ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಪಂಪಾಕ್ಷೇತ್ರ ಕಿಷ್ಕಿಂಧಾ”ನಗರದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (ರಿ.135/2020) ಅಸ್ತಿತ್ವಕ್ಕೆ ಬಂದಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ದಿನದಂದೇ 05-02-2020 ರಾಜ್ಯದಲ್ಲಿ ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿರುವುದು ವಿಶೇಷ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕ್ಷೇತ್ರದ ಅಭಿವೃದ್ಧಿಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಒಟ್ಟು 15 ಜನ ಸದಸ್ಯರ ಟ್ರಸ್ಟ್ ರಚಿಸಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ರಾಮಜನ್ಮ ಭೂಮಿ ಪ್ರಕರಣದಲ್ಲಿ ರಾಮಲಲ್ಲಾ ಪರ ವಾದ ಮಂಡಿಸಿದ್ದ ಟಿ.ಪರಾಶರನ್ ಅವರನ್ನು ಟ್ರಸ್ಟ್ ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯ ಕ್ಷೇತ್ರ ಅಭಿವೃದ್ದಿ ಅಂತೆಯೇ ಕಿಷ್ಕಿಂಧಾ ಕ್ಷೇತ್ರದ ಅಭಿವೃದ್ಧಿಗಾಗಿ, ರಾಮಜನ್ಮಭೂಮಿ ಪ್ರಕರಣದಲ್ಲಿ ಮುಖ್ಯ ಅರ್ಜಿದಾರರಾಗಿದ್ದ ಜ್ಯೋತಿಷ್ಪೀಠ ದ್ವಾರಕಾ ಪೀಠದ ಜಗದ್ಗುರು ಶಂಕರಾಚಾರ್ಯರ ಮಾರ್ಗದರ್ಶನದಲ್ಲಿ ಪಂಪಾಕ್ಷೇತ್ರ ಕಿಷ್ಕಿಂಧ ಸ್ವರ್ಣ ಹಂಪಿಯ ಗೊವಿಂದಾನಂದ ಸರಸ್ವತಿ ಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆ ಮಾಡಲಾಗಿದೆ.
"ಅಯೋಧ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯಂತೆಯೇ ಕರ್ನಾಟಕದಲ್ಲಿ ರಾಮ ಭಕ್ತ ಹನುಮಂತ ದೇವರ ಜನ್ಮಸ್ಥಳವಾದ ಪಂಪಾ ಕ್ಷೇತ್ರ (ಹಂಪಿ) ಕಿಷ್ಕಿಂದಾಪುರಿ ಸಂಪೂರ್ಣ ಅಭಿವೃದ್ಧಿ ಯೋಜನೆಗಳು ಈ ಟ್ರಸ್ಟ್ ನ ಉದ್ದೇಶ" ಎಂದು ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹೇಗಿರಲಿದೆ ಈ ಟ್ರಸ್ಟ್?:ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಲ್ಲಿ ಪ್ರಮುಖವಾಗಿ ಜಗದ್ಗುರು ಶಂಕರಾಚಾರ್ಯರ ಚತುರಾಮ್ನಾಯ ಪೀಠದ ಜಗದ್ಗುರುಗಳು, ರಾಮಾನುಜಾಚಾರ್ಯ ಮಧ್ವಾಚಾರ್ಯ ಮತ್ತು ಅಖಾಡಗಳ ಸಾಧು-ಸಂತರು, ಇನ್ನಿತರ ಸನಾತನ ವೈದಿಕ ಹಿಂದು ಧರ್ಮದ ಪರಂಪರಾಗತ ಸಂಸ್ಥೆಗಳ ಆಚಾರ್ಯರು ಇರಲಿದ್ದಾರೆ. ಇದರ ಜೊತೆಗೆ 20 ಸದಸ್ಯರ ಮಂಡಳಿಯನ್ನು ಹೊಂದಿರುತ್ತದೆ. ಪ್ರತಿ ರಾಜ್ಯದಿಂದ 3 ವರ್ಷಗಳ ಸೇವಾ ಅವಧಿ ನಿಗದಿಪಡಿಸಲಾಗಿರುತ್ತದೆ. 10 ಜನರ ಪ್ರಾಂತೀಯ ಸಮಿತಿ ಸದಸ್ಯರ ಮಂಡಳಿಯನ್ನು ಪ್ರತಿ ರಾಜ್ಯಗಳಲ್ಲಿಯೂ ರಚನೆ ಮಾಡಲಾಗುತ್ತದೆ, ದೇಶದಲ್ಲಿರುವ ಎಲ್ಲಾ ಭಕ್ತರಿಗೂ ಸಹ ಅವಕಾಶವಿರಲಿದೆ.
ಟ್ರಸ್ಟ್ ಈವರೆಗೂ ನಡೆಸಿರುವ ಕಾರ್ಯಕ್ರಮಗಳು: ಈ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನವೇ ಗೋವಿಂದಾನಂದ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಹಂಪಿಯ ಜೀರ್ಣೋದ್ಧಾರ, ಹಳೆ ಹಂಪಿಯನ್ನು ಹೊಸ ವೈಭವಯುತವಾದ ಹಂಪಿಯನ್ನಾಗಿ ಮಾಡಲು 15 ವರ್ಷಗಳಿಂದ ಕ್ಷೇತ್ರ ರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2013ರಲ್ಲಿ ಹಳೆ ಹಂಪಿಯನ್ನು ತೆರವುಗೊಳಿಸಿದ ನಂತರ ಅದೇ ವರ್ಷ ಹಂಪಿಯ ಜನರ ನಿವೇದನೆ ಯಂತೆ “ನೂತನ ಹಂಪಿ” ಗ್ರಾಮಕ್ಕೆ ಭೂಮಿ ಪೂಜೆ, ಶಂಕುಸ್ಥಾಪನೆ ಶಿಲಾನ್ಯಾಸವನ್ನು ನಿರವೇರಿಸಲಾಗಿದೆ. ವಿಜಯದಶಮಿ ಆಚರಣೆ, ಲಕ್ಷ ದೀಪೋತ್ಸವ, ಪಂಪಾಕ್ಷೇತ್ರ "ಸ್ವರ್ಣಹಂಪಿ ದಸರಾ ಹೀಗೆ ಈ ಟ್ರಸ್ಟ್ ನಲ್ಲಿ ತೊಡಗಿಸಿಕೊಂಡಿರುವವರಿಂದ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ವೇದವ್ಯಾಸರಿಂದ ಸ್ಥಾಪಿದವಾದ ವೇದವ್ಯಾಸ-ಆಶ್ರಮ ಗುರುಕುಲವನ್ನು ಪುನಃ ಆರಂಭಿಸಲಾಗಿದೆ.
2019 ರಲ್ಲಿ ಗೋವಿಂದಾನಂದ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಶ್ರೀಯಂತ್ರ ಸ್ಥಾಪನೆ, ನಿರ್ಮಾಣವಾಗಲಿರುವ ದೇವಾಲಯಕ್ಕೆ ಪಂಪಾ ಕಿಷ್ಕಿಂದಾ ಕ್ಷೇತ್ರದ ಪರವಾಗಿ 'ಶ್ರೀ ಹನುಮದ್ ಸಮೇತ ಸೀತಾರಾಮ ಲಕ್ಷ್ಮಣ ದೇವರ ಉತ್ಸವ ಮೂರ್ತಿ'ಗಳನ್ನು ಸಮರ್ಪಣೆ ಮಾಡಿ ರಾಮ ಮಂದಿರ ನಿರ್ಮಾಣ ತಯಾರಿ ಪ್ರಾರಂಭವಾಗುತ್ತಿದ್ದಂತೆಯೇ "ಅಯೋಧ್ಯ ಮತ್ತು ಪಂಪಾ ಕಿಷ್ಕಿಂಧಾ ಕ್ಷೇತ್ರ" ಗಳ ಸಂಬಂಧ ಪುನ: ಆರಂಭಿಸಲಾಗಿದೆ.
ಈ ರೀತಿ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಮ್ಮ “ಹಂಪಿ–ಸ್ವರ್ಣ ಹಂಪಿ”, “ನಮ್ಮ ಕ್ಷೇತ್ರ–ಪಂಪಾಕ್ಷೇತ್ರ”, “ನಮ್ಮ ಪುರಿ- ಕಿಷ್ಕಿಂಧಾಪುರಿ” ಅಭಿಯಾನ ನಡೆಯುತ್ತಾ ಅನೇಕ ಆಧ್ಯಾತ್ಮಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.
ಈ ವರ್ಷ ಟ್ರಸ್ಟ್ ವತಿಯಿಂದ ಆಯೋಜನೆಯಾಗಲಿರುವ ಕಾರ್ಯಕ್ರಮಗಳು:
ಈ ವರ್ಷ 2020 ಟ್ರಸ್ಟ್ ವತಿ ಯಿಂದ ಟ್ರಸ್ಟ್ ವತಿ ಯಿಂದ ಹಂಪಿ ಕ್ಷೇತ್ರದಲ್ಲಿ ನಡೆಯಲಿರುವ ಉತ್ಸವಗಳು:
ಶ್ರೀ ಪಂಪಾಕ್ಷೇತ್ರ-ಕಿಷ್ಕಿಂದದಿಂದ ಅಯೋಧ್ಯೆಗೆ ಹೋಗಿ ಅಲ್ಲಿನ “ಶ್ರೀ ಹನುಮದ್ ಸಮೇತ ಶ್ರೀ ಸೀತಾರಾಮ ಲಕ್ಷ್ಮಣ ದೇವರಗೆ ಜನ್ಮಭೂಮಿ ಅಯೋಧ್ಯ ಯಲ್ಲಿ ದೀಪಾವಳಿ ಮಹೋತ್ಸವ, ಪುಷ್ಫ ಯಾಗ, ಅಯೋಧ್ಯೆ ಪಂಚಕ್ರೋಶ ಪರಿಕ್ರಮ, ಮಹಾ ಸಾಮ್ರಾಜ್ಯ ಪಟ್ಟಾಭಿಷೇಕ, ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
-ಶ್ರೀನಿವಾಸ್ ರಾವ್
srinivas.v4274@gmail.com,srinivasrao@kannadaprabha.com
Advertisement