ಬೆಂಗಳೂರು: ೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಐದನೇ ದಿನವೂ ಸಿನಿರಸಿಕರ ಉತ್ಸಾಹ ಮುಂದುವರೆದಿದ್ದು, ಜನ ಪ್ರದರ್ಶನಗಳಿಗೆ ಸಾಲುಗಟ್ಟಿ ಸಿನೆಮಾಗಳನ್ನು ವೀಕ್ಷಿಸಿದರು.
ಅರವಿಂದ್ ಶಾಸ್ತ್ರಿ ನಿರ್ದೇಶನದ ಕನ್ನಡ ಸಿನೆಮಾ 'ಕಹಿ' ತುಂಬಿದ ಪ್ರದರ್ಶನ ಕಂಡರೆ, 'ಮಡಿಪು', 'ಅನ್ನದಾತ', 'ಹರಿಕಥಾ ಪ್ರಸಂಗ', 'ಫಣಿಯಮ್ಮ', 'ಉಲ್ಟಾ ಪಲ್ಟಾ', 'ಹಂಸಗೀತೆ' ಕನ್ನಡ ಸಿನೆಮಾಗಳು ಕೂಡ ಪ್ರದರ್ಶನಗೊಂಡವು.
ಈಜಿಪ್ಟಿಯನ್ ಕ್ರಾಂತಿಯ ಹಿನ್ನಲೆಯಲ್ಲಿ ಚಿತ್ರಿತವಾಗಿರುವ ಹಲ ಖಲೀಲ್ ನಿರ್ದೇಶನದ 'ನವಾರ' ಮತ್ತು ತಾಮೆರ್ ಎಲ್ ಸೇಯ್ಡ್ ನಿರ್ದೇಶನದ 'ದ ಲಾಸ್ಟ್ ಡೇಸ್ ಆಫ್ ಸಿಟಿ' ಪ್ರೇಕ್ಷಕರ ಗಮನ ಸೆಳೆದವು.
ನಾಜಿ ದುರಾಡಳಿತ ಸಮಯದಲ್ಲಿ ಜರ್ಮನಿ ತೊರೆದು ಬ್ರೆಜಿಲ್ ನಲ್ಲಿ ನೆಲೆಸಿದ ವಿಶ್ವಪ್ರಸಿದ್ಧ ಸಾಹಿತಿ ಸ್ಟೀಫನ್ ಜೆವಿಜ್ ಅವರ ಜೀವನಾಧಾರಿತ 'ಸ್ಟೀಫನ್ ಜೆವಿಜ್ : ಈ ಫೇರ್ವೆಲ್ ಟು ಯುರೋಪ್' ಚಲನಚಿತ್ರ ಮತ್ತ್ತು ಚಿಲಿ ದೇಶದ ಕವಿ- ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ 'ಪ್ಯಾಬ್ಲೋ ನೆರೂಡ' ಅವರ ಜೀವನಾಧಾರಿತ ರಾಜಕೀಯ ಥ್ರಿಲ್ಲರ್ 'ನೆರೂಡ' ಸಾಹಿತ್ಯ-ಸಿನೆಮಾಸಕ್ತರನು ಸೆಳೆದವು.
ಕಮ್ಮ್ಯುನಿಸಂ ಆಡಳಿತದ ಸಮಯದಲ್ಲಿ ಪೋಲೆಂಡ್ ದೇಶದಲ್ಲಿ ಕಲೆಯ ಮೇಲೆ ಹೇರಿದ್ದ ನಿರ್ಬಂಧಗಳ ಹಿನ್ನಲೆಯಲ್ಲಿ ಅದನ್ನು ವಿರೋಧಿಸುವ ಕಲಾವಿದನ ಕಥೆ ಹೇಳುವ ಸಿನೆಮಾ 'ಆಫ್ಟರ್ ಇಮೇಜ್' ಮತ್ತು ಕಿಮ್ ಕಿ ದುಕ್ ನಿರ್ದೇಶನದ ದಕ್ಷಿಣ ಕೊರಿಯಾ ಚಿತ್ರ 'ದ ನೆಟ್' ಬಹು ಬೇಡಿಕೆಯ ಸಿನೆಮಾಗಳಾಗಿದ್ದವು.