ನಾಗರ ಪಂಚಮಿ ನಾಡಿಗೆ ದೊಡ್ಡದು 

ಗ್ರೀಷ್ಮ ಋತುವಿನ ಜೇಷ್ಠ ಮತ್ತು ಆಷಾಡ ಮಾಸಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲಿ ಕೃಷಿಯ ಬಿತ್ತನೆ ಕಾರ್ಯ ಮುಗಿಸಿ ಬಳಲಿ, ವರ್ಷ ಋತುವಿನಲ್ಲಿ ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಲ್ಲಿರುವಾಗಲೇ ಬರುವ ಮಾಸವೇ ಶ್ರಾವಣ ಮತ್ತು ಭಾದ್ರಪದ.

Published: 02nd August 2022 11:24 AM  |   Last Updated: 04th August 2022 04:53 PM   |  A+A-


Representational image

ಸಾಂದರ್ಭಿಕ ಚಿತ್ರ

Online Desk

ಬರಹ: ಶ್ರೀಕಂಠ ಬಾಳಗಂಚಿ

ಗ್ರೀಷ್ಮ ಋತುವಿನ ಜೇಷ್ಠ ಮತ್ತು ಆಷಾಡ ಮಾಸಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲಿ ಕೃಷಿಯ ಬಿತ್ತನೆ ಕಾರ್ಯ ಮುಗಿಸಿ ಬಳಲಿ, ವರ್ಷ ಋತುವಿನಲ್ಲಿ ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಲ್ಲಿರುವಾಗಲೇ ಬರುವ ಮಾಸವೇ ಶ್ರಾವಣ ಮತ್ತು ಭಾದ್ರಪದ.

ಶ್ರಾವಣ ಮತ್ತು ಭಾದ್ರಪದ ಮಾಸಗಳೆಂದರೆ ಹಬ್ಬಗಳ ಮಾಸಗಳು ಎಂದರೆ ತಪ್ಪಾಗಲಾರದು. ಸಾಲು ಸಾಲುಗಳ ಹಬ್ಬಗಳಲ್ಲಿ ಎರಡನೆಯ (ಆಷಾಡದ ಕಡೆಯ ದಿನ ಭೀಮನಮಾವಾಸ್ಯೆ) ಹಬ್ಬವೇ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ವಿಶೇಷ ಭಯ, ಭಕ್ತಿ ಮತ್ತು ಮಡಿಯಿಂದ ಆಚರಿಸಲ್ಪಡುವ ಈ ಹಬ್ಬವನ್ನು ನಾಗರ ಪಂಚಮಿ, ಗರುಡ ಪಂಚಮಿ ಅಥವಾ ಜೋಕಾಲೀ ಹಬ್ಬ ಎಂದೂ ಕರೆಯುತ್ತಾರೆ.

ಉಳಿದೆಲ್ಲ ಹಬ್ಬಗಳಿಗಿಂತ ಈ ಹಬ್ಬದಲ್ಲಿ ಸ್ವಲ್ಪ ಮಡಿ ಹುಡಿಗೆ ಹೆಚ್ಚಿನ ಮಹತ್ವವಿದ್ದು, ಈ ದಿನದಂದು ಎಲ್ಲಾ ಅಡುಗೆಗಳೂ ಮಡಿಯಲ್ಲಿಯೇ ತಯಾರಾಗುತ್ತದೆ ಮತ್ತು ಸುಬ್ರಹ್ಮಣ್ಯಸ್ವಾಮಿಗೆ ಒಗ್ಗರಣೆಯ ಘಾಟು ಒಗ್ಗಿ ಬಾರದು ಎಂಬ ಕಾರಣದಿಂದ ಈ ದಿನ ಅಡುಗೆಗೆ ಒಗ್ಗರಣೆ ಹಾಕುವುದು ನಿಷಿಧ್ಧವಾಗಿರುತ್ತದೆ. ಈ ದಿನದಂದು ಬೆಳ್ಳಂ ಬೆಳಗ್ಗೆಯೇ ಮನೆಯವರೆಲ್ಲರೂ ಸ್ನಾನ ಮಾಡಿ ಮಡಿಯುಟ್ಟು ಕೊಂಡು ಮನೆಯ ಸಮೀಪದ ಅಶ್ವಥ್ಥಕಟ್ಟೆಯಲ್ಲಿರುವ ನಾಗರ ಕಲ್ಲಿಗೆ, ಇಲ್ಲವೇ ಸಮೀಪದಲ್ಲಿರುವ ಹಾವಿನ ಹುತ್ತಕ್ಕೆ ಅಥವಾ ಮನೆಯಲ್ಲಿಯೇ ಹುತ್ತದ ಮಣ್ಣಿನ ಜೊತೆಗೆ ಹುತ್ತದ ಸಮೀಪವೇ ಬೆಳೆಯುವ ಹುತ್ತದ ಹುಲಿ ಕಡ್ಡಿಯನ್ನು ತಂದು ಅದರ ಜೊತೆಗೆ ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರ ಹಾವಿನಂತೆ ಪ್ರತಿ ರೂಪ ಮಾಡಿ, ಅದಕ್ಕೆ ಹಸಿ ಹಾಲು, ತುಪ್ಪ, ಜೊತೆಗೆ ಅಕ್ಕಿ ಹಿಟ್ಟು ಮತ್ತು ಅರಳಿನಿಂದ ತನಿ ಎರೆಯುವುದು ನೈವೇದ್ಯಕ್ಕೆ ಎಳ್ಳಿನ ಚಿಗಳಿ,ಅಕ್ಕಿಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ತಂಬಿಟ್ಟು ಸಿಹಿ‌ಕಡುಬು ಮತ್ತು ನುಚ್ಚಿನ ಉಂಡೆಗಳನ್ನು ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಅರ್ಪಿಸುವುದು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ದತಿ.

ಮನೆಯವರೆಲ್ಲರೂ ನಾಗಪ್ಪನಿಗೆ ಈ ರೀತಿಯಾಗಿ ತನಿ ಎರೆದ ನಂತರ, ಸಹೋದರ, ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಅದೇ ಪರಿಕರಗಳಿಂದ ಸಹೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ತನ್ನ ತವರು ಮನೆಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ತನಿ ಎರೆಸಿಕೊಳ್ಳಲೆಂದೇ ಅಂದು ಸಹೋದರು ಎಷ್ಟೇ ದೂರದಲ್ಲಿದ್ದರೂ ತಮ್ಮ ಅಕ್ಕ ತಂಗಿಯರ ಮನೆಗಳಿಗೆ ಹೋಗಿ ತನಿ ಎರೆಸಿಕೊಂಡು ತಮ್ಮ ಕೈಲಾದ ಮಟ್ಟಿಗಿನ ಕಾಣಿಕೆಯನ್ನೂ ಕೊಟ್ಟುಬರುವುದು ವಾಡಿಕೆಯಲ್ಲಿದೆ.

ಇದನ್ನೇ, ದೇವರು ಕೊಟ್ಟ ತಂಗಿ ಚಲನಚಿತ್ರದಲ್ಲಿ ಮನೋಜ್ಞವಾಗಿ ಚಿತ್ರ ಗೀತೆಯ ರೂಪದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.
ತನ್ನಿರೆ ಹಾಲ ತನಿ ಎರೆಯೋಣ ತಾಯ ಹಾಲ ಋಣ ತೀರಿಪ ಇಂದೇ ಪುಣ್ಯ ದಿನ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರ ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು ।।

ನಾಗರ ಹಾವನ್ನು ಪೂಜೆ ಮಾಡುವುದೇಕೆ?: ಈ ಹಬ್ಬದಂದು ನಾಗರಹಾವನ್ನೇ ಏಕೆ ಪೂಜೆಮಾಡ ಬೇಕು ಎಂದು ಯೋಚಿಸಿದಲ್ಲಿ ಅದಕ್ಕೆ ನಾನಾ ರೀತಿಯ ಪುರಾವೆಗಳಿವೆ. ನಮ್ಮ ಧರ್ಮದಲ್ಲಿ ಪ್ರಕೃತಿಯಲ್ಲಿರುವ ಪ್ರತಿಯೊಂದು ಚರಾಚರ ವಸ್ತುಗಳನ್ನೂ ಪೂಜಿಸುವ ಪದ್ದತಿ ಇದ್ದು ಪ್ರತಿಯೊಂದು ಹಬ್ಬಕ್ಕೂ ಒಂದಲ್ಲಾ ಒಂದು ಪ್ರಾಣಿ, ಪಶು ಪಕ್ಷಿ, ಸರಿಸೃಪ ಇಲ್ಲವೇ ಗಿಡ, ಬಳ್ಳಿಗಳು, ಪುಷ್ಪ ಪತ್ರೆಗಳನ್ನು ಜೋಡಿಸಿಕೊಂಡಿದ್ದೇವೆ.

ದ್ವಾಪರಯುಗದಲ್ಲಿ ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೇ ಕಾರಣವೆಂದು ತಿಳಿದು, ಭೂಲೋಕದಲ್ಲಿರುವ ಸಕಲ ಸರ್ಪಸಂಕುಲವನ್ನೂ ನಿರ್ನಾಮ ಮಾಡಲು ಸರ್ಪಯಜ್ಞವನ್ನು ಆರಂಭಿಸುತ್ತಾನೆ. ಯಾಗದಲ್ಲಿ ಪ್ರತಿ ಹವ್ವಿಸ್ಸಿನೊಂದಿಗೆ ಸ್ವಾಹ ಎಂದು ಹೇಳುತ್ತಿದ್ದಾಗ ಎಲ್ಲಾ ಸರ್ಪಗಳು ಯಾಗ ಕುಂಡಕ್ಕೆ ಬಂದು ಬಿದ್ದು ಬೆಂದು ಹೋಗುತ್ತಿರುತ್ತವೆ.

ಹೀಗೆಯೇ ಮುಂದುವರಿದಲ್ಲಿ ಸಕಲ ಸರ್ಪಕುಲವೇ ನಾಶವಾಗುವುದನ್ನು ಮನಗಂಡ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಬಳಿ ಬಂದು ಪ್ರಾಣಿಹಿಂಸೆ ಮಹಾಪಾಪ, ಹಾಗಾಗಿ ಈಗ ಕೈಗೊಳ್ಳುತ್ತಿರುವ ಸರ್ಪಯಜ್ಞವನ್ನು ಕೂಡಲೇ ನಿಲ್ಲಿಸ ಬೇಕೆಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಆಸ್ತಿಕ ಮುನಿಯ ಕೋರಿಕೆಯಿಂದ ಪ್ರಸನ್ನನಾದ ಜನಮೇಜಯ ರಾಜನು ತಾನು ಕೈಗೊಂಡಿದ್ದ ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಹಾಗೆ ಸರ್ಪಸಂಕುಲವನ್ನು ಕಾಪಾಡಿದ ದಿನ ಶ್ರಾವಣ ಪಂಚಮಿಯಾಗಿತ್ತು ಹಾಗಾಗಿ ಅದು ನಾಗರ ಪಂಚಮಿ ಎಂದು ಪ್ರಸಿದ್ಧಿಯಾಗಿದೆ ಎನ್ನುತ್ತದೆ ಪುರಾಣವೊಂದರ ಉಪಕಥೆ.

ಅದೇ ರೀತಿ ಜನಪದ ಕತೆಯೊಂದರ ಪ್ರಕಾರ, ನಾಲ್ಕು ಜನ ಅಣ್ಣಂದಿರು ಮತ್ತು ಅವರ ಮುದ್ದಿನ ತಂಗಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಅದೆಲ್ಲಿಂದಲೂ ಅಲ್ಲಿಗೆ ಬಂದ ನಾಗರಹಾವೊಂದು ನಾಲ್ಕೂ ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ಅಣ್ಣಂದಿರ ಅಕಾಲಿಕ ಮರಣವನ್ನು ತಡೆಯಲಾರದೇ, ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು ಎಂದು ಹಾವಿನೊಂದಿಗೆ ಬೇಡಿಕೊಳ್ಳಲು, ಆಕೆಯ ಕೋರಿಕೆಯನ್ನು ಮನ್ನಿಸಿದ ಆ ನಾಗರ ಹಾವು ಒಬ್ಬ ಅಣ್ಣನನ್ನು ಬದುಕಿಸಿಕೊಟ್ಟಿತು. ನಂತರ ಅಣ್ಣ – ತಂಗಿ ಇಬ್ಬರೂ ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು ಎಂದಿದೆ.

ಇನ್ನು ಭಾಗವತದಲ್ಲಿ ಹೇಳಿರುವ ಪ್ರಕಾರ ಸಣ್ಣವಯಸ್ಸಿನ ಶ್ರೀ ಕೃಷ್ಣ ತನ್ನ ಗೆಳೆಯರೊಂದಿಗೆ ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ, ಆತನ ಚೆಂಡು ನದಿ ದಂಡೆಯಲ್ಲಿದ್ದ ಮರವೊಂದರಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದ ಕೃಷ್ಣನು ಜಾರಿ ನದಿಯಲ್ಲಿ ಬಿದ್ದಾಗ, ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿ ಹೆಡೆಮುರಿ ಕಟ್ಟಿದನು. ಕೃಷ್ಣನ ಬಲವನ್ನು ಕಂಡ ಆ ಹಾವು ಈತ ಸಾಮಾನ್ಯ ಬಾಲಕನಲ್ಲ ಎಂದರಿತು ತನ್ನನ್ನು ಕೊಲ್ಲಬಾರದೆಂದು ಅಂಗಲಾಚಿತು. ಕೃಷ್ಣನೂ ಕೂಡ ಇನ್ನು ಮುಂದೆ ಜನರಿಗೆ ಯಾವುದೇ ರೀತಿಯಾಗಿ ತೊಂದರೆ ಕೊಡಬಾರದೆಂಬ ಎಚ್ಚರಿಕೆಯ ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಟ್ಟನು. ಕೃಷ್ಣನು ಆ ಕಾಳಿಯಾ ಎಂಬ ಭಯಾನಕ ಸರ್ಪವನ್ನು ಗೆದ್ದ ದಿನ ಶ್ರಾವಣ ಶುಕ್ಲ ಪಂಚಮಿಯಾದ್ದರಿಂದ. ಆ ಸಂತೋಷವನ್ನು ನೆನಪಿಸಿಕೊಳ್ಳುವ ಸಲುವಾಗಿ ಪ್ರತೀ ವರ್ಷವೂ ನಾಗರಪಂಚಮಿ ಎಂದು ಆಚರಿಸಲಾಗುತ್ತಿದೆ ಎನ್ನುತ್ತದೆ.

ವೈಜ್ಞಾನಿಕವಾಗಿ ನೋಡಿದಲ್ಲಿ,ಆಷಾಢ ಮಾಸದಲ್ಲಿ ರೈತರು ತಮ್ಮ ಹೊಲಗಳಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಪೈರಾಗಿ ಬೆಳೆದಿರುತ್ತವೆ. ಹಾಗೆ ಬೆಳೆದ ಪೈರನ್ನು ಇಲಿಗಳು ತಿಂದು, ರೈತನಿಗೆ ನಷ್ಟವನ್ನುಂಟು ಮಾಡುತ್ತವೆ. ಅಂತಹ ನೂರಾರು ಇಲಿಗಳನ್ನು ಒಮ್ಮೆಲೆ ನಾಶಮಾಡುವುದು ಕೃಷಿಕರಿಗೆ ಕಷ್ಟಸಾಧ್ಯವಾದ ಕಾರಣ, ಈ ಕೆಲಸವನ್ನು ಪ್ರಾಕೃತಿಕವಾಗಿಯೇ ಹಾವುಗಳೇ ಮಾಡಿ ಮುಗಿಸುತ್ತವೆ. ಆದ ಕಾರಣದಿಂದ ಹಾವುಗಳನ್ನು ರೈತನ ಮಿತ್ರ ಎಂದೂ ಕರೆಯುತ್ತಾರೆ, ಹೀಗೆ ತಮ್ಮ ಬೆಳೆಯನ್ನು ಕಾಪಾಡಿದ್ದಕ್ಕೆ ಋಣ ಸಂದಾಯ ಮಾಡಲು ಕೃತಜ್ಞತಾಪೂರ್ವಕವಾಗಿ ಹುತ್ತಕ್ಕೆ ತನಿ ಎರೆಯುತ್ತಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕದ ಕಡೆ ಈ ಹಬ್ಬವನ್ನು ಅಣ್ಣತಮ್ಮಂದಿರ ಅಥವಾ ಜೋಕಾಲಿ ಹಬ್ಬವೆಂದೇ ಬಹಳ ಶ್ರದ್ಥಾ ಭಕ್ತಿಯಿಂದ ಅಷ್ಟೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಅಶ್ವತ್ಥಕಟ್ಟೆಗಳಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲುಗಳಿಗೆ ಮಡಿಯಲ್ಲಿ ಹಾಲೆರೆದು ಸುಬ್ರಹ್ಮಣ್ಯೇಶ್ವ ಸ್ವಾಮಿಯ ಕೃಪಾರ್ಥಕ್ಕೆ ಪಾತ್ರರಾಗುತ್ತಾರೆ ನಾಗರ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಇನ್ನೂ ಕೆಲವರ ಮನೆಗಳಲ್ಲಿ ಬೆಳ್ಳಿ-ಹಿತ್ತಾಳೆಯ ನಾಗಮೂರ್ತಿ ಅಥವಾ ಅಕ್ಕಿಹಿಟ್ಟು ಇಲ್ಲವೇ ತಂಬಿಟ್ಟಿನಿಂದ ನಾಗರ ಮೂರ್ತಿಯನ್ನು ತಯಾರು ಮಾಡಿ, ಮಹಿಳೆ-ಮಕ್ಕಳೆಲ್ಲರೂ ಸೇರಿ ಹಳದಿ ದಾರವನ್ನು ಕೊರಳಲ್ಲಿ ಧರಿಸಿ, ಹಾಲು-ತುಪ್ಪವನ್ನು ನಾಗ ಮೂರ್ತಿಗೆ ಎರೆದು ಪ್ರಾರ್ಥಿಸುತ್ತಾರೆ. ನೈವೇದ್ಯಕ್ಕಾಗಿ ಅರಳು, ಶೇಂಗಾ, ಕಡಲೆ, ಕೊಬ್ಬರಿ, ಬೇಸನ್ ಲಡ್ಡು, ಕಡಲೇ ಕಾಯಿ-ಹುರಿಗಡಲೇ ಉಂಡೆ, ನವಣೆ ಉಂಡೆಗಳನ್ನು ಇಟ್ಟಿರುತ್ತಾರೆ. ಮನೆಗೆ ಬಂದ ಮುತ್ತೈದೆಯರಿಗೆ ಹೊಸ ಬಳೆ, ಜೊತೆ ಸೀರೆ ಕುಪ್ಪಸ ನೀಡುವ ಸಂಪ್ರದಾಯವೂ ಇದೆ.

ಉತ್ತರ ಕರ್ನಾಟಕದ ಕೆಲವರ ಮನೆಗಳಲ್ಲಿ ಇನ್ನೂ ಜೀವಂತ ಹಾವುಗಳನ್ನೇ ತಂದು ಪೂಜಿಸುವ ಸಂಪ್ರದಾಯವಿದೆ. ಆದರೆ ಇಂದು ಪ್ರಾಣಿ ದಯಾಸಂಘದವರ ಪ್ರತಿಭಟನೆಯ ಪರಿಣಾಮವಾಗಿ ಕದ್ದು ಮುಚ್ಚಿ ಕೆಲವರ ಮನೆಗಳಲ್ಲಿ ಹಾವುಗಳಿಗೇ ಪೂಜಿಸಿ ತಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮಧ್ಯಾಹ್ನ ಭೂರೀ ಭೋಜನವಾದನಂತರ ಮನೆಯ ಹತ್ತಿರದ ಮರಗಳಿಗೆ ಜೋಕಾಲಿ ಕಟ್ಟಿ ಎಲ್ಲರೂ ಉಯ್ಯಾಲೆಯಾಡುವುದೂ ಮತ್ತೊಂದು ಪದ್ದತಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಮೊದಲೆಲ್ಲಾ ಕೇವಲ ಮನೆಗಳಲ್ಲಿ ಆಡುತ್ತಿದ್ದ ಜೋಕಾಲಿ ಇಂದು ಮೈದಾನಗಳಲ್ಲಿ ವಿಶೇಷವಾಗಿ ಸಿದ್ಧ ಪಡಿಸಿದ ಜೋಕಲಿಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳ ಜೊತೆ ನಿಂಬೆಹಣ್ಣು ಎಸೆಯುವ, ಭಾರದ ಗುಂಡು ಕಲ್ಲುಗಳನ್ನು ಎತ್ತುವುದು, ಬಗೆ ಬಗೆಯ ಉಂಡೆಗಳನ್ನು ಹೆಚ್ಚು ಹೆಚ್ಚು ತಿನ್ನವ ವಿಧ ವಿಧದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಬಹಳ ಗಮನಾರ್ಹ ಮತ್ತು ಅಭಿನಂದನಾರ್ಹವಾಗಿದೆ.

ಪಂಚಮಿ ಹಬ್ಬಕ್ಕೆ ಕರೆಯೋದಿಕ್ಕೆ ಇನ್ನೂ ತವರಿನಿಂದ ಅಣ್ಣಾ ಯಾಕೆ ಬರಲಿಲ್ಲಾ ಎಂಬೀ ಹಾಡು ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಪಂಚಮಿ ಹಬ್ಬಾ ಉಳಿತವ್ವ ದಿನ ನಾಕ ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ ।
ನಮ್ಮ ತವರೂರು ಗೋಕುಲ ನಗರಾ । ಮನಿಯೆಂಥಾದ ರಾಜಮಂದಿರಾ ।
ನಮ್ಮ ಅಣ್ಣಯ್ಯ ದೊಡ್ಡ ಸಾವಕಾರಾ । ಹ್ಯಾಂಗಾದೀತ ತಂಗಿನ್ನ ಮರಿಯಾಕ-
ಅಣ್ಣ ಬರಲಿಲ್ಲ ಯಾಕೋ ಕರಿಲಾಕ…
ನಮ್ಮ ತವರೀಲಿ ಪಂಚಮಿ ಭಾರಿ ಮಣದ ತುಂಬಾ ಬಟ್ಟಲ ಕೊಬ್ಬರೀ
ಅಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನೂ ತಿನುವಾಕಿ ಬಂದ್‌ ಹಾಂಗ
ಮನಕ- ಅಣ್ಣ ಬರಲಿಲ್ಲ ಯಾಕೋ ಕರಿಲಾಕ ...

ಸಹೋದರ ಸಹೋದರಿಯರ ಬಂಧುತ್ವವನ್ನು ವೃದ್ಧಿರುವುದರ ಜೊತೆಗೆ ನಮ್ಮ ಪ್ರಾಣಿ ಪಕ್ಷಿ ಮತ್ತಿರೆ ಸರೀಸೃಪಗಳ ನೆರವನ್ನು ನೆನಪಿಸಿಕೊಳ್ಳುವ ಮತ್ತು ಅವುಗಳಿಗೆ ಕೃತಜ್ಞನಾ ಪೂರ್ವಕವಾಗಿ ಅಭಿನಂದಿಸುವುದಕ್ಕಾಗಿಯೇ ಇಂತಹ ಹಬ್ಬಗಳನ್ನು ನಮ್ಮ ಹಿರಿಯರು ರೂಢಿಯಲ್ಲಿ ತಂದಿರುತ್ತಾರೆ ಎಂದರೂ ತಪ್ಪಾಗಲಾದು. ಅಣ್ಣಾ ತಂಗಿಯರ ಬಂಧುತ್ವವನ್ನು ಹೆಚ್ಚಿಸುವುದಕ್ಕಾಗಿಯೇ ಉತ್ತರ ಭಾರತದಲ್ಲಿ ಆಚರಿಸಲ್ಪಡುವ ರಕ್ಷಾ ಬಂಧನದ ರೀತಿಯಲ್ಲಿ ಈ ನಾಗರ ಪಂಚಮಿ ಹಬ್ಬ ದಕ್ಷಿಣ ಭಾರತದ ಹಬ್ಬ ಎನಿಸಿದೆ.


Stay up to date on all the latest ಭಕ್ತಿ-ಭವಿಷ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp