ಕನ್ನಡ ಚಿತ್ರಗಳಾದ 'ತಿಥಿ' ಮತ್ತು 'ರಂಗಿತರಂಗಕ್ಕೆ ಅಪಾರ ಜನ; ರಂಗಿತರಂಗ ಚಿತ್ರವಿಮರ್ಶೆ

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಎರಡನೇ ದಿನ ಶನಿವಾರವೂ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಅತೀವ ಬೇಡಿಕೆಯಿತ್ತು. ಅನೂಪ್ ಭಂಢಾರಿ ನಿರ್ದೇಶನದ 'ರಂಗಿತರಂಗ'
'ತಿಥಿ' ಸಿನೆಮಾದ ನಿರ್ದೇಶಕ ರಾಮರೆಡ್ಡಿ
'ತಿಥಿ' ಸಿನೆಮಾದ ನಿರ್ದೇಶಕ ರಾಮರೆಡ್ಡಿ

ಬೆಂಗಳೂರು: ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಎರಡನೇ ದಿನ ಶನಿವಾರವೂ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಅತೀವ ಬೇಡಿಕೆಯಿತ್ತು. ಅನೂಪ್ ಭಂಢಾರಿ ನಿರ್ದೇಶನದ 'ರಂಗಿತರಂಗ' ಮತ್ತು ರಾಮ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾಗಳ ಪ್ರದರ್ಶನಗಳಿಗೆ ಅವಧಿಗೆ ಮುಂಚಿತವಾಗಿಯೇ ಉದ್ದನೆಯ ಸಾಲುಗಳಲ್ಲಿ ನಿಂತು ಜನ ಕಾಯ್ದು ಪ್ರವೇಶ ಪಡೆದರೆ, 'ತಿಥಿ' ಚಲನಚಿತ್ರದ ಪ್ರದರ್ಶನಕ್ಕೆ ನೂರಾರು ಜನಕ್ಕೆ ಪ್ರವೇಶ ಸಿಗದೆ ನಿರಾಶರಾಗಬೇಕಾಯಿತು.

ಅಂತರಾಷ್ಟ್ರೀಯ ಚಿತ್ರೋತ್ರ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ 'ತಿಥಿ' ಸಿನೆಮಾದ ನಿರ್ದೇಶಕ ರಾಮರೆಡ್ಡಿ ಪ್ರದರ್ಶನಕ್ಕೂ ಮುಂಚಿತವಾಗಿ ಮಾತನಾಡಿ, ಈ ಸಿನೆಮಾಗೆ ವಿತರಕರು ಸಿಕ್ಕಿದ್ದು, ಬೇಸಿಗೆಯಲ್ಲಿ ರಾಷ್ಟ್ರದಾದ್ಯಂತ ಸಿನೆಮಾ ಬಿಡುಗಡೆಯಾಗಲಿದೆ ಎಂದರು.

ರಂಗಿತರಂಗ ಚಿತ್ರವಿಮರ್ಶೆ - ಭೂತದ ಚೇಷ್ಟೆ; ರೋಚಕತೆಯ ಪರಾಕಾಷ್ಠೆ


ಚೊಚ್ಚಲ ನಿರ್ದೇಶಕನಿಗೆ ಹಾರರ್ ಸಿನೆಮಾ ಯಾವತ್ತಿಗೂ ಸುರಕ್ಷಿತ ಆಯ್ಕೆಯೇ? ಈಗಾಗಲೇ ಸಣ್ಣ ಸಿನೆಮಾ ನಿರ್ದೇಶಿಸಿರುವ ನಿರ್ದೇಶಕ ಅನೂಪ್ ಭಂಢಾರಿ ಅವರಿಗೆ 'ರಂಗಿತರಂಗ' ಚೊಚ್ಚಲ ಫೀಚರ್ ಫಿಲ್ಮ್. ಬಹುತೇಕ ಹೊಸಬರ ತಂಡ ಕಟ್ಟಿಕೊಂಡು ಮಾಡಿರುವ ಈ ಪ್ರಯತ್ನ, ಜನರನ್ನು ಭಯದಲ್ಲಿ ಮುಳುಗಿಸುತ್ತದೆಯೇ? ಸಿನೆಮಾ ನೋಡಿದವನಿಗೆ ಥ್ರಿಲ್ ನೀಡುತ್ತದೆಯೇ?

ಪತ್ರಕರ್ತೆ ಸಂಧ್ಯಾ(ಅವಂತಿಕಾ ಶೆಟ್ಟಿ) ಕಾದಂಬರಿಕಾರ ಅನೋಶ್ಕ್ ಅವರ ಕಾದಂಬರಿಯನ್ನು ಸಿನೆಮಾಗ ಅಳವಡಿಸಲೆಂದು, ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುತ್ತಾಳೆ. ಆದರೆ ಅನೋಶ್ಕ್ ಎಂಬ ಹೆಸರಿನಲ್ಲಿ ಬರೆಯುವ ಗೌತಮ್(ನಿರುಪ್ ಭಂಡಾರಿ) ತನ್ನ ವಿಳಾಸವನ್ನು ಯಾರಿಗೂ ತಿಳಿಯದಂತೆ ನಿಗೂಢವಾಗಿ ಕಾಪಾಡಿಕೊಂಡಿರುವ ಊಟಿ ನಿವಾಸಿ. ಸದಾ ಕೆಟ್ಟ ಕನಸುಗಳಿಂದ ಬಾಧಿತಳಾಗಿರುವ ತನ್ನ ಬಸುರಿ ಪತ್ನಿ ಇಂದು (ರಾಧಿಕಾ ಚೇತನ್) ತನ್ನ ಊರಾದ ದಕ್ಷಿಣ ಕನ್ನಡದ ಕಮರೊಟ್ಟುಗೆ ತೆರಳಿ ಭೂತರಾಧನೆ ಮಾಡಿಸಬೇಕೆಂದು ತನ್ನ ಇಂಗಿತ ವ್ಯಕ್ತಪಡಿಸುತ್ತಾಳೆ. ಇದಕ್ಕೆ ಒಪ್ಪಿಕೊಳ್ಳುವ ಗೌತಮ್, ಗುಡ್ಡಗಾಡಿನ ಮಧ್ಯೆ ಇರುವ, ಭೂತ(ಬ್ರಹ್ಮ ರಾಕ್ಷಸ) ಪೀಡಿತ ಪ್ರದೇಶ ಎಂದೇ ಪ್ರಖ್ಯಾತವಾದ ಊರಿಗೆ ತೆರಳಿ ಭೂತ-ಮನುಷ್ಯ ಚೇಷ್ಟೆಗಳನ್ನು ಎದುರಿಸುತ್ತಾನೆ. ಒಂದು ದಿನ ತನ್ನ ಹೆಂಡತಿ ಕಾಣೆಯಾಗಿ, ಪೊಲೀಸರಿಗೆ ದೂರು ನೀಡಲು ಹೋದಾಗ ಇಂದು ಆರು ವರ್ಷಗಳ ಹಿಂದೆ ಸತ್ತ ದಾಖಲೆಗಳಿವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿ ಗೌತಮ್ ಗೆ ತಲೆ ಸರಿಯಿಲ್ಲ ಎನ್ನುತ್ತಾನೆ. ತನಗೆ ಅಪಘಾತವೊಂದರಿಂದ ನೆನಪು ಕಳೆದಿಕೊಂಡಿರುವುದು ಗೌತಮ್ ಗೂ ತಿಳಿದಿರುತ್ತದೆ. ಹಾಗಾದರೆ ಅವನದ್ದು ಮಾನಸಿಕ ತೊಂದರೆಯೇ? ಭೂತ ಚೇಷ್ಟೆಯೇ? ಅಥವಾ ಮನುಷ್ಯ ಪಿತೂರಿಯೇ?

ದಕ್ಷಿಣ ಕನ್ನಡದ ದಟ್ಟ ಅರಣ್ಯದ ನಡುವಿನ ಪ್ರತ್ಯೇಕವಾದ ಭೂತ ಬಂಗಲೆಯಲ್ಲಿ ನಡೆಯುವ ಮೊದಲರ್ಧದ ಸಿನೆಮಾ, ಭಯ ಹುಟ್ಟಿಸುವ ಹಿನ್ನಲೆ ಸಂಗೀತ, ಶಬ್ದ ಮತ್ತು ಸಂಕಲನದಿಂದ ಪ್ರೇಕ್ಷಕರಿಗೆ ಸಣ್ಣ ನಡುಕ ಹುಟ್ಟಿಸಲು ಸಾಧ್ಯವಾಗಿದೆ. ನಾಯಕಿ ನೀರು ಸೇದುವಾಗ ಬಾವಿ ಎಳೆದುಕೊಳ್ಳುವುದು, ಕಿಟಕಿಯಿಂದ ಯಾರೋ ಸರ್ರನೆ ಸರಿದು ಹೋಗುವುದು, ವಿಕಾರವಾದ ಮುಖ ಕತ್ತಲಲ್ಲಿ ಗೋಚರವಾಗುವುದು, ಕತ್ತಲಲ್ಲಿ ಚಲಿಸುವ ಗಾಡಿಗೆ ಅಡ್ಡವಾಗಿ ರಸ್ತೆಯಲ್ಲಿ ಮಗು ಕಾಣಿಸಿಕೊಳ್ಳುವುದು ಹೀಗೆ ಹಾರರ್ ಸಂಗತಿಗಳನ್ನು ಹೇರಳವಾಗಿ ಮೈಗೂಡಿಸಿಕೊಂಡಿರುವ ಸಿನೆಮಾ ಜನರಲ್ಲಿ ಇದು ಭೂತದ ಚೇಷ್ಟೆಯೋ ಅಥವಾ ಮನುಷ್ಯರು ನಡೆಸುತ್ತಿರುವ ಪಿತೂರಿಯೋ ಎಂಬ ಸಂದೇಹ ಬಿತ್ತಿ ಪ್ರೇಕ್ಷಕನ ಮನಸ್ಸಿನಲ್ಲಿ ಉದ್ವೇಗವನ್ನು ಕಟ್ಟುತ್ತಾ ಹೋಗುತ್ತದೆ. ಇಂತಹ ಸನ್ನಿವೇಶಗಳು ಇತರ ಹಾರರ್ ಸಿನೆಮಾಗಳಿಗಿಂತಲೂ ವಿಭಿನ್ನವಾಗದೇ ಹೋದರು, ದಕ್ಷಿಣ ಕನ್ನಡದ ರಮಣೀಯ ಸೌಂದರ್ಯದಲ್ಲಿ, ಯಕ್ಷಗಾನದ ವೇಷ ಭೂಷಣಗಳಲ್ಲಿ ತೋರಿಸುವ ಭಯಾನಕ ದೃಶ್ಯಗಳು ತುಸು ವಿಭಿನ್ನವಾಗಿ ಕಾಣುತ್ತವೆ. ಸಿನೆಮಾದಲ್ಲಿ ಸೃಷ್ಟಿಸಿರುವ ಪಾತ್ರಗಳು ಕೂಡ ಬಳಕೆತಪ್ಪಿದ ವಿಪರೀತ ಮನುಷ್ಯರೇ. ಪೋಸ್ಟ್ ಮಾಸ್ತರ್(ಸಾಯಿಕುಮಾರ್), ಮೇಸ್ಟ್ರು, ಡಾಕ್ಟರ್ ಇವರೆಲ್ಲರೂ ಸಾಮಾನ್ಯರಾಗಿರದೆ ಹಾರರ್ ಸಿನೆಮಾಗೆ ಹೆಚ್ಚಿನ ದಿಗಿಲು ತುಂಬುತ್ತಾರೆ. ಗೌತಮನ ಹೆಂಡತಿ ಇಂದು ಮನೆಯಿಂದ ಕಾಣೆಯಾದಾಗ ಪ್ರೇಕ್ಷಕನ ಕುತೂಹಲಕ್ಕೆ ಟ್ವಿಸ್ಟ್ ಸಿಕ್ಕಿ ಸಿನೆಮಾ ವಿಭಿನ್ನ ತಿರುವು ಪಡೆತುಕೊಳ್ಳುತದೆ. ಇಲ್ಲಿಯವರೆಗೆ ದಿಗಿಲು ಹುಟ್ಟಿಸುತ್ತಿದ್ದ ಸಿನೆಮಾ ಪತ್ತೇದಾರಿ ಜಾಡು ಹಿಡಿಯುತ್ತದೆ. ಆದರೆ ಜನರ ಕುತೂಹಲವನ್ನು ಮತ್ತು ವೇಗವನ್ನು ಸಿನೆಮಾ ಕೊನೆಯವರೆಗೂ ಕಾಯ್ದುಕೊಳ್ಳುತ್ತದೆ. ನಿರುಪ್ ಭಂಢಾರಿ ಮತ್ತು ರಾಧಿಕಾ ಚೇತನ್ ಉತ್ತಮ ಅಭಿನಯ ನೀಡಿದ್ದಾರೆ. ಈ ಹಾರರ್ ಸಿನೆಮಾದಲ್ಲೂ ಇವರಿಬ್ಬರ ನಡುವಿನ ಪ್ರೇಮಕಥೆ ಹಿತವಾಗಿದೆ. ಸಾಯಿಕುಮಾರ್ ಒಳಗೊಂಡಂತೆ ಉಳಿದ ಪಾತ್ರವರ್ಗ ಕೂಡ ಒಳ್ಳೆಯ ಅಭಿನಯ ನೀಡಿದ್ದಾರೆ. 'ಗುಡ್ಡದ ಭೂತ' ಧಾರಾವಾಹಿಯ ಶೀರ್ಷಿಕೆ ಹಾಡು ಮರುಕಳಿಸಿದ್ದು ಸಿನೆಮಾದಲ್ಲಿ ಉತ್ತಮವಾಗಿ ಮಿಳಿತಗೊಂಡಿದೆ. ಉಳಿದಂತೆ ಅನೂಪ್ ಭಂಢಾರಿ ಅವರ ಸಂಗೀತ ನಿರ್ದೇಶನದಲ್ಲಿ ಒಂದೆರಡು ಹಾಡುಗಳು ಕೇಳುವಂತಿವೆ. ಎರಡು ಹಾಡುಗಳು ಮತ್ತು ಜಲಾಂತರ ಫೈಟ್ ಕೈಬಿಟ್ಟು ೩ ಘಂಟೆಗಳ ಚಿತ್ರದ ಅವಧಿಯನ್ನು ಕಡಿತಗೊಳಿಸಬಹುದಿತ್ತು. ಸಿನೆಮ್ಯಾಟೋಗ್ರಾಫರ್ ಲ್ಯಾನ್ಸ್ ಕಪ್ಲಾನ್ ಅವರ ಕ್ಯಾಮರಾ ಕೈಚಳಕ ಸಿನೆಮಾ ಹುಟ್ಟಿಸುವ ಭೀತಿಯನ್ನು ಹೆಚ್ಚಿಸಲು ಸಹಕರಿಸಿದೆ. ಒಟ್ಟಿನಲ್ಲಿ ನಾಯಕ ನಟ ನಿರುಪ್ ಭಂಢಾರಿ ಅವರ ಬಿಗಿ-ಕುತೂಹಲದಾಯಕ ಸ್ಕ್ರಿಪ್ಟ್ ಗೆ ನಿರ್ದೇಶಕ ಅನೂಪ್ ಭಂಢಾರಿ ದಿಗ್ದರ್ಶನ ಮಾಡಿ ನೋಡುವಂತಹ ಸಿನೆಮಾ ನೀಡಿದ್ದಾರೆ.

ಸಿನೆಮಾದಲ್ಲಿ ಮರಳು ಧಂಧೆಯ ವಿಷಯವನ್ನು ತಂದು ಜನರಲ್ಲಿ ಗೊಂದಲ ಮೂಡಿಸುತ್ತಾರಾದರೂ, ನಿರ್ದೇಶಕರು ಕಥೆಯನ್ನು ಅದಕ್ಕೆ ಬೆಸೆಯುವುದಿಲ್ಲ. ಸಿನೆಮಾವನ್ನು ಮುಂದೆ ಕೊಂಡೊಯ್ಯಲು ಭೂತ, ದುರಾಸೆ, ಮಾನಸಿಕ ಅಸ್ವಸ್ಥತೆ, ದ್ರೋಹ ಹೀಗೆ ವಿವಿಧ ಆಯಾಮಗಳ ಮೂಲಕ ಮುಂದುವರೆಸಿ ಅಂತ್ಯ ಕಾಣಿಸುವ ಆಯ್ಕೆಗಳನ್ನು ಪ್ರೇಕ್ಷಕರಿಗೆ ಗೋಚರವಾಗುವಂತೆ ನಿರ್ದೇಶಿಸಿರುವುದು ನಿರ್ದೇಶಕನ ಜಾಣ್ಮೆ. ಅಂತ್ಯ ಹೀಗೆ ಮಾಡಬಹುದಿತ್ತಲ್ಲಾ, ಹಾಗೆ ಮುಂದುವರೆಸಬಹುದಿತ್ತೆಲ್ಲಾ ಎಂದು ಪ್ರೇಕ್ಷಕ ಮಾತನಾಡುವಂತಾದರೆ ಅದು ಸಿನೆಮಾ ಉಳಿಸಿಕೊಳ್ಳುವ ಕುತೂಹಲದ ಗಟ್ಟಿತನ ಪ್ರದರ್ಶಿಸುತ್ತದೆ. ಮನರಂಜನೆಯ ದೃಷ್ಟಿಯಿಂದ ಈ ಸಿನೆಮಾಗೆ ಆ ಗಟ್ಟಿತನವಿದೆ ಎಂದು ನಂಬಬಹುದು. ನಿರ್ಭೀತಿಯಿಂದ ನೋಡಿ!

 -ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com