
ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಹಿನ್ನೋಟದಲ್ಲಿ ಪೋಲೆಂಡ್ ದೇಶದ ಚಿತ್ರ ನಿರ್ದೇಶಕ ಕ್ರಿಸ್ಟಾಫ್ ಜಾನುಸ್ಸಿ ಅವರ ಹಲವು ಸಿನೆಮಾಗಳನ್ನು ಪ್ರದರ್ಶಿಸಲಾಗಿದೆ. ಅದಕ್ಕಿಂತಲು ಮುಖ್ಯವಾಗಿ ಜಾನುಸ್ಸಿ ಅವರು ಮಂಗಳವಾರ ಮತ್ತು ಬುಧವಾರ ಬೆಂಗಳೂರು ಸಿನಿಮೋತ್ಸವಕ್ಕೆ ಭೇಟಿ ಕೊಟ್ಟು ಸಂವಾದಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ನೆನ್ನೆ ನಡೆದ ಮುಜುಗರ ತರಿಸುವ ಘಟನೆಯಲ್ಲಿ ಜಾನುಸ್ಸಿ ಅವರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದುರಿಗಿದ್ದಾರೆ.
ಸೋಮವಾರ ಮಧ್ಯರಾತಿ ೨:೩೦ ಕ್ಕೆ ಜರ್ಮನಿಯ ಹ್ಯಾಂಬರ್ಗ್ ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಾನುಸ್ಸಿ ಅವರಿಗೆ ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ವೀಸಾದಲ್ಲಿ ಗೊಂದಲಗಳಿದ್ದ ಕಾರಣ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವಿಷಯ ತಿಳಿದ ಸಿನಿಮೋತ್ಸವದ ಆಯೋಜಕರು ಮತ್ತು ಚಲನಚಿತ್ರ ಅಕಾಡೆಮಿಯ ಅಧಿಕಾರಿಗಳು ವಲಸೆ ಅಧಿಕಾರಿಗಳನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಮಧ್ಯ ರಾತ್ರಿಯಾಗಿದ್ದರಿಂದ ಅದೂ ಪಲಪ್ರದವಾಗಲಿಲ್ಲ. ಜಾನುಸ್ಸಿ ಅವರು ಈ ಘಟನೆಗಳಿಂದ ಬೇಸತ್ತು ಹ್ಯಾಂಬರ್ಗ್ ಗೆ ಹಿಂತಿರುಗಿದರು ಎಂದು ತಿಳಿದು ಬಂದಿದೆ.
ಕಳೆದ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಪೋಲೆಂಡ್ ದೇಶದ ನಿರ್ದೇಶಕ ಕ್ರಿಸ್ಟಾಫ್ ಜಾನುಸ್ಸಿ ಅವರ ಆಗಮನವನ್ನು ಬೆಂಗಳೂರಿನ ವಿಶ್ವ ಸಿನೆಮಾದ ಉಪಾಸಕರು ಎದುರು ನೋಡುತ್ತಿದ್ದರು. ಈ ಘಟನೆಗಳಿಂದ ಹಲವಾರು ಚಿತ್ರ ರಸಿಕರಿಗೆ ನಿರಾಶೆಯಾಗಿದೆ.
Advertisement