ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ನಂಜನಗೂಡು ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ 23 ಕಿ.ಮಿ. ದೂರದಲ್ಲಿರುವ ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ.
ನಂಜನಗೂಡು ರಥೋತ್ಸವ
ನಂಜನಗೂಡು ರಥೋತ್ಸವ

ಬರಹ: ಶ್ರೀಕಂಠ ಬಾಳಗಂಚಿ

ನಂಜನಗೂಡು ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ 23 ಕಿ.ಮಿ. ದೂರದಲ್ಲಿರುವ ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಶ್ರೀಕ್ಷೇತ್ರದಲ್ಲಿರುವ ಶ್ರೀ ಶ್ರೀಕಂಠೇಶ್ವರ ಅಥವಾ ಶ್ರೀ ನಂಜುಡೇಶ್ವರ ಎಂದು ಕರೆಯಲ್ಪಡುವ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಇದು ದಕ್ಷಿಣ ಕಾಶಿ ಎಂದೇ ಭಕ್ತಾದಿಗಳಿಂದ ಪ್ರಸಿದ್ಧಿ ಪಡೆದಿದೆ. ನಂಜನಗೂಡಿನಲ್ಲಿ ನೂರಾರು ದೇವಸ್ಥಾನಗಳು ಇದ್ದರೂ ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರನ ದೇವಾಲಯದಿಂದಲೇ.

ಈ ದೇವಾಲಯದಲ್ಲಿ ವರ್ಷವಿಡೀ ವಿವಿಧ ಪೂಜೆ ಪುನಸ್ಕಾರಗಳು ಅತ್ಯಂತ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬರುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತೀ ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದೆ. ವರ್ಷಕ್ಕೆ ಎರಡು ಜಾತ್ರೆಗಳು ಅತ್ಯಂತ ವೈಭವೋಪೇತವಾಗಿ ಇಲ್ಲಿ ನಡೆಯುತ್ತವೆ. ಅಕ್ಟೋಬರ್-ನವಂಬರ್ ಕಾರ್ತಿಕ ಮಾಸದಲ್ಲಿ ತ್ರಿರಥದ ಚಿಕ್ಕ ಜಾತ್ರೆ ನಡೆದರೆ, ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪಂಚ ರಥ ಅರ್ಥಾತ್ ದೊಡ್ಡ ಜಾತ್ರೆ ನಡೆದು ಲಕ್ಷಾಂತರ ಜನರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತರು, ನೀಲಕಂಠ ದೀಕ್ಷಿತರು, ವಿಶ್ವನಾಥ ದೀಕ್ಷಿತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರು ಸೇರಿದಂತೆ ದೇವಾಲಯದ ಅರ್ಚಕರು ಜಾತ್ರೆಯ ದಿನದ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಜಾತ್ರೋತ್ಸವದ ಪೂಜಾ ಕೈಂಕರ್ಯಗಳಾದ ಈಶ್ವರನ ಶಿರದಿಂದ ಪಾದವರಿಗೆ ವಿವಿಧ ಹೋಮಗಳ ಹವನಗಳ ಮೂಲಕ ಅರ್ಚನೆ ಮಾಡಿ ನಂತರ ಪಾರ್ವತಿ, ಗಣಪತಿ ಹಾಗೂ ಸುಬ್ರಹ್ಮಣ್ಯ ಮತ್ತು ಚಂಡಕೇಶ್ವರಿಗೂ ಹೋಮ ಹವನಗಳ ಮೂಲ ಪೂಜೆ ಸಲ್ಲಿಸುತ್ತಾರೆ.

ಮಹರ್ಷಿಗಳು ಸ್ಥಾಪಿಸಿದ ರಥ ನಂತರ ಮಕರ ಲಗ್ನದಲ್ಲಿ ಕೃತಯುಗದ ಗೌತಮ ಮಹರ್ಷಿಗಳು ಸ್ಥಾಪಿಸಿದ್ದಾರೆ ಎಂದು ಪ್ರತಿತಿಯುಳ್ಳ ಗೌತಮ ನಾಮಧೇಯದ ಚತುರ್ಮುಖ ಬ್ರಹ್ಮನೇ ಚಾಲನಾ ಸ್ಥಾನದಲ್ಲಿರುವ ರಥಕ್ಕೆ ಮತ್ತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಅರ್ಪಿಸಿ ಶ್ರೀಕಂಠೇಶ್ವರನನ್ನು ಪ್ರತಿಷ್ಠಾಪಿಸುವುದರೊಂದಿಗೆ ಅಧಿಕೃತವಾಗಿ ದೊಡ್ಡ ಜಾತ್ರೆಯ ರಥೋತ್ಸವದ ಚಾಲನೆಗೆ ನಾಂದಿ ಹಾಡಲಾಗುತ್ತದೆ.

ಶ್ರೀಕಂಠೇಶ್ವರನ ರಥಾರೋಹಣವಾಗುತ್ತಿದ್ದಂತೆ ಆತನ ಪರಿವಾರದ ತಾಯಿ ಪಾರ್ವತಿ, ಗಣಪತಿ, ಸುಬ್ರಮಣ್ಯ ಹಾಗೂ ಚಂಡಿಕೇಶ್ವರನ ರಥಾರೋಹಣ ವಿಧಿವತ್ತಾಗಿ ಸಂಪ್ರದಾಯಕ ಬದ್ಧವಾಗಿ ನಡೆಯತ್ತದೆ. ರಥಬೀದಿಯಲ್ಲಿ ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡ ಈ ಐದೂ ರಥಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದರೆ, ಈ ಐದು ರಥಗಳನ್ನು ಸಾವಿರಾರು ಭಕ್ತರು ಶ್ರದ್ಥಾ ಭಕ್ತಿಯಿಂದ ಜೈ ಶ್ರೀಕಂಠ, ಜೈ ನಂಜುಂಡ ಎಂಬ ಘೋಷಣೆಗಳನ್ನು ಕೂಗುತ್ತಾ ಎಳೆದು ಸಂಭ್ರಮಿಸುತ್ತಾರೆ. ಸಾಮಾನ್ಯವಾಗಿ ಈ ರಥೋತ್ಸವಕ್ಕೆ ಮೈಸೂರಿನ ಒಡೆಯರ್ ಕುಟುಂಬಸ್ಥರು ಬಂದು ಅತ್ಯಂತ ಶ್ರದ್ದಾ ಭಕ್ತಿಗಳಿಂದ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವುದಲ್ಲದೇ, ಅನೇಕ ಬಾರಿ ಮಹಾರಾಣಿಯಾದ ಶ್ರೀಮತಿ ಪ್ರಮೋದಾ ದೇವಿಯವರು ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಅತ್ಯಂತ ಪುರಾತನವಾದ ಸುಮಾರು 80 ಅಡಿ ಎತ್ತರದ 110 ಟನ್‌ ತೂಕದ ಈ ಗೌತಮ ರಥದಲ್ಲಿ ಪವಡಿಸುವ ನಂಜುಂಡೇಶ್ವರ ರಥದ ಪ್ರಯಾಣ ದೇವಾಲಯದ ಮುಂಭಾಗದಿಂದ ಆರಂಭವಾಗಿ ಬಲಭಾಗದ ರಾಷ್ಟ್ರಪತಿ ರಸ್ತೆಯ ರಾಕ್ಷಸ ಮಂಟಪದ ಮೂಲಕ ಮಹಾತ್ಮಾಗಾಂಧಿ ರಸ್ತೆಯಲ್ಲಿ ಸಾಗಿ ದೇವಾಲಯದ ಎಡ ಭಾಗಕ್ಕೆ ಬರುವುದರೊಂದಿಗೆ ಶ್ರೀಕಂಠೇಶ್ವರ ದೊಡ್ಡ ತೇರು ನೆಲೆ ಸೇರಿದಂತಾಗುತ್ತದೆ. ಆರಂಭದಲ್ಲಿ ಗಣಪತಿ ನಂತರ ಕ್ರಮವಾಗಿ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ಸೇರಿದಂತೆ ಪಂಚರಥಗಳ ಮಿಣಿ ಹಿಡಿದು ಉಘೇ ನಂಜುಂಡೇಶ್ವರ ಎಂದು ಬಹು ಪರಾಕಿನೊಡನೆ ರಥಬೀದಿಯಲ್ಲಿ ರಥವನ್ನು ಎಳೆದೊಯ್ಯತ್ತಿದ್ದರೆ 80 ಅಡಿ ಎತ್ತರದ ಭವರೋಗ ವೈದ್ಯ ಹಕಿಂ ನಂಜುಂಡೇಶ್ವರ ಪವಡಿಸಿದ ಗೌತಮ ರಥ ಬೀದಿಯುದ್ದಕ್ಕೂ ಬಳುಕುತ್ತಾ ಬಾಗುತ್ತ ಸಾಗುವ ವೈಭವವನ್ನು ವರ್ಣಿಸುವುದಕ್ಕಿಂತಲೂ ಖುದ್ದು ನೋಡುವುದೇ ಮಹದಾನಂದ ಎಂದರು ಅತಿಶಯವಲ್ಲ.

ರಥದ ಬೀದಿಯಲ್ಲಿ ರಥವನ್ನು ಸಂಭ್ರಮದಿಂದ ಸ್ವಾಗತಿಸುವ ಸಲುವಾಗಿ ಇಡೀ ರಥಬೀದಿಯನ್ನು ಶುಧ್ದೀಕರಿಸಿ ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿದ್ದಲ್ಲದೇ, ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಜೈಕಾರ ಕೂಗುತ್ತಾ ಹೂವು, ಬಾಳೆಹಣ್ಣು ಮತ್ತು ಧವನಗಳನ್ನು ಎಸೆದು ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯ ಮನಸೆಳೆಯುತ್ತದೆ.ಜಾತ್ರೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ನಂಜನಗೂಡಿನ ವಿವಿಧ ಸಂಘ ಸಂಸ್ಥೆಗಳು ಮಜ್ಜಿಗೆ, ಪಾನಕ ಬೇಲದ, ಹಣ್ಣಿನ ಪಾನಕ, ಸಿಹಿ ತಿನಿಸುಗಳು, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆ ಬಾತ್‌, ಪುಳಯೋಗರೆಗಳ ಹಾಗೂ ತಿಂಡಿ ತಿನಿಸುಗಳನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸುತ್ತಾರೆ. ಪ್ರತೀ ಬಾರಿ ದೊಡ್ಡ ಜಾತ್ರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರುತ್ತಾರೆ..

ಕಾರ್ಯಕ್ರಮಗಳೇನೇನು: ಶ್ರೀ ಮನ್ಮಹಾಗೌತಮ ರಥಾರೋಹಣ ಪೂರ್ವಕ ಹಂಸಾರೋಹಣ ನಂತರ ನಟೇಶೋತ್ಸವದ

ಎರಡನೆಯ ದಿನ ಮೃಗಯಾತ್ರಾಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣೋತ್ಸವ ದೇವೀ ಪ್ರಣಯ ಕಲಹ ಸಂಧಾನೋತ್ಸವ.

ಮೂರನೇಯ ದಿನ ಚೂರ್ಣೋತ್ಸವ ಪೂರ್ವಕ ಅವಭತ ತೀರ್ಥಸ್ನಾನ ನಂತರ ರಾತ್ರಿ 7ಕ್ಕೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಂತರ ನರಾಂದೋಳಿ ಕಾರೋಹಣೋತ್ಸವ, ಧ್ವಜಾರೋಹಣ.

ನಾಲ್ಕನೇ ದಿನ ಪುಷ್ಪಯಾಗಪೂರ್ವಕ ಪಂಚೋಪಚಾರಪೂರ್ವಕ ಕೈಲಾಸಯಾನಾರೋಹಣೋತ್ಸವ ನಡೆದರೆ,

ಐದನೇ ದಿನ ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವದ ಮೂಲಕ ನಂಜನಗೂಡಿನ ದೊಡ್ಡಜಾತ್ರೆ ಸಂಪನ್ನವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com