ವೈಕುಂಠ ಏಕಾದಶಿ ಅಂದರೇನು? ಅದರ ಮಹತ್ವ ಏನು? ಹೀಗಿದೆ ಒಂದು ಕಥೆ

ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ.
ವೈಕುಂಠ ಏಕಾದಶಿ
ವೈಕುಂಠ ಏಕಾದಶಿ
Updated on

ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ. ಈ ದಿನದಂದು ಉಪವಾಸವಿದ್ದು, ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಇನ್ನೂ ಕೆಲವರು ಏಕಾದಶಿಯ ದಿನದಂದು ಮೌನ ವ್ರತಾಚರಣೆ ಮಾಡುತ್ತಾರೆ. 

ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು/ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.  ಈ ದಿನ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

ವೈಕುಂಠ ಎಂಬ ಹೆಸರಿನ ಅರ್ಥವೇನು? 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಸಾಕ್ಷಾತ್ಕಾರವಾಗಿ ಮುಕ್ತಿ ಪಡೆದವರು ಎಂದರ್ಥ.  ಬದುಕಿನಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದು ಈ ಹೆಸರಿಗೆ ಇರುವ ಅರ್ಥವಾಗಿದೆ. 

ಶರೀರಮಾಧ್ಯಂ ಖಲು ಧರ್ಮಸಾಧನಂ" ಎಂಬ ಮಾತಿನಂತೆ ಯಾವುದೇ ಒಳ್ಳೆಯ, ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ. ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು,  ಈ ಮೂಲಕ ಪರಮಪದವನ್ನು ಸೇರಬಹುದು ಎಂಬುದು ವೈಕುಂಠ ಏಕಾದಶಿಯ ವ್ರತಾಚರಣೆಯ ಗೂಢಾರ್ಥವಾಗಿದೆ. 

ವೈಕುಂಠ ಏಕಾದಶಿಯ ಬಗ್ಗೆ ಹೀಗೊಂದು ಕಥೆ: ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು.  ಶ್ರೀಕೃಷ್ಣ ತಂದೆಯನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು. 

ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ  ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com