ಗಣೇಶ ಚತುರ್ಥಿ: ಶೃಂಗೇರಿ ಶಾರದೆಯ ಸನ್ನಿಧಿಯಲ್ಲಿ 'ಮಹಾಗಣಪತಿ ವಾಕ್ಯಾರ್ಥ ಸಭೆ'ಯ ವೈಶಿಷ್ಟ್ಯ, ವಿಶೇಷತೆ... 

ಶೃಂಗೇರಿ ಶಾರದಾ ಪೀಠದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾವಾಕ್ಯಾರ್ಥ ಸಭೆ (ವಿದ್ವತ್ ಸಭೆ) ನಡೆಯಲಿದ್ದು, ಜಿಜ್ಞಾಸು, ವಿದ್ವಾಂಸರ ಪಾಲಿಗೆ ನಿಜಕ್ಕೂ ಇದು ಮಹತ್ವದ ಹಬ್ಬವೇ ಆಗಿದೆ. 
ಗಣೇಶ-ಶೃಂಗೇರಿ ದೇವಾಲಯ (ಸಂಗ್ರಹ ಚಿತ್ರ)
ಗಣೇಶ-ಶೃಂಗೇರಿ ದೇವಾಲಯ (ಸಂಗ್ರಹ ಚಿತ್ರ)

ಗಣೇಶ ಚತುರ್ಥಿ ಭಾರತದಾದ್ಯಂತ ಅತಿ ಹೆಚ್ಚು ಸಂಭ್ರಮದಿಂದ, ಹೆಚ್ಚು ದಿನಗಳು ವಿವಿಧ ಸ್ವರೂಪಗಳಲ್ಲಿ ನಡೆಯುವ ಮನೆ ಮನೆಗಳ ಹಬ್ಬ. ಮನೆ ಮನೆಗಳ ಹಬ್ಬ ಎನ್ನುವುದಕ್ಕಿಂತಲೂ ಉಳಿದ ಹಬ್ಬಗಳಿಗಿಂತ ಹೆಚ್ಚು ಸಾಮಾಜಿಕವಾಗಿ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬ.

ಗಣೇಶ ಹಬ್ಬ ಸಾರ್ವಜನಿಕ ಕಾರ್ಯಕ್ರಮಗಳ ರೂಪದಲ್ಲಿ, ಚಳುವಳಿಗಳಿಗೆ ಜನರನ್ನು ಒಗ್ಗೂಡಿಸುವ, ಸಮಾಜದ ಹಿತಕ್ಕಾಗಿ ನಡೆಯುವ ಯೋಜನೆಗಳಿಗೆ ಸಾರ್ವಜನಿಕರನ್ನು ಒಂದಾಗಿ ಸೇರಿಸುವ ಹಬ್ಬವಾಗಿಯೂ ಅದೆಷ್ಟೋ ಸಂದರ್ಭಗಳಲ್ಲಿ ಆಚರಣೆಯಾಗಿದೆ. ಇದಕ್ಕೆ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಗಣೇಶನ ಹಬ್ಬವನ್ನು ಸ್ವಾತಂತ್ರ್ಯ ಹೋರಾಟದ ಉದ್ದೇಶ ಮತ್ತು ಅಗತ್ಯತೆಯನ್ನು ಜನರಿಗೆ ಮನವರಿಕೆ ಸಮರ್ಥವಾಗಿ ಬಳಸಿಕೊಂಡರು. ಅಂದು ತಿಲಕರು ಪ್ರಾರಂಭಿಸಿದ ಗಣೇಶೋತ್ಸವ ಮಹಾರಾಷ್ಟ್ರದಲ್ಲಿ ಇಂದಿಗೂ ಹಲವು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. 

ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಯುತ್ತಿರುವ ವಿದ್ವಾಂಸರ ವಾಕ್ಯಾರ್ಥ ಸಭೆ 

ಸಾರ್ವಜನಿಕ ಕಾರ್ಯಕ್ರಮವಾಗಿಯಷ್ಟೇ ಅಲ್ಲದೇ ಗಣೇಶ ಹಬ್ಬ ಸಂಸ್ಕೃತಿ, ಪುರಾತನ ವಿದ್ಯೆಗಳನ್ನು ಪೋಷಿಸುವ ಹಬ್ಬವಾಗಿಯೂ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಜೀವಾತ್ಮ-ಪರಮಾತ್ಮ ಎರಡೂ ಒಂದೇ ಎಂಬ ಅದ್ವೈತ ತತ್ವವನ್ನು ಪ್ರಚಾರ ಮಾಡಿದ ಆದಿ ಶಂಕರಾಚಾರ್ಯರು ಪ್ರಾರಂಭಿಸಿದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾವಾಕ್ಯಾರ್ಥ ಸಭೆ (ವಿದ್ವತ್ ಸಭೆ) ನಡೆಯಲಿದ್ದು, ಜಿಜ್ಞಾಸು, ವಿದ್ವಾಂಸರ ಪಾಲಿಗೆ ನಿಜಕ್ಕೂ ಇದು ಮಹತ್ವದ ಹಬ್ಬವೇ ಆಗಿದೆ. 

ವಿದ್ವತ್ ಸಭೆಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಶೃಂಗೇರಿಗೆ ಆಗಮಿಸಿರುವ ವಿದ್ವಾಂಸರು 

ಹೇಗೆ ಬೆಂಗಳೂರಿನಲ್ಲಿರುವ ಮಂದಿಗೆ ಗಣೇಶ ಹಬ್ಬವೆಂದರೆ ಬಸವನಗುಡಿಯಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ನಡೆಯುವ ಗಣೇಶೋತ್ಸವದ ವೈಭವ, ಆಚರಣೆಗಳು ತನ್ನತ್ತ ಆಕರ್ಷಿಸುತ್ತದೆಯೋ, ಅಂತೆಯೇ ವಿದ್ವಾಂಸರಿಗೆ ಗಣೇಶ ಹಬ್ಬವೆಂದರೆ ಶೃಂಗೇರಿಯ ಮಹಾಗಣಪತಿ ವಾಕ್ಯಾರ್ಥ ಸಭೆಯಲ್ಲಿ ವಾದ ಮಂಡಿಸುವುದು ಪ್ರತಿಷ್ಠೆ, ಆಕರ್ಷಣೆಯ ವಿಷಯವಾಗಿದೆ.  

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಪ್ರಾರಂಭವಾಗುವ ಈ ಸಭೆ ವಿದ್ವತ್ ವಲಯದಲ್ಲಿ, ಜಿಜ್ಞಾಸುಗಳ ವಲಯದಲ್ಲಿ  ಮಹಾಗಣಪತಿ ವಾಕ್ಯಾರ್ಥ ಸಭೆ ಎಂದೇ ಪ್ರಸಿದ್ಧಿ ಪಡೆದಿದೆ. ಶಾಸ್ತ್ರವೇತ್ತರೂ, ಪಂಡಿತರೂ, ವಿದ್ವಾಂಸರೂ ಆದ ಶೃಂಗೇರಿಯ ಜಗದ್ಗುರುಗಳ ಸಮ್ಮುಖದಲ್ಲಿ ಪ್ರತಿ ವರ್ಷ ಸತತ 12 ದಿನಗಳ ಕಾಲ ನ್ಯಾಯ, ಸಾಂಖ್ಯಾದಿಯಾಗಿ ಭಾರತೀಯ ತತ್ವಜ್ಞಾನದ ಹಲವು ಶಾಖೆಗಳಲ್ಲಿನ ವಿಷಯಗಳ ಕುರಿತು ಪ್ರತಿ ದಿನವೂ 3-4 ಗಂಟೆಗಳ ಕಾಲ ವಾಕ್ಯಾರ್ಥ ಸಭೆ ನಡೆಯುತ್ತದೆ.

ವಿದ್ವತ್ ಸಭೆಯಲ್ಲಿ ಭಾಗವಹಿಸಿದ್ದ ವಿದ್ವಾಂಸರಿಗೆ ಸನ್ಮಾನ (ಚಿತ್ರ ಕೃಪೆ: sringeri.net)

ಭಾರತೀಯ ದರ್ಶನಗಳ ಬಗ್ಗೆ ಆಳವಾದ ಚರ್ಚೆ, ಚಿಂತನೆ ಅಂದರೇನೆಂದು ತಿಳಿಯಲು ಮಹಾಗಣಪತಿ ವಾಕ್ಯಾರ್ಥ ಸಭೆ ಅತ್ಯುತ್ತಮ ವೇದಿಕೆಯಾಗಿದ್ದು, ಭಾರತದ ಪುರಾತನ ವಿದ್ಯೆಗಳನ್ನು ಈ ಕ್ಷಣಕ್ಕೂ ಶ್ರೇಷ್ಠ ಮಾರ್ಗದಲ್ಲಿ ಪೋಷಿಸಿಕೊಂಡು ಬರುತ್ತಿದೆ. ಈ ವಾಕ್ಯಾರ್ಥ ಸಭೆಗೆ ಕೇವಲ ದಕ್ಷಿಣ ಭಾರತವಷ್ಟೇ ಅಲ್ಲದೇ ಭಾರತದ ಯಾವುದೇ ಭಾಗದಲ್ಲಿನ ಸಂಸ್ಕೃತ ಪರಂಪರಾಗತ ವಿದ್ವಾಂಸರೂ ಇದರಲ್ಲಿ ಭಾಗವಹಿಸುತ್ತಾರೆ. ವಿದ್ವತ್ ವಲಯದಲ್ಲಿ ಶೃಂಗೇರಿಯ ಗಣಪತಿ ಮಹಾವಾಕ್ಯಾರ್ಥ ಸಭೆ ಎಂದರೆ ಪ್ರತಿಷ್ಠೆಯ ಸಂಗತಿ. ತನ್ನ ಜೀವಿತಾವಧಿಯಲ್ಲಿ ಶಾರದೆಯ ಸಮ್ಮುಖದಲ್ಲಿ ಶಾಸ್ತ್ರ ಚರ್ಚೆ (ಶಾಸ್ತ್ರಾರ್ಥ) ಮಾಡುವುದು ಪ್ರತಿಯೊಬ್ಬ ವಿದ್ವಾಂಸನ ಜೀವಿತಾವಧಿಯ ಕನಸು. 

ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಯುತ್ತಿರುವ ವಿದ್ವಾಂಸರ ವಾಕ್ಯಾರ್ಥ ಸಭೆ 

ಗಣೇಶ ಚತುರ್ಥಿಯ ದಿನದಂದು ಪ್ರಾರಂಭವಾಗುವ ಈ ವಾಕ್ಯಾರ್ಥ ಸಭೆ ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಪಕ್ಷದ ಚತುರ್ದಶಿ)ಯ ದಿನದವರೆಗೆ ನಡೆಯಲಿದ್ದು, ವಿದ್ವತ್ ಸಭೆಯಲ್ಲಿ ಉತ್ತಮವಾಗಿ ಚರ್ಚೆ ಮಾಡಿ, ಪಾಂಡಿತ್ಯ ಪ್ರದರ್ಶಿಸಿದ ವಿದ್ವಾಂಸರುಗಳಿಗೆ ವಾಕ್ಯಾರ್ಥ ಮುಕ್ತಾಯಗೊಳ್ಳುವ ದಿನದಂದು ಜಗದ್ಗುರುಗಳು ಸುವರ್ಣ ಅಂಗುಲಿ (ಮುದ್ರೆಯನ್ನು ಹೊಂದಿರುವ ಬಂಗಾರದ ಉಂಗುರ)ವನ್ನು ನೀಡಿ ಗೌರವಿಸುತ್ತಾರೆ. 

ಮಹಾಗಣಪತಿ ವಾಕ್ಯಾರ್ಥ್ಯ ಸಭೆ ಮೊದಲು ಪ್ರಾರಂಭಗೊಂಡಿದ್ದು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳ ಅವಧಿಯಲ್ಲಿ. ನಶಿಸುತ್ತಿರುವ ವೇದ-ವೇದಾಂತ, ಭಾರತೀಯ ದರ್ಶನಗಳ ವಿದ್ಯೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ವೇದ ವಿದ್ವಾಂಸರಲ್ಲಿನ ಪಾಂಡಿತ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಈಗ ಶೃಂಗೇರಿಯಲ್ಲಿ ನಡೆಯುತ್ತಿರುವ ಮಹಾಗಣಪತಿ ವಾಕ್ಯಾರ್ಥ ಸಭೆಯನ್ನು ಮೊಟ್ಟ ಮೊದಲಿಗೆ ಪ್ರಾರಂಭಿಸಿದ ಕೀರ್ತಿ ಇವರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com