
ಯಾವುದೋ ಪಾರ್ಟಿಯಲ್ಲಿ ಕೂತಿದ್ದಾಗ ಹೃದಯಶಿವರವರನ್ನು ಚಿತ್ರಸಾಹಿತಿ ಎಂದು ಪರಿಚಯ ಮಾಡಿಸಿದಾಗ ನನಗೆ ಹೆಚ್ಚೇನೂ ಅನ್ನಿಸಲಿಲ್ಲ. ಇವತ್ತಿನ ಕಾಲದ ಸಭ್ಯ ಹುಡುಗ ಎನ್ನಿಸಿ ನನ್ನ ಪಾಡಿಗೆ ಸ್ನೇಹಿತರ ಜತೆ ಹರಟೆ ಮುಂದುವರೆಸಿ ಕೈಲಿದ್ದ ಐ-ಪಾಡ್ ನೋಡುತ್ತಿದ್ದೆ.
ಎಷ್ಟು ಸುಂದರವಾಗಿದ್ದರೂ ಸಿನಿಮಾಗೆ ಬರೆದ ಸಾಹಿತ್ಯವನ್ನು - ಏಕೋ ಗೊತ್ತಿಲ್ಲ - ನಾವು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಆತ್ಮನಿಷ್ಠೆ ಇರುವುದಿಲ್ಲ ಹಾಗಾಗಿ ನಾವು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕೆಂದು ಅನಿಸುವುದಿಲ್ಲ ಎಂದು ಪ್ರಸಿದ್ಧ ವಿಮರ್ಶಕರೊಬ್ಬರು ಪುಸ್ತಕವೊಂದರ ಬಿಡುಗಡೆಯ ಸಮಯದ ಭಾಷಣದಲ್ಲಿ ಸಿನಿಮಾ ಸಾಹಿತ್ಯದ ಬಗ್ಗೆ ಹೇಳಿದ್ದರು. ಅವು ಆತ್ಮದ ಸ್ವಗತಗಳಲ್ಲ, ಬಟ್ಟೆ ತಂದವನ ಅಳತೆಗೆ ಹೊಲೆಯುವ ಟೈಲರನ ಹೊಲಿಗೆಗಳು ಎಂದು ನಾನು ಅರ್ಥೈಸಿಕೊಂಡಿದ್ದೆ. ಜತೆಗೆ ಸ್ವಲ್ಪ ಗದ್ಯಮಯ ವ್ಯಕ್ತಿ ನಾನು. ಕವಿಗಳ ಒಳಲೋಕದ ಭಾಷೆ, ಕವಿಭಾಷೆಗಳು ಅರ್ಥವಾಗದೆ ಕವಿಗಳಿಂದ ಸ್ವಲ್ಪ ದೂರ ನಿಲ್ಲುವ ಸ್ವಭಾವ. ಹಾಗಾಗಿ ಹೃದಯಶಿವರು ಯಾವುದೋಪಾರ್ಟಿಯಲ್ಲಿ ಸಿಕ್ಕಾಗ ಸಿನಿಮಾ ಕವಿ ಎಂದು ಪರಿಚಯಿಸಿದ್ದರಿಂದ ಮನಸ್ಸಿನಲ್ಲಿ ದೂರ ಸೃಷ್ಟಿಸಿಕೊಂಡು ಕೂತು ಕೈಯಲ್ಲಿದ್ದ ಐ-ಪಾಡ್ ನಲ್ಲಿ ಅವರ ಪದ್ಯವೊಂದನ್ನು ನೋಡಿದೆ.
"ಸಪ್ಪೆ ಕಾವ್ಯಕ್ಕೆ ಉಪ್ಪು ಹಾಕಲು
ಕಣ್ಣೀರೇ ಬರಬೇಕಾಯಿತು"
ಶಭಾಶ್ ಅನ್ನಿಸಿತು.
ಪಾರ್ಟಿಗಳಲ್ಲಿ ಕೂತು ಇಂಥ ಸಾಲುಗಳನ್ನು ಓದಿದಾಗ ನಮ್ಮ ಆಂತರ್ಯದ ಕಷ್ಟಗಳು ಮತ್ತು ಭಗ್ನಪ್ರೇಮದ ಕಿಚ್ಚುಗಳು ಪ್ರಿಯವಾಗತೊಡಗುತ್ತವೆ. ಅವನ್ನು ಬರೆದ ಕವಿಯೂ ಕೂಡ. ಮುಂದೆ ಓದತೊಡಗಿದಾಗ ಅದುವರೆಗೆ ಪ್ರಿಯವಾಗಿರದ ಹೃದಯಶಿವರ ಬಗ್ಗೆ ಅಗಾಧ ಗೌರವ ಮೂಡಲಾರಂಭಿಸಿತು. ಬೆಂಕಿಯಂಥ ಆಕ್ರೋಶದ ಮಾತನ್ನು ತಣ್ಣಗಿನ ಮೆಲುದನಿಯಲ್ಲಿ ಹೇಳಿದ ವೇದಾಂತಿಯಂತೆ, ಕವಿಯಂತೆ ಕಾಣಿಸಲು ಶುರು ಮಾಡಿದರು ಹೃದಯಶಿವ.
ಓದುತ್ತಾ ಹೋದೆ...
ನನ್ನ ಪ್ರೀತಿಯ ಮೇಷ್ಟ್ರು ಲಂಕೇಶರ 'ನೀಲು ಕಾವ್ಯ' ನನಗೆ ತುಂಬಾ ಇಷ್ಟದ ಪುಸ್ತಕಗಳಲ್ಲಿ ಒಂದು. ಯಾವಾಗಲೂ ಅದರ ಪ್ರತಿಗಳು ಟೇಬಲ್ ಮೇಲೆ ಇರುತ್ತವೆ. ಬದುಕಿನ ವ್ಯಂಗ್ಯ, ವಿಸ್ಮಯಗಳನ್ನು ಒಂದೇ ವಾಕ್ಯದಲ್ಲಿ ಕಾವ್ಯವೆನ್ನುವಂತೆ, ವೇದಾಂತವೆನ್ನುವಂತೆ ಹೇಳುವ ಲಂಕೇಶರ ನೀಲುಕಾವ್ಯದಂತೆಯೇ ಪ್ರೇಮ, ದುರಂತ, ಸಮಾನತೆ, ಸಂಕಟಗಳ ಬಗ್ಗೆ ಪ್ರಿಯವಾಗಬಲ್ಲ ಮೆಲುದನಿಯಲ್ಲಿ ಒಂದೇ ವಾಕ್ಯವನ್ನು ಕಾವ್ಯವಾಗಿಸಿ ಹೇಳಬಲ್ಲ ಶಕ್ತಿ ಹೃದಯಶಿವರಿಗೆ ಇದೆ ಅನ್ನಿಸಿತು. ಪಾರ್ಟಿ ಮುಗಿಯುವುದರೊಳಗಾಗಿ ಅವರ ಬಗ್ಗೆ ಗೌರವ ಮೂಡಿ, ಅವರ ಅಭಿಮಾನಿಯಾದೆ.
ಅವರ ಈ 'ಹರಿವ ತೊರೆ' ಇನ್ನೂ ಹರಿಯುತ್ತಿರಲಿ.
-ಟಿ.ಎನ್.ಸೀತಾರಾಮ್
ಈ ವಾರದ ಹೊತ್ತಗೆ: ಹರಿವ ತೊರೆ (ಕಿರುಗವಿತೆಗಳು)
ಲೇಖಕರು: ಹೃದಯಶಿವ
ಪ್ರಕಾಶಕರು: ಅಂಕಿತ ಪುಸ್ತಕ
(ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು)
53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ
ಬಸವನಗುಡಿ, ಬೆಂಗಳೂರು- 560004
ದೂರವಾಣಿ: 26617100, 26617755
ಬೆಲೆ: ರು. 70
Advertisement