ದೇಶಿ ಪ್ರವಾಸಿಗರಿಗೆ 'ಸುವರ್ಣ ರಥ'ದಲ್ಲಿ ವಿಶೇಷ ಪ್ಯಾಕೇಜ್

ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್ (ಸುವರ್ಣ ರಥ)ನ ಪ್ರವಾಸ...
ಸುವರ್ಣ ರಥದೊಳಗಿನ ರೆಸ್ಟೋರೆಂಟ್
ಸುವರ್ಣ ರಥದೊಳಗಿನ ರೆಸ್ಟೋರೆಂಟ್
Updated on
ಬೆಂಗಳೂರು: ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್(ಸುವರ್ಣ ರಥ)ನ ಪ್ರವಾಸ ದರದಲ್ಲಿ ಕಡಿತ ಮಾಡಿ  ಜನತೆಯ ಕೈಗೆಟಕುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ದೇಶೀಯ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಸೇವೆ ಒದಗಿಸಲಿದೆ. ವಾರಾಂತ್ಯದಲ್ಲಿ ಎರಡು ರಾತ್ರಿ ಮತ್ತು ಒಂದು ಹಗಲಿಗೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಪ್ರತಿ ವ್ಯಕ್ತಿಗೆ 30,000 ರೂಪಾಯಿ ದರ ವಿಧಿಸುತ್ತದೆ.
ದುಬಾರಿ ದರದಿಂದಾಗಿ ಸುವರ್ಣ ರಥದಲ್ಲಿ ಪ್ರವಾಸ ಮಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ರೈಲ್ವೆ ಇಲಾಖೆಗೆ ಆಗುತ್ತಿರುವ ನಷ್ಟವನ್ನು ಮನಗಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಬೇಸಿಗೆ ರಜೆಯಲ್ಲಿ ವಾರಾಂತ್ಯದ ದರವನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಲ್ಲಿದೆ.
ಪರ್ಯಾಯ ವಾರಗಳಲ್ಲಿ ಎರಡು ಮಾರ್ಗಗಳಿಗೆ ಈ ದರ ಅನ್ವಯವಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಶ್ರೀರಂಗಪಟ್ಟಣ ಮೂಲಕ ಮತ್ತು ಇನ್ನೊಂದು ಹಂಪಿಯನ್ನು ಒಳಗೊಂಡಿರುತ್ತದೆ.
ನಿನ್ನೆ ವಿಧಾನ ಪರಿಷತ್ತಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಪ್ರವಾಸದಲ್ಲಿ ಈ ದರದಲ್ಲಿ ಆಹಾರ ಮತ್ತು ವಸತಿ ಕೂಡ ಒಳಗೊಳ್ಳುತ್ತದೆ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು ಪ್ರವಾಸೋದ್ಯಮ ಇಲಾಖೆ ಜನತೆಗೆ ಈ ಅನುಕೂಲ ಮಾಡಿಕೊಡುತ್ತಿದೆ ಎಂದರು.
ನಮ್ಮ ಇಲಾಖೆಗೆ ಈ ಬಗ್ಗೆ ಜನರಿಂದ ಮಾಹಿತಿ ಕೇಳಿ ಕರೆಗಳು ಬರುತ್ತಿದ್ದು ಇದು ಯಶಸ್ವಿಯಾದರೆ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್.
ದಕ್ಷಿಣದ ಹೆಮ್ಮೆ ಎಂಬ ಪ್ರವಾಸ ಏಳು ರಾತ್ರಿಗಳದ್ದಾಗಿದ್ದು, ಪ್ರತಿ ವ್ಯಕ್ತಿಗೆ ಸುಮಾರು 1.8 ಲಕ್ಷ ಖರ್ಚಾಗುತ್ತದೆ. ಅದು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಹೆಚ್ಚು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಕಳೆದ ಮೂರು ವರ್ಷಗಳಲ್ಲಿ ಸ್ವರ್ಣ ರಥದಲ್ಲಿ ವರ್ಷಕ್ಕೆ 10 ಟ್ರಿಪ್ ಮಾತ್ರ ಆಗಿದ್ದು ಇದರಿಂದ ಇಲಾಖೆಗೆ ಭಾರೀ ನಷ್ಟವುಂಟಾಗಿದೆ. ಕಳೆದ ವರ್ಷ ಶೇಕಡಾ 70ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೆ ಆದಾಯದಲ್ಲಿ ಭಾರೀ ಕುಸಿತ ಕಂಡುಬಂದಿದೆ. 
ವರ್ಷಕ್ಕೆ ಕನಿಷ್ಠ 26 ಟ್ರಿಪ್ ಗಳು ಆಗಬೇಕೆನ್ನುವುದು ಇಲಾಖೆಯ ಗುರಿಯಾಗಿದೆ ಎಂದು ಪುಷ್ಕರ್ ಹೇಳುತ್ತಾರೆ.
ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ಮಧ್ಯೆ ಆದಾಯ ಹಂಚಿಕೆ ಮಾದರಿಯನ್ನು ಅನುಸರಿಸಿದರೆ ನಷ್ಟವನ್ನು ತಪ್ಪಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com