾಚಾಳಿಯಾಗಿದ್ದ ಶಿವರಾಮಕೃಷ್ಣರನ್ನು ಅಂತರ್ಮುಖಿ, ಮೌನಿ ಸದಾಶಿವ ಬ್ರಹ್ಮೇಂದ್ರರನ್ನಾಗಿ ಮಾಡಿದ್ದು. ಬ್ರಹ್ಮಜ್ಞಾನ ಪಡೆಯುವ ಹಾದಿಯನ್ನು ತೋರಿದ್ದು. ಗುರುವಿನ ಕೃಪೆಯ ನಂತರ ಶಿವರಾಮಕೃಷ್ಣ ಮತ್ತೆಂದೂ ಮಾತನಾಡಲಿಲ್ಲ. ಹುಟ್ಟುವಾಗ ಕಾಮ ಕ್ರೋಧಗಳಿರಲಿಲ್ಲ, ಲೋಭ, ಮತ್ಸರಗ, ಮದಗಳಿರಲಿಲ್ಲ. ವೇದ-ಶಾಸ್ತ್ರಜ್ಞಾನಗಳನ್ನು ಕಲಿತದ್ದರಿಂದ  ಜೊತೆ ಬಂದದ್ದು ಒಂದೇ, ಅದು ವಾದದ ಹುಚ್ಚು... ಆದೂ ಬಿಟ್ಟ ನಂತರ ಏನು ತಾನೆ ಉಳಿದೀತು?

ಜಗತ್ತೇ ಹಾಗೆ, ಜೀವಂತವಿದ್ದ ಮೇಲೆ ಅರಿಷಡ್ವರ್ಗಗಳಿಗೋ, ಅಥವಾ ಮತ್ತಾವುದಕ್ಕೋ ಜೋತು ಬಿದ್ದಿದರಬೇಕು. ಹಾಗಿದ್ದಾಗಲೇ ಸಮಾಜ 'ಸಹಜ'ವೆನ್ನುವಂತೆ ನೋಡುತ್ತದೆ. ಎಲ್ಲ ಬಂಧಗಳಿಂದ ಕಳಚಿಕೊಂಡವನನ್ನು ಹುಚ್ಚನೆಂಬಂತೆ ನೋಡುತ್ತದೆ. ಶುಕನಿಂದ ಮೊದಲುಗೊಂಡು ಆಗಿಹೋದ ಅದೆಷ್ಟೋ ಬ್ರಹ್ಮಜ್ಞಾನಿಗಳನ್ನೂ ಸಂಸಾರ ಸಾಗರದಲ್ಲಿ ಸಿಲುಕಿದವರು ’ಅವರಿಗೆ’ ಮತಿಭ್ರಮಣೆಯಾಗಿದೆಯೆಂದೇ ಹೇಳಿದ್ದು.... ಗುರುವಿನ ಉಪದೇಶ ಪಡೆದು ಮೌನಿ, ಅಂತರ್ಮುಖಿಯಾದ ಸದಾಶಿವ ಬ್ರಹ್ಮೇಂದ್ರರನ್ನೂ ಅಂದಿದ ಸಮಾಜ ಎಂದಿನಂತೆಯೇ ಮರುಳ ಎಂದಿತು. ಅಲ್ಲವೇ?, ಎದುರು ವಾದ ಮಂಡಿಸಲು ಬಂದ ಶಾಸ್ತ್ರವೇತ್ತರನ್ನು, ವಿದ್ವಾಂಸರನ್ನು ಜಿತೋಸ್ಮಿ ಎನ್ನಿಸುತ್ತಿದ್ದ ಸಾಮರ್ಥ್ಯ, ಪಾಂಡಿತ್ಯದಿಂದ ಮನ್ನಣೆ, ಆಸ್ಥಾನ ವಿದ್ವಾಂಸನಾಗಿ ಧನ ಕನಕಗಳನ್ನು ಸಂಪಾದಿಸಿ ಸುಖವಾಗಿರಬಹುದಾಗಿದ್ದ ವ್ಯಕ್ತಿ, ಕಾಶಾಯವನ್ನೂ ಕಿತ್ತೊಗೆದು ಕೌಪೀನಧಾರಿಯಾಗಿ ಕಾಡು ಮೇಡುಗಳಲ್ಲಿ ಸಂಚರಿಸುತ್ತಿದ್ದರೆ ಮರುಳ ಎನ್ನದೇ ಮತ್ತೇನಂದಾರು?

ಸದಾಶಿವ ಬ್ರಹ್ಮೇಂದ್ರರ ಈ ಸ್ಥಿತಿಯನ್ನು ಕಂಡು ಪರಮ ಶಿವೇಂದ್ರರ ಬಳಿ ಓಡಿದ ಕೆಲವರು ಸದಾಶಿವ ಬ್ರಹ್ಮೇಂದ್ರರಿಗೆ ಮತಿಭ್ರಮಣೆಯಾಗಿದೆ, ತಲೆ ಕೆಟ್ಟಿದೆ ಎಂದಿದ್ದರಂತೆ. ಈ ಮಾತನ್ನು ಕೇಳಿದ ಪರಮಶಿವೇಂದ್ರರರು ಅಯ್ಯೊ... ಆತನಿಗೆ ಬಂದ ಮತಿಭ್ರಮಣೆ (ಬ್ರಹ್ಮಜ್ಞಾನ) ನನಗೆ ಉಂಟಾಗಲಿಲ್ಲವೇ...ಎಂದಿದ್ದರಂತೆ. ಬ್ರಹ್ಮಜ್ಞಾನ ಪಡೆದು ಅಲೆಯುತ್ತಿರುವವರಿಗೆ ಪ್ರಪಂಚದ ಅರಿವು ಇರುವುದಿಲ್ಲ. ಹೀಗೆ ಎಲ್ಲೆಂದರಲ್ಲಿ ಮೈ ಮೇಲೆ ವಸ್ತ್ರವೂ ಇಲ್ಲದೇ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರು ನವಾಬನ ಅಂತಃಪುರ ಪ್ರವೇಶಿಸುತ್ತಾರೆ. ರಾಣಿವಾಸದ ಮೂಲಕ ಹಾದುಹೋಗಿದ್ದ ಬ್ರಹ್ಮೇಂದ್ರರನ್ನು ಕಂಡ ನವಾಬ ಕೆಂಡಾಮಂಡಲನಾಗಿ ಬ್ರಹ್ಮೇಂದ್ರರ ಕೈ ಕತ್ತರಿಸುತ್ತಾನೆ. ಆದರೆ ದೇಹಧರ್ಮವನ್ನು ಮೀರಿದ್ದ ಸದಾಶಿವ ಬ್ರಹ್ಮೇಂದ್ರರು ಏನೂ ಆಗೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಸದಾಶಿವ ಬ್ರಹ್ಮೇಂದ್ರರ ಈ ನಿರ್ಲಿಪ್ತ ಸ್ಥಿತಿಯನ್ನು ಕಂಡು ನಡುಗಿದ ನವಾಬ ಬ್ರಹ್ಮೇಂದ್ರರ ಕ್ಷಮೆ ಕೇಳಿದ್ದ.

ಸದಾಶಿವಬ್ರಹ್ಮೇಂದ್ರರೇನೋ ಪತ್ನಿ-ಕುಟುಂಬದ ಆದಿಯಾಗಿ ತಮ್ಮ ಗತ ಜೀವನದಿಂದ ಕಳಚಿಕೊಂಡಿದ್ದರು ಸಂನ್ಯಾಸ ಸ್ವೀಕರಿಸಿ, ಆ ಸ್ಥಿತಿಯನ್ನೂ ದಾಟಿ, ಕಾಶಾಯವನ್ನೂ ಕಿತ್ತೊಗೆದು, ಪ್ರಪಂಚದ ಸಂಸರ್ಗವನ್ನು ಅವರು ಬಿಟ್ಟರೂ ಅವರನ್ನು ಈ ಪ್ರಪಂಚ ಬಿಡಲಿಲ್ಲ.  ಪೂರ್ವಾಶ್ರಮದಲ್ಲಿ ವಾದದಲ್ಲಿ ತಮ್ಮ ಬಳಿ ಸೋತಿದ್ದ ವಿದ್ವಾಂಸನೊಬ್ಬ ಇವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಉದ್ದೇಶದಿಂದಲೇ ಇವರಿದ್ದಲ್ಲಿಗೇ ಬರುತ್ತಾನೆ. ಬ್ರಹ್ಮೇಂದ್ರರ ಮೌನಕ್ಕೆ ಭಂಗ ಉಂಟುಮಾಡುವುದೇ ಆತನ ಉದ್ದೇಶ, ಗುರುಗಳ ಬಗ್ಗೆ ಕೇಳಿ, ಮಾತನಾಡುವಂತೆ ಮಾಡುವುದು ಆತನ ಉದ್ದೇಶ. " ನೀನು ಸಂನ್ಯಾಸಿಯೇ? ನಿಮ್ಮ ಗುರುಗಳು ಶ್ರೇಷ್ಠ ಗುರುಗಳೋ? ಅವರು ಶ್ರೇಷ್ಠರಾಗಿದ್ದರೆ ಅವರ ಶ್ರೇಷ್ಠತೆಯನ್ನು ಹೇಳು ನೋಡೋಣ ಎನ್ನುತ್ತಾನೆ. ಆತನ ಮಾತನ್ನು ಕೇಳಿದ ಮೇಲೆಯೂ ಸದಾಶಿವ ಬ್ರಹ್ಮೇಂದ್ರರು ಮೌನ ಮುರಿಯುವುದಿಲ್ಲ, ಆದರೆ ಅವರಿದ್ದ ನದಿಯ ಪಕ್ಕದಲ್ಲೇ ಓರ್ವ ಬಟ್ಟೆ ಒಗೆಯುತ್ತಿದ್ದ ಅಗಸನನ್ನು ಕರೆದು ತಲೆ ಮೇಲೆ ಕೈ ಇಡುತ್ತಾರೆ. ಬಟ್ಟೆ ಒಗೆಯುತ್ತಿದ್ದವನ ಬಾಯಲ್ಲಿ ಸಂಸ್ಕೃತ ನಿರರ್ಗಳವಾಗಿ ಮೂಡುತ್ತದೆ. ನಿಂತಲ್ಲೇ  ಸದಾಶಿವ ಬ್ರಹ್ಮೇಂದ್ರರ ಗುರುಗಳ ಶ್ರೇಷ್ಠತೆಯನ್ನು ಸ್ತುತಿಸುವ ಆಶು ಶ್ಲೋಕ ಹೇಳಲು ಪ್ರಾರಂಭಿಸುತ್ತಾನೆ. ಈಗ ಮೌನಿಯಾಗುವ ಸರದಿ ಎರಡನೇ ಬಾರಿಗೆ ಸದಾಶಿವ ಬ್ರಹ್ಮೇಂದ್ರರ ಬಳಿ ಸೋತಿದ್ದ ವಿದ್ವಾಂಸನದ್ದಾಗಿತ್ತು!.

ಮಾನಸ ಸಂಚರರೇ... ಪಿಬರೇ ರಾಮ ರಸಂ.. ಖೇಲತಿ ಮಮ ಹೃದಯೇ... ತುಂಗಾ ತರಂಗೆ...  ಗಾಯತಿ ವನಮಾಲಿ.... ಸೇರಿದಂತೆ ಸದಾಶಿವ ಬ್ರಹ್ಮೇಂದ್ರರಿಂದ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಕೀರ್ತನೆಗಳ ರಚನೆಯಾದದ್ದು ಈ ಘಟನೆಯ ನಂತರವೇ ಎನ್ನುತ್ತಾರೆ ಬ್ರಹ್ಮೇಂದ್ರರ ಕುರಿತು ತಿಳಿದಿರುವ ಅನೇಕ ವಿದ್ವಾಂಸರು. ಈ ಕೀರ್ತನೆಗಳ ರಚನೆಗಳಿಗೂ ಒಂದು ಸ್ವಾರಸ್ಯಕರವಾದ ಹಿನ್ನೆಲೆಯಿದೆ. ಸದಾಶಿವ ಬ್ರಹ್ಮೇಂದ್ರರು ಮೌನ ಸಾಧನೆ ಕೈಗೊಂಡು ಅದೆಷ್ಟೋ ವರ್ಷಗಳು ಕಳೆದಿರುತ್ತದೆ. ಗುರುಗಳೂ ಬ್ರಹ್ಮೈಕ್ಯರಾಗಿರುತ್ತಾರೆ. ಗುರುಗಳು ಮುಕ್ತರಾದರೂ ಅವರ ಉಪದೇಶದಂತೆಯೇ ಮೌನ ವ್ರತ ಮುಂದುವರೆಯುತ್ತಿರುತ್ತದೆ. ಈ ನಡುವೆ ಮತ್ತೋರ್ವ ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀಧರ ಅಯ್ಯವಾಳ್ ಸ್ವಾಮಿ ಎಂಬುವವರು ಸದಾಶಿವ ಬ್ರಹ್ಮೇಂದ್ರರನ್ನು ಭೇಟಿಯಾಗಿ " ಧ್ಯಾನದಲ್ಲಿದ್ದಾಗ ನಿಮ್ಮ ಗುರುಗಳ ಪ್ರೇರಣೆಯಾಯಿತು. ನಿನಗೆ ಮಾತನಾಡಬೇಡ ಎಂದು ಹೇಳಿದ್ದು ವಾದ ಮಾಡಬೇಡ ಎಂದೇ ಹೊರತು ಸದಾ ಮೌನಿಯಾಗಿರು ಎಂದಲ್ಲ. ನೀನು ಕೀರ್ತನೆಗಳನ್ನು ರಚಿಸಬೇಕು, ಆದರೆ ನೀನು ಮಾತನಾಡದೇ ಇರುವುದರಿಂದ ಕೀರ್ತನೆಗಳು ಮೂಡುವುದಿಲ್ಲ ಎಂದು ಪ್ರೇರಣೆ ನೀಡುತ್ತಾರೆ. ಆ ಪ್ರೇರಣೆಯ ಮೂಲಕ ಸದಾಶಿವ ಬ್ರಹ್ಮೇಂದ್ರರ ಧ್ವನಿಯಿಂದ ಮೂಡಿದ ಮೊತ್ತ ಮೊದಲ ಕೀರ್ತನೆಯೇ ಪಿಬರೇ ರಾಮ ರಸಂ... ಎಂಬ ಅದ್ಭುತ ಹಾಡು... ಕೇಳುತ್ತಿದ್ದರೆ ಯಾರೇ ಆದರೂ ಒಮ್ಮೆ ವೈರಾಗ್ಯದ ಭಾವನ್ನು ಅನುಭವಿಸಿ ಬರುತ್ತಾರೆ...

ಸದಾಶಿವ ಬ್ರಹ್ಮೇಂದ್ರರ ಮೌನದ ತಪಸ್ಸಿನ ಫಲವಾಗಿ ಕೀರ್ತನೆಗಳಷ್ಟೇ ಅಲ್ಲದೇ ಆತ್ಮ ವಿದ್ಯಾವಿಲಾಸ ಎಂಬ ಅದ್ವೈತ ಗ್ರಂಥವೂ ರಚನೆಯಾಗುತ್ತದೆ. ಅದೇ ಇಂದಿಗೂ ಅದ್ವೈತಿಗಳಿಗೆ, ಆತ್ಮಸಾಕ್ಷಾತ್ಕಾರಕ್ಕಾಗಿ ತಪಿಸುವವರಿಗೆ ದಾರಿ ದೀವಿಗೆಯಾಗಿದೆ. ಅವಧೂತ ಸ್ಥಿತಿಗೆ ತಲುಪಿದ್ದ ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳು ಸದಾಶಿವ ಬ್ರಹ್ಮೇಂದ್ರರ ಆತ್ಮ ವಿದ್ಯಾ ವಿಲಾಸವನ್ನು ಅನುಸಂಧಾನ ಮಾಡಿಕೊಂಡಿದ್ದರು. ಚಂದ್ರಶೇಖರ ಭಾರತಿ ಸ್ವಾಮಿಗಳಷ್ಟೇ ಅಲ್ಲ. ಅವರ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳವರೂ, ಉಗ್ರನೃಸಿಂಹ ಭಾರತೀ ಸ್ವಾಮಿಗಳೂ ಸಹ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸುತ್ತಿದ್ದರು. ಸಾಮಾನ್ಯವಾಗಿ ಶೃಂಗೇರಿಯ ಜಗದ್ಗುರುಗಳು ತಮ್ಮ ಪರಂಪರೆಯ ಗುರುಗಳ ಅಧಿಷ್ಠಾನಕ್ಕೆ ಭೇಟಿ ನೀಡುವುದನ್ನು ಹೊರತುಪಡಿಸಿದರೆ ಪರಂಪರೆಗೆ ಸಂಬಂಧಪಡದ ಯತಿಗಳ, ಅವಧೂತರ ಅಧಿಷ್ಠಾನಗಳಿಗೆ ಭೇಟಿ ನೀಡುವ ಪದ್ಧತಿ ಹೊಂದಿಲ್ಲ. ಆದರೆ ವಿಜಯ ಯಾತ್ರೆ ಕೈಗೊಂಡಾಗ ತಮಿಳುನಾಡಿನ ನೆರೂರಿನ ಆಸುಪಾಸಿನ ಪ್ರದೇಶಗಳಿಗೆ ಭೇಟಿ ನೀಡಿದರೆ ತಪ್ಪದೇ ನೆರೂರಿನಲ್ಲಿರುವ ಸದಾಶಿವಬ್ರಹ್ಮೇಂದ್ರರ ಸಮಾಧಿ(ಅಧಿಷ್ಠಾನ)ಕ್ಕೆ ತೆರಳಿ ಸ್ವತಃ ಪೂಜೆ ನೆರವೇರಿಸುತ್ತಾರೆ.

ಇದಕ್ಕೆ ಕಾರಣವೂ ಇದೆ, ಹಿಂದೊಮ್ಮೆ ಶೃಂಗೇರಿಯ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮಿಳುನಾಡಿನಲ್ಲಿ ವಿಜಯಯಾತ್ರೆಯ ವೇಳೆ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳಿಗೆ ಸದಾಶಿವ ಬ್ರಹ್ಮೇಂದ್ರರರ ಶಕ್ತಿ ಅರಿವಾಗುತ್ತದೆ. ಸಮಾಧಿಯ ದರ್ಶನ ಪಡೆದು ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಕೊನೆಗೆ ಸ್ವತಃ ಸದಾಶಿವ ಬ್ರಹ್ಮೇಂದ್ರರು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳೊಂದಿಗೆ ಮಾತನಾಡಿದ್ದರಂತೆ. ಅವರೊಂದಿಗೆ ಮಾತಾಡುತ್ತಿರುವ ದನಿ ಮಾತ್ರ ಕೇಳಿಸುತ್ತಿತ್ತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬ ಶ್ಲೋಕಗಳನ್ನೂ ರಚಿಸಿಸಿದ್ದಾರೆ. ಶೃಂಗೇರಿಯ ಪರಂಪರೆಯಲ್ಲಿ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ಅಭಿನವ ’ಶಂಕರ’ ಎಂದೇ ಖ್ಯಾತರಾದವರು, ಯತಿಶ್ರೇಷ್ಠರು, ಅಂತಹ ಯತಿಶ್ರೇಷ್ಠರೂ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸಿ ಮುಮುಕ್ಷತ್ವಕ್ಕಾಗಿ ಪ್ರಾರ್ಥಿಸಿ ಅವರ ಕುರಿತು ಶ್ಲೋಕಗಳನ್ನು ರಚಿಸಿದ್ದರೆಂದರೆ ಬ್ರಹ್ಮೇಂದ್ರರ ಜೀವನ್ಮುಕ್ತ ಸ್ಥಿತಿಯ ತೀವ್ರತೆ ನಮಗೆ ಅರಿವಾದೀತು. ಹಾಗಾಗಿಯೇ ಪ್ರಾರಂಭದಲ್ಲಿ ಹೇಳಿದ್ದು, ಸಂತನಾಗಿ, ದೇವತೆಗಳಿಗೆ ದೇವರಾಜ ಇಂದ್ರನಿದ್ದಂತೆ, ಬ್ರಹ್ಮಜ್ಞಾನಿಗಳಿಗೆ ಯತಿರಾಜನಾಗಿ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರೆಂದು. ವೈಶಾಖ ಶುದ್ಧ ದಶಮಿ ಸದಾಶಿವ ಬ್ರಹ್ಮೇಂದ್ರರ ಆರಾಧನಾ ಮಹೋತ್ಸವ. ಸದಾಶಿವ ಬ್ರಹ್ಮೇಂದ್ರರು  ನೆರೂರಿನಲ್ಲಿ ಸಜೀವ ಸಮಾಧಿಯಾಗಿರಬಹುದು, ಆದರೆ ಜ್ಞಾನಕ್ಕಾಗಿ ಹಪಹಪಿಸುವವರಿಗೆ, ಮುಮುಕ್ಷತ್ವಕ್ಕಾಗಿ ಪ್ರಯತ್ನ ಮಾಡುವವರಿಗೆ ಇಂದಿಗೂ ದಾರಿದೀಪವಾಗಿದ್ದಾರೆ. 

- ಶ್ರೀನಿವಾಸ್ ರಾವ್ srinivas.v4274@gmail.com srinivasrao@kannadaprabha.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com