ಕಾಣಿಪಾಕಂ ನ ಗಣೇಶ ಉದ್ಭವಿಸಿದ ರೋಚಕ ಕಥೆ

ಕಾಣಿಪಾಕಂ ಗಣೇಶನ ದೇವಾಲಯ ಆವಿರ್ಭವಿಸಿದ ಹಿಂದೆ ರೋಚಕ ಕಥೆ ಇದೆ. ಗಣೇಶ ಚತುರ್ಥಿಯ ಈ ದಿನ ಕಾಣಿಪಾಕಂ ಗಣೇಶನ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳೋಣ. 
ಕಾಣಿಪಾಕಂ ನ ಗಣಪತಿ
ಕಾಣಿಪಾಕಂ ನ ಗಣಪತಿ

ಗಣೇಶನ ದೇವಾಲಯಗಳು, ಅಲ್ಲಿಗೆ ಸಂಬಂಧಿಸಿದ ವಿಶೇಷತೆಗಳು ಹಲವಾರಿವೆ. ಇವುಗಳ ಪೈಕಿ ಆಂಧ್ರಪ್ರದೇಶದಲ್ಲಿರುವ, ಬೆಂಗಳೂರಿಗೆ ಹತ್ತಿರದ ಚಿತ್ತೂರಿನ ಕಾಣಿಪಾಕಂ ಗಣೇಶನ ದೇವಾಲಯವೂ ಒಂದು. ಅದರ ಆವಿರ್ಭಾವದ ಹಿಂದೆ ರೋಚಕ ಕಥೆ ಇದೆ. ಗಣೇಶ ಚತುರ್ಥಿಯ ಈ ದಿನ ಕಾಣಿಪಾಕಂ ಗಣೇಶನ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳೋಣ. 

ಮೊದಲಿಗೆ ಕಾಣಿಪಾಕಂ ಗಣೇಶನ ಹೆಸರಿನ ಹಿನ್ನೆಲೆ ನೋಡೋಣ, ಕಾಣಿ ಎಂದರೆ ತೇವಾಂಶವುಳ್ಳ ಭೂಮಿ (ಗದ್ದೆ) ಪಾಕಂ ಎಂದರೆ ಆ ಪ್ರದೇಶಕ್ಕೆ ಹರಿಯುವ ನೀರು ಎಂದರ್ಥ. ಕಾಣಿಪಾಕಂ ಎಂದರೆ ತೇವಾಂಶವುಳ್ಳ ಭೂಮಿಗೆ ಹರಿದ ನೀರು ಎಂದರ್ಥ. ಕಾಣಿಪಾಕಂ ಗೂ ಗಣೇಶನಿಗೂ ಸಂಬಂಧವೇನು ಎಂಬುದನ್ನು ಕೆದಕಿದರೆ ತೆರೆದುಕೊಳ್ಳುವುದು 1000 ವರ್ಷಗಳ ಹಿಂದಿನ ಕಥೆ. ಆ ಕಥೆಯೇ ಬಲು ರೋಚಕ, ತರ್ಕಕ್ಕೆ ನಿಲುಕದ್ದು.

ಈ ದೇವಾಲಯವಿರುವ ಪ್ರದೇಶದಲ್ಲಿ ಸಹಸ್ರ ವರ್ಷಗಳ ಹಿಂದೆ 3 ಸಹೋದರರು ಕೃಷಿ ಮಾಡುತ್ತಿದ್ದರು. ಮೂವರು ಸಹೋದರರೂ ವಿಶೇಷ ಚೇತನರು. ಓರ್ವನಿಗೆ ದೃಷ್ಟಿ ದೋಷ, ಮತ್ತೋರ್ವ ಸಹೋದರನಿಗೆ ಕಿವಿಯ ಸಮಸ್ಯೆ, ಇನ್ನೋರ್ವನಿಗೆ ಮಾತು ಬರುತ್ತಿರಲಿಲ್ಲ. ವಿಹಾರಪುರಿ ಗ್ರಾಮದಲ್ಲಿ ಜೀವಿಸುತ್ತಿದ್ದ ಈ ಸಹೋದರರು ಕೃಷಿ ಮಾಡುತ್ತಿದ್ದಾಗ ಬಾವಿ ಬತ್ತಿರುವುದು ಗಮನಕ್ಕೆ ಬಂದಿತು.  ಓರ್ವ ಬಾವಿಯೊಳಗೆ ಇಳಿದು ನೀರಿಗಾಗಿ ಮತ್ತಷ್ಟು ಆಳ ಕೊರೆಯುವುದಕ್ಕೆ ಪ್ರಾರಂಭಿಸಿದ. ಕೆಲಸ ಪ್ರಾರಂಭ ಮಾಡುತ್ತಿದ್ದಂತೆಯೇ ನೀರು ಸಿಕ್ಕಿತ್ತು, ಆದರೆ ಕಾಮಗಾರಿಗೆ ಬಳಸಿದ್ದ ಉಪಕರಣಕ್ಕೆ ನೀರಿನಲ್ಲಿ ಮತ್ತೊಂದು ಘನವಸ್ತು ಸ್ಪರ್ಶವಾಗಿತ್ತು ತಿಳಿಯಿತು. ನೋಡ ನೋಡುತ್ತಿದ್ದಂತೆಯೇ ಆ ಘನವಸ್ತು ಮೇಲಕ್ಕೆ ಬಂದಿತು, ಅಷ್ಟೇ ಅಲ್ಲ, ಆ ಪ್ರದೇಶದಲ್ಲಿ ರಕ್ತದ ಮಡು ಕಾಣಿಸತೊಡಗಿತು. ಈ ನಡುವೆಯೇ ಸಹೋದರರ ಅಂಗವೈಕಲ್ಯವೂ ಮಾಯ!!. ಈ ಸುದ್ದಿ ಊರಿಗೆಲ್ಲಾ ಹರಡುತ್ತಿದ್ದಂತೆಯೇ ಜನಸ್ತೋಮ ಆ ಪ್ರದೇಶಕ್ಕೆ ಹರಿದುಬಂದಿತು. ಏನಾಶ್ಚರ್ಯ!!! ಆ ಪ್ರದೇಶದಲ್ಲಿ ಗಣಪತಿಯ ವಿಗ್ರಹ ಉದ್ಭವಾಗಿದೆ!! ಈ ಉದ್ಭವ ಗಣಪತಿಯನ್ನು ನೋಡಿದ ಗ್ರಾಮಸ್ಥರು ತೆಂಗಿನಕಾಯಿ, ಎಳನೀರಿನಿಂದ ವಿಗ್ರಹಕ್ಕೆ ಪೂಜೆ, ಅಭಿಷೇಕಗಳನ್ನು ನೆರವೇರಿಸಿದ್ದರು. ಎಳನೀರಿನ ಕೋಡಿ ಹರಿದು ಕೃಷಿ ಭೂಮಿಯ ಒಂದಷ್ಟು ಜಾಗದ ತುಂಬ ಹರಿಯ ತೊಡಗಿತು. ಈ ಘಟನೆಯೇ ಕಾಣಿಪಾಕಂ ಎಂಬ ಹೆಸರು ಬರಲು ಕಾರಣ. ಅಂದಿನಿಂದ ಈ ಉದ್ಭವ ಗಣೇಶನನ್ನು ಕಾಣಿಪಾಕಂ ವರಸಿದ್ಧಿ ವಿನಾಯಕ ಎನ್ನಲಾರಂಭಿಸಿದರು. 

ಘಟನೆ ನಡೆದಾಗ ವಿಗ್ರಹ ಎಲ್ಲಿ ಉದ್ಭವವಾಗಿತ್ತೋ ಇಂದಿಗೂ ಅದೇ ಜಾಗದಲ್ಲಿದೆ. ಬಾವಿಯ ಮೇಲ್ಭಾಗದಲ್ಲಿ ಗಣೇಶನ ಗರ್ಭಗುಡಿ ಇದೆ. ಮುಂಗಾರಿನ ವೇಳೆ ಉಕ್ಕಿ ಹರಿಯುವ ಇಲ್ಲಿನ ನೀರನ್ನು ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಬಾವಿಯ ನೀರು ಎಂದಿಗೂ ಬತ್ತದೆ ಇರುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯ! 

ಉದ್ಭವವಾದ ದಿನದಿಂದಲೂ ಗಣೇಶನ ವಿಗ್ರಹ ಬೆಳೆಯುತ್ತಲೇ ಇದೆ. 50 ವರ್ಷಗಳ ಹಿಂದೆ ಇಲ್ಲಿಗೆ ಭಕ್ತಾದಿಗಳು ಸಮರ್ಪಣೆ ಮಾಡಿದ್ದ ಬೆಳ್ಳಿಯ ಕವಚ ಇಂದು ಆ ವಿಗ್ರಹಕ್ಕೆ ಹಿಡಿಸದೇ ಇರುವುದು ವಿಗ್ರಹ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ ಸ್ಥಳೀಯರು! 

ಸಾಮಾನ್ಯವಾಗಿ ವಿದ್ಯಾಪ್ರದಾಯಕನಾಗಿರುವ ಗಣೇಶ ಕಾಣಿಪಾಕಂನಲ್ಲಿ ನ್ಯಾಯದಾನವನ್ನೂ ನೀಡುತ್ತಾನೆ. ಹೌದು, ಕೇಳಿದರೆ ಸ್ವಲ್ಪ ಅಚ್ಚರಿ ಎನಿಸಬಹುದು, ಆದರೆ ಇಲ್ಲಿಗೆ ಬರುವ ಹಲವು ಮಂದಿ ಪುಣ್ಯಪ್ರದವಾದ ಬಾವಿಯಲ್ಲಿ ಮಿಂದೆದ್ದು, ಪರಸ್ಪರ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಂಪ್ರದಾಯ ನಡೆದುಬಂದಿದೆ. 

ಪವಿತ್ರ ಸ್ನಾನ ಮುಗಿಸಿ ಗಣಪತಿಯ ಮುಂದೆ ಬಂದು ಪ್ರಮಾಣ ಮಾಡುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ತಪ್ಪಿತಸ್ಥರು ದೇವಾಲಯ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ತಪ್ಪನ್ನು ಒಪ್ಪಿ ತಿದ್ದಿ ನಡೆದುಕೊಂಡಿರುವ ಉದಾಹರಣೆಗಳೂ ಇವೆಯಂತೆ. ಹೀಗೆ ವಿದ್ಯಾ-ಬುದ್ಧಿ ಜೊತೆ ಇಲ್ಲಿನ ಗಣೇಶ ನ್ಯಾಯ ಪ್ರದಾತನಾಗಿರುವುದು ಈ ದೇವಾಲಯದ ವಿಶೇಷತೆಗಳಲ್ಲಿ ಒಂದು. ಇನ್ನು ಇಲ್ಲಿ ಗಣೇಶ ಚತುರ್ಥಿಯನ್ನು 20 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 
-ಶ್ರೀನಿವಾಸ್ ರಾವ್

srinivasrao@kannadaprabha.com, srinivas.v4274@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com