

ಹಿಂದಿನ ಜನ್ಮದ ಕರ್ಮವು ನಾವು ಈ ಜನ್ಮದಲ್ಲಿ ಅನುಭವಿಸುವ ಸುಖ-ದುಃಖಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹಿಂದಿನ ಜನ್ಮದಲ್ಲಿ ಆತ್ಮವು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಅದು ಮುಂದಿನ ಜನ್ಮವನ್ನು ಪಡೆಯುತ್ತದೆ. ಮತ್ತೆ ಈ ಜೀವನದಲ್ಲಿ ಅದರ ಫಲಾಫಲ ಅನುಭವಿಸುತ್ತೇವೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದ ಪ್ರಕಾರ, ಆತ್ಮವು ಶಾಶ್ವತ ಮತ್ತು ಅವಿನಾಶಿಯಾದದ್ದು, ದೇಹವು ಸಾಯುತ್ತದೆಯೇ ಹೊರತು ಆತ್ಮವು ಅಲ್ಲ. ಆತ್ಮವು ಹಿಂದಿನ ಜನ್ಮದ ಕರ್ಮದ ಫಲಗಳನ್ನು ಹೊತ್ತುಕೊಂಡು ಹೊಸ ದೇಹವನ್ನು ಪಡೆಯುತ್ತದೆ. ನಾವು ಹಿಂದೆ ಮಾಡಿದ ಪುಣ್ಯ ಅಥವಾ ಪಾಪ ಕರ್ಮಗಳ ಫಲಿತಾಂಶವು ಆತ್ಮದೊಂದಿಗೆ ಮುಂದಿನ ಜನ್ಮಕ್ಕೆ ಸಾಗುತ್ತಾ, ಈ ಜನ್ಮದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರ ಕೂಡ ಇದೇ ಸಿದ್ಧಾಂತವನ್ನು ಬೆಂಬಲಿಸುತ್ತದೆ.
ಹಿಂದಿನ ಜನ್ಮಗಳ ಬಗ್ಗೆ ಜಾತಕದ ಒಂಬತ್ತನೇ ಮನೆಯಯಲ್ಲಿರುವ ಗ್ರಹಗಳ ಆಧಾರದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹನ್ನೆರಡನೇ ಮನೆಯ ಅಧಿಪತಿಯು ಸೂರ್ಯನೊಂದಿಗೆ ಸೇರಿಕೊಂಡರೆ ಮರಣದ ನಂತರ ಶಿವ ಲೋಕವನ್ನು ತಲುಪುತ್ತಾನೆ ಎಂದು ಹೇಳಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮರಣದ ನಂತರ ಆತ್ಮ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಸಹ ಜಾತಕದಿಂದ ಅರ್ಥಮಾಡಿಕೊಳ್ಳಬಹುದು.
ನಾವೆಲ್ಲರೂ ಅನೇಕ ಜನ್ಮಗಳನ್ನು ಅನುಭವಿಸಿ ಈ ಜನ್ಮದಲ್ಲಿ ಹುಟ್ಟಿರುತ್ತೇವೆ. ಹಿಂದಿನ ಜನ್ಮಗಳಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದೆವು ಎಂದು ಹೇಳುವ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ. ನಾವು ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ನಮ್ಮ ಅಧ್ಯಯನವನ್ನು ಮುಂದುವರಿಸುತ್ತೆವೆ, ಅದೇ ರೀತಿ ಪ್ರತಿ ಜನ್ಮವು ಒಂದು ತರಗತಿಯಂತೆ, ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ನಾವು ಮುಂದಿನ ತರಗತಿಗೆ ಹೋಗಬಹುದು ಎಂದು ಅವು ಸೂಚಿಸುತ್ತವೆ.
ಮಹಾವಿಷ್ಣುವಿನ ಹತ್ತು ಅವತಾರಗಳು ಒಂದೇ ಪ್ರಜ್ಞೆಯ ಅನೇಕ ಜನ್ಮಗಳ ಪರಿಕಲ್ಪನೆಯಾಗಿದೆ. ಹಲವು ಪುರಾಣಗಳಲ್ಲಿಯೂ ಸಹ ಗತ ಜನ್ಮ ಪುನರ್ ಜನ್ಮಗಳ ಬಗ್ಗೆ ಉಲ್ಲೇಖವಿದೆ. ಇಲ್ಲಿ ಅಧ್ಯಯನ ಮಾಡಬೇಕಾದ ಪ್ರಮುಖ ವಿಷಯ ಪ್ರೀತಿ. ಅನೇಕ ಜನರು ಆ ವಿಷಯದಲ್ಲಿ ವಿಫಲರಾಗುತ್ತಾರೆ. ಪ್ರೀತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತಕ್ಕೆ ಹೋಗುತ್ತಾರೆ. ಅನೇಕ ಜನರು ತಮ್ಮ ಸ್ವಂತ ತಂದೆ, ತಾಯಿ ಮತ್ತು ಒಡಹುಟ್ಟಿದವರನ್ನು ಪ್ರೀತಿಸುವುದನ್ನು ಪ್ರೀತಿಸುವುದಿಲ್ಲ, ಪ್ರೀತಿಯೇ ಎಲ್ಲದರ ಮೂಲ ಎಂದು ಹೇಳಿದ್ದರೂ ಜನರಿಗೆ ಅರ್ಥವಾಗುತ್ತಿಲ್ಲ.
ನಾವು ಈ ಜೀವನದಲ್ಲಿ ಹಿಂದಿನ ಜನ್ಮದ ಕರ್ಮಗಳನ್ನು ಸರಿ ಪಡಿಸಿಕೊಳ್ಳಲು ಅವಕಾಶವಿದೆ, ಆದರೆ ಅನೇಕರು ಅದರ ಬಗ್ಗೆ ಗಮನ ಹರಿಸುವುದಿಲ್ಲ, ಹೀಗಾಗಿ ಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಇನ್ನೂ ವೈವಾಹಿಕ ಜೀವನವು ಸಂತೋಷದಿಂದಿರಲು ಅಥವಾ ಅತೃಪ್ತಿಯೆಂಬುದು ತಲೆದೂರಲು ದಂಪತಿಗಳು ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಕರ್ಮಗಳೇ ಕಾರಣ ಎಂದು ಹೇಳಲಾಗುತ್ತದೆ.
ಹಿಂದಿನ ಜೀವನದ ಪ್ರೇಮಿ ಈ ಜೀವನದಲ್ಲೂ ನಿಮ್ಮ ಜೊತೆಗಾತಿಯಾಗಬಹುದು. ನಿಮ್ಮ ಹಿಂದಿನ ಜನ್ಮದ ಶತ್ರು ಅಥವಾ ಪ್ರತಿಸ್ಪರ್ಧಿ ಸಂಗಾತಿಯಾಗಿರಬಹುದು, ಹೀಗಾಗಿ ಈ ಜೀವನವೂ ಸಂಘರ್ಷದೊಂದಿಗೆ ಮುಂದುವರಿಯುತ್ತದೆ. ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು, ಸಹಪಾಠಿಗಳು ಮತ್ತು ಸ್ನೇಹಿತರು ಎಲ್ಲರೂ ಹಿಂದಿನ ಜನ್ಮಗಳಲ್ಲಿ ಭೇಟಿಯಾದ ಜನರು. ಅವರು ಮುಂದಿನ ಜನ್ಮಗಳಲ್ಲಿ ನಿಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಇಂದು ಜನರು ತಮ್ಮ ಹಿಂದಿನ ಜನ್ಮದ ಕರ್ಮಕ್ಕೆ ಹೆಚ್ಚು ಒತ್ತು ನೀಡಿ ಪ್ರಸ್ತುತ ಜೀವನದ ಎಲ್ಲಾ ಸಮಸ್ಯೆಗಳಿಗೆ ಹಿಂದಿನ ಕರ್ಮವನ್ನೇ ದೂಷಿಸುತ್ತಿದ್ದಾರೆ.
ಹಿಂದೂ ಧರ್ಮದಂತಹ ಅನೇಕ ಧರ್ಮಗಳಲ್ಲಿ ಪುನರ್ಜನ್ಮದ ಕಲ್ಪನೆಯು ಒಂದು ಮುಖ್ಯ ಭಾಗವಾಗಿದೆ ಮತ್ತು ಹಿಂದಿನ ಜನ್ಮದ ಕ್ರಿಯೆಗಳು ಪ್ರಸ್ತುತ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ.
ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ
Advertisement