ಕಲಾತ್ಮಕ ಚಿತ್ರ ಪದ ಬೇಡ

ಕನ್ನಡದಲ್ಲಿ ನಿರ್ಮಾಣವಾಗುವ ಸದಭಿರುಚಿ ಚಿತ್ರಗಳನ್ನು...
ನಿರ್ದೇಶಕ ಪಿ.ಶೇಷಾದ್ರಿ
ನಿರ್ದೇಶಕ ಪಿ.ಶೇಷಾದ್ರಿ

ಬೆಂಗಳೂರು: ಕನ್ನಡದಲ್ಲಿ ನಿರ್ಮಾಣವಾಗುವ ಸದಭಿರುಚಿ ಚಿತ್ರಗಳನ್ನು ಕಲಾತ್ಮಕ ಚಿತ್ರಗಳೆಂದು ವರ್ಗೀಕರಿಸುವ ಪರಿಪಾಠಕ್ಕೆ ನಿರ್ದೇಶಕ ಪಿ.ಶೇಷಾದ್ರಿ ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ದಯವಿಟ್ಟು 'ಕಲಾತ್ಮಕ ಚಿತ್ರ' ಎಂಬ ಪದ ಬಳಸಬೇಡಿ. ಇದು ನಮಗೆ ಶಾಪ ಎಂದಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಅಂಗವಾಗಿ ಸೋಮವಾರ ವಾರ್ತಾ ಇಲಾಖೆ ಆಯೋಜಿಸಿದ್ದ ನಿರ್ದೇಶಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಸಮಸ್ಯಗಳನ್ನು ಬಿಂಬಿಸುವ ಸದಭಿರುಚಿ ಚಿತ್ರಗಳನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ.

ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಕಟ್ಟಿ, ಪ್ರಶಸ್ತಿಗೆ, ಗಣ್ಯರ ಮೆಚ್ಚುಗೆಗೆ ಮಾತ್ರ ಸೀಮಿತ ಎಂಬಂತೆ ಬಿಂಬಿಸಿರುವುದು ಅತ್ಯಂತ ನೋವಿನ ಸಂಗತಿ. ಸಿನಿಮಾವೆಂದರೆ ಕಲಾ ಜಗತ್ತು. ಆದ್ದರಿಂದ ಇನ್ನಾದರೂ ಮಾಧ್ಯಮ, ಚಿತ್ರರಂಗವು ಈ ರೀತಿಯ ಸಿನಿಮಾಗಳನ್ನು ವರ್ಗೀಕರಿಸುವುದನ್ನು ನಿಲ್ಲಿಸಲಿ ಎಂದು ಮನವಿ ಮಾಡಿಕೊಂಡರು.

ಕಾನೂನು ಮಾಡಲಿ...
ಮಲ್ಟಿಪ್ಲೆಕ್ಲ್‌ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ತೀರಾ ಕಡಿಮೆಯಾಗಿದೆ. ಹೊರಗಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ನಿರ್ದೇಶಕರೇ ಹಣ ನೀಡಬೇಕಾಗಿದೆ. ಆದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಹಾಗಿಲ್ಲ. ಅಲ್ಲಿನ ಪ್ರತಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಒಂದು ಮರಾಠಿ ಚಿತ್ರವನ್ನು ಬಿಡುಗಡೆ ಮಾಡಲೇಬೇಕೆಂಬ ಕಾನೂನಿದೆ.

ಅದೇ ರೀತಿ ರಾಜ್ಯದಲ್ಲಿಯೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಬಿಡುಗಡೆ ಮಾಡುವಂತೆ ಕಾನೂನು ಮಾಡಬೇಕೆಂದು ಒತ್ತಾಯಿಸಿದರು.

ಸಬ್ಸಿಡಿ ಹೆಚ್ಚಿಸಲಿ...

ಮಹಾರಾಷ್ಟ್ರದಲ್ಲಿ ಮರಾಠಿ ಚಿತ್ರಗಳನ್ನು ಮೂರು ವರ್ಗ ಮಾಡಿ 30-40ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಹಲವು ವರ್ಷಗಳಿಂದ ಕೇವಲ 10 ಲಕ್ಷ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕೆಂದು ಇದೇ ವೇಳೆ ಒತ್ತಾಯಿಸಿದರು.

300 ಜನತಾ ಥಿಯೇಟರ್...

ಚಲನಚಿತ್ರ ಅಕಾಡೆಮಿ ಅದ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗದಿರುವುದು ಶೋಚನೀಯ ಸಂಗತಿಯಾಗಿದೆ. ಅದರಲ್ಲೂ ನಮ್ಮಲ್ಲಿ ಬಾಡಿಗೆ ವ್ಯವಸ್ಥೆಯಿರುವುದು ಇನ್ನು ಸಂಕಷ್ಟದ ಸಂಗತಿ.

ಇದನ್ನು ದೂರ ಮಾಡುವ ಸಲುವಾಗಿಯೇ ಸರ್ಕಾರ 300 ಜನತಾ ಥಿಯೇಟರ್‌ಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ಅದರಂತೆ 300-400 ಆಸನಗಳುಳ್ಳ ಈ ಥಿಯೇಟರ್‌ಗಳನ್ನು ನಿರ್ಮಿಸಲು ಒತ್ತ ಹೇರಲಾಗುವುದು ಎಂದರು.


ಕನ್ನಡ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಚಿಂತಿಸಿದ್ದೇವೆ. ಇದಕ್ಕಾಗಿ ಒಂದು ವಿಶೇಷ ಘಟಕವನ್ನು ಸ್ತಾಪಿಸಲಾಗುವುದು. ತಜ್ಞರನ್ನೊಳಗೊಂಡ ಈ ಘಟಕ ಕನ್ನಡ ಚಿತ್ರಗಳು ವಿದೇಶದಲ್ಲಿ ಪ್ರದರ್ಶನಗೊಳ್ಳಲು ಬೇಕಾದ ಪೂರಕ ಅಂಶಗಳನ್ನು ಚರ್ಚಿಸಿ, ಅದರಂತೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಅದಕ್ಕೆ ತಕ್ಕಂತೆ ಹೊಸ ನಿಯಮಗಳನ್ನು ರೂಪಿಸಲಾಗುವುದು. ನಟರೂ ನಿರ್ದೇಶಕರ ಅಭಿಲಾಷೆಗೆ ತಕ್ಕಂತೆ ಅಭಿನಯವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.

'ಹರಿವು' ಚಿತ್ರದ ನಿರ್ದೇಶಕ ಮಂಜುನಾಥ್, ಹೊಸದಾಗಿ ಚಲನಚಿತ್ರ ಕ್ಷೇತ್ರಕ್ಕೆ ಬರುವ ನಿರ್ದೇಶಕರಿಗೆ ಮಾರ್ಗದರ್ಶನ ನೀಡುವವರಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸಿನಿಮಾ ತಯಾರಾದರೆ ಅದರ ಬಿಡುಗಡೆಗೆ ಚಿತ್ರಮಂದಿರಗಳ ಕೊರತೆಯಿದೆ ಎಂದು ಸಂವಾದದಲ್ಲಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡರು. ಗಾಯಕರಾದ ಎಂ.ಡಿ.ಪಲ್ಲವಿ, ಜರ್ಮನಿಯ ಕ್ರಿಚವೆಬರ್, ರಿತಾಬಾಕ್ರೆವಿಟ್ಡ್, ಆ್ಯಂಡಿಗೊಯಿರ್ಬಿನೋ ಅವರು ಪಾಲ್ಗೊಂಡು, ಸಿನಿಮಾಗಳಲ್ಲಿ ಸಂಗೀತದ ಪಾತ್ರವೇನು ಎಂಬುದನ್ನು ಚರ್ಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com