ವಿಶ್ವದೆಲ್ಲೆಡೆ ಸಿನೆಮಾ ಸ್ವರೂಪ ಬದಲಾಗುತ್ತಿದೆ: ಸಿನಿಮೋತ್ಸವದಲ್ಲಿ ಗೋವಿಂದ ನಿಹಲಾನಿ ಹೇಳಿಕೆ

ಏಳನೇ ಬೆಂಗಳೂರು ಅಂತರಾಷ್ಟ್ರೀಯ
ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಗೋವಿಂದ ನಿಹಲಾನಿ
ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಗೋವಿಂದ ನಿಹಲಾನಿ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿರುವ ಖ್ಯಾತ ನಿರ್ದೇಶಕ - ಸಿನೆಮಾಟೋಗ್ರಾಫರ್ ಗೋವಿಂದ ನಿಹಲಾನಿ ಅವರು ಪತ್ರಕರ್ತರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು.

ಸಿನಿಮೋತ್ಸವಕ್ಕೆ ಒಂದು ಶಾಶ್ವತ ಕಟ್ಟಡ ನೀಡುವ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಅವರು ಇಲ್ಲಿನ ಅಧಿಕಾರ ವರ್ಗಕ್ಕೆ ಸಿನಿಮಾದ ಮಹತ್ವ ಗೊತ್ತಿದೆ ಎಂದರು.

ವಿಶ್ವದಾದ್ಯಂತ ಸಿನಿಮಾದ ಸ್ವರೂಪ ಬದಲಾಗುತ್ತಿದೆ ಮತ್ತು ಸಿನಿಮಾ ನಿರ್ಮಿಸುವ ಹೊಸ ಹೊಸ ಮಾರ್ಗಗಳು ಸೃಷ್ಟಿಯಾಗುತ್ತಿವೆ ಎಂದ ನಿಹಲಾನಿ, ನಿರ್ದೇಶಕ ಮತ್ತು ಕ್ಯಾಮರಾ ಮ್ಯಾನ್ ನ ಸಂಬಂಧ ಅನನ್ಯವಾದದ್ದು. ತಂತ್ರಜ್ಞಾನ ಹೇಗೆ ಬೆಳೆದರೂ ಕೂಡ ಈ ಸಂಬಂಧ ಹಾಗೆಯೇ ಉಳಿದುಕೊಳ್ಳುತ್ತದೆ ಎಂದರು.

ತಾವು ಹತ್ತಿಪ್ಪತ್ತು ವರ್ಷದ ಹಿಂದೆ ಮಾಡುತ್ತಿದ್ದ ಸಿನೆಮಾಗಳಲ್ಲಿ ಹೆಚ್ಚೆಚ್ಚು ಸಾಮಾಜಿಕ ವಿಷಯಗಳನ್ನು ಚರ್ಚಿಸುತ್ತಿದ್ದಿರಿ, ಆದರೆ ಇತ್ತೀಚಿನ ಸಿನೆಮಾಗಳಲ್ಲಿ ಅದು ಕಡಿಮೆಯಾಗಿದೆಯೇ ಎಂಬ ಪ್ರಶ್ನೆಗೆ ವಿಶದವಾಗಿ ಉತ್ತರಿಸಿದ ಗೋವಿಂದ ನಿಹಲಾನಿ, ಸಿನಿಮಾ ಯಾವಾಗಲೂ ಆ ದಿನದ ಪರಿಸ್ಥಿತಿಯನ್ನು ಬಿಂಬಿಸುತ್ತದೆ ಹಾಗೂ ಪ್ರಶ್ನೆಗಳನ್ನು ಎತ್ತುತ್ತದೆ ಮತ್ತು ಅಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರತಿಕ್ರಿಯಿಸುತ್ತದೆ. ನಾವು ಹಿಂದೆ ಸಿನಿಮಾ ಮಾಡುವಾಗ ನಾವು ಮಾಡುತ್ತಿದ್ದ ಅಧಿಕಾರಶಾಹಿ ವಿರುದ್ಧದ ಸಿನಿಮಾಗಳಿಗೆ ಸರ್ಕಾರಿ ಸಂಸ್ಥೆಗಳಾದ 'ಫಿಲಂ ಫೈನಾನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ" ಅಂತಹ ಸಂಸ್ಥೆಗಳು ಸಹಾಯ ಮಾಡುತ್ತಿದ್ದವು. ಸತ್ಯಜಿತ್ ರೇ ಅಂತಹ ಮಹಾನ್ ನಿರ್ದೇಶಕರು ಇದ್ದ ಸಮಯ. ಹಾಗೆಯೇ ಜವಾಹಾರ್ ನೆಹರು ಅಂತಹ ನಾಯಕರು ಪ್ರಧಾನ ಮಂತ್ರಿಗಳಾಗಿ ಸಿನಿಮಾವನ್ನು ಪೋಷಿಸುತ್ತಿದ್ದ ಕಾಲ ಅದು. ೧೯೬೦ ರ ದಶಕದ ನಂತರ ಟಿ ವಿ ಮಾಧ್ಯಮ ಕಾಲಿಟ್ಟಿತು ಹಾಗೆಯೇ ಜಾಗತೀಕರಣ ನಿಧಾನವಾಗಿ ನುಸುಳಿತು. ಹಂತ ಹಂತವಾಗಿ ಈ ಪ್ಯಾರಲಲ್ ಸಿನೆಮಾಗಳು ಅತಿ ನಿಧಾನ, ಅವುಗಳಲ್ಲಿ ಮನರಂಜನೆ ಇರುವುದಿಲ್ಲ, ಅವುಗಳಲ್ಲಿ ಸಂತಸದ ಅಂತ್ಯ ಇರುವುದಿಲ್ಲ ಅಮ್ಬುದಾಗಿ ಜನರಿಗೆ ವ್ಯವಸ್ಥಿತವಾಗಿ ತುಂಬಲು ಪ್ರಯತ್ನಿಸಿದರು. ನಮಗೆ ಸಂತಸದ ಅಂತ್ಯ ನೀಡುವುದು ಬೇಕಿರಲಿಲ್ಲ, ಬದಲಾಗಿ ಪ್ರಶ್ನೆಗಳನ್ನು ಎತ್ತಬೇಕಿತ್ತು. ಟಿ ವಿ ಗಳು ಆ ಸಂತಸ ಅಂತ್ಯವನ್ನು ಕೊಡಲು ಪ್ರಾರಂಭಿಸಿದವು. ಆಗ ಲೋಲಕ ಆ ಕಡೆಯೇ ವಾಲಲು ಶುರುವಾಯಿತು ಎಂದರು.

ಚಿತ್ರದ ಹೂಡಿಕೆ ಬದಲಾದಂತೆ ಅದರ ನಿರೀಕ್ಷೆಗಳೂ ಬದಲಾದವು. ಲಾಭದ ಬೇಡಿಕೆ ಹೆಚ್ಚಾಯಿತು. ಇಂತಹ ಸಂದರ್ಭಗಳಲ್ಲಿ ನಮಗೆ ೧೯೮೦ ರಲ್ಲಿ ಮಾಡಿದ ಆಕ್ರೋಶ್ ನಂತಹ ಸಿನೆಮಾವನ್ನು ಮತ್ತೆ ಮಾಡಲು ಅಸಾಧ್ಯ. ಹಾಗೆಯೇ ಸಿನೆಮಾದ ಪ್ರೇಕ್ಷಕರೂ ಕೂಡ ಬದಲಾಗಿದ್ದಾರೆ. ದೇಶದ ತೊದರೆಗಳು ಮಾತ್ರ ಹಾಗೆಯೇ ಉಳಿದಿವೆ. ಆದರೆ ಈ ಮಾಧ್ಯಮದ ಮೂಲಕ ನಾವು ಪ್ರಶ್ನೆ ಕೇಳುವ ರೀತಿ ಬದಲಾಗಿದೆ. ಇಂದಿನ ಪ್ರೇಕ್ಷಕರು ಮೊದಲಿಗಿಂತಲೂ ಹೆಚ್ಚು ತಿಳುವಳಿಕೆಯುಳ್ಳವರು ಮತ್ತು ಮಾಹಿತಿಯುಳ್ಳವರಾಗಿದ್ದಾರೆ. ಬಹುಶಃ ಇಂದು ಸಿನೆಮಾಗಳಲ್ಲಿ ಅಧಿಕಾರಶಾಹಿಯನ್ನು ವಿರೋಧಿಸುವ ರೀತಿ ಹಾಸ್ಯ ಅಥವಾ ವ್ಯಂಗಕ್ಕೆ ಹೊರಳಿದೆ ಎಂದರು.

ಹಿಂದಿಯಲ್ಲಿ ಹೊಸ ಹೊಸ ನಿರ್ದೇಶಕರು ಬರುತ್ತಿದ್ದು ಅವರ ಆಲೋಚನ ಕ್ರಮ ಭಿನ್ನವಾಗಿದೆ. ಇದು ಹೆಚ್ಚಬೇಕು ಎಂದರು.

ತಾವು ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಓದಿದ್ದನ್ನು ಮೆಲುಕು ಹಾಗಿದ ಗೋವಿಂದ ನಿಹಲಾನಿ, ಇಂತಹ ಸಂಸ್ಥೆಗಳು ಇನ್ನೂ ಉತ್ತಮ ಮಟ್ಟದ ಪಠ್ಯಕ್ರಮಗಳನ್ನು ಅಳವಡಿಸಿ ದೇಶದ ಅತ್ಯುತ್ತಮ ಸಂಸ್ಥೆಯಾಗಿ ಬೆಳೆಯಬೇಕೆಂದು ಹರಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com