ದಸರಾ ಹಬ್ಬ, ಪಟ್ಟದ ಬೊಂಬೆ ಅಲಂಕಾರ, ಆಚರಣೆ...

ದಸರಾ ಹಬ್ಬದ ಸಮಯದಲ್ಲಿ ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

Published: 20th September 2022 09:11 PM  |   Last Updated: 24th September 2022 12:51 PM   |  A+A-


Dasara celebration

ದಸರಾಕ್ಕೆ ದೇವರ ಮನೆ ಅಲಂಕಾರ, ಪಟ್ಟದ ಬೊಂಬೆಗಳು

Online Desk

ಬರಹ: ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ

ದಸರಾ ಹಬ್ಬ ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ದಶಮಿಯವರೆಗು ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬ. ದೇಶಾದ್ಯಂತ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಹತ್ತನೇ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬ. 

ಉತ್ತರ ಭಾರತದಲ್ಲಂತೂ ಈ ಹತ್ತೂ ದಿನಗಳು ಬಹುತೇಕ ಜನರು ಉಪವಾಸ ವ್ರತಾವರಣೆಯಲ್ಲಿದ್ದು ಭಕ್ತಿ ಭಾವನೆಗಳಿಂದ ಆಚರಿಸಲ್ಪಡುವ ಹಬ್ಬವಾದರೆ ನಮ್ಮ ದಕ್ಷಿಣ ಭಾರತದಲ್ಲಿ ಅದಕ್ಕೆ ತದ್ವಿರುಧ್ಧವಾಗಿ ಅತ್ಯಂತ ಸರಳ ಮಡಿ ವೈಭವದಿಂದ ಆಚರಿಸಲ್ಪಡುತ್ತದೆ. ಅಂದೆಲ್ಲಾ  ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾಲವಾಗಿದ್ದು, ರಾಜಾ ಪ್ರತ್ಯಕ್ಷ ದೇವತಾ ಎಂಬ ಭಾವನೆಯಿಂದ, ದಸರಾ ಹಬ್ಬದ ಸಮಯದಲ್ಲಿ ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

ದಸರಾಕ್ಕೆ ತಯಾರಿ ಹೇಗೆ?

ದಸರಾ ಹಬ್ಬಕ್ಕೆ ಎರಡು ಮೂರು ದಿನಗಳ ಮುಂಚಿತವಾಗಿಯೇ ಮನೆಗಳ ಆಟ್ಟದಲ್ಲಿ ಜೋಪಾನವಾಗಿ ಎತ್ತಿಟ್ಟಿದ್ದ ಗೊಂಬೆಗಳನ್ನು ಕೆಳಗಿಳಿಸಿ ಸ್ವಚ್ಚಗೊಳಿಸಿ, ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ಕೊಡಲ್ಪಟ್ಟಿದ್ದ  ಪಟ್ಟದ  ರಾಜಾ ಮತ್ತು  ರಾಣಿ ಗೊಂಬೆಗಳಿಗೆ ಅಂದ ಚಂದದಿಂದ  ಕಚ್ಚೆ ಪಂಚೆ, ಮೈಸೂರು ಪೇಟ, ಝರಿ ಸೀರೆ ಕುಪ್ಪಸಗಳನ್ನು ತೊಡಿಸಿ ಒಪ್ಪ ಓರಣವಾಗಿ ಅಲಂಕಾರಿಕವಾಗಿ  ಕನ್ನಡಿ ಕಳಸಗಳೊಂದಿಗೆ ಜೋಡಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ದಶಾವತಾರದ ಗೊಂಬೆಗಳು ಒಂದು ಸಾಲಾದರೆ, ದೇವಸ್ಥಾನದ ರಾಜಗೋಪುರದ ಜೊತೆಯಲ್ಲಿ  ರಾಮ, ಸೀತೆ ಲಕ್ಷ್ಮಣ ಮತ್ತು ಆಂಜನೇಯರದ್ದು ಮತ್ತೊಂದು ಕಡೆ.  ದೇವಸ್ಥಾನದ ಮುಂದೆ ವಾದ್ಯಮೇಳಗಳ ತಂಡದ ಬೊಂಬೆಗಳಿದ್ದರೆ ಅವುಗಳ ಮುಂದೆ ಕೀಲು ಕುದುರೆ ಚೋಮನ ಕುಣಿತದ ಗೊಂಬೆಗಳು. ಇವುಗಳ ಬದಿಯಲ್ಲಿ ವಿವಿಧ ದೇವಾನು ದೇವತೆಗಳು ಬೊಂಬೆಗಳೂ, ಆಚಾರ್ಯ ತ್ರಯರಾದ ಶಂಕರ, ಮಧ್ವಾಚಾರ್ಯರು ಮತ್ತು ರಾಮಾನುಜರ ಜೊತೆ ಬುದ್ಡ, ಬಸವ ವಿವೇಕಾನಂದರ ಸಮ್ಮಿಳಿನಗಳ ಬೊಂಬೆ ಮಗದೊಂದಡೆ.  ಡೊಳ್ಳು ಹೊಟ್ಟೆಯ ಶೆಟ್ಟರ ಜೊತೆ  ಆತನ ದಡೂತಿ  ಹೆಂಡತಿ ದಿನಸಿಗಳೊಂದಿಗೆ ವ್ಯಾಪಾರ ಮಾಡುತ್ತಿರುವ ಗೊಂಬೆಗಳು ಮಗದೊಂದೆಡೆ. ಉದ್ಯಾನವನದಲ್ಲಿ ವಿವಿಧ ಗಿಡ ಮರಗಳೊಂದಿಗೆ ಆಟವಾಡುತ್ತಿರುವ ಮಕ್ಕಳ ಗೊಂಬೆಗಳು ಅದರ ಜೊತೆ ಜೊತೆಯಲ್ಲಿಯೇ ಮೃಗಾಲಯವನ್ನು ತೋರಿಸುವಂತೆ ಕಾಡು ಪ್ರಾಣಿಗಳಾದ  ಆನೆ, ಒಂಟೆ, ಹುಲಿ, ಸಿಂಹ, ಜಿಂಕೆ, ನರಿ ಹೀಗೆ ಹಲವಾರು ಗೊಂಬೆಗಳು ಜೊತೆ   ಇತ್ತೀಚೆಗೆ ಕ್ರಿಕೆಟ್, ಫುಟ್ವಾಲ್ ಆಟಗಾರರ ಗೊಂಬೆಗಳನ್ನು ಜೋಡಿಸುವುದೂ ಉಂಟು. ಒಟ್ಟಿನಲ್ಲಿ ಅವರವರ ಕಲ್ಪನೆಗೆ  ತಕ್ಕಂತೆ, ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಗೊಂಬೆಗಳನ್ನು ಮನೆಯಲ್ಲಿ ಅಲಂಕಾರಿಕವಾಗಿ ಜೋಡಿಸಿ ಪ್ರತಿದಿನವೂ ಸಂಜೆ ಅವುಗಳಿಗೆ ಆರತಿ ಮಾಡಿ ಮನೆಯ  ಸುತ್ತ ಮುತ್ತಲಿನ ಎಲ್ಲ ಮಕ್ಕಳನ್ನೂ ಮತ್ತು ಮುತ್ತೈದೆಯರನ್ನು ಮನೆಗೆ ಕರೆದು ಪ್ರತಿದಿನವೂ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿ ಬಾಗಿನದ ರೂಪದಲ್ಲಿ ವಿತರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. 

ಏಳನೇ ದಿನ ಸರಸ್ವತಿ ಪೂಜೆಯಂದು ಮನೆಯಲ್ಲಿರುವ ಪ್ರಮುಖ ಪುಸ್ತಕಗಳನ್ನು ಬೊಂಬೆಗಳೊಂದಿಗೆ ಜೊಡಿಸಿಟ್ಟು ಪೂಜೆ ಗೈದರೆ, ಒಂಭತ್ತನೇ ದಿನ ಮನೆಯಲ್ಲಿರುವ ಸಕಲ ಆಯುಧಗಳು, ಯಂತ್ರೋಪಕರಣಗಳು ಮತ್ತು ವಾಹನಗಳನ್ನು ಶುಧ್ಧೀಕರಿಸಿ  ಸಾಂಕೇತಿಕವಾಗಿ ಕೆಲವೊಂದು ಆಯುಧಗಳನ್ನು ಬೊಂಬೆಗಳ ಜೊತೆಯಲ್ಲಿರಿಸಿ ಭಕ್ತಿಭಾವದಿಂದ ಪೂಜೆ ಮಾಡಿದರೆ, ಹತ್ತನೇ ದಿನ ವಿಜಯದಶಮಿಯಂದು ವಿಶೇಷವಾದ ಬಗೆ ಬಗೆಯ  ಆಡುಗೆಗಳನ್ನು ತಯಾರಿಸಿ ಗೊಂಬೆಗಳಿಗೆ  ನೈವೇದ್ಯ ಮಾಡಿ ಬಂಧು ಬಾಂಧವರೊಂದಿಗೆ ಊಟವನ್ನು ಸವಿದು ಸಂಜೆ ಬನ್ನೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ, ಬನ್ನೀ ಎಲೆಗಳನ್ನು ಬಂಧು ಬಾಂಧವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡು ಹತ್ತಿರದ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ರಾತ್ರಿ ಪಟ್ಟದ ಗೊಂಬೆಗಳನ್ನು ವಿಸರ್ಜಿಸಿ ಮಾರನೆಯ ದಿನ ಪುನಃ ಜೋಪಾನವಾಗಿ ಬೊಂಬೆಗಳನ್ನು ದಬ್ಬಗಳಲ್ಲಿ ಇರಿಸಿ ಆಟ್ಟಕ್ಕೇಸುವುದರೊಂದಿಗೆ  ದಸರಾ ಹಬ್ಬ ಮುಕ್ತಾಯವಾಗುವುದು.

ಮಕ್ಕಳಿಗೆ ಎಲ್ಲಿಲ್ಲದ ಖುಷಿ

ದಸರಾ ಬಂತೆಂದರೆ ಶಾಲಾ ಮಕ್ಕಳಿಗೆ 10 ದಿನ ರಜೆ ಇರುತ್ತದೆ. ಹೀಗಾಗಿ ಹಬ್ಬಕ್ಕೆ ತಯಾರಿ ಬಲು ಜೋರಾಗಿ ಇರುತ್ತದೆ. ಹಿಂದೆಯೆಲ್ಲಾ ಹಳ್ಳಿಗಳಲ್ಲಿ, ನಗರಗಳಲ್ಲಿ ಸಂಜೆಯಾಯಿತಂದರೆ ಕೈಕಾಲು ಮುಖ ಶುಭ್ರವಾಗಿ ತೊಳೆದುಕೊಂಡು ಚೆಂದ ಚೆಂದ ದಿರಿಸುಗಳನ್ನು ಧರಿಸಿ ಬಗೆ ಬಗೆಯ ರೀತಿಯ ಜಡೆಗಳನ್ನು ಹಾಕಿಕೊಂಡು  ಅಲಂಕಾರಗಳನ್ನು ಮಾಡಿಕೊಂಡು ಸಿಧ್ಧವಾಗಿರುತ್ತಿದ್ದ ನಮ್ಮ ಅಕ್ಕ ತಂಗಿಯರೊಂದಿಗೆ ಕೈಯಲ್ಲಿ ಒಂದು ಚೆಂದ ಚೀಲವೋ ಇಲ್ಲವೇ ಸುಂದರ ಡಬ್ಬಿಯನ್ನು ಹಿಡಿದುಕೊಂಡು  ಸುತ್ತ ಮುತ್ತಲಿನ ಗೊಂಬೆ ಕೂರಿಸಿರುವವರ ಮನೆಗೆ ಮೇಲೆ ತಿಳಿಸಿದ ಹಾಗೆ ಜೋಡಿಸಿಟ್ಟಿರುತ್ತಿದ್ದ ಬೊಂಬೆಗಳನ್ನು ನೋಡಲು ಹೋಗುತ್ತಿದ್ದೆವು. ಬೊಂಬೆಗಳನ್ನು ನೋಡುವುದು ಒಂದು ನೆಪವಾದರೂ, ಅವರೆಲ್ಲರ ಮನೆಯಲ್ಲಿ ಕೊಡುತ್ತಿದ್ದ ಬೊಂಬೆ ಬಾಗಿಣದ ಸಿಹಿ ತಿಂಡಿಗಳೇ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಪ್ರತಿಯೊಂದು ಮನೆಗೂ ಹೋದ ಕೂಡಲೇ ನಾವು ಕಲಿತಿದ್ದ ಶ್ಲೋಕವನ್ನೋ, ದೇವರನಾಮವನ್ನೋ ಹಾಡಿ (ಒಂಭತ್ತೂ ದಿನವವೂ ಒಂದನ್ನೇ ಹೇಳುವ ಹಾಗಿರಲಿಲ್ಲ. ಪ್ರತಿದಿನವೂ ಬೇರೆ ಬೇರೆಯದನ್ನೇ ಹಾಡಬೇಕಾಗಿತ್ತು ) ಅವರು ಕೊಟ್ಟ, ಕೊಬ್ಬರಿ ಮೀಠಾಯಿ, ಲಡ್ಡು, ಚಕ್ಕುಲಿ, ಕೋಡುಬಳೆ, ಏನೂ ಮಾಡಲಾಗದಿದ್ದಲ್ಲಿ, ಬಿಸ್ಕೆಟ್ ಇಲ್ಲವೇ ಚಾಕ್ಲೇಟ್ಗಳನ್ನು ಪಡೆದುಕೊಂಡು ತಂದಿದ್ದ ಚೀಲದಲ್ಲೋ ಇಲ್ಲವೇ ಡಬ್ಬಿಯಲ್ಲಿ ಜೋಪಾನವಾಗಿ ಇರಿಸಿಕೊಂಡು ಮತ್ತೊಂದು ಮನೆಯತ್ತ ದೌಡಾಯಿಸುತ್ತಿದ್ದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

ನವರಾತ್ರಿಯ ಪಂಚಮಿ ದಿನ ನನ್ನ ಹುಟ್ಟಿದ ದಿನವಾದ್ದರಿಂದ ಅಮ್ಮ ಬೆಳಗ್ಗೆಯೇ ಎಬ್ಬಿಸಿ ಮೈಕೈಯ್ಯಿಗೆ ಚೆನ್ನಾಗಿ ಹರಳೆಣ್ಣೆ ಹಚ್ಚಿ  ಸ್ವಲ್ಪ ಹೊತ್ತು ಎಣ್ಣೆಯಲ್ಲೇ , ಹದವಾಗಿ ಸೀಗೆ ಪುಡಿ ಮತ್ತು ಚಿಗರೆಪುಡಿ ಬೆರೆಸಿ ಬಿಸಿ ಬಿಸಿ ನೀರಿನೊಂದಿಗೆ ಅಭ್ಯಂಜನ ಮಾಡಿಸುತ್ತಿದ್ದದ್ದು, ಕಣ್ಣಿಗೆ ಎಳ್ಳಷ್ಟೂ ಸೀಗೇಪುಡಿ ಬೀಳಬಾರದೆಂದು ಎಷ್ಟೇ ಎಚ್ಚರ ವಹಿಸಿದರೂ ಕಣ್ಣಿಗೆ ಸೀಗೆಪುಡಿ ಬಿದ್ದು ಕಣ್ಣುರಿ ಎಂದು ಜೋರಾಗಿ ಅಳುತ್ತಿದ್ದದ್ದು ಇನ್ನೂ ಕಣ್ಣ ಮುಂದೆಯೇ ಇದೆ. ಹೊಸ ಬಟ್ಟೆ ಧರಿಸಿ  ಸಮೀಪದ ದೇವಸ್ಥಾನದಲ್ಲಿ ಕೊಟ್ಟಿರುತ್ತಿದ್ದ ಶಾಶ್ವತ ಪೂಜೆಗೆ  ಹೋಗಿ ಬರುತ್ತಿದ್ದದ್ದು ಮರೆಯಲು ಆಗುವುದೇ ಇಲ್ಲ. ಇನ್ನು ಸರಸ್ವತಿ ಪೂಜೆಯ ಹಿಂದಿನ ದಿನವೇ ನಮಗೆಲ್ಲಾ ಕಷ್ಟಕರವಾಗಿದ್ದ ಇಂಗ್ಲೀಷ್, ಗಣಿತ ಮತ್ತು ವಿಜ್ಣಾನಗಳ ಪುಸ್ತಕವನ್ನು ಪೂಜೆಗಿರಿಸಿ ಮುಂದಿನ ನಾಲ್ಕು ದಿನ ಅಪ್ಪಾ ಅಮ್ಮಂದಿರು ಓದು ಎಂದರೆ, ಹೇ ಹೇ, ವಿದ್ಯೆ ಚೆನ್ನಾಗಿ ನಮ್ಮ ತಲೆಗೆ ಹತ್ತಲಿ ಎಂದು ಸರಸ್ವತಿ ಪೂಜೆಗೆ ಎಲ್ಲಾ ಪುಸ್ತಕಗಳನ್ನು ಇಟ್ಟಿದ್ದೇವೆ ಇನ್ನು ಹೇಗೆ ಓದುವುದು ಎಂಬ ಸಬೂಬನ್ನು ಹೇಳುತ್ತಿದ್ದನ್ನು  ನೆವೆಸಿಕೊಂಡರೆ ಇಂದಿಗೂ ನಮಗೆ ನಗು ಬರುತ್ತದೆ.

ಆಯುಧ ಪೂಜೆ

ಆಯುಧ ಪೂಜೆಯ ದಿನ ಬೆಳಗ್ಗೆ ಹೊತ್ತಿಗೆ ಮುಂಚೆಯೇ ಎದ್ದು  ಮನೆಯಲ್ಲಿದ್ದ ಎಲ್ಲ ವಾಹನಗಳನ್ನೂ (ಅಂದೆಲ್ಲಾ ಒಂದೋ ಎರಡೂ ಸೈಕಲ್ ಹೆಚ್ಚೆಂದರೆ ಒಂದು ದ್ವಿಚಕ್ರ ವಾಹನವಿರುತ್ತಿತ್ತು) ಸ್ವಚ್ಚಗೊಳಿಸಿ ಅವುಗಳಿಗೆ ಬಣ್ಣ ಬಣ್ಣದ ಪೇಪರ್ಗಳನ್ನು ಅಲಂಕಾರಿಕವಾಗಿ ಕತ್ತರಿಸಿ, ಬಣ್ಣ ಬಣ್ಣದ ಬಲೂನ್ಗಳೊಂದಿಗೆ, ಬಾಳೆ ಕಂದುಗಳನ್ನು ಕಟ್ಟಿ, ವೀಭೂತಿ ಕುಂಕುಮ ಹಚ್ಚಿ  ಹೂವಿನ ಹಾರದಿಂದ ಅಲಂಕರಿಸಿ ಭಕ್ತಿಯಿಂದ ಪೂಜೆ ಮಾಡಿ ನಿಂಬೆಹಣ್ಣುಗಳನ್ನು ಚಕ್ರದಡಿಗೆ ಸಿಕ್ಕಿಸಿ ಔಕಳಿ ಜೊತೆಗೆ ನಾಣ್ಯಗಳನ್ನು ಹಾಕಿರುತ್ತಿದ್ದ ಬೂದು ಕುಂಬಳ ಕಾಯಿಯನ್ನು ನಿವಾಳಿಸಿ  ದೃಷ್ಟಿ ಪರಿಹಾರವಾಗಿ ಜೋರಾಗಿ ಒಡೆದು ಪುರಿಯನ್ನು ವಾಹನಗಳ ಮೇಲೆರೆಚಿ, ಅಕ್ಕ ಪಕ್ಕದವರೆಲ್ಲರಿಗೂ ಕಡಲೇ ಪುರಿ ಮತ್ತು ಸಿಹಿ ತಿಂಡಿಗಳನ್ನು ಹಂಚಿ ಮನೆಯವರನ್ನೆಲ್ಲಾ ಕೂರಿಸಿಕೊಂಡು ವಾಹನವನ್ನು ಒಮ್ಮೆ ಚಲಾಸಿದೆರೆ ಆಯುಧಪೂಜೆಗೆ ಕಳೆ ಕಟ್ಟಿದಂತೆ. ವಾಹನಗಳನ್ನು ಸಿಂಗರಿಸುವುದರಲ್ಲಿ ನೆರೆ ಹೊರೆಯವರೊಂದಿಗೆ ಆರೋಗ್ಯಕರ ಪೈಪೋಟಿ ಇರುತ್ತಿತ್ತು.  ಇನ್ನು  ಹತ್ತನೇ ದಿನ ವಿಜಯದಶಮಿಯಂದು ಮನೆಗೆ ಬಂದಿರುತ್ತಿದ್ದ  ಬಂಧು ಮಿತ್ರರೊಂದಿಗೆ ಕಾಲ ಕಳೆದು ಭೂರಿ ಭೋಜನ ಮಾಡಿ ಸಂಜೆಯಾಗುತ್ತಲೇ ದೇವಸ್ಥಾನಕ್ಕೆ ಹೋಗುತ್ತಿದ್ದದ್ದು, ಎಂಬತ್ತರ ದಶಕದಲ್ಲಿ ದೂರದರ್ಶನದ ಮೂಲಕ ಮನೆಯಲ್ಲೇ ಕುಳಿತು ಮೈಸೂರಿನ ದಸರಾ ಮೆರವಣಿಗೆಯ ಸವಿಯನ್ನು ಸವಿಯುತ್ತಿದ್ದದ್ದು ನಿಜಕ್ಕೂ ಅವರ್ಣನೀಯ.


Stay up to date on all the latest ಭಕ್ತಿ-ಭವಿಷ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp