ವರಮಹಾಲಕ್ಷ್ಮಿ ಹಬ್ಬದ ವೈಶಿಷ್ಟ್ಯ, ವ್ರತದ ಮಹತ್ವ, ಆಚರಣೆ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. 

Published: 04th August 2022 01:32 PM  |   Last Updated: 04th August 2022 04:54 PM   |  A+A-


Representational image

ಸಾಂದರ್ಭಿಕ ಚಿತ್ರ

Online Desk

ಬರಹ: ಶ್ರೀಕಂಠ ಬಾಳಗಂಚಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. 

ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಹಾಗಾಗಿ ಈ ಕಲಿಯುಗದಲ್ಲಿ ಯಾವುದೇ ಜಾತಿಗಳ ತಾರತಮ್ಯವಿಲ್ಲದೆ ಪೂಜಿಸುವ ಏಕೈಕ ದೇವತೆ ಲಕ್ಷ್ಮಿ ಎಂದರೆ ಅತಿಶಯೋಕ್ತಿಯೇನಲ್ಲ.

ಮಹಾಲಕ್ಷ್ಮಿಯ ಜನನದ ಹಿನ್ನೆಲೆ

ಮುನಿಗಳಲ್ಲಿ ಅತ್ಯಂತ ಕೋಪಿಷ್ಟರೆಂದೇ ಖ್ಯಾತರಾದ ದುರ್ವಾಸ ಮಹರ್ಷಿಗಳ ಶಾಪದಿಂದಾಗಿ ದೇವೇಂದ್ರನು ರಾಜ್ಯಭ್ರಷ್ಟನಾದಾಗ, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿಕೊಂಡಾಗ ದೇವಲೋಕಕ್ಕೆ ದಾರಿದ್ರ ಕಾಡತೊಡಗುತ್ತದೆ. ಇದರಿಂದ. ದುಃಖ ತಪ್ತರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು, ವೈಕುಂಠವಾಸಿ ಮಹಾವಿಷ್ಣುವಿನ‌ ಮೊರೆ ಹೋಗುತ್ತಾರೆ.

ಭಗವಾನ್ ವಿಷ್ಣುವಿನ ಆಜ್ಞೆಯಂತೆ ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಲು ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ವಾಸುಕಿಯ ಸಹಾಯದೊಂದಿಗೆ ಸಮುದ್ರವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯ ಜನನವಾಗಿ, ದೇವತೆಗಳನ್ನು ಅನುಗ್ರಹಿಸಿದ್ದಲ್ಲದೇ, ಮಹಾವಿಷ್ಣುವನ್ಬು ವರಿಸುತ್ತಾಳೆ.

ಸಮುದ್ರ ಮಂಥನದಲ್ಲಿ ಹುಟ್ಟಿದ ವರಮಹಾಲಕ್ಷ್ಮಿಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಕಮಲದಲ್ಲಿ ಆವಿರ್ಭವಿಸಿದವಳು ಎಂದೂ ಕರೆಯಲಾಗುತ್ತದೆ.

ಮಹಾಲಕ್ಷ್ಮೀ ವ್ರತದ ಮಹತ್ವ
ಒಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿಯು ಕೇಳಿದಾಗ, ತಡಮಾಡದೇ ಸ್ವತಃ ಈಶ್ವರನು ವರಮಹಾಲಕ್ಷ್ಮೀ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ತಿಳಿಸಿ.

ಆ ವ್ರತದ ಮಹಾತ್ಮೆಯನ್ನು ಪಾರ್ವರ್ತಿಗೆ ಕಥೆಯ ರೂಪದಲ್ಲಿ ಹೇಳುತ್ತಾನೆ. ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಬಡ ಮಹಿಳೆ ಇದ್ದಳು. ಬಡತನದಲ್ಲಿ ಆಕೆ ಖಾಯಿಲೆ ಪೀಡಿತ ತನ್ನ ವಯೋವೃಧ್ಧ ಅತ್ತೆ ಮಾವಂದಿರ ಸೇವೆಯನ್ನು ನಿಶ್ಕಲ್ಮಶವಾಗಿ ಅತ್ಯಂತ ಶ್ರಧ್ಧೆಯಿಂದ ಮಾಡುತ್ತಿದ್ದರೂ ಅವರ ಖಾಯಿಲೆಗಳು ವಾಸಿಯಾಗದೇ ಅವರು ನರಳುತ್ತಿದ್ದನ್ನು ನೋಡಿ, ಓ ದೇವರೇ, ದಯವಿಟ್ಟು ನಮ್ಮ ಅತ್ತೆ ಮಾವನವರ ಖಾಯಿಲೆಯನ್ನು ಗುಣಪಡಿಸು. ಆವರ ನರಳುವಿಕೆಯನ್ನು ನಾನು ನೋಡಲಾರೆ ಎಂದು ಪ್ರತೀ ದಿನವೂ ಕೇಳಿಕೊಳ್ಳುತ್ತಿದ್ದಳು. ಅದೊಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಸ್ವಪ್ನದಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು, ಎಲೈ ಚಾರುಮತಿಯೇ ನೀನು ಅತ್ತೆ- ಮಾವಂದಿರನ್ನು ಕಾಳಜಿಯಿಂದ ಸೇವೆ ಮತ್ತು ಶುಶ್ರೂಷೆ ಮಾಡುವುದನ್ನು ಕಂಡು ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತೇನೆ ಎಂದು ಹೇಳಿ ಕಣ್ಮರೆಯಾದಳು. ಸಾಕ್ಷಾತ್ ಮಹಾಲಕ್ಷ್ಮೀಯೇ ತನ್ನ ಕನಸಿನಲ್ಲಿ ಬಂದು ಅನುಗ್ರಹಿಸಿದ್ದನ್ನು ನೋಡಿ ಸಂತೋಷಗೊಂಡ. ಚಾರುಮತಿಗೆ ತನ್ನ ಕನಸಿನ ಬಗ್ಗೆ ತನ್ನೆಲ್ಲಾ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರ ಬಹಳ ಭಕ್ತಿ ಭಾವಗಳಿಂದ ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ ಆ ತಾಯಿಯ ಅನುಗ್ರಹ ಪಡೆಯುತ್ತಾಳೆ. ತದನಂತರ ಆಕೆಯ ಬಡತನವೂ ನೀಗುವುದಲ್ಲದೆ, ಆಕೆಯ ಅತ್ತೆ ಮತ್ತು ಮಾವನವರ ಖಾಯಿಲೆಗಳೂ ವಾಸಿಯಾಗುತ್ತದೆ. ಅಂದಿನಿಂದ ಪ್ರತೀ ವರ್ಷವೂ ಆಕೆ ತನ್ನ ಬಂಧು ಮಿತ್ರರೊಡನೆ ತಪ್ಪದೇ ಮಹಾಲಕ್ಷ್ಮಿಯ ವ್ರತಾಚರಣೆ ಮಾಡಿ ಸಕಲ ಆಯುರಾರೋಗ್ಯ ಐಶ್ವರ್ಯವಂತಳಾಗಿ ಹಲವಾರು ವರ್ಷ ಸುಖಃವಾದ ನೆಮ್ಮದಿಯಾದ ಜೀವನ ನಡೆಸುತ್ತಾಳೆ.

ವ್ರತಾಚರಣೆ

ವರಮಹಾಲಕ್ಷ್ಮೀ ಹಬ್ಬದ ದಿನ ಶುಕ್ರವಾರದಂದು ಬೆಳಗ್ಗೆಯೇ ಶುಚಿರ್ಭೂತರಾಗಿ ಬೆಳಗಿನಿಂದ ಸಾಯಂಕಾಲದವರೆವಿಗೂ ಉಪವಾಸದಿಂದ ಇದ್ದು ಸಂಜೆ ಸಂಕಲ್ಪ ಮಾಡಿ ದೇವರ ಮನೆ ಅಥವಾ ಮನೆಯ ದೊಡ್ಡದಾದ ಜಾಗದಲ್ಲಿ ಗೋಮೂತ್ರದಿಂದ ಸ್ಥಳ ಶುಧ್ಧೀಕರಿಸಿ ರಂಗೋಲಿ ಬಿಡಿಸಿ ಮರದ ಮಣೆ ಅಥವಾ ಕುರ್ಚಿಯ ಮೇಲೆ ಅಗ್ರ ಇರುವ ಎರಡು ಬಾಳೆ ಎಲೆಗಳನ್ನು ಇಟ್ಟು, ಅದರಲ್ಲಿ ಅಕ್ಕಿ ಹಾಕಿ,ಬೆಳ್ಳಿ ಅಥವಾ ತಾಮ್ರದ ಅದೂ ಇಲ್ಲದಿದ್ದಲ್ಲಿ ಸ್ಟೀಲ್ ಕಲಶ ಇಟ್ಟು, ಆ ಕಲಶದಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಉತ್ತುತ್ತೇ, ಕಲ್ಲುಸಕ್ಕರೆಗಳನ್ನು ತುಂಬಿ ಅನುಕೂಲ ಇದ್ದಲ್ಲಿ ಬೆಳ್ಳಿ ಅಥವಾ ಬಂಗಾರದ ನಾಣ್ಯ ಹಾಕಿ. ಶುದ್ಧವಾದ ಅರಿಶಿನ ಚಿಟಿಕೆ ಹಾಕಿ. ಶುದ್ಧವಾದ ನೀರು ತುಂಬಬೇಕು.

ಹಾಗೆ ಸ್ಥಾಪಿಸಿದ ಕಲಶದಲ್ಲಿ ಮಾವಿನ ಸೊಪ್ಪಿನ ಅಗ್ರವನ್ನಿಟ್ಟು ಅದರ ಮೇಲೆ ಅರಿಶಿನ ಹಚ್ಚಿದ ಮತ್ತು ಮೂರೂ ಕಡೆ ಕುಂಕುಮ ಹಚ್ಚಿದ ತೆಂಗಿನಕಾಯಿಯನ್ನು ಜುಟ್ಟು ಮೇಲೆ ಬರುವಂತೆ ಇಟ್ಟು ಅದರ ಮುಂದೆ ಲಕ್ಷ್ಮೀ ದೇವಿಯ ಬೆಳ್ಳಿ ವಿಗ್ರಹವನ್ನೋ ಇಲ್ಲವೇ ಲಕ್ಷ್ಮೀ ದೇವಿಯ ಬೆಳ್ಳಿ ಮುಖವಾಡವನ್ನೋ ಇಲ್ಲವೇ ಅವರೆಡೂ ಇಲ್ಲದಿದ್ದಲ್ಲಿ ಅರಿಶಿನದಲ್ಲಿ ಲಕ್ಷ್ಮೀ ದೇವಿಯನ್ನು ಮಾಡಿಕೊಂಡು ಇಡಬೇಕು.

ಸಮುದ್ರ ಮಂಥನದ ಸಮಯದಲ್ಲಿ ಮಹಾಲಕ್ಷ್ಮಿ ಶ್ವೇತ ವಸ್ತ್ರದಲ್ಲಿ ಉಧ್ಭವವಾದ ಕಾರಣ, ವರಮಹಾಲಕ್ಷ್ಮಿ ವ್ರತದ ದಿನ ದೇವಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ, ಅಲಂಕಾರಕ್ಕಾಗಿ ನಾನಾ ಬಗೆಯ ಹೂವುಗಳ ಹಾರಗಳ ತೋಮಾಲೆಯಲ್ಲದೆ ಮನೆಯಲ್ಲಿರುವ ವಿವಿಧ ಚಿನ್ನಾಭರಣಗಳನ್ನು ತೊಡಿಸುವುದು ಇತ್ತೀಚೆಗೆ ನಡೆದು ಕೊಂಡು ಬಂದಿರುವ ರೂಢಿಯಾಗಿದೆ.

ಪೂಜೆ ಆರಂಭಿಸುವ‌ ಮುನ್ನಾ ಬೆಳ್ಳಿಯ ಇಲ್ಲವೇ ಹಿತ್ತಾಳೆಯ ನಂದಾದೀಪವನ್ನು ಹಚ್ಚಿಟ್ಟು ಮೊದಲು ಘಂಟಾನಾದವನ್ನು ಮಾಡಿ ಅವರವರ ಸಂಪ್ರದಾಯದಂತೆ ಅವರ ಮನೆ ದೇವರನ್ನು ನೆನೆದು ವಿಘ್ನವಿನಾಶಕ ವಿನಾಯಕನಿಗೆ ಮೊದಲ ಪೂಜೆಯನ್ನು ಮಾಡಿ, ನಂತರ ಮಹಾಲಕ್ಷ್ಮಿಯನ್ನು ಧ್ಯಾನಿಸಿ, ಅವಾಹನೆ ಮಾಡಿ, ಆನಂತರ ಅರ್ಘ್ಯ- ಪಾದ್ಯವಾದ ನಂತರ ಲಕ್ಷ್ಮಿ ದೇವಿಯ ಚಿಕ್ಕ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಸಕ್ಕರೆ ಹೀಗೆ ಪಂಚಾಮೃತ ಅಭಿಷೇಕ ಮಾಡಬೇಕು. ಅರಿಶಿನ- ಕುಂಕುಮ, ಗಂಧ ಇತ್ಯಾದಿಗಳಿಂದಲೂ ಹಾಗೂ ಮಲ್ಲಿಗೆ ಇತ್ಯಾದಿ ಪುಷ್ಪಗಳಿಂದಲೂ ದೇವಿಗೆ ಅಲಂಕಾರ ಮಾಡಿ, ಅಂಗ ಪೂಜೆ ಹಾಗೂ ಬಿಲ್ವ, ದವನ, ಮರಗ ಇತ್ಯಾದಿ ಪತ್ರೆಗಳಿಂದ ಅರ್ಚನೆ ಮಾಡಬೇಕು.

ಪೂಜಾನಂತರ ನಾನಾ ವಿಧದ ಬಗೆ ಬಗೆಯ ಕನಿಷ್ಠ ಪಕ್ಷ ಐದಾರು ಹಣ್ಣುಗಳೊಂದಿಗೆ ಮಹಾಲಕ್ಷ್ಮೀ ಹಬ್ಬಕ್ಕೆಂದೇ ಬಹಳ ಮಡಿಯಿಂದ ವಿಶೇಷವಾಗಿ ತಯಾರಿಸಲ್ಪಟ್ಟ ಒಬ್ಬಟ್ಟು ಇಲ್ಲವೇ ಸಜ್ಜಪ್ಪದ ಜೊತೆಗೆ ಬಗೆ ಬಗೆಯ ಉಂಡೆಗಳೊಂದಿಗೆ ದೇವಿಗೆ ನೈವೇದ್ಯ ಮಾಡಿ ಎಲ್ಲರ ಸಮ್ಮುಖದಲ್ಲಿ ದೇವರಿಗೆ ತುಪ್ಪದ ಬತ್ತಿಯಲ್ಲಿ ಮಹಾ ಮಂಗಳಾರತಿ ಮಾಡಿ, ಮಂತ್ರಪುಷ್ಪಾದಿಗಳನ್ನು ಸಮರ್ಪಿಸಬೇಕು.

ಸುಮಾರು ಎರಡು ಗೇಣಿನುದ್ದದ 12 ಹಸಿ ದಾರಗಳನ್ನು ತೆಗೆದುಕೊಂಡು ಅದಕ್ಕೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ಅದಕ್ಕೆ ಸೇವಂತಿಕೆ ಹೂವನ್ನು ಕಟ್ಟಿ ದೇವಿಯ ಪಕ್ಕದಲ್ಲಿರಿಸಿ ಪೂಜೆ ಮಾಡಬೇಕು.ಲಕ್ಷ್ಮಿ ಪೂಜೆ ಮಾಡಿದ ನಂತರ ಈ ದೋರವನ್ನು ಮನೆಯ ಎಲ್ಲಾ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಂಡು ಮುಂದೆ ಬರುವ ಗೌರೀ ಹಬ್ಬದ ವರೆಗೂ ಜನತದಿಂದ ಅದನ್ನು ಕಾಪಾಡಿಕೊಂಡು ಬಂದು ಗಣೇಶನ ವಿಸರ್ಜನೆಯ ದಿನ ಭೀಮನವಾಸ್ಯೆ, ಗೌರೀ ಹಬ್ಬದ ದಿನ ಕಟ್ಟಿಕೊಂಡ ದಾರದ ಸಮೇತ ಈ ದೋರವನ್ನು ವಿಸರ್ಜಿಸಬೇಕು.

ಪೂಜೆ ಮುಗಿದ ನಂತರ ಮನೆಯ ನೆರೆಹೊರೆಯ ಮುತ್ತೈದೆಯರನ್ನೆಲ್ಲಾ ಕರೆದು ಅವರಿಗೆ ಅರಿಶಿನ, ಕುಂಕುಮ, ಇನ್ನೂ ಕೆಲ ಹಿರಿಯ ಮುತ್ತೈದೆಯರಿಗೆ ಈ ದಾರ ಸಹಿತ ಹಸಿ ಮೊರದಲ್ಲಿ ಅಕ್ಕಿ, ತೆಂಗಿನಕಾಯಿ, ತಾಂಬೂಲ ಸಹಿತ ದಕ್ಷಿಣೆ, ಬಳೆ, ರವಿಕೆ ಕಣ ಅಥವಾ ಸೀರೆ ಇಟ್ಟು ವಾಯನದಾನ ಕೊಡುವ ಮೂಲಕ ವರಮಹಾಲಕ್ಷ್ಮಿಯ ಪೂಜೆ ಸಂಪೂರ್ಣವಾಗುತ್ತದೆ.

ಪೂಜೆಮಾಡುವಾಗ ಈ ಕೆಲವೊಂದು ಅಂಶಗಳತ್ತ ಗಮನವಿಡಬೇಕು

 • ಇದು ಮುತ್ತೈದೆಯರೇ ಆಚರಿಸುವ ವಿಶೇಷವಾದ ವ್ರತವಾದ್ದರಿಂದ ಈ ಪೂಜೆಗೆ ಕುಳಿತುಕೊಳ್ಳುವಾಗ ರೇಷ್ಮೆ ಸೀರೆ ಉಡುವುದು ಶ್ರೇಷ್ಠ.
 • ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಒದ್ದೆ ಕೂದಲಾಗಲೀ ಅಥವಾ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜಡೆ ಹಾಕಿರಬೇಕು.
 • ಮುತ್ತೈದೆಯರಿಗೆ ಹಣೆಯಲ್ಲಿನ ಸಿಂಧೂರವೇ ಪ್ರಾಮುಖ್ಯವಾದ್ದರಿಂದ ಹಣೆಯಲ್ಲಿ ದೊಡ್ಡದಾದ ಕುಂಕುಮವಿರಲಿ.
 • ಮನೆಯ ಬಾಗಿಲಿಗೆ ಕಟ್ಟುವ ತೋರಣ ಮತ್ತು ಪೂಜೆಯಲ್ಲಿ ಬಳೆಸುವ ಬಾಳೆಯೆಲೆ ಮತ್ತು ಬಾಳೆಕಂಬಗಳು ಕೃತಕವಾಗಿ ಪ್ಲಾಸ್ಟಿಕ್ ಮಯವಾಗಿರದೇ ನಿಜವಾದ ಮಾವಿನ ಸೊಪ್ಪು ಹಾಗೂ ಬಾಳೆ ಎಲೆ ಮತ್ತು ಕಂದುಗಳಿದ್ದರೆ ಪೂಜೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ
 • ಹಬ್ಬದ ಇಡೀ ದಿನ ಮತ್ತು ಪೂಜಾ ಸಮಯದಲ್ಲಿ ಅಪಶಬ್ದ ಅಥವಾ ಅನಾವಶ್ಯಕ ದುರಾಲೋಚನೆಗಳು ಬರದಂತೆ ಎಚ್ಚರವಹಿಸ ಬೇಕು.
 • ಇನ್ನು ದಾನದ ರೂಪದಲ್ಲಿ ಪುರೋಹಿತರಿಗೆ ಕೊಡುವ ಸ್ವಯಂಪಾಕದಲ್ಲಿ ಕೊಡುವ ತರಕಾರಿ, ಅಕ್ಕಿ- ಬೇಳೆ ಇತ್ಯಾದಿ ಪದಾರ್ಥಗಳು ಹಾಳಾಗಿರದೆ, ಉತ್ತಮ ಗುಣಮಟ್ಟದಲ್ಲಿ ಬಳಸುವಂತೆ ಇರಬೇಕು. ಸ್ವಯಂಪಾಕ ಪಡೆದವರು ಕನಿಷ್ಠ ಒಂದು ಹೊತ್ತಿನ ಅಡುಗೆ ಮಾಡಿಕೊಂಡು ಊಟ ಮಾಡುವಂತಿರಬೇಕು.
 • ಇನ್ನು ಮುತ್ತೈದೆಯರಿಗೆ ಕೊಡುವ ಸೀರೆ ಮತ್ತು ಕುಪ್ಪಸದ ಕಣ ಅಥವಾ ಬ್ರಾಹ್ಮಣರಿಗೆ ನೀಡುವ ಪಂಚೆ- ಶಲ್ಯ ಇತ್ಯಾದಿ ವಸ್ತ್ರಗಳು ಥರಿಸಲಿಕ್ಕೆ ಯೋಗ್ಯವಾಗಿರುವಂತಿರಬೇಕು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಶ್ರಧ್ಧಾ ಭಕ್ತಿಯಿಂದ ಪೂಜಿಸಿದಲ್ಲಿ ಮಾತ್ರವೇ ಪೂಜೆಯ ಸಿದ್ಧಿಗಳು ಪೂಜಿಸಿದವರಿಗೆ ಲಭಿಸಿ ಅದರಿಂದ ಅವರ ಸಕಲ ಆರ್ಥಿಕ ಬಾಧೆಗಳು ನಿವಾರಣೆಯಾಗಿ. ವ್ಯಾಪಾರ ಅಭಿವೃದ್ಧಿ ಆಗಿ, ಮನೆಯಲ್ಲಿ ಸಕಲ ಸೌಭಾಗ್ಯ- ಸಂಪತ್ತು ಅಭಿವೃದ್ಧಿ ಆಗುತ್ತದೆ.

ಆದರೆ ಇಂದು ಬಹುತೇಕ ಪೂಜೆ ಪುನಸ್ಕಾರಗಳು ಅದರಲ್ಲೂ ವಿಶೇಷವಾಗಿ ವರಮಹಾಲಕ್ಷ್ಮೀ ಹಬ್ಬದಲ್ಲಿ ಭಕ್ತಿಗಿಂತ, ಆಡಂಬರವೇ ಹೆಚ್ಚಾಗಿ ದೇವರ ಪೂಜೆಗಿಂತ ತಮ್ಮ ಸಿರಿ ಸಂಪತ್ತುಗಳನ್ನು ಪ್ರದರ್ಶಿಸುವ ಹಬ್ಬವಾಗುತ್ತಿರುವುದು ದೌರ್ಭಾಗ್ಯವೇ ಸರಿ. ಬಹುತೇಕರು ತಮ್ಮ ಮನೆಯಲ್ಲಿರುವ ಎಲ್ಲಾ ಒಡವೆಗಳನ್ನು ಮತ್ತು ಇನ್ನೂ ಕೆಲವರ ಮನೆಗಳಲ್ಲಿ ದೇವರ ಮುಂದೆ ಲಕ್ಷಾಂತರ ಹೊಸ ಹೊಸಾ ಗರಿ ಗರಿ ನೋಟುಗಳನ್ನು ಪ್ರದರ್ಶನಕ್ಕಿಡುವುದು ನಿಜಕ್ಕೂ ಅಸಹ್ಯಕರವನ್ನುಂಟು ಮಾಡುತ್ತಿವೆ.


Stay up to date on all the latest ಭಕ್ತಿ-ಭವಿಷ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

 • Sham

  Very good article! Today ladies are using this festival to show off their wealth by using unnecessary decorations, wasting precious resources like flowers all over the house etc. Use good, fragrant and fresh flowers to worship the Goddess, preferably grown in your own garden. And stop displaying your jewlry and notes (ED may be watching!) :)
  3 months ago reply
flipboard facebook twitter whatsapp