ಕತ್ತಲನ್ನು ಮರೆಯಾಗಿಸಿ, ಬೆಳಕನ್ನು ಪಡೆಯುವ ಹಂಬಲವೇ ದೀಪಾವಳಿಯ ರೂಪ ತಾಳಿದೆ ಎನ್ನಬಹುದು. ಹಣತೆಯನ್ನು ಬೆಳಗಿ, ಸಂತಸ, ಸಂಭ್ರಮಗಳನ್ನೂ ಹಂಚುವ ಪರಮ ಪಾವನ ಹಬ್ಬವೇ ದೀಪಾವಳಿ. ದೀಪದಿಂದ ದೀಪವನ್ನು ಹಚ್ಚೋಣ, ಮನಸ್ಸಿನಿಂದ ಮನಸ್ಸನ್ನು ಬೆಳಗೋಣವೆಂಬ ನಮ್ಮ ಹಿರಿಯರ ನುಡಿಗಳು ಎಂದೆಂದಿಗೂ ಪ್ರಸ್ತುತ.
ದೀಪಾವಳಿ ಹಬ್ಬ ಐದು ದಿನಗಳ ಸಂಭ್ರಮಾಚರಣೆಯಾಗಿದೆ. ಕಾರ್ತಿಕ ಮಾಸವಿಡೀ ದೀಪಜ್ಯೋತಿಯನ್ನು ಬೆಳಗಿಸಿ ಆರಾಧಿಸುವ ಪರಿಪಾಠವಿರುವದರಿಂದ ದೀಪಾವಳಿಗೆ ಹಬ್ಬಗಳ ರಾಜನೆಂದೇ ಕರೆಯಲಾಗುತ್ತದೆ. ಭಕ್ತಿ-ಶ್ರಧ್ಧೆಗಳ ಜೊತೆಜೊತೆಗೆ ದಾನವ ಶಕ್ತಿಯ ಅಳಿವು, ದೈವ ಶಕ್ತಿಯ ಗೆಲುವು ಮತ್ತು ಮಾನವ ಕುಲದ ಉಳಿವೇ ದೀಪಾವಳಿಯ ಸಂಕೇತವೆನ್ನಬಹುದು.
ದೀಪಾವಳಿ ಹಬ್ಬ, ಆಶ್ವೀಜ ಮಾಸದ ತ್ರಯೋದಶಿಯಿಂದ ಆರಂಭವಾಗಿ ಕಾರ್ತಿಕ ಮಾಸದ ಪಂಚಮಿಯ ವರೆಗೂ ಆಚರಿಸಲ್ಪಡುತ್ತದೆ. ದೀಪಾವಳಿ ಹಬ್ಬದ ಆರಂಭದ ದಿನವಾದ ತ್ರಯೋದಶಿಯಂದು, ಸಂಜೆಯ ಸಮಯ, ನೀರು ತುಂಬುವ ಹಬ್ಬವಾಗಿ ಆಚರಿಸಲಾಗುತ್ತದೆ.
ಭಾರತೀಯರಿಗೆ ನೀರೆಂದರೆ, ಬರೀ ಜಲವಲ್ಲ, ಗಂಗಾಮಾತೆಯಾಗಿ ಪೂಜಿಸಲ್ಪಡುವ ಪವಿತ್ರ ಜಲ. ಅಂದು ನೀರು ಸಂಗ್ರಹಕ್ಕಾಗಿ ಬಳಸಲಾಗುವ ಹಂಡೆ-ಪಾತ್ರೆಗಳನ್ನು ಶುಚಿಗೊಳಿಸಿ, ಅದಕ್ಕೆ ಸುಣ್ಣದ ಪಟ್ಟಿ-ಅರಸಿನ-ಕುಂಕುಮ-ಪುಷ್ಪಗಳಿಂದ ಅಲಂಕರಿಸಲಾಗುತ್ತದೆ.
ಹಂಡೆಗೆ ಹೊಸ ನೀರು ತುಂಬಿರಿಸುತ್ತಾರೆ. ಈ ನೀರಿಗೆ, ಅರಳಿ, ಆಲ, ಅತ್ತಿ, ಮಾವು ಮತ್ತು ನೇರಳೆ ಚಿಗುರುಗಳನ್ನು ಸೇರಿಸಲಾಗುತ್ತದೆ. ಸಮುದ್ರಮಥನದ ಸಮಯದಲ್ಲಿ, ಶ್ರೀ ಮನ್ನಾರಾಯಣನು ಅಮೃತ ಕಲಶದೊಡನೆ, ಆಯುರ್ವೇದಾಚಾರ್ಯ ಧನ್ವಂತರಿ ರೂಪದಲ್ಲಿ ಜನಿಸಿದ್ದು ಇಂದಿನ ದಿನವೇ. ಅದಕ್ಕೆಂದೇ ಈ ದಿನದಂದು, ದೀಪಗಳನ್ನು ಬೆಳಗಿ ಧನ್ವಂತರಿಯನ್ನು ಪೂಜಿಸಿ, ಆರೋಗ್ಯ ಭಾಗ್ಯವನ್ನು ಅನುಗ್ರಹಿಸುವಂತೆ ಬೇಡುತ್ತಾರೆ.
ಈ ದಿನ ಸಂಗ್ರಹಿಸಲಾಗುವ ನೀರಿನಲ್ಲಿ, ಗಂಗಾ ಮಾತೆ ನೆಲೆಸಿರುವಳೆಂಬ ಬಲವಾದ ನಂಬಿಕೆಯಿದೆ. ಉತ್ತರ ಭಾರತದಲ್ಲಿ, ಈ ದಿನ ಧನ್ ತೇರಸ್ ಎಂದರೆ ಧನ-ಕನಕಗಳನ್ನು ಪೂಜಿಸುವ ಹಬ್ಬವಾಗಿ ಆಚರಿಸಲಾಗುತ್ತದೆ.
ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಈ ದಿನ ಮಾತೆ ಲಕ್ಷ್ಮಿ ಮತ್ತು ಕುಬೇರರ ಪೂಜೆಯನ್ನು ಸಂಭ್ರಮದಿಂದ ನಡೆಸುತ್ತಾರೆ. ಧನ್ ತೇರಸ್‌ನಂದು ಹೊಸ ಗೃಹೋಪಕರಣಗಳು, ಚಿನ್ನ ಇಲ್ಲವೇ ಬೆಳ್ಳಿಯ ಸಾಮಾನುಗಳನ್ನು ಖರೀದಿಸುವ ವಾಡಿಕೆಯಿದೆ.
ಪೌರಾಣಿಕ ಹಿನ್ನೆಲೆಯ ಪ್ರಕಾರ, ಅಲ್ಪಾಯುಷಿಯಾದ ರಾಜಕುಮಾರನನ್ನು ಕಾಪಾಡಲು ಆತನ ಪತ್ನಿ, ಅರಮನೆಯ ದ್ವಾರದ ಬಳಿ ದೀಪಗಳನ್ನು ಬೆಳಗಿ, ಚಿನ್ನ-ಬೆಳ್ಳಿಗಳ ರಾಶಿಯನ್ನು ಅರಮನೆಯ ದ್ವಾರದ ಬಳಿ ಇರಿಸಿದಳಂತೆ.
ಕಾಳಸರ್ಪದ ವೇಷದಲ್ಲಿ ಬಂದ ಯಮರಾಜನಿಗೆ ಚಿನ್ನಗಳ ರಾಶಿ, ಜಗಮಗಿಸಿದ ದೀಪಗಳು ಕಣ್ಣು ಕುಕ್ಕಿ, ಅರಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲವಂತೆ. ಅದಕ್ಕೆಂದೇ ಆತ ರಾಜಕುಮಾರನ ಪ್ರಾಣಹರಣ ಮಾಡದೆ, ಬರೀ ಕೈಯಲ್ಲಿ ಮರಳಿದನಂತೆ. ಅದಕ್ಕಾಗಿಯೇ ರಾಜಕುಮಾರಿ ಪತಿಯ ಪ್ರಾಣ ಕಾಪಾಡಿದ ದಿನವಾದ ತ್ರಯೋದಶಿಯಂದು ಉತ್ತರ ಭಾರತದಲ್ಲಿ ಧನ್ ತೇರಸ್ ಎಂದು ಆಚರಿಸುತ್ತಾರೆ.
ತ್ರಯೋದಶಿಯ ಮಾರನೆಯ ದಿನದಂದು ಆಚರಿಸಲ್ಪಡುವ ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನವೆನಿಸಿದೆ. ಮಹಾವಿಷ್ಣು ವರಾಹವತಾರ ತಾಳಿದ ಸಮಯದಲ್ಲಿ, ಆತನ ಶರೀರದಿಂದ ಒಂದು ತೊಟ್ಟು ಬೆವರು, ಭೂಮಿಯ ಮೇಲೆ ಬೀಳಲಾಗಿ ದೈತ್ಯನಾದ ನರಕಾಸುರ ಜನಿಸುತ್ತಾನೆ.
ಭೂಮಿಪುತ್ರನೆಂದೂ ಹೆಸರಾದ ನರಕಾಸುರನ ವಧೆ ಆತನ ತಾಯಿಯಲ್ಲದೇ ಬೇರೆ ಯಾರಿಂದಲೂ ಸಾಧ್ಯವಾಗದೆಂದು, ಶ್ರೀ ವಿಷ್ಣು ಭೂದೇವಿಗೆ ವರವನ್ನು ನೀಡಿರುತ್ತಾನೆ. ಈ ವರಗಳ ಪ್ರಭಾವದಿಂದ ಬಲಶಾಲಿಯಾದ ನರಕಾಸುರನು, ದೇವತೆಗಳನ್ನು, ಮಾನವರನ್ನು ಮತ್ತು ಋಷಿ ಮುನಿಗಳನ್ನು ಹಿಂಸಿಸಲಾರಂಬಿಸುತ್ತಾನೆ. ದ್ವಾಪರ ಯುಗದಲ್ಲಿ, ದೇವೇಂದ್ರ ಮತ್ತು ದೇವಮಾತೆ ಆದಿತಿಯರಿಗೂ ಸಹ ಕಿರುಕುಳ ನೀಡಲಾರಂಭಿಸುತ್ತಾನೆ.
16 ಸಾವಿರ ರಾಜಪುತ್ರಿಯರನ್ನು ಅಪಹರಿಸಿ, ತನ್ನ ಅಂತಃಪುರದಲ್ಲಿ ಸೆರೆಯಾಗಿ ಇರಿಸಿಕೊಂಡಿರುತ್ತಾನೆ. ನರಕಾಸುರನ ಕಿರುಕುಳದಿಂದ ನೊಂದ ದೇವೇಂದ್ರನು, ಪರಿಹಾರಕ್ಕಾಗಿ ಶ್ರೀ ಕೃಷ್ಣನಲ್ಲಿ ಮೊರೆ ಹೋಗುತ್ತಾನೆ. ಆ ಸಮಯದಲ್ಲಿ, ಸತ್ಯಭಾಮೆಯಾಗಿ ಅವತರಿಸಿದ್ದ ಭೂದೇವಿ, ಲೋಕರಕ್ಷಣೆಗಾಗಿ ತನ್ನ ಸುತನಾದ ನರಕಾಸುರನನ್ನು ವಧಿಸಲು ಪತಿಯಾದ ಶ್ರೀ ಕೃಷ್ಣನಲ್ಲಿ ಬೇಡುತ್ತಾಳೆ.
ಶ್ರೀ ಕೃಷ್ಣ ಪರಮಾತ್ಮನು, ಆಶ್ವೀಜ ಕೃಷ್ಣ ಚತುರ್ದಶಿಯಂದು, ನರಕಾಸುರನನ್ನು ಸತ್ಯಭಾಮೆಯ ಸಹಾಯದಿಂದ ಸಂಹರಿಸುತ್ತಾನೆ. ನರಕಾಸುರನ ಬಂಧನದಲ್ಲಿದ್ದ 16 ಸಾವಿರ ಸ್ತ್ರೀಯರನ್ನು ಬಿಡುಗಡೆ ಮಾಡಿ, ಅವರೆಲ್ಲರನ್ನೂ ಪತ್ನಿಯರನ್ನಾಗಿ ಸ್ವೀಕರಿಸಿ, ಸಾಮಾಜಿಕ ಸ್ಥಾನಮಾನ ನೀಡಿ ರಕ್ಷಿಸುತ್ತಾನೆ. ಅದಕ್ಕಾಗಿಯೇ ಇಂದಿಗೂ ಕನ್ಯಾಪಿತೃಗಳು, ಕನ್ಯಾಸೆರೆ ಬಿಡಿಸಿದ ತಮ್ಮ ಅಳಿಯಂದಿರನ್ನು ಶ್ರೀ ಕೃಷ್ಣಸ್ವರೂಪರೆಂದು ಭಾವಿಸಿ, ದೀಪಾವಳಿ ಸಮಯದಲ್ಲಿ ಮನೆಗೆ ಆಹ್ವಾನಿಸಿ ವಿಶೇಷವಾಗಿ ಉಪಚರಿಸಿ, ಆದರಿಸುವ ಸಂಪ್ರದಾಯ ಬೆಳೆದು ಬಂದಿದೆ.
ನರಕಾಸುರನ ವಧೆಯಾಗಿದ್ದರಿಂದ ಈ ದಿನ ತೈಲ ಸ್ನಾನ ಅಥವಾ ಅಭ್ಯಂಗ ಸ್ನಾನ ಮಾಡುವ ಪರಿಪಾಠ ಬೆಳೆದು ಬಂದಿದೆ. ತೈಲದಲ್ಲಿ, ಲಕ್ಷ್ಮಿ ಮತ್ತು ನೀರಿನಲ್ಲಿ ಗಂಗೆಯ ವಿಶೇಷ ಸಾನಿಧ್ಯವಿರುವದರಿಂದ, ಹೆಚ್ಚಿನಂಶ ಎಲ್ಲಾ ಧರ್ಮದ ಅನುಯಾಯಿಗಳು, ಆರೋಗ್ಯ, ಧನಪ್ರಾಪ್ತಿ ಮತ್ತು ಅಭಿವೃಧ್ದಿಗಾಗಿ ಅಭ್ಯಂಜನ ಮಾಡುತ್ತಾರೆ.
ಚತುರ್ದಶಿಯ ದಿನದಂದೇ ಕಾಳಿದೇವಿ ರಕ್ತಬೀಜಾಸುರನ ವಧೆ ಮಾಡಿದಳೆನ್ನಲಾಗಿದೆ. ಮಿಥಿಲಾ, ಆಸ್ಸಾಮ್, ಬಂಗಾಳದಲ್ಲಿ ಈ ದಿನದಂದು, ಕಾಳೀ ಚೌದಸ್ ಎಂಬ ಹಬ್ಬವನ್ನು ಆಚರಿಸುತ್ತಾರೆ. ನರಕಾಸುರನ ಸೆರೆಯಲ್ಲಿದ್ದ ಮಹಿಳೆಯರು ಕೃಷ್ಣನನ್ನು ಒಲಿಸಿಕೊಳ್ಳಲು, ವಿಶೇಷವಾಗಿ ಅಲಂಕರಿಸಿಕೊಂಡಿದ್ದರಂತೆ. ಸೌಂದರ್ಯರಾಣಿಯರ ಆರಾಧನೆಯ ಈ ದಿನವನ್ನು ರಾಜಸ್ಥಾನದಲ್ಲಿ ರೂಪ ಚೌದಸ್ ಎಂದು ಆಚರಿಸುತ್ತಾರೆ.
ದೀಪಾವಳಿಯ ಮೂರನೆಯ ದಿನ ಅಮಾವಾಸ್ಯೆಯಂದು, ಮಾತೆ ಲಕ್ಷ್ಮಿಯನ್ನು ಆರಾಧಿಸುವ ದಿನ. ಹಿಂದೂ-ಸಿಕ್ಖ ಮತ್ತು ಜೈನ ಧರ್ಮದ ಅನುಯಾಯಿಗಳು, ದೀಪಾವಳಿಯ ಅಮಾವಾಸ್ಯೆಯ ರಾತ್ರಿ ಸಿರಿದೇವಿಗೆ ಪೂಜೆ ಸಲ್ಲಿಸುತ್ತಾರೆ. ಬಂಗಾಳ, ಆಸ್ಸಾಮ್ ಮತ್ತು ಓರಿಸ್ಸಾ ರಾಜ್ಯಗಳಲ್ಲಿ ಈ ದಿನ ಕಾಳಿ ಮಾತೆಯನ್ನು ಪೂಜಿಸುತ್ತಾರೆ.
ಸಮುದ್ರಮಥನದ ಸಮಯದಲ್ಲಿ, ಆಶ್ವೀಜ ಮಾಸದ ಅಮಾವಾಸ್ಯೆಯಂದು ವಿಷ್ಣುವಿನ ಪತ್ನಿಯಾದ ಲಕ್ಷ್ಮಿದೇವಿ ಅವತರಿಸಿರುವದಾಗಿ ಪೌರಾಣಿಕ ಹಿನ್ನೆಲೆಯಿದೆ. ಮನೆಯಲ್ಲಿ ಲಕ್ಷ್ಮೀದೇವಿ ನೆಲೆ ನಿಂತರೆ, ಆರೋಗ್ಯ, ಭಾಗ್ಯಗಳಿಗೆ ಕೊರತೆಯುಂಟಾಗದೆನ್ನಲಾಗಿದೆ. ಉತ್ತರ ಭಾರತದಲ್ಲಿ, ವ್ಯಾಪಾರ ವಹಿವಾಟಿನ ನೂತನ ವರ್ಷ ಆರಂಭವಾಗುವದೇ ದೀಪಾವಳಿಯ ಅಮಾವಾಸ್ಯೆಯಂದು. ಲಕ್ಷ್ಮಿದೇವಿಯನ್ನು ಸ್ವಾಗತಿಸಲು ಮನೆಗಳಲ್ಲಿ ಮಂಬಾಗಿಲನ್ನು ತೆರೆದಿರಸಲಾಗುತ್ತದೆ.
ಹರಿಭಕ್ತನಾದ ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಗೆ, ದಾನಶೀಲತೆಯಲ್ಲಿ ತನ್ನನ್ನು ಮೀರಿಸುವವರಿಲ್ಲವೆಂಬ ಅಹಂಭಾವವಿರುತ್ತದೆ. ಬಲಿ ಚಕ್ರವರ್ತಿಯ ಅಹಂಭಾವವನ್ನು ಕೊನೆಗಾಣಿಸಲು, ಶ್ರೀ ವಿಷ್ಣು ವಾಮನಾವತಾರ ತಳೆದು, ಬಲಿ ಚಕ್ರವರ್ತಿಯ ಬಳಿ ದಾನಾಕಾಂಕ್ಷಿಯಾಗಿ ಆಗಮಿಸಿ, ಕೇವಲ ಮೂರಡಿ ನೆಲವನ್ನು ಬೇಡುತ್ತಾನೆ.
ಬಲಿ ಚಕ್ರವರ್ತಿ ಸಮ್ಮತಿ ಸೂಚಿಸಿದಾಗ, ವಾಮನರೂಪಿ ಭಗವಂತ ತ್ರಿವಿಕ್ರಮನಾಗಿ ಬೆಳೆದು, ಮೊದಲ ಹೆಜ್ಜೆಯನ್ನು ಭೂಮಿಯ ಮೇಲೆ, ಎರಡನೆಯ ಹೆಜ್ಜೆಯನ್ನು ಆಕಾಶದ ಮೇಲಿರಿಸುತ್ತಾನೆ. ಮೂರನೆಯ ಹೆಜ್ಜೆಯನ್ನು ಎಲ್ಲಿರಿಸುವದೆಂಬ ಸಂದಿಗ್ಧಕ್ಕೆ ಸಿಲುಕಿದಾಗ, ಬಲಿ ಚಕ್ರವರ್ತಿಗೆ ಜ್ಞಾನೋದಯವಾಗುತ್ತದೆ. ಸಾಕ್ಷಾತ್ ಶ್ರೀ ಹರಿಯೇ ವಾಮನರೂಪಿಯಾಗಿ ತನ್ನನ್ನು ಪರೀಕ್ಷಿಸಲು ಬಂದಿರುವದನ್ನು ಅರಿತು, ಮೂರನೆಯ ಹೆಜ್ಜೆಯನ್ನು ತನ್ನ ಶಿರದ ಮೇಲಿರಿಸಲು ಪ್ರಾರ್ಥಿಸುತ್ತಾನೆ.
ಬಲೀಂದ್ರ ಚಕ್ರವರ್ತಿಯ ದಾನಶೀಲತೆಗೆ ಮೆಚ್ಚಿದ ವಾಮನರೂಪಿ ಶ್ರೀ ಹರಿ, ಬಲೀಂದ್ರನ ಇಚ್ಛೆಗನುಗುಣವಾಗಿ ಮೂರನೆಯ ಹೆಜ್ಜೆಯನ್ನು ಆತನ ತಲೆಯ ಮೇಲಿರಿಸಿ, ಆತನನ್ನು ಪಾತಾಳ ಲೋಕಕ್ಕೆ ತಳ್ಳುತ್ತಾನೆ. ಆತನನ್ನು, ಪಾತಾಳ ಲೋಕದ ಚಕ್ರವರ್ತಿಯನ್ನಾಗಿ ನೇಮಿಸುವದರೊಂದಿಗೆ, ಚಿರಂಜೀವಿಯಾಗಲೆಂದು ವರವನ್ನು ಅನುಗ್ರಹಿಸುತ್ತಾನೆ.
ಬಲೀಂದ್ರನ ಕೋರಿಕೆಯಂತೆ, ವರ್ಷಕ್ಕೊಮ್ಮೆ, ಆತನಿಗೆ ಬಲಿಪಾಡ್ಯಮಿಯ ದಿನ ಕುಟುಂಬ ಸಮೇತ ಭೂಲೋಕಕ್ಕೆ ಆಗಮಿಸಿ, ತನ್ನ ಸಾಮ್ರಾಜ್ಯವನ್ನು ದರ್ಶನ ಮಾಡುವ ವರವೀಯುತ್ತಾನೆ. ಬಲಿ ಚಕ್ರವರ್ತಿಗೆ, ಶ್ರೀ ಹರಿಯ ಚರಣಸ್ಪರ್ಷ ಮಾತ್ರದಿಂದಲೇ ಅಸುರೀ ಭಾವವೆಲ್ಲಾ ಕಳೆದುಹೋಗಿ ಭಗವದ್ಜ್ಯೋತಿಯ ದರ್ಶನವಾಗಿಬಿಡುತ್ತದೆ.
ಬಲಿಪಾಡ್ಯಮಿಯಂದೇ ಜಗದೊಡೆಯ ಶ್ರೀ ಕೃಷ್ಣ, ಗೋವರ್ಧನ ಗಿರಿಯನ್ನು ಎತ್ತಿದನಂತೆ. ದೀಪಾವಳಿಯ ಸಮಯದಲ್ಲಿ, ಮೂವತ್ತಮೂರು ಕೋಟಿ ದೇವತೆಗಳ ಸಾನಿಧ್ಯ ದೇವತೆಯಾದ ಕಾಮಧೇನು ಸ್ವರೂಪಿಣಿ ಗೋಮಾತೆಯನ್ನು ಪೂಜಿಸಿದರೆ ಸಂಚಿತ ಪಾಪಗಳು ನಶಿಸಿ ಮೋಕ್ಷಪ್ರಾಪ್ತಿಯಾಗುವದೆಂಬ ನಂಬಿಕೆಯಿದೆ.
ಕೃಷಿಪ್ರಧಾನವಾದ ನಮ್ಮ ದೇಶದಲ್ಲಿ, ಹಸು, ಎತ್ತುಗಳಿಗೆ ಕೃತಜ್ಞತಾ ಪೂರ್ವಕವಾಗಿ, ಅಲಂಕಾರ-ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕವಾಗಿದ್ದು ಸಹ ಬಲಿಪಾಡ್ಯಮಿಯಂದೇ. ಈ ದಿನ ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಕ್ತಾಯಗೊಳಿಸಿದ ದಿನವೂ ಹೌದು. ಬಲಿಪಾಡ್ಯಮಿಯ ದಿನವನ್ನು ಮಹಾರಾಷ್ಟ್ರದಲ್ಲಿ, ಪಾಡ್ವಾ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಈ ದಿನ ಅಕ್ಕಿಯ ಹಿಟ್ಟು ಮತ್ತು ಸಗಣಿಯಿಂದ ತಯಾರಿಸಿದ ಬಲಿಯ ಚಿತ್ರವನ್ನು ಬರೆದು ಸುತ್ತಲೂ ದೀಪಗಳನ್ನು ಬೆಳಗಿಸುತ್ತಾರೆ, ಕೆಲವೆಡೆ ಲಕ್ಷ್ಮಿಸ್ವರೂಪರೆನಿಸಿದ ತಾಯಂದಿರನ್ನು ಪೂಜಿಸಲಾಗುತ್ತದೆ.
ಬಲಿ ಪಾಡ್ಯಮಿಯ ಮಾರನೆಯ ದಿನ ಭಾವ ಬಿದಿಗೆಯ ಸಂಭ್ರಮದ ಆಚರಣೆ. ಸೋದರ-ಸೋದರಿಯರನ್ನು ಭೇಟಿಯಾಗುವ ಈ ಹಬ್ಬಕ್ಕೆ ಭಾಯಿದೂಜ್ ಎಂದು ಹೆಸರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಈ ಹಬ್ಬದ ಆಚರಣೆ, ಸೋದರ-ಸೋದರಿಯರ ಭಾಂಧವ್ಯವನ್ನು ಗಟ್ಟಿಗೊಳಿಸುವ ಸದಾಶಯ ಹೊಂದಿದೆ.
ದೈತ್ಯ ನರಕಾಸುರನನ್ನು ವಧಿಸಿದ ಮೂರು ದಿನಗಳ ಬಳಿಕ ಶ್ರೀ ಕೃಷ್ಣ, ಸೋದರಿಯಾದ ಸುಭಧ್ರೆಯನ್ನು ಭೇಟಿಯಾದಾಗ, ಆಕೆ ಶ್ರೀ ಕೃಷ್ಣನಿಗೆ ತಿಲಕವಿಟ್ಟು, ಆರತಿಯೆತ್ತಿ, ಸಿಹಿ ತಿನ್ನಿಸಿ ಸಂಭ್ರಮಿಸಿದಳಂತೆ. ಈ ದಿನ ಸೋದರಿಯರು ಸೋದರರಿಗೆ ಆರತಿಯೆತ್ತಿ, ಅವರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಂದೇ ಯಮಧರ್ಮರಾಯ, ತನ್ನ ಸೋದರಿಯನ್ನು ಭೇಟಿಯಾಗುವ ದಿನ. ಮಹಾರಾಷ್ಟ್ರದಲ್ಲಿ ಭಾಯಿದೂಜ್ ಹಬ್ಬದಂದು ಕುಟುಂಬದ ಸದಸ್ಯರೆಲ್ಲರೂ ಸೇರಿ ವಿಶೇಷವಾಗಿ ಬಾಸುಂದಿ ಪೂರಿಗಳನ್ನು ತಯಾರಿಸಿ ಸವಿಯುತ್ತಾರೆ.
ದೀಪವನ್ನು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪವೆನ್ನಲಾಗುತ್ತದೆ. ದೀಪಾವಳಿ ಹಬ್ಬ ದುಷ್ಟ ಶಕ್ತಿಗಳ ಸಂಹಾರ ಮತ್ತು ಶಿಷ್ಟವರ್ಗದ ವಿಜಯದ ದ್ಯೋತಕ ಎಂದು ಪರಿಗಣಿಸಲಾಗುತ್ತದೆ. ದೀಪಗಳ ಬೆಳಕಿನಿಂದ ಮನಮನೆಗಳಲ್ಲಿ, ಜ್ಞಾನದ ಹೊಳಪನ್ನು ತುಂಬಿಸಿಕೊಳ್ಳುವದಗತ್ಯ. ನಮ್ಮ ಅಂತರಂಗ-ಬಹಿರಂಗಗಳ ಎಲ್ಲಾ ರೀತಿಯ ಕತ್ತಲನ್ನೂ ದೂರೀಕರಿಸುವದೇ ನಿಜವಾದ ಬೆಳಕು,. ನಮ್ಮ ಬದುಕನ್ನು ನರಕವಾಗಿಸುವ ಅಸಹನೆ, ಕೋಪ, ಕ್ಲೇಶ-ಚಿಂತೆ, ಆತಂಕ, ದುಗುಡಗಳ ಕತ್ತಲೆಯೇ ರಾಕ್ಷಸ ಶಕ್ತಿ. ಈ ಬಾರಿ ದೀಪಾವಳಿಯ ಜ್ಯೋತಿ ಮನೆ-ಮನಗಳನ್ನು ಬೆಳಗುವ ಮೂಲಕ ನೆಮ್ಮದಿ ನೀಡಲಿ.
Advertisement