ದೀಪಾವಳಿ ಧನಲಕ್ಷ್ಮಿ ಪೂಜೆ ಆಚರಣೆ ಏಕೆ, ಹೇಗೆ?
ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಲಕ್ಷ್ಮಿದೇವಿಯನ್ನು ಪೂಜಿಸುವ ಹಬ್ಬ. ಲಕ್ಷ್ಮಿದೇವಿ ಮೂಲತಃ ಪ್ರಕೃತಿಮಾತೆ. ಪ್ರಕೃತಿಯಲ್ಲಿ ಧಾನ್ಯ, ಫಲ ಪುಷ್ಪಗಳು ಸಮೃದ್ಧಿಯಾಗಿ ಬೆಳೆದು ಧನವೃದ್ಧಿಯಾಗಿ ಸುಖ-ಶಾಂತಿ, ಸಂಪತ್ತು ಬರಲಿ ಎಂದು ಜನರು ಸಮೃದ್ಧಿಯ ದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ.
ದೇಶದ ಕೆಲವು ಭಾಗಗಳಲ್ಲಿ, ರಾಮನು ರಾವಣನನ್ನು ಕೊಂದು ಅಯೋಧ್ಯಗೆ ವಾಪಸಾಗಿ ಮರಳಿ ಆಡಳಿತವನ್ನು ಪುನರಾರಂಭಿಸಿದ ದಿನ ಎಂದು ಆಚರಣೆ ಮಾಡುತ್ತಾರೆ.
ದೀಪಾವಳಿ ಮುನ್ನಾದಿನ ನೀರು ತುಂಬುವ ಹಬ್ಬದ ದಿನ ಮನೆಗಳನ್ನು ಸ್ವಚ್ಛಗೊಳಿಸಿ ನವೀಕರಣ ಮಾಡುವುದಿದ್ದರೆ ಅದನ್ನು ಮಾಡಿಸಿ ನರಕ ಚತುರ್ದಶಿಯಂದು ಬೆಳಗ್ಗೆಯೇ ತೈಲಾಭ್ಯಂಗನ ಮಾಡಿ ಪೂಜೆಗೆ ಅಣಿಯಾಗುತ್ತಾರೆ. ಈ ಬಾರಿ ಲಕ್ಷ್ಮಿ ಪೂಜೆ ಇಂದು ಅಪರಾಹ್ನದಿಂದ ನಾಳೆ ಬೆಳಗ್ಗೆವರೆಗೆ ತಿಥಿ ಪ್ರಕಾರ ಬಂದಿರುವುದರಿಂದ ಬಹುತೇಕ ಮಂದಿ ಇಂದು ಸಾಯಂಕಾಲ ತಮ್ಮ ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಈ ಬಾರಿ ಧನಸಂಪತ್ತು ಸಮೃದ್ಧಿಯಾಗಿ ಸಿಗಲಿ ಎಂದು ಪೂಜೆ ಮಾಡುತ್ತಾರೆ.
ಇಂದು ಸಾಯಂಕಾಲ ದೀಪಾವಳಿ ಲಕ್ಷ್ಮಿ ಪೂಜೆಗೆ ಪಟ್ಟಣ, ನಗರಗಳಲ್ಲಿನ ಅಂಗಡಿಗಳು, ಕಚೇರಿಗಳು, ಮಳಿಗೆಗಳ ಮುಂದೆ ದೀಪಗಳು, ರಂಗೋಲಿ ಮತ್ತು ಹೂವುಗಳ ಅಲಂಕಾರ ಕಾಣಬಹುದು. ಜನರು ದೀಪಗಳನ್ನು ಬೆಳಗಿಸಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಸಿಹಿತಿಂಡಿಗಳನ್ನು ಹಂಚಿ ಬಂದವರಿಗೆ ಇಷ್ಟಾರ್ಥರಿಗೆ ಉಡುಗೊರೆಗಳನ್ನು ನೀಡುತ್ತಾರೆ.
ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಲಶದ ಜೊತೆ ಇಟ್ಟು, ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ.
ಉತ್ತರ ಭಾರತದಲ್ಲಿ ಗುಜರಾತೀಯರು, ರಾಜಸ್ತಾನೀಯರಿಗೆ ಇಂದು ಹೊಸ ವರ್ಷ ಮತ್ತು ಹೊಸ ಆರ್ಥಿಕ ವರ್ಷ ಆರಂಭವೂ ಹೌದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ