ನವರಾತ್ರಿ- ನವ ದುರ್ಗಾವೈಭವ

ಆದಿಶಕ್ತಿ, ಮಹಾಮಾಯೆ, ಯೋಗಮಾಯೆ ಎಂಬೆಲ್ಲ ನಾಮಾಂಕಿತಳಾದ ದುರ್ಗಾಪರಮೇಶ್ವರಿ ಪರಬ್ರಹ್ಮ ಸ್ವರೂಪಿಣಿ. ನಿರಾಕಾರ ಓಂಕಾರದ ಸಾಕಾರ ರೂಪವೇ ಅವಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಖಕರು: ಪ್ರಕಾಶ್ ಶರ್ಮ

ಇಮೇಲ್ ವಿಳಾಸ: govindakanda@gmail.com 

ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂಧಸ್ಥಿತಾಂ ಭೀಷಣಾಂ
ಕನ್ಯಾಭಿಃ ಕರವಾಲಖೇಟವಿಲಸತ್ ಹಸ್ತಾಭಿರಾಸೇವಿತಾಮ್ |
ಹಸ್ತೈಶ್ಚಕ್ರಗದಾಸಿಖೇಟವಿಶಿಖಾಂಶ್ಚಾಪಂ ಗುಣಂ ತರ್ಜನೀಂ
ಬಿಭ್ರಾಣಾಮನಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿನೇತ್ರಾಂ ಭಜೇ||

ಆದಿಶಕ್ತಿ, ಮಹಾಮಾಯೆ, ಯೋಗಮಾಯೆ ಎಂಬೆಲ್ಲ ನಾಮಾಂಕಿತಳಾದ ದುರ್ಗಾಪರಮೇಶ್ವರಿ ಪರಬ್ರಹ್ಮ ಸ್ವರೂಪಿಣಿ. ನಿರಾಕಾರ ಓಂಕಾರದ ಸಾಕಾರ ರೂಪವೇ ಅವಳು. ಅನಂತ ನಭೋಮಂಡಲದಲ್ಲಿ ಅಸಂಖ್ಯ ಮಾಯಾಬ್ರಹ್ಮಾಂಡಗಳನ್ನು ಸೃಜಿಸಿ ಮಾಯಾಲೀಲೆಯನ್ನು ಆಡುವವಳು. ದುರ್ಗಾ ದುರ್ಗತಿ ನಾಶಿನಿ ಎಂದೇ ಖ್ಯಾತಿವೆತ್ತ ಆಕೆಯ ವಿವಿಧ ಲೀಲೆಗಳ ಸ್ಮರಣೆಯೇ ನವರಾತ್ರಿ.

ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜ, ಭಂಡಾಸುರ… ಹೀಗೆ ಅಸಂಖ್ಯ ಆಸುರೀ ಶಕ್ತಿಗಳಿಂದ ಬ್ರಹ್ಮಾಂಡವನ್ನು ರಕ್ಷಿಸಲೋಸುಗ ಸಾಕಾರಮೂರ್ತಿಯಾಗಿ, ಮಹಾಲಾವಣ್ಯವತಿಯಾಗಿ ಮೈದಳೆದು ಲೋಕ ಲೋಕಗಳಲ್ಲಿ ಪ್ರಣವಜ್ಞಾನದ ಕಾಂತಿಪ್ರಭೆಯನ್ನು ಪಸರಿಸಿದ ದೇವೀ ಲೀಲೆಯ ಕೊಂಡಾಡಲು ಪದಗಳೇ ಸಾಲದು.

ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜ, ಭಂಡಾಸುರ… ಮೊದಲಾದ ಅಸುರರೆಲ್ಲ ಲೋಕಕ್ಕೆ ಕಂಟಕರಾಗಿದ್ದಂಥ ಕಾಲಘಟ್ಟ. ಲೋಕಪಾಲಕರಾದ ದೇವತಗಳೂ ಅಸುರರ ಅಟ್ಟಹಾಸದ ಮುಂದೆ ಕೈಚೆಲ್ಲಿ ಕುಳಿತಂಥ ಸಂದರ್ಭ. ಬ್ರಹ್ಮಾಂಡವನ್ನು ದುರುಳರಿಂದ ರಕ್ಷಿಸುವ ಬಗೆಯೆಂತೆಂಬುದಾಗಿ ತ್ರಿಮೂರ್ತಿಗಳ ಕೂಡಿ ಚರ್ಚಿಸಿದಾಗ ಆದಿಶಕ್ತಿಯೇ ದಿಕ್ಕು ತೋರಿಸಿಯಾಳೆಂದು ಆಕೆಯನ್ನೇ ಸ್ತುತಿಸಿದರು. ಆರ್ತರಾಗಿ ಅಮ್ಮಾ ಕಾಪಾಡು, ದುರುಳರಿಂದ ಜಗವ ಪೊರೆಯೆ ಪ್ರಕಟವಾಗೆಂದು ಗೋಳಿಟ್ಟರು.

ಕೋಟಿ ಸೂರ್ಯರ ಪ್ರಕಾಶವಿದ್ದರೂ ಕೋಟಿ ಚಂದ್ರರ ಶೀತಲ ಕಾಂತಿಯ ಹೊದ್ದು ಅನಂತ ಬ್ರಹ್ಮಾಂಡಗಳ ರೂಪಲಾವಣ್ಯಗಳೆಲ್ಲ ಮೈವೆತ್ತ ಸಾಕಾರ ಮೂರ್ತಿಯಾಗಿ ಪ್ರಕಟಗೊಂಡಳು ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕಿ. ಪರ್ವತರಾಜನೇ ಮೃಗರಾಜನಾಗಿ, ಸಿಂಹವಾಗಿ ದೇವಿಯನ್ನು ಹೊತ್ತು ವಾಹನನಾದ. ದೇವಾನುದೇವತೆಗಳ ಆಯುಧಗಳು ದೇವಿಯ ಕೈಗಳನ್ನು ಅಲಂಕರಿಸಿದವು. ಮಹಾಲಾವಣ್ಯದಿಂದ, ತನುವಿನ ಸುಗಂಧದಿಂದ ಅಸುರರನ್ನು ಸೆಳೆದು ಸಂಹರಿಸಿ ಜಗವನ್ನು ಪಾಪದ ಕೂಪದಿಂದ ಮುಕ್ತಗೊಳಿಸಿದಳು ಆದಿಶಕ್ತಿ.

ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀ ಸ್ವರೂಪಿಣಿಯಾದ ಆದಿಶಕ್ತಿ ಶ್ರೀ ಲಲಿತಾ ಪರಮೇಶ್ವರಿಯ ಮಹಾಸ್ವರೂಪಗಳನ್ನೊಮ್ಮೆ ನೋಡೋಣ.

ನವದುರ್ಗೆಯರು: ನವದುರ್ಗೆಯರೆಂದೊಡೆ ನೆನಪಾಗುವುದು….
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಂ ||
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀ ತಥಾ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಂ |
ನವಮಂ ಸಿದ್ಧಿದಾತ್ರೀಚ ನವದುರ್ಗಾಃ ಪ್ರಕೀರ್ತಿತಾಃ ||

ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ಎಂಬ ನವದುರ್ಗೆಯರು.

ಮಾರ್ಕಂಡೇಯ ಮುನಿಗಳಿಂದ ಪ್ರಣೀತವಾದಂಥ ದುರ್ಗಾಸಪ್ತಶತಿಯಲ್ಲೂ ಈ ನವದುರ್ಗೆಯರನ್ನೇ ಬಣ್ಣಿಸಲಾಗಿದೆ.
ಆದಾಗ್ಯೂ ಧಾರ್ಮಿಕವಾದ ಪೂಜಾ ಆಚರಣೆಗಳಲ್ಲಿ, ಶಾಸ್ತ್ರ ಸಮ್ಮತವಾದ ವಿಧಾನಗಳಲ್ಲಿ ಆದಿಶಕ್ತಿಯ ವಿಭಿನ್ನ ರೂಪಗಳನ್ನು ನವದುರ್ಗೆಯರೆಂದು ಬಣ್ಣಿಸಲಾಗಿದೆ.

ಯೋಗನಿದ್ರಾ, ದೇವಜಾತಾ, ಮಹಿಷಾಸುರಮರ್ದಿನೀ, ಶೈಲಜಾ, ಧೂಮ್ರಹಾ, ಚಂಡಮುಂಡಹಾ, ರಕ್ತಬೀಜಹಾ, ನಿಶುಂಭಹಾ, ಶುಂಭಹೇತಿ ನವದುರ್ಗಾಃ ಪ್ರಕೀರ್ತಿತಾಃ ಎಂಬ ನವದುರ್ಗಾ ವರ್ಣನೆಯೂ ಇದೆ.

ದುರ್ಗಾ ಆರ್ಯಾ ಭಗವತೀ ಕುಮಾರೀ ಚಾಂsಬಿಕಾ ತಥಾ |
ಮಹಿಷೋನ್ಮರ್ದಿನೀ ಚೈವ ಚಂಡಿಕಾ, ಚ ಸರಸ್ವತೀ |
ವಾಗೀಶ್ವರೀತಿ ಕ್ರಮಶಃ ಪ್ರೋಕ್ತಾಸ್ತಾದಿನವದೇವತಾಃ ||

ಈ ಶ್ಲೋಕದಲ್ಲಿ ದುರ್ಗಾ, ಆರ್ಯಾ, ಭಗವತೀ, ಕುಮಾರೀ, ಅಂಬಿಕಾ, ಮಹಿಷಾಸುರಮರ್ದಿನಿ, ಚಂಡಿಕಾ, ಸರಸ್ವತೀ, ವಾಗೀಶ್ವರೀ ಎಂಬ ದೇವಿಯರು ಆದಿ ನವದುರ್ಗೆಯರೆಂಬ ವರ್ಣನೆ ಕಾಣಬಹುದು.

ಕುಮಾರೀಚ ತ್ರಿಮೂರ್ತಿಶ್ಚ ಕಲ್ಯಾಣೀ ರೋಹಿಣೀ ತಥಾ |
ಕಾಲೀ ಚಂಡೀ ಶಾಂಭವೀಚ ದುರ್ಗಾಭದ್ರಾ ಇತಿಸ್ಮೃತಾಃ ||

ಎಂಬಲ್ಲಿ ಆದಿಶಕ್ತಿಯ ಇನ್ನಷ್ಟು ರೂಪಗಳನ್ನು ನವದುರ್ಗೆಯರೆಂದು ವರ್ಣಿಸಿದ್ದು ಕಾಣಬಹುದು.

ಜಯಾಂ ಚ ವಿಜಯಾಂ ಭದ್ರಾಂ ಭದ್ರಕಾಲೀಮನಂತರಂ |
ಸುಮುಖೀಂ ದುರ್ಮುಖೀಸಂಜ್ಞಾಂ ಪಶ್ಚಾದ್ವ್ಯಾಘ್ರಮುಖೀಂ ತಥಾ |
ಅಥ ಸಿಂಹಮುಖೀಂ ದುರ್ಗಾಂ ನವದುರ್ಗಾಂ ವಿದುರ್ಬುಧಾಃ ||

ಎಂಬೊಂದು ನವದುರ್ಗಾ ವರ್ಣನೆಯೂ ಸಿಗುತ್ತದೆ. ವಿಭಿನ್ನ ಪದ್ಧತಿಯಲ್ಲಿ ಆದಿಶಕ್ತಿಗೆ ನವರಾತ್ರಿಯ ಪೂಜೆಗಳೂ ನಡೆಯುತ್ತವೆ.

ನವರಾತ್ರಿ ಪೂಜೆ….
ಶರದ್ ಋತುವಿನ ಅಶ್ವಯುಜ ಮಾಸ ಶುಕ್ಲಪಕ್ಷ ಪಾಡ್ಯದಿಂದ ಆರಂಭವಾಗುತ್ತದೆ ಮಾತೆಯ ಮಹೋತ್ಸವ. ಮಾತೃಪಕ್ಷವೆಂದೇ ಪ್ರಸಿದ್ಧಿಯಾದ ಈ ದಿನಗಳಲ್ಲಿ ತಾಯಿ ಆದಿಶಕ್ತಿಯನ್ನು ನಾನಾ ರೂಪಗಳಲ್ಲಿ ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ.

ಮಾತೆ ದುರ್ಗೆಗೆ ಅತ್ಯಂತ ಪ್ರಿಯವಾದದ್ದು ಗುಡಾನ್ನ, ಅರ್ಥಾತ್ ಬೆಲ್ಲದ ಪರಮಾನ್ನ. ಗುಡಾನ್ನ ಪ್ರೀತಮಾನಸಾ ಎಂದೇ ಶ್ರೀ ಲಲಿತಾ ಸಹಸ್ರನಾಮದಲ್ಲಿ ಆಕೆಯನ್ನು ಬಣ್ಣಿಸಲಾಗಿದೆ. ಬೇರಾವುದೇ ನೈವೇದ್ಯವನ್ನು ತಾಯಿಯ ಪಾದಪದ್ಮಗಳಿಗೆ ಅರ್ಪಿಸಿದರೂ ಗುಡಾನ್ನವಿಲ್ಲದಿದ್ದರೆ ನೈವೇದ್ಯ ಅಪೂರ್ಣವೇ ಸರಿ.

ಆದಿಶಕ್ತಿ ಶ್ರೀಲಲಿತೆ ದುರ್ಗಾ ಪರಮೇಶ್ವರಿಯ ಪೂಜೆ ನಾನಾ ವಿಧ, ನಾನಾ ಪದ್ಧತಿ. ದೇಶಕಾಲ ಭಿನ್ನವಾದಂತೆ ಪೂಜಾ ವಿಧಾನವೂ ಭಿನ್ನ. ಪರಂಪರಾನುಗತವಾಗಿ ಬಂದಂಥ ಪೂಜಾ ವಿಧಾನ, ಪದ್ಧತಿಯೇ ಶ್ರೇಯಸ್ಕರವೆಂದೂ ಅದನ್ನೇ ಅನುಸರಿಸಬೇಕೆಂಬುದೂ ಶಾಸ್ತ್ರಸಮ್ಮತ ಅಭಿಮತ.

ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |
ಸರ್ವದೇವನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

ಯಾವುದೇ ವಿಧಾನದಲ್ಲಿ ಪದ್ಧತಿಯಲ್ಲಿ ದೇವಿಯನ್ನು ಸ್ತುತಿಸಿದರೂ ಅದು ತಲುಪುವುದು ಮಹಾಮಾಯೆಯ ಮಾಯಾಲೋಕದ ಪಾಲಕನಾದ ಕೇಶವನ ಮೂಲಕ ಪರಬ್ರಹ್ಮ ಸ್ವರೂಪಿಣಿಯಾದ ಓಂಕಾರ ರೂಪಿಣಿಯಾದ ಆದಿಶಕ್ತಿಗೇ ಎಂಬುದರಲ್ಲಿ ಸಂಶಯವಿಲ್ಲ.

ವರದಾsಹಂ ಸುರಗಣಾ ವರಂ ಯಂ ಮನಸೇಚ್ಛಥ |
ತಂ ವೃಣುಧ್ವಂ ಪ್ರಯಚ್ಛಾಮಿ ಜಗತಾಮುಪಕಾರಕಮ್ ||

ಜಗತ್ತಿನ ಕಲ್ಯಾಣಕ್ಕಾಗಿ ಮತ್ತೆ ಮೈದಳೆಯುತ್ತೇನೆ ಎಂದಿದ್ದಾಳೆ ಆದಿಶಕ್ತಿ ಶ್ರೀ ಲಲಿತೆ ದುರ್ಗಾಪರಮೇಶ್ವರಿ. ನಮ್ಮೆಲ್ಲರನ್ನು ಉದ್ಧರಿಸುವುದಕ್ಕಾಗಿ, ಲೋಕವನ್ನು ಬೆಳಗುವುದಕ್ಕಾಗಿ ಶ್ರೀಲಲಿತೆ ಮತ್ತೊಮ್ಮೆ ಆವಿರ್ಭವಿಸಲಿ. ನಾನಾ ಋಣಾತ್ಮಕ ಶಕ್ತಿಗಳಿಂದ ಜಗತ್ತನ್ನು ಪಾರುಮಾಡಲಿ ಎಂದು ಈ ನವರಾತ್ರಿಯ ಶುಭ ಸಂದರ್ಭದಲ್ಲಿ ಭಕ್ತಿಯಿಂದ ಆದಿಶಕ್ತಿಯನ್ನು ಸ್ತುತಿಸೋಣ…

ಬಾಲಾರ್ಕಮಂಡಲಾಭಾಸಾಂ ಚತುರ್ಬಾಹುಂ ತ್ರಿಲೋಚನಾಂ |
ಪಾಶಾಂಕುಶವರಾಭೀತೀರ್ಧಾರಯಂತೀಂ ಶಿವಾಂ ಭಜೇ ||
ಸರ್ವೇ ಜನಾಃ ಸುಖಿನೋ ಭವಂತು ||

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com