ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

'ಮೂಲ'ಕ್ಕೆ ಬಜೆಟಲ್ಲಿ ಸಿಗುತ್ತೆ ಆದ್ಯತೆ

ಭಾರತ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವಿತ್ತೀಯ ವರ್ಷದಿಂದ ಭಾರತ ಅಭಿವೃದ್ಧಿಯಲ್ಲಿ ಚೀನಾಗಿಂತ ಒಂದು ಹೆಜ್ಜೆ ಮುಂದಿಡಲಿದೆ.
Published on

ನವದೆಹಲಿ: ಭಾರತ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವಿತ್ತೀಯ ವರ್ಷದಿಂದ ಭಾರತ ಅಭಿವೃದ್ಧಿಯಲ್ಲಿ ಚೀನಾಗಿಂತ ಒಂದು ಹೆಜ್ಜೆ ಮುಂದಿಡಲಿದೆ.

ಈ ಅಭಿವೃದ್ಧಿ ದೀರ್ಘಕಾಲದಲ್ಲಿ ಸುಸ್ಥಿರವಾಗಬೇಕಾದರೆ, ಮೂಲ ಸೌಲಭ್ಯಗಳ ಸೃಷ್ಟಿ ಅತ್ಯಗತ್ಯ. ಸಹಜವಾಗಿಯೇ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಪ್ರಧಾನವಾಗಿ ಆದ್ಯತೆ ಸಿಗುವ ವಲಯ ಮೂಲಭೂತ ಸೌಲಭ್ಯ.

ರಾಷ್ಟ್ರೀಯ ಹೆದ್ದಾರಿ ಜತೆಗೆ ಸಂಪರ್ಕ ರಸ್ತೆಗಳು, ಮಹಾನಗರಗಳಲ್ಲಿ ಮೆಟ್ರೊ, ವಿಮಾನ ನಿಲ್ಣಾಗಳು ಬಸ್ ನಿಲ್ದಾಣಗಳು, ತಂಗುದಾಣಗಳು, ಮೇಲ್ಸೇತುವೆಗಳು, ಸುರಂಗ ಮಾರ್ಗಗಳು ಸೇರಿದಂತೆ ಮೂಲಭೂತ ನಿರ್ಮಾಣಕ್ಕೆ ಒತ್ತು ಸಿಗಲಿದೆ. ಮೂಲಕ್ಕೆ ಭಾರಿ ಪ್ರಮಾಣದ ಬಂಡವಾಳ ಅಗತ್ಯ. ಆದರೆ ನಿರೀಕ್ಷಿತ ಮಟ್ಟದಲ್ಲಿ ಬೊಕ್ಕಸದಿಂದಲೇ ಬಂಡವಾಳ ಒದಗಿಸಲು ಕಷ್ಟ. ಅದಕ್ಕಾಗಿ ಮೂಲಭೂತ ಸೌಲಭ್ಯ ವಲಯಕ್ಕೆ ಮಾಡುವ ಹೂಡಿಕೆಗೆ ಈಗ ಇರುವ ವಿನಾಯಿತಿಗಳ ಜತೆಗೆ ಮತ್ತಷ್ಟು ವಿನಾಯಿತಿ ಲಭ್ಯವಾಗಲಿದೆ.

ಮೂಲಭೂತ ಸೌಲಭ್ಯ ಕ್ಷೇತ್ರಕ್ಕೆ ಬಂಡವಾಳ ಸಂಗ್ರಹ ಸುಗಮಗೊಳಿಸುವುದು, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳಿಗೆ ಮತ್ತಷ್ಟು ಪ್ರಾಧಾನ್ಯತೆ ನೀಡುವುದು ಹಾಗೂ ಇಂತಹ ಯೋಜನೆಗಳಿಗೆ ತೆರಿಗೆ ರಿಯಾಯ್ತಿ ಒದಗಿಸುವ ನಿರೀಕ್ಷೆ ಇದೆ.

ವಸತಿ ಕ್ಷೇತ್ರ: 2020ರ ಹೊತ್ತಿಗೆ ಎಲ್ಲಿರಿಗೂ ವಸತಿ ಸೌಲಭ್ಯ ಒದಗಿಸುವ ಗುರಿಯನ್ನು ಮೋದಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಆ ಗುರಿ ತಲುಪಲು ಸರ್ಕಾರದ ವಸತಿ ಯೋಜನೆಗಳನ್ನಷ್ಟೇ ವಿಸ್ತರಿಸಿದರೆ ಸಾಲದು. ರಿಯಲ್ ಎಸ್ಟೇಟ್ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಪ್ರಸಕ್ತ ಸಾಲಿನಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಹಿಂಜರಿಕೆ ಇದೆ. ಮಹಾನಗರಗಳಲ್ಲಿ ಸಿದ್ಧವಾದ, ಆದರೆ ಖರೀದಿಯೇ ಆಗದ ಸುಮಾರು 3 ಲಕ್ಷ ವಸತಿ ಘಟಕಗಳಿವೆ. ಜತೆಗೆ ಹೊಸ ಹೊಸ ಯೋಜನೆಗಳ ಪ್ರಮಾಣವೂ ತಗ್ಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ತುರ್ತು ಚಿಕಿತ್ಸೆ ಆಗಬೇಕಿದೆ. ಅದಕ್ಕಾಗಿ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತ ಮಾಡಬೇಕು. ಹಣದುಬ್ಬರ ತಗ್ಗಿರುವುದರಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಹೆಚ್ಚಿನ ಬಡ್ಡಿದರ ಕಡಿತ ನಿರೀಕ್ಷೆ ಮಾಡಿದ್ದರು. ಆದರೆ, ರಿಸರ್ವ್ ಬ್ಯಾಂಕ್ ಅಷ್ಟು ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಆದರೆ ಗೃಹ ನಿರ್ಮಾಣ ವಲಯಕ್ಕೆ ಅಷ್ಟೇ ಅಲ್ಲ, ವಸತಿ ಖರೀದಿಸುವ ಗ್ರಾಹಕರಿಗೂ ಅನುಕೂಲ ಆಗುವ ಹಲವು ಕ್ರಮಗಳನ್ನು ಜೇಟ್ಲಿ ಘೋಷಿಸಲಿದ್ದಾರೆ.

ಮೂಲ ಸೌಲಭ್ಯ ವಲಯ ಮತ್ತು ವಸತಿ ವಲಯಕ್ಕೆ ಉತ್ತೇಜನ ಸಿಕ್ಕರೆ ಇಡೀ ಉತ್ಪಾದನಾ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಜತೆಗೆ ಉದ್ಯೋಗ ಸೃಷ್ಟಿ ತನ್ನಿಂತಾನೇ ಆಗುತ್ತದೆ. ಉಭಯ ವಲಯಗಳಿಗೆ ಉತ್ತೇಜನ ನೀಡುವುದರಿಂದ ಸಿಮೆಂಟ್, ಕಬ್ಬಿಣ ಅಷ್ಟೇ ಅಲ್ಲ ನಿರ್ಮಾಣಕ್ಕೆ ಬೇಕಾದ ಉಪ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆ ಬರುತ್ತದೆ. ಹೀಗಾಗಿ ಜೇಟ್ಲಿ ಅವರು ಈ ಎರಡೂ ಕ್ಷೇತ್ರಗಳಿಗೆ ಹೆಚ್ಚಿನ ಹೂಡಿಕೆ ಮತ್ತು ಉತ್ತೇಜನ ಘೋಷಿಸಲಿದ್ದಾರೆ. ಮುಖ್ಯವಾಗಿ ಮೂಲಭೂತ ಸೌಲಭ್ಯ ವಲಯಕ್ಕೆ ಕನಿಷ್ಠ ಪರ್ಯಾಯ ತೆರಿಗೆ(ಎಂಎಟಿ) ರದ್ದು ಮಾಡಿ, ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗೆ ಹೆಚ್ಚಿನ ಆರ್ಥಿಕ ಬೆಂಬಲ ನೀಡುವ ನಿರೀಕ್ಷೆಯೂ ಇದೆ.

ಬ್ಯಾಂಕುಗಳ ಸುಧಾರಣೆ
ಭಾರತದಲ್ಲಿ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ನಿಷ್ಕ್ರಿಯ ಸಾಲದ(ಎನ್‌ಪಿಎ) ಪ್ರಮಾಣ ಹೆಚ್ಚಿದೆ. ಇದು ಬ್ಯಾಂಕುಗಳ ಆರ್ಥಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದಷ್ಟೆ ಅಲ್ಲ, ನೇರವಾಗಿ ಕೇಂದ್ರ ಸರ್ಕಾರಕ್ಕೆ ನಷ್ಟವನ್ನುಂಟು ಮಾಡುತ್ತಿದೆ.

ಕೊಟ್ಟ ಸಾಲ ವಾಪಸು ಬರದೇ ಇದ್ದರೆ, ಅದನ್ನು ನಿಷ್ಕ್ರಿಯ ಸಾಲದ ಖಾತೆಗೆ ವರ್ಗಾಯಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ವಾಪಸು ಬಾರದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ನಿಷ್ಕ್ರಿಯ ಸಾಲದ ಪ್ರಮಾಣ ತಗ್ಗಿಸುವ ಮತ್ತು ಬ್ಯಾಂಕ್‌ಗಳ ಉತ್ಪಾದಕತೆ ಮತ್ತು ಲಾಭಾಂಶ ಹೆಚ್ಚಿಸುವ ಸಲುವಾಗಿ ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಅರುಣ್ ಜೇಟ್ಲಿ ಕೆಲವು ಕಾರ್ಯಸೂಚಿ ಘೋಷಿಸುವ ನಿರೀಕ್ಷೆ ಇದೆ.
-ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com