
ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ಕಾದಂಬರಿ, ಕಥೆ, ವಿಮರ್ಶೆ, ಅಂಕಣ ಬರಹಗಳನ್ನು ಕಳೆದ ಐದು ದಶಕಗಳಿಂದಲೂ ಸಮರ್ಥವಾದಿ ದುಡಿಸಿಕೊಂಡಿರುವ ಸುಬ್ರಾಯ ಚೊಕ್ಕಾಡಿಯವರು ಮೂಲತಃ ಒಬ್ಬ ಸೂಕ್ಷ್ಮ ಹೃದಯದ , ಸಾಕಷ್ಟು ಒಳನೋಟಗಳಿರುವ ಭಾವಜೀವಿ. ಇದರಿಂದಾಗಿ ಅವರ ಕಾಳಜಿಗಳು ಬಹುಮುಖಿಯಾಗಿವೆ. ಅಭಿನಯ ನಾಟಕ ತಂಡದ ಸಹಕಾರದಿಂದ ರಂಗ ಚಟುವಟಿಕೆ, ಸುಮನಸ ವಿಚಾರ ವೇದಿಕೆಯ ಸಹಕಾರದಿಂದ ಸಾಹಿತ್ಯ ಚಟುವಟಿಕೆ ...ಹೀಗೆ ಚೊಕ್ಕಾಡಿ ಮತ್ತು ಸುಳ್ಯಗಳನ್ನು ಒಂದು ಸಾಂಸ್ಕೃತಿಕ ಸ್ಪರ್ಶದ ಕೇಂದ್ರವಾಗಿಸಲು ಸುಬ್ರಾಯ ಚೊಕ್ಕಾಡಿಯವರು ನಿರಂತರವಾಗಿ ಶ್ರಮಿಸಿದ್ದಾರೆ. ಹೆಗ್ಗೋಡಿಗೆ ಥಳಕು ಹಾಕಿಕೊಂಡಿದ್ದ ಸುಬ್ಬಣ್ಣನಂತೆಯೇ ಚೊಕ್ಕಾಡಿಗೆ ಅಂಟಿಕೊಂಡಿರುವವರು ಸುಬ್ರಾಯ ಚೊಕ್ಕಾಡಿಯವರು.
ಯಾವುದೇ ರೀತಿಯ ಗುಂಪುಗಾರಿಕೆಯಿಂದಲೂ ದೂರ ನಿಲ್ಲುವ ಚೊಕ್ಕಾಡಿಯವರು ತತ್ವನಿಷ್ಠ ವಿಮರ್ಶೆಗಳಿಂದಾಗಿ ತಾತ್ಕಾಲಿಕವಾಗಿಯಾದರೂ ಕೆಲವು ಲೇಖಕರ ಅಸಹನೆಗೆ ತುತ್ತಾದದ್ದಿದೆ. ಆದರೆ ವೈಯಕ್ತಿಕವಾಗಿ ಯಾವ ಆಡಂಬರವೂ ಇಲ್ಲದೆ ಸರಳವಾಗಿ ಸಹಜವಾಗಿ ಮಗುವಿನ ಮುದ್ಧ ಮನಸ್ಸಿನಿಂದ ಬೆರೆಯಬಲ್ಲ, ಚೊಕ್ಕಾಡಿಯವರು ನಿಜವಾದ ಅರ್ಥದಲ್ಲಿ ಅಜಾತ ಶತ್ರು. ಚೊಕ್ಕಾಡಿಯವರ ಗೀತೆಗಳು ಧ್ವನಿ ಸುರುಳಿ ಮತ್ತು ಸಿ.ಡಿಗಳ ಮೂಲಕ ಕನ್ನಡ ಜನಮಾನಸವನ್ನು ತಲುಪಿದ್ದು ಬಹುದೊಡ್ಡ ಸಾಧನೆ. ಆ ಸಾಧನೆಯ ಎದುರಿಗೆ ಯಾವುದೇ ರೀತಿಯ ಗೌರವ ಮತ್ತು ಪ್ರಶಸ್ತಿಗಳು ಕೂಡಾ ನಗಣ್ಯವಾಗಿ ಬಿಡುತ್ತವೆ. ಚೊಕ್ಕಾಡಿಯವರ ಆಯ್ದ ಸಾಹಿತ್ಯ ಸಂವಾದದ ಮೆಲು ನುಡಿಗಳು ಇಲ್ಲಿವೆ.
-ರಾಜಗೋಪಾಲ ಎಂ.
ಈ ವಾರದ ಹೊತ್ತಗೆ : ಸಮಾಲೋಕ -ಸುಬ್ರಾಯ ಚೊಕ್ಕಾಡಿ
ಸಂಪಾದಕರು : ಅರವಿಂದ ಚೊಕ್ಕಾಡಿ
ಪ್ರಕಾಶಕರು : ಚಾಣಕ್ಯ ಪ್ರಕಾಶನ ವಿಜಾಪುರ
ಬೆಲೆ: ರು. 85.00
Advertisement