

ಅನಂತ ಚತುರ್ದಶಿಯು ಅನಂತ ರೂಪದಲ್ಲಿರುವ ವಿಷ್ಣುವಿಗೆ ಅರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ . ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಈ ದಿನವು ಸಾಂಪ್ರದಾಯಿಕವಾಗಿ ವಿಷ್ಣು ಪೂಜೆ, ಅನಂತ ವ್ರತ ಮತ್ತು ಪವಿತ್ರ ಅನಂತ ಸೂತ್ರವನ್ನು ಕಟ್ಟುವುದರೊಂದಿಗೆ ಸಂಬಂಧಿಸಿದೆ .
ಈ ದಿನವು ಮತ್ತೊಂದು ಪ್ರಮುಖ ಮಹತ್ವವನ್ನು ಹೊಂದಿದೆ, ಅನಂತ ಚತುರ್ದಶಿಯು ಗಣೇಶೋತ್ಸವದ ಪ್ರಮುಖ ಅಂತಿಮ ದಿನವಾಗಿದ್ದು , ಅನೇಕ ಭಕ್ತರು ಗಣೇಶ ವಿಸರ್ಜನೆ ಮಾಡಿ ಗಣಪತಿ ಬಪ್ಪಾಗೆ ಭಾವನಾತ್ಮಕ ವಿದಾಯ ಹೇಳುತ್ತಾರೆ.
2026 ರಲ್ಲಿ, ಅನಂತ ಚತುರ್ದಶಿಯನ್ನು ಸೆಪ್ಟೆಂಬರ್ 25, ಶುಕ್ರವಾರ ಆಚರಿಸಲಾಗುತ್ತದೆ . ಚತುರ್ದಶಿ ತಿಥಿ ಸೆಪ್ಟೆಂಬರ್ 24 ರಂದು ರಾತ್ರಿ 11.18 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 25ರಂದು ರಾತ್ರಿ 11:09 ಕ್ಕೆ ಕೊನೆಗೊಳ್ಳುತ್ತದೆ .
ಈ ದಿನದಲ್ಲಿ14 ಗಂಟುಗಳಿರುವ ದಾರವನ್ನು ಕಟ್ಟುವ ಸಂಪ್ರದಾಯವಿದೆ. ಈ ದಿನ, ಅನಂತ ಸೂತ್ರವನ್ನು ವಿಷ್ಣುವಿಗೆ ಅರ್ಪಿಸಿ, ಬಳಿಕ ತಮ್ಮ ತೋಳಿನ ಮೇಲೆ ಕಟ್ಟಿಕೊಳ್ಳಲಾಗುತ್ತದೆ. 2026ರ ಅನಂತ ಚತುರ್ದಶಿ ದಿನದ ಕುರಿತು ಸಂಪೂರ್ಣ ಮಾಹಿತಿಯನ್ನು ನೀವಿಲ್ಲಿ ಪಡೆಯಬಹುದು.
ಗಣೇಶ ಚತುರ್ಥಿಯಂದು ಗಣೇಶನನ್ನು ಸ್ವಾಗತಿಸಿದ ಕುಟುಂಬಗಳಿಗೆ, ಅಂತಿಮ ಪೂಜೆ ಮತ್ತು ವಿಸರ್ಜನೆಯೊಂದಿಗೆ ಆಚರಣೆಯನ್ನು ಪೂರ್ಣಗೊಳಿಸುವ ದಿನವೂ ಇದಾಗಿದೆ.
ಅನಂತ ಚತುರ್ದಶಿ ದಿನದಂದು ಮಾಡುವಂತಹ ಪೂಜೆ - ಪುನಸ್ಕಾರಗಳು ಒಂದು ಕುಟುಂಬದ ಸಂಪ್ರದಾಯದಿಂದ ಇನ್ನೊಂದು ಕುಟುಂಬದ ಸಂಪ್ರದಾಯಕ್ಕೆ ಭಿನ್ನವಾಗಿರುತ್ತದೆ. ಆಯಾ ಕುಟುಂಬದ ಪದ್ಧತಿಗಳಿಗೆ, ಸಂಪ್ರದಾಯಗಳಿಗೆ ಅನುಗುಣವಾಗಿ ನೀವು ಅನಂತ ಚತುರ್ದಶಿ ಪೂಜೆಯನ್ನು ಮಾಡಬೇಕು.
ಅನಂತ ಚತುರ್ದಶಿಯಂದು ಮಾಡುವ ಗಣಪತಿ ವಿಸರ್ಜನೆಯು ಅತ್ಯಂತ ಭಾವನಾತ್ಮಕ ಸಮಯವಾಗಿದೆ. ಆದರೆ, ವಿಧಿಯ ನಿಯಮವೆಂದರೆ ಪ್ರತಿಯೊಬ್ಬ ಅತಿಥಿಯೂ ಒಂದು ದಿನ ಹೊರಡಬೇಕು ಎಂಬ ಸಂದೇಶವಾಗಿದೆ.
ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮಾನ್ಯ ಜನರಿಗೂ ಕೂಡ ಈ ಲಹರಿಗಳನ್ನು ಆಕರ್ಷಿಸಲು ಮತ್ತು ಗ್ರಹಿಸಲು ಸುಲಭವಿರುತ್ತದೆ. ಅನಂತಪೂಜೆ ಮಾಡುವುದು ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು.
ಅನಂತ ಚತುರ್ದಶಿ ಕಥೆ
ಸತ್ಯಯುಗದಲ್ಲಿ ಸುಮಂತ ಎಂಬ ಮಹರ್ಷಿ ಇದ್ದರು. ಅವರ ಮಗಳು ಸುಶೀಲೆ ಅತ್ಯಂತ ಗುಣವಂತೆ. ತಾಯಿ ತೀರಿಕೊಂಡ ನಂತರ ಸುಶೀಲೆಯ ಮಲತಾಯಿ ಕರ್ಕಶೆ ಅವಳಿಗೆ ಬಹಳ ತೊಂದರೆ ನೀಡುತ್ತಿದ್ದಳು, ಅನಂತರ ಸುಮಂತ ಮುನಿಯು ಸುಶೀಲೆಯನ್ನು ಕೌಂಡಿನ್ಯ ಮಹರ್ಷಿಯೊಂದಿಗೆ ಮದುವೆ ಮಾಡಿಕೊಟ್ಟನು. ದಾರಿಯಲ್ಲಿ ನದಿ ತೀರದಲ್ಲಿ ಸುಶೀಲೆ ಕೆಲವು ಮಹಿಳೆಯರು ಅನಂತ ವ್ರತ ಆಚರಿಸುವುದನ್ನು ನೋಡುತ್ತಾಳೆ. ಆ ವ್ರತದ ಮಹತ್ವ ತಿಳಿದು ತಾನೂ ಆಚರಿಸಿ, ಕೈಗೆ 14 ಗಂಟಿನ ಅನಂತ ದಾರ (ಅನಂತಸೂತ್ರ)ವನ್ನು ಕಟ್ಟಿಕೊಳ್ಳುತ್ತಾಳೆ.
ಈ ವ್ರತದ ಪ್ರಭಾವದಿಂದ ಅವರ ಮನೆಯು ಧನ-ಧಾನ್ಯದಿಂದ ಸಮೃದ್ಧವಾಯಿತು. ಆದರೆ ಕೌಂಡಿನ್ಯ ಮುನಿಯು ತನ್ನ ಸ್ವಂತ ಶಕ್ತಿಯಿಂದ ಈ ಸಂಪತ್ತು ಬಂದಿದೆ ಎಂದು ನಂಬಿ, ಹೆಂಡತಿಯ ಕೈಯಲ್ಲಿದ್ದ ಅನಂತ ದಾರವನ್ನು ಹರಿದು ಅಗ್ನಿಗೆ ಹಾಕಿದನು. ದಾರವನ್ನು ಅವಮಾನಿಸಿದ ಕೂಡಲೇ ಅವರ ಸಮೃದ್ಧಿಯೆಲ್ಲ ನಾಶವಾಗಿ ತೀವ್ರ ಬಡತನಕ್ಕೆ ಸಿಲುಕಿದರು. ತಪ್ಪು ಅರಿತ ಕೌಂಡಿನ್ಯ ಮುನಿ ಪ್ರಾಯಶ್ಚಿತ್ತಕ್ಕಾಗಿ ಕಾಡಿಗೆ ತೆರಳಿ ಅನಂತ ದೇವರನ್ನು ಕುರಿತು ಕಠಿಣ ತಪಸ್ಸು ಮಾಡಿದನು. ಕೌಂಡಿನ್ಯನ ಭಕ್ತಿಗೆ ಮೆಚ್ಚಿ ವಿಷ್ಣುವು ಪ್ರತ್ಯಕ್ಷನಾಗಿ ಅವನ ಕಷ್ಟಗಳನ್ನು ನಿವಾರಿಸಿ, ಸುಖ-ಸಂಪತ್ತನ್ನು ಅನುಗ್ರಹಿಸಿದನು. ನಂತರ ಕೌಂಡಿನ್ಯ ಮತ್ತು ಸುಶೀಲೆ ಶ್ರದ್ಧಾ-ಭಕ್ತಿಯಿಂದ ವರ್ಷಪೂರ್ತಿ ಈ ವ್ರತವನ್ನು ಆಚರಿಸಿ ಮುಕ್ತಿ ಪಡೆದರು ಎಂಬ ನಂಬಿಕೆಯಿದೆ.
ಅನಂತ ಚತುರ್ದಶಿ ವ್ರತದಲ್ಲಿ ಭಗವಂತನಿಗೆ 14 ವಿಧದ ಭಕ್ಷ್ಯಗಳನ್ನು (ಪ್ರಸಾದ/ನೈವೇದ್ಯ) ತಯಾರಿಸಿ ಎಡೆಮಾಡುವುದು ಸಂಪ್ರದಾಯ. ಸಾಮಾನ್ಯವಾಗಿ ಚೌತಿ ಅಥವಾ ವಿಶೇಷ ಹಬ್ಬಗಳಂತೆ 14 ವಿಧದ ಭಕ್ಷ್ಯಗಳನ್ನು ಅಂದರೆ ಕಜ್ಜಾಯ, ಹೋಳಿಗೆ, ಪಾಯಸ, ಹಣ್ಣುಗಳು, ಮೋದಕ, ಲಡು ಮುಂತಾದ ಸಾಂಪ್ರದಾಯಿಕ ಸಿಹಿ ತಿಂಡಿಗಳು ದೇವರಿಗೆ ಅರ್ಪಿಸಿ, ಬಳಿಕ ಬಂಧು-ಬಳಗದವರೊಂದಿಗೆ ಪ್ರಸಾದ ಸ್ವೀಕರಿಸಲಾಗುತ್ತದೆ. ಈ ದಿನ ಉಪ್ಪು ಇಲ್ಲದೆ ಅಥವಾ ಹಣ್ಣು-ತಿಂಡಿಗಳನ್ನು ಮಾತ್ರ ಬಳಸಿ ಉಪವಾಸ ಆಚರಿಸುತ್ತಾರೆ.