
ಅಪಘಾತ ವಿಮೆಗೆ ಸಾವಿರಾರು ರುಪಾಯಿ ಪಾವತಿಸುತ್ತಿರುವವರಿಗೆ ಇದು ನಿರಾಳವಾಗುವ ಕಾಲ. ಜೇಬಿಗೆ ಕತ್ತರಿ ಹಾಕುವ ಬದಲು ಅತಿ ಕಡಿಮೆ ಅಂದರೆ ಪ್ರತಿ ವರ್ಷ ಕೇವಲ ರು.12 ಪಾವತಿಸಿದರೆ ರು.2 ಲಕ್ಷ ಅಪಘಾತ ವಿಮೆ ಸೌಲಭ್ಯ ದೊರೆಯಲಿದೆ. ಇದಕ್ಕೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂದು ಹೆಸರಿಡಲಾಗಿದೆ. ಅಪಘಾತ ವಿಮೆಗಾಗಿ ಜನತೆ ಹೆಚ್ಚಿನ ಹಣ ಕಟ್ಟುವ ಹೊರೆ ತಪ್ಪುವುದು ಒಂದೆಡೆಯಾದರೆ, ಸರ್ಕಾರಕ್ಕೂ ಹಣದ ಹೊಳೆ ಹರಿದು ಬರಲಿದೆ.
ಪ್ರತಿ ದಿನ ರು.1 ಪಾವತಿಸಿದರೆ ರು.2 ಲಕ್ಷ ವಿಮೆ
ನಿಜವಾಗಲೂ ಇದು ತಮಾಷೆನೇ ಅಲ್ಲ. ಪ್ರತಿದಿನ ರು.1 ಕಟ್ಟಿದರೆ ನಿಮಗೆ ಬರೋಬ್ಬರಿ ರು.2 ಲಕ್ಷ ವಿಮೆ ಸೌಕರ್ಯ ಸಿಗಲಿದೆ! ದುಬಾರಿ ದುನಿಯಾದಲ್ಲೂ ಇಷ್ಟೊಂದು ಕಡಿಮೆ ಹಣ ಕಟ್ಟಿದರೆ ಲಕ್ಷಗಟ್ಟಲೇ ವಿಮೆ ಸಿಗುತ್ತದೆಯೇ ಎಂದು ಹುಬ್ಬೇರಿಸಬೇಡಿ. ಬಡವರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಇಂಥದೊಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹಾಗಂತ ಪ್ರತಿದಿನ ರು.1 ಕಟ್ಟಬೇಕಿಲ್ಲ, ವಾರ್ಷಿಕ ರು.330 ಪಾವತಿಸಿದರೆ ಸಾಕು.ರು.2 ಲಕ್ಷ ವಿಮಾ ಸೌಲಭ್ಯ ಸಿಗಲಿದೆ.
ಇದು 18ರಿಂದ 50 ವರ್ಷದೊಳಗಿನವರಿಗೆ ಮಾತ್ರ ಅನ್ವಯವಾಗಲಿದೆ. ಇದಕ್ಕೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಎಂದು ಹೆಸರಿಸಲಾಗಿದೆ. ಇದು ಕೂಡ ಬಡವರು, ಮಧ್ಯಮ ವರ್ಗದವರು ಹಾಗೂ ಯುವ ಜನತೆಗೆ ಸಹಾಯಕವಾಗಲಿದೆ.
ರು.9,000 ಕೋಟಿ ಅನಾಥ
ಪಿಪಿಎಫ್ ಹಾಗೂ ಇಪಿಎಫ್ ನಲ್ಲಿ ಹೂಡಿಕೆಯಾಗಿರುವ ಸುಮಾರು ರು.9000 ಕೋಟಿ ಹಣ ಫಲಾನುಭವಿಗಳಿಲ್ಲದೇ ಕೊಳೆಯುತ್ತಿದೆ. ಪಿಪಿಎಫ್ ನ ರು.3000 ಕೋಟಿ ಹಾಗೂ ಇಪಿಎಫ್ ರು.6000 ಕೋಟಿಗೆ ವಾರಸುದಾರರೇ ಇಲ್ಲ. ಹೀಗಾಗಿ ಈ ಹಣವನ್ನು ಸಾರ್ವಜನಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಹಿರಿಯ ನಾಗರಿಕರ ಕಲ್ಯಾಣ ನಿಧಿ, ಹಿರಿಯ ನಾಗರಿಕರ ಪಿಂಚಣಿ, ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಸಬ್ಸಿಡಿ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರ ವಿವಿಧ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು. ಈ ಕುರಿತು ಮಾರ್ಚ್ ನಲ್ಲೇ ಯೋಜನೆ ಸಿದ್ಧಪಡಿಸಲಾಗುವುದು.
ಹಿರಿಯರಿಗೆ ಆಸರೆ
ಹಿರಿಯರ ನಾಗರಿಕರ ಪಾಲಿಗೆ ಜೇಟ್ಲಿ ಅಕ್ಷರಶಃ ಆಸರೆಯಾಗಿದ್ದಾರೆ. ಭಾರತದಲ್ಲಿ ಸುಮಾರು 10.5 ಕೋಟಿ ಹಿರಿಯ ನಾಗರಿಕರಿದ್ದಾರೆ. ಇವರಲ್ಲಿ 1 ಕೋಟಿಗೂ ಹೆಚ್ಚು 80 ವರ್ಷ ಮೇಲ್ಪಟ್ಟವರಿದ್ದಾರೆ. ಶೇ.70ರಷ್ಟು ವೃದ್ಧರು ಗ್ರಾಮೀಣ ಭಾಗದಲ್ಲೇ ವಾಸಿಸುತ್ತಿದ್ದು, ಬಡತನ ರೇಖೆಗಿಂತ ಕೆಳಗಿದ್ದಾರೆ. ಇದಕ್ಕೂ ಹೆಚ್ಚಾಗಿ ಇವರಲ್ಲಿ ಹೆಚ್ಚಿನವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರಿಗೆ ಆರೋಗ್ಯ ಸೇವೆ ಹಾಗೂ ಆರ್ಥಿಕ ಸದೃಢತೆ ಸಿಗುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲೇ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ.
ಎಸ್ ಸಿ, ಎಸ್ ಟಿ, ಸ್ತ್ರೀಯರಿಗೆ ಧನಸಹಾಯ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ. ಈಗಿರುವ ವಿವಿಧ ಕಲ್ಯಾಣ ಯೋಜನೆಗಳಿಗೆ ಕೋಟಿಗಟ್ಟಲೇ ಹಣ ನೀಡಲಾಗಿದೆ. ಎಸ್ ಸಿಗೆ 30,851 ಕೋಟಿ, ಎಸ್ ಟಿಗೆ 19,980 ಕೋಟಿ ಹಾಗೂ ಮಹಿಳಾ ಕಲ್ಯಾಣ ಯೋಜನೆಗಳಿಗೆ 79,258 ಕೋಟಿ ನೀಡಲಾಗಿದೆ. ಇದು ಸಮಾಜದ ಕೆಳಸ್ತರದಲ್ಲಿರುವ ಎಸ್ಸಿ, ಎಸ್ಟಿ ಜನಾಂಗದವರಿಗೆ ವಿವಿಧ ಹಂತಗಳಲ್ಲಿ ಸಹಾಯಕವಾಗಲಿದೆ.
ಅಟಲ್ ಪಿಂಚಣಿ ಯೋಜನೆ
ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಉದ್ಯೋಗಿಗಳು ನಿವೃತ್ತಿ ವೇತನ ಸೌಲಭ್ಯ ಇಲ್ಲದೇ ಪರದಾಡುತ್ತಿದ್ದಾರೆ. ಅಂಥವರಿಗೆ ಪೂರಕವಾಗಿ ಅಟಲ್ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಉತ್ತೇಜಿಸಲು ಉದ್ಯೋಗಿ ಭರಿಸುವ ವಾರ್ಷಿಕ ಗರಿಷ್ಠ ರು.1000 ಪೈಕಿ ಸರ್ಕಾರ ಶೇ.50ರಷ್ಟು ಹಣ ಪಾವತಿಸಲಿದೆ. ಸರ್ಕಾರ ಐದು ವರ್ಷದವರೆಗಷ್ಟೇ ಈ ರೀತಿ ಶೇ.50ರಷ್ಟು ಪಾಲು ಭರಿಸಲಿದೆ. 2015, ಡಿ.31ರೊಳಗೆ ಜನ್ ಧನ್ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿರುವವರಿಗೆ ಮಾತ್ರ ಈ ಯೋಜನೆ ಲಭ್ಯವಾಗಲಿದೆ.
Advertisement